ಪ್ರಧಾನ ಸುದ್ದಿ

ಮೂರ್ತಿ ಮೂಡಿದ ರೀತಿ

ಮೂರ್ತಿ ಮೂಡಿದ ರೀತಿ
Published On :

ಕಥನ, ಮಂಥನ, ಚಿಂತನ ನೆಲೆಗಳಲ್ಲಿ ಕನ್ನಡದ ಮನಸ್ಸನ್ನು ಬರವಣಿಗೆ ಮೂಲಕ ವಿಸ್ತರಿಸಿದ ಸಾಹಿತಿ

ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.

ಕನ್ನಡದ ಬಹುಮುಖ್ಯ ಲೇಖಕ ಹಾಗೂ ಸಾರ್ವಜನಿಕ ಬುದ್ಧಿಜೀವಿ ಆದ ಡಾ.ಯು.ಆರ್.ಅನಂತಮೂರ್ತಿಯವರು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಅನುಭವಗಳನ್ನು ಕನ್ನಡದ ಸಂವೇದನೆಗೆ ತಂದವರು. ಕಥನ, ಮಂಥನ, ಚಿಂತನ-ಈ ಮೂರೂ ನೆಲೆಗಳಲ್ಲಿ ಕನ್ನಡದ ಮನಸ್ಸನ್ನು ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ವಿಸ್ತರಿಸಿದವರು. ಜ್ಞಾನಪೀಠ ಪ್ರಶಸ್ತಿ ಪಡೆದವರು.

ತಮ್ಮ ಬಹುಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ. ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ ( ಕುವೆಂಪು ಮತ್ತು ಅನಂತಮೂರ್ತಿ)ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. ಇವರು ಹುಟ್ಟಿದ್ದು 1932ರ ಡಿಸೆಂಬರ್ 21 ರಂದು, ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ).

ದೂರ್ವಾಸಪುರದ ಸಾಂಪ್ರಾದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‌ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಸಿಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ 1966ರಲ್ಲಿ ಪಿಎಚ್.ಡಿ.ಪಡೆದರು. 1970 ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಸಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, 1987ರಲ್ಲಿ ಕೇರಳದ ಕೊಟ್ಟಾಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. 1992-93ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು.

1993ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ ಯಾದರು. ಗೋಕಾಕರ ಅನಂತರ ಈ ಸಂಸ್ಥೆಯ ಅಧ್ಯಕ್ಷರಾದ ಎರಡನೆಯ ಕನ್ನಡಿಗರು ಇವರು. ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜವಾಹರಲಾಲ್ ನೆಹರೂ ವಿ.ವಿ. ಜರ್ಮನಿಯ ತೂಬಿಂಗೆನ್ ವಿ.ವಿ. ಅಮೇರಿಕ ದೇಶದ ಐಯೊವಾ ವಿ.ವಿ.ಟಫಟ್ಸ್ ವಿ.ವಿ. ಕೊಲ್ಲಾಪುರದ ಶಿವಾಜಿ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿದ್ದರು.

ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ; ಉಪನ್ಯಾಸ ನೀಡಿದ್ದಾರೆ. 1980 ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ 1989ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. 1993ರಲ್ಲಿ ಚೀನೀ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ.ನಾರಾಯಣ್, ಆರ್.ಕೆ.ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.

ಅನಂತಮೂರ್ತಿಯವರು ಪ್ರಸಿದ್ಧರಾಗಿರುವುದು ಕನ್ನಡದ ಬರಹಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ ಒಳಗಿನ ವಿಮರ್ಶಕರಾಗಿ. 1955ರಲ್ಲಿ ಎಂದೆಂದೂ ಮುಗಿಯದ ಕತೆ ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು ಇವರ ಕಥಾ ಸಂಕಲಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ ಮೂರು ದಶಕದ ಕಥೆಗಳು 1989ರಲ್ಲಿ ಹೊರಬಂದಿದೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ.ಎಚ್.ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾರ ಗೌಡ ಮತ್ತು ಲೋಹಿತಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.

1965ರಲ್ಲಿ ಇವರ ಮೊದಲ ಕಾದಂಬರಿ ಸಂಸ್ಕಾರ ಪ್ರಕಟವಾಯಿತು. ಪ್ರಕಟವಾದಾಗ ಮತ್ತು ಚಲನಚಿತ್ರವಾದಾಗ ತುಂಬ ವಿವಾದವನ್ನುಂಟು ಮಾಡಿದ ಈ ಕಾದಂಬರಿ ಹಲವಾರು ಭಾರತೀಯ ಭಾಷೆಯಲ್ಲದೆ ಇಂಗ್ಲಿಷ್,ರಶಿಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಭಾಷಾಂತರಗೊಂಡಿದೆ. ಭಾರತೀಪುರ, ಅವಸ್ಥೆ, ಪ್ರೀತಿ, ಮೃತ್ಯು ಭಯ, ಭವ-ಇವರ ಇತರ ಕಾದಂಬರಿಗಳು. ಆವಾಹನೆ ಎಂಬ ಒಂದು ನಾಟಕವನ್ನು ಬರೆದಿರುವ ಅನಂತಮೂರ್ತಿ 15 ಪದ್ಯಗಳು, ಮಿಥುನ ಮತ್ತು ಅಜ್ಜನ ಹೆಗಲ ಸುಕ್ಕುಗಳು ಎಂಬ ಮೂರು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ರಮ- ಇವು ಅವರ ಪ್ರಬಂಧ ಸಂಕಲಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1981 ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು ರುಜುವಾತು ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.

ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ ದೀಕ್ಷಾ ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.

ಸಂಸ್ಕಾರ, ಘಟಶ್ರಾದ್ದ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. 1983ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1984 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1992 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1994 ರಲ್ಲಿ ಮಾಸ್ತಿ ಪ್ರಶಸ್ತಿ ಇವು ಅನಂತಮೂರ್ತಿಯವರಿಗೆ ಬಂದ ಮನ್ನಣೆಗಳಲ್ಲಿ ಕೆಲವು. 1994ರಲ್ಲಿ ಬಂದಿರುವ ಜ್ಞಾನಪೀಠಿ ಪ್ರಶಸ್ತಿ ಇವೆಲ್ಲವುಗಳಿಗೆ ಕಳಶಪ್ರಾಯವಾದುದು.

ಪ್ರಶಸ್ತಿ, ಪುರಸ್ಕಾರ, ಬಿರುದು
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ನ್ಯಾಷನಲ್ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು 1984 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ 1987 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಾಸ್ತಿ ಪ್ರಶಸ್ತಿ, ಪದ್ಮ ಶ್ರೀ ಪ್ರಶಸ್ತಿ ಕೂಡ ಗಳಿಸಿದ್ದಾರೆ. 1994ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇವರ ಕೃತಿಗಳಾದ ಘಟಶ್ರಾದ್ಧ, ಅವಸ್ಥೆ, ಸಂಸ್ಕಾರ, ಮೌನಿ ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಯಶಸ್ಸುಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.