ಪ್ರಧಾನ ಸುದ್ದಿ

ಹೆಜ್ಜೆಗಳು ಅನಂತ

ಹೆಜ್ಜೆಗಳು ಅನಂತ
Published On :

ಅಂಶಿ/ಡಿಎನ್ ಮಹೇಂದ್ರ/ಜೆ.ಮಹಾದೇವ
ಮೈಸೂರು:
ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಹುಟ್ಟಿದ್ದು ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಹಳ್ಳಿಯಾದರೂ ಸಾಹಿತ್ಯ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು ಮಾತ್ರ ಮೈಸೂರು ಮೂಲಕ.

ದೂರ್ವಾಸಪುರದ ಸಾಂಪ್ರಾದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಅವರು ತೀರ್ಥಹಳ್ಳಿ ಓದಿನ ಬಳಿಕ ತಮ್ಮ ಅಧ್ಯಯನವನ್ನು ಮೈಸೂರಿನಲ್ಲಿ ಮುಂದುವರೆಸಿದರು. ಮೈಸೂರು ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಬಳಿಕ 1970ರಲ್ಲಿ ಮೈಸೂರು ವಿವಿಯಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿ, ಮೈಸೂರಿನಲ್ಲಿದ್ದಾಗ ಅನೇಕ ಸಾಹಿತ್ಯಕ ಕೃತಿಗಳನ್ನು ರಚಿಸಿದರು. ಅವರು ಕನ್ನಡ ಹಲವು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನದಲ್ಲಿ ಸಂದರ್ಶಿಸಿದ್ದಾರೆ.

ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ.ನಾರಾಯಣ್, ಆರ್.ಕೆ.ಲಕ್ಷ್ಮಣ್ ಮಚ್ಚು ಜನರಲ್ ಕಾರಿಯಪ್ಪರನ್ನು ಸಂದರ್ಶಿಸಿದ್ದಾರೆ. ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗುವ ಮುನ್ನ ಅವರು, ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಇದ್ದ ವೇಳೆಯಲ್ಲಿಯೇ ಸಂಸ್ಕಾರ ಕಾದಂಬರಿ ರಚಿಸಿದ್ದರು.

ವಿದ್ಯಾರ್ಥಿಗಳೊಂಡನೆ ಅನಂತಮೂರ್ತಿ ಹೊಂದಿದ್ದ ಪ್ರೀತಿ ಅನನ್ಯ. ತಾವು ವಾಸಿಸುತ್ತಿದ್ದ ಕೊಠಡಿಯಲ್ಲಿಯೂ ಆಸಕ್ತ ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಕ ವಿಚಾರವಾಗಿ ಅನೇಕ ಬಾರಿ ಗಹನ ಚರ್ಚೆ ನಡೆಸಿದ್ದಾರೆ ಎಂದು ಅವರ ಶಿಷ್ಯರಾದ ಪ್ರೊ.ಕೆ.ಎಂ.ಚಂದರ್ ಮತ್ತು ಪ್ರೊ.ನಾಗಣ್ಣ ಅನುಭವ ಹಂಚಿಕೊಂಡರು. ವಿಚಾರವಾದಿ ದಿ.ಪ್ರೊ.ಕೆ.ರಾಮದಾಸ್, ದೇವನೂರು ಮಹಾದೇವ, ಲಿಂಗದೇವರು ಹಳೇಮನೆ, ಪ್ರೊ.ಎಚ್.ಗೋವಿಂದಯ್ಯ, ಪ್ರೊಜಿ.ಎಚ್ನಾಯಕ ಅವರೊಡನೆ ಹೆಚ್ಚು ಒಡನಾಟ ಹೊಂದಿದ್ದರು. ಅವರ ಕಾದಂಬರಿಗಳ ಪ್ರಭಾವಕ್ಕೆ ಒಳಗಾಗಿ ನಮ್ಮ ತಲೆಮಾರಿನ ಅನೇಕರು ಕಾದಂಬರಿಗಳನ್ನು ರಚಿಸಿದ್ದಾರೆ ಎಂದರು ಚಂದರ್.

ತೀರ್ಥಹಳ್ಳಿಯಿಂದ ಅನಂತ ಪ್ರೇರಣೆ
ಬಾಲ್ಯದಲ್ಲಿಯೇ ಅನಂತಮೂರ್ತಿಯವರಿಗೆ ಸಮಾಜವಾದಿ ಚಳವಳಿ ನಾಯಕರಾದ ಶಾಂತವೇರಿ ಗೋಪಾಲಗೌಡ, ಅಣ್ಣಯ್ಯ, ಅವರೊಂದಿಗೆ ಒಡನಾಟ ಲಭಿಸಿತ್ತು. ತೀರ್ಥಹಳ್ಳಿಯ ಪರಿಸರದ ಪ್ರಭಾವ ಇವರ ಎಲ್ಲ ಕೃತಿಗಳಲ್ಲೂ ಕಾಣಸಿಗುತ್ತದೆ.

ಯಾವ ನೆಲ ರಾಷ್ಟ್ರಕವಿ ಕುವೆಂಪು ಪ್ರೇರಣೆಯಾಗಿತ್ತೋ ಅದೇ ನೆಲ ಅನಂತಮೂರ್ತಿ ಅವರಿಗೂ ಸ್ಫೂರ್ತಿ ನೀಡಿತ್ತು. ತೀರ್ಥಹಳ್ಳಿಯ ಪರಿಸರದಲ್ಲಿಯೇ ತಮ್ಮ ಬಾಲ್ಯ ಕಾಲವನ್ನು ಕಳೆದ ಅನಂತಮೂರ್ತಿ ಅವರ ಸಾಹಿತ್ಯದಲ್ಲಿ ಈ  ನೆಲದ ಕಂಪು ಯಾವತ್ತೂ ಇದೆ.

ಅವರ ಪ್ರಸಿದ್ಧ 'ಸೂರ್ಯನ ಕುದುರೆ' ಕಥೆಯಲ್ಲಿ ಬರುವ ಕೆರೆಕೊಪ್ಪ ಅವರು ಬಹುತೇಕ ಬಾಲ್ಯವನ್ನು ಕಳೆದ ಊರು. ಮುಖ್ಯರಸ್ತೆಯಲ್ಲಿರುವ ತೂದೂರಿನಿಂದ ಒಳಗಿರುವ ಒಂದೇ ಮನೆಯ ಊರಾಗಿತ್ತು. ಆದರೆ ಇವರ ಹುಟ್ಟೂರು ತಾಯಿಯ ಊಕಾಜ ಮೇಳಿಗೆ. ಇವರ ತಾತ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡಿನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾಗಿದ್ದರು. ನಂತರ ಇವರು ತೀರ್ಥಹಳ್ಳಿ ತಾಲೂಕಿಗೆ ವಲಸೆ ಬಂದರು.

ಹುಲಿಯ ಹೆದರಿಕೆಯಿಂದಾಗಿ ಕೆರೆಕೊಪ್ಪದಿಂದ ಶಾಲೆಗೆ ಹೋಗುವುದು ದುಸ್ತರವಾಗಿತ್ತು. ಅಲ್ಪ ಕಾಲ ತಾಯಿಯ ಊರಾದ ಮೇಳಿಗೆಯಲ್ಲಿದ್ದ ತಾಯಿ ಮನೆಗೆ ಹೋಗಿ ಅಲ್ಲಿಯೇ ಇದ್ದ ಪ್ರಾಥಮಿಕ ಶಾಲೆ ಸೇರಿದರು. ನಂತರ ಇವರ ತಂದೆ ಕೆರೆಕೊಪ್ಪವನ್ನು ತೊರೆದು ಬೇಗುವಳ್ಳಿಗೆ ಬಂದು ನೆಲೆಸಿದರು. ಕೆಲ ಕಾಲ ಇವರ ತಂದೆ ರಾಜಗೋಪಾಲಚಾರ್ ಅವರು ಶ್ಯಾನುಭೋಗರಾಗಿದ್ದರು. ನಂತರ ಶಿವಮೊಗ್ಗದ ಅಡಕೆ ಮಂಡಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದರು. ಆದರೆ ಮಕ್ಕಳು, ಪತ್ನಿ ಬೇಗುವಳ್ಳಿಯಲ್ಲಿಯೇ ಇದ್ದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅನಂತಮೂರ್ತಿ ಅವರು ನಂತರ ತೀರ್ಥಹಳ್ಳಿಯ ಮಿಡ್ಲ್ ಸ್ಕೂಲ್ ಸೇರಿದರು.

ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿದ್ದ ಸಂದರ್ಭವದು. ಶಾಲಾ ಮಕ್ಕಳೇ ಪ್ರಭಾತ್ ಫೇರಿ ತೆಗೆಯುತ್ತಿದ್ದರು. ಶಾಲೆಯೊಳಗೆ ಯಾರೂ ಹೋಗದಂತೆ ದಾರಿಯಲ್ಲಿ ಮಲಗಿಬಿಡುತ್ತಿದ್ದರು.

ಈ ಸಂದರ್ಭದಲ್ಲಿ ಅನಂತಮೂರ್ತಿ ಅವರು ವಿದ್ಯಾರ್ಥಿ ನಾಯಕರಂತೆಯೇ ಆಗಿದ್ದರು. ಈ ವಿದ್ಯಾರ್ಥಿ ನಾಯಕರೆಲ್ಲ ಕೈಯಲ್ಲಿರುವ ಅಲ್ಪಸ್ವಲ್ಪ ಹಣ ಒಟ್ಟುಗೂಡಿಸಿ ಕಾಫಿ ಕುಡಿಯಲು ಸೇರಿತ್ತಿದ್ದ ಜಾಗ ಕೃಷ್ಣಪ್ಪಯ್ಯನ ಹೊಟೇಲು. ಇದೆಲ್ಲ ಅವರ ತಂದೆಗೆ ಗೊತ್ತಾಗಿ ಅವರು ಕೋಣಂದೂರಿಗೆ ಕರೆದು ಕೊಂಡು ಹೋಗಿ ಅಲ್ಲಿ ಶಾಲೆಗೆ ಸೇರಿಸಿದರು. ಇಲ್ಲಿದ್ದಾಗಲೇ 10ನೇ ವಯಸ್ಸಿನಲ್ಲಿಯೇ 'ನಾನು ಬೀಡಿ ಸೇದುವುದನ್ನು ಕಲಿತೆ' ಎಂದು ಅನಂತಮೂರ್ತಿ ಅವರು ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಕೆಲ ದಿನಗಳ ನಂತರ ಅವರು ಮತ್ತೆ ತೀರ್ಥಹಳ್ಳಿ ಮಿಡ್ಲ್ ಸ್ಕೂಲ್ಗೆ ವಾಪಸಾದರು. ಮುಳಬಾಗಿಲಿನಲ್ಲಿ ವಾಸ.

ಒಂಟಿ ಮನೆ ಇದ್ದ ಕೆರೆಕೊಪ್ಪದಿಂದ ಬೇಗುವಳ್ಳಿಗೆ, ಅಲ್ಲಿಂದ ಮೇಳಿಗೆಗೆ, ನಂತರ ತೀರ್ಥಹಳ್ಳಿಗೆ ಅವರ ತಂದೆ ಹೋಗುತ್ತಿದ್ದ ಕಡೆಗೆಲ್ಲಾ ಅವರ ಓಡಾಟ ಬಾಲ್ಯ ಕಾಲದಲ್ಲಿತ್ತು.

ಇವರು ತೀರ್ಥಹಳ್ಳಿ ಹೈಸ್ಕೂಲ್ನಲ್ಲಿ ಓದುತ್ತಿರುವಾಗಲೇ ಅಗ್ರಹಾರದ ಹುಡುಗರು ಕೈ ಬರಹದಲ್ಲ ತರುತ್ತಿದ್ದ ಮಾಸಪತ್ರಿಕೆಯೊಂದಕ್ಕೆ ಅನಂತಮೂರ್ತಿ ಅವರು 'ತರಂಗಿಣಿ' ಎಂಬ ಹೆಸರು ಕೊಟ್ಟಿದ್ದರು. ಇದಂ ಪತ್ರಿಕೆಯಲ್ಲಿ ಇವರೇ ಬರೆದ ಕಥೆಯೂ ಪ್ರಕಟವಾಗಿತ್ತು. ಇವರ ಮೊದಲ ಕೃತಿ. ಇವರೇ ಆತ್ಮಕತೆಯಲ್ಲಿ ಹೇಳಿಕೊಂಡಂತೆ 'ಯಮ ಗರ್ವಭಂಗ' ತಾಳಮದ್ದಲೆ ಮಾತುಗಾರಿಕೆಯ ಲಯದಲ್ಲಿಯೇ ಬರೆದು, ಅಗ್ರಹಾರದ ಹುಡುಗರೆಲ್ಲಾ ಕಲಿತು, ಎಲ್ಲಾ ಬಣ್ಣಬಣ್ಣದ ವಸ್ತ್ರಗಳನ್ನು ಸೀರೆಗಳನ್ನು ಅನುಕೂಲಕ್ಕೆ ತಕ್ಕಂತೆ ಮಡಿಚಿ, ಹೊಲಿದು, ಒಂದು ದಿನ ಗ್ಯಾಸ್ ಲೈಟಿನ ಬೆಳಕಿನಲ್ಲಿ ಆಡಿದರು. ರಂಗದ ಮೇಲೆ ತಂದ ಕೋಣ ಅವಾಂತರ ಮಾಡಿ ಪೇಚಿಗೆ ಸಿಲುಕಿದ್ದರು.

ಬಾಲ್ಯದಲ್ಲಿಯೇ ಇವರು ಸಮಾಜವಾದಿ ಚಳವಳಿ ನಾಯಕರಾದ ಶಾಂತವೇರಿ ಗೋಪಾಲಗೌಡ, ಅಣ್ಣಯ್ಯ ಅವರೊಂದಿಗೆ ಒಡನಾಟ ಲಭಿಸಿತ್ತು. ತೀರ್ಥಗಳಲ್ಲೂ ಕಾಣಸಿಗುತ್ತದೆ. ಸೂರ್ಯನ ಕುದುರೆ, ಭಾರತಿಪುರ, ಸಂಸ್ಕಾರ, ಭವ, ದಿವ್ಯ.... ಎಲ್ಲದರ ಮೇಲೆಯೂ ಈ ಪ್ರಭಾವ ಇದೆ.

ಸಮಾಜವಾದಕ್ಕೆ ಚಿಗುರಿದ ಶಿವಮೊಗ್ಗೆ
ಶಿವಮೊಗ್ಗದೊಂದಿಗೆ ಅನಂತಮೂರ್ತಿ ಅವರದು ಅವಿನಾಬಾವ ಸಂಬಂಧ. ಅವರ ತಂದೆ ಶಿವಮೊಗ್ಗದ ದುರ್ಗಿಗುಡಿಯಲ್ಲಿ ಆರಂಭಿಸಿದ್ದ ಮಾರುತಿ ಪ್ರೆಸ್ನಿಂದ ಹಿಡಿದು ತುಂಗಭದ್ರಾ ಉಳಿಸಿ ಹೋರಾಟದವರೆಗೆ, ಕಾಲೇಜಿನ ಚರ್ಚಾಕೂಟದಿಂದ ಹಿಡಿದು ನೀನಾಸಂ ಸಂಸ್ಕೃತಿ ಶಿಬಿರದವರೆಗೆ ಅವರ ನೆನಪುಗಳು ಚಾಚಿಕೊಂಡಿದೆ.

ಬ್ರಿಟೀಷರ ವಿರುದ್ಧ ಮಹಾತ್ಮ ಗಾಂಧೀಜಿ ಅವರು 'ಭಾರತ ಬಿಟ್ಟು ತೋಲಗಿ' ಎಂದು ಘೋಷಣೆ ಹೊರಡಿಸಿದ ಸಂದರ್ಭದಲ್ಲೇ ಅನಂತಮೂರ್ತಿ ಅವರುಪ 1942ರಲ್ಲಿ ಇಂಟರ್ ಮೀಡಿಯಟ್ ಸೇರಲು ಶಿವಮೊಗ್ಗಕ್ಕೆ ಬಂದರು. ಸಹ್ಯಾದ್ರಿ ಕಾಲೇಜೇ ಅಂದಿನ ಇಂಟರ್ ಮೀಡಿಯಟ್ ಕಾಲೇಜು. ಅಪ್ಪನ ಸ್ನೇಹಿತರ ಮನೆಯೊಂದರಲ್ಲಿ ಇದ್ದು ಕಾಲೇಜಿಗೆ ಓಡಾಡುತ್ತಿದ್ದರು.

ಈ ದಿನಗಳಲ್ಲಿಯೇ ಅನಂತಮೂರ್ತಿ ಅವರಿಗೆ ಸಮಾಜವಾದಿಗಳೊಂದಿಗೆನ ಒಡನಾಟ ಹೆಚ್ಚಾ.ಯಿತು. ತೀರ್ಥಹಳ್ಳಿಯಲ್ಲಿ ಇವರೊಂದಿಗೆ ಒಂದೇ ಶಾಲೆಯಲ್ಲಿ ಇದ್ದ ಶಾಂತವೇರಿ ಗೋಪಾಲಗೌಡ, ಸಮಾಜವಾದಿ ಧುರೀಣ ಅಣ್ಣಯ್ಯ ಅವರ ಒಡನಾಟ ಅನಂತಮೂರ್ತಿ ಅವರ ಚಿಂತನೆಗೆ ಸಾಥ್ ನೀಡಿತ್ತು. ಸಾಹಿತ್ಯಾ ಸಕ್ತಿಯೂ ಬೆಳೆಯಿತು. ಶಾಂತವೇರಿ ಗೋಪಾಲಗೌಡ, ಕೆ.ವಿ.ಸುಬ್ಬಣ್ಣ, ಶಂಕರನಾರಾಯಣ ಭಟ್ಟ ಇವರ ಆತ್ಮೀಯ ಗೆಳೆಯರಾದರು. 50 ರ ದಶಕದ ಆರಂಭದಲ್ಲಿ ಉತ್ತುಂಗದಲ್ಲಿದ್ದ ಕಾಗೋಡು ಚಳವಳಿಗೆ ಇವರ ತಂದೆ ಆರಂಭಿಸಿದ್ದ ಮಾರುತಿ ಪ್ರೆಸ್ನಲ್ಲಿಯೇ ಕರಪತ್ರಗಳು ಮುದ್ರಣವಾಗುತ್ತಿದ್ದವು. ಅಂದಿನ ಮುಖ್ಯ ಕೆಂಗಲ್ ಹನುಮಂತಯ್ಯ ಅವರು ಕರ್ನಾಟಕ ಸಂಘದಲ್ಲಿ ಭಾಷಣಕ್ಕೆಂದು ಬಂದಿದ್ದಾಗ ಕಾಗೋಡು ರೈತರಿಗೆ ನ್ಯಾಯ ಒದಗಿಸುವಂತೆ ಅವರೆದುರು ಗುಂಪು ಕಟ್ಟಿಕೊಂಡು ಘೋಷಣೆ ಕೂಗಿದ್ದರು. ತರಾತುರಿಯಲ್ಲಿ ಸಿಎಂ ಕಾರ್ಯಕ್ರಮ ಮುಗಿಸಿ ಹೋದರು. ಅದೇ ಸಂದರ್ಭದಲ್ಲಿ ಇವರ ಮೇಲೆ ಹಲ್ಲೆಯೂ ನಡೆದಿತ್ತು. ಪ್ರಜ್ಞೆ ತಪ್ಪಿದ್ದ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.

ಕಾಲೇಜು ಓದುತ್ತಿರುವಾಗಲೇ ಇವರು ಸ್ಚೂಡೆಂಟ್ ಸೋಷಿಯಲಿಸ್ಟ್ ಕ್ಲಬ್ ಮಾಡಿಕೊಂಡಿದ್ದರು. ಇದೆಲ್ಲಾ ಚಟುವಟಿಕೆಯಿಂದ ಅವರು ಸೀನಿಯರ್ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಫೇಲಾದರು. ಆಗ ಶಿವಮೊಗ್ಗ ಬಿಟ್ಟರು. ಇಂಟರ್ ಮೀಡಿಯಟ್ನಲ್ಲೇ ಗಂಭೀರ ಸಾಹಿತ್ಯ ರಚನೆ ಶುರು ಮಾಡಿದರು. ಮೊದಲ ಕವಿತೆ ಬರೆದಿದ್ದು ಆಗಲೇ. ಹೀಗೆ ಬರೆದ ಒಂದು ಕವಿತೆಯನ್ನು ಗೆಳೆಯ ಬಿಳಿಗಿರಿ ಎದುರು ಓದಿ ಚೆನ್ನಾಗಿಲ್ಲ ಎನ್ನಿಸಿಕೊಂಡಿದೆ ಎಂದು ಅವರು ತಮ್ಮ ಆತ್ಮಕತೆ 'ಸುರಗಿ' ಯಲ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.