ಪ್ರಧಾನ ಸುದ್ದಿ

ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ರೆ ರೌಡಿ ಪಟ್ಟ!

Published On :

ಶಶಿಧರ ಮೇಟಿ
ಬಳ್ಳಾರಿ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರೆ ಹುಷಾರ್... ಹಲ್ಲೆ ಮಾಡಿದವರು ಪೊಲೀಸ್ ಇಲಾಖೆಯಲ್ಲಿ ರೌಡಿಗಳಾಗಿ ದಾಖಲಾಗುತ್ತಾರೆ.
ಹೌದು ದಿನದಿಂದ ದಿನಕ್ಕೆ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳಿಗೆ ತಡೆಯೊಡ್ಡಲು ಪೊಲೀಸ್ ಇಲಾಖೆ ಮುಂದಾಗಿದೆ. ಇಲಾಖೆಯ ಮೇಲಧಿಕಾರಿಗಳು ಇದನ್ನು ಪಾಲಿಸಲೇಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ರೌಡಿಶೀಟರ್ ಸಂಖ್ಯೆ ಹೆಚ್ಚಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸಕರು, ಶಿಕ್ಷಕರು, ಎಸ್ಡಿಎಂಸಿ ಹೆಸರಿನಲ್ಲಿ ಶಾಲಾ ಕಟ್ಟಡಗಳ ಕಟ್ಟುವುದು ಸೇರಿದಂತೆ ಇತರೆ ವಿಷಯಗಳಲ್ಲಿ ಶಾಲಾ ಪ್ರಧಾನ ಗುರುಗಳು, ಶಿಕ್ಷಕರು ಸೇರಿದಂತೆ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಇತ್ತೀಚೆಗೆ ಹಲ್ಲೆಯಂತಹ ಘಟನೆಗಳು ಹೆಚ್ಚಾಗುತ್ತಿವೆ.
ಇದರಿಂದಾಗಿ ಏಳೆಂಟು ತಿಂಗಳಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ರೌಡಿಶೀಟರ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಪ್ರಕರಣ ದಾಖಲಾಗುತ್ತಿರುವುದರಿಂದ ಸರ್ಕಾರಿ ಸಿಬ್ಬಂದಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು: ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಲಂ 353ರ ಅಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗುತ್ತಿತ್ತು. ಆರೋಪ ಸಾಬೀತಾದರೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಇದೀಗ ಹಲ್ಲೆ ಮಾಡಿದವರ ಮೇಲೆ ರೌಡಿಶೀಟ್ ದಾಖಲಿಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 353 ಅಡಿಯಲ್ಲಿ 615 ಪ್ರಕರಣ ದಾಖಲಾಗಿದ್ದು, ಅವುಗಳ ಪೈಕಿ ಸುಮಾರು 192 ಜನರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ಹಲ್ಲೆ ಪ್ರಕರಣಗಳನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಗಂಭೀರವಾಗಿ ಪರಿಗಣಿಸಿದ್ದಾರೆ.
ಏನಿದು ರೌಡಿಶೀಟರ್?; ಒಬ್ಬ ವ್ಯಕ್ತಿಯ ಮೇಲೆ ರೌಡಿಶೀಟರ್ ಓಪನ್ ಆದರೆ, ಪೊಲೀಸ್ ಇಲಾಖೆಯಲ್ಲಿ ಅವನನ್ನು ರೌಡಿಯೆಂದು ಪರಿಗಣಿಸಲಾಗುತ್ತದೆ. ಆತನ ನಡವಳಿಕೆ ಮೇಲೆ ಇಲಾಖೆಯು ಸದಾ ನಿಗಾವಹಿಸುತ್ತದೆ. ಈತನನ್ನು ಇಲಾಖೆ ರೌಡಿ, ಗೂಂಡಾ ಎಂದು ಪರಿಗಣಿಸುವುದರಿಂದ ಸಹಜವಾಗಿಯೇ ಸಮಾಜದಲ್ಲಿ ಅವನ ಬಗ್ಗೆ ಕೆಟ್ಟ ಭಾವನೆ ಮೂಡುತ್ತದೆ. ಈ ಮೂಲಕ ಅವನನ್ನು ಮಣಿಸುವ ಪ್ರಯತ್ನ ಮಾಡಲಾಗುತ್ತಿದೆ.
ಒಂದುವೇಳೆ ಅವನು ನಡವಳಿಕೆ ತಿದ್ದಿಕೊಂಡರೆ, ರೌಡಿಶೀಟರ್ ರಿಜಿಸ್ಟರ್ ಕ್ಲೋಸ್ ಮಾಡಲಾಗುತ್ತದೆ. ಇನ್ನು ಆತನ ವ್ಯಾಪ್ತಿಯಲ್ಲಿ ಏನೇ ಅಹಿತಕರ ಘಟನೆಗಳು ನಡೆದರೆ, ಅವನ ಬಗ್ಗೆ ಅನುಮಾನಗಳು ಬಂದರೆ ಕೂಡಲೇ ಪೊಲೀಸ್ ಇಲಾಖೆ ಅವನನ್ನು ವಿಚಾರಣೆ ಮಾಡುವ ಪದ್ಧತಿ ಇದೆ.
ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲಿನ ಹಲ್ಲೆ ತಡೆಯಲು ಸರ್ಕಾರಿ ಅಧಿಕಾರಿಗಳು ನಿರ್ಭಿತಿಯಿಂದ ಕರ್ತವ್ಯ ನಿರ್ವಹಿಸುವ ಉದ್ದೇಶದಿಂದಾಗಿ ಪೊಲೀಸ್ ಇಲಾಖೆಯ ಇಂತಹ ಕ್ರಮ ಸ್ವಾಗತಾರ್ಹ. ಕೆಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಇಂತಹ ಕ್ರಮ ಮುಂದಿಟ್ಟುಕೊಂಡು ಪ್ರಾಮಾಣಿಕರನ್ನು ಆಟವಾಡಿಸದಿರಲಿ ಎಂಬುದು ಸಾರ್ವಜನಿಕರ ಅಂಬೋಣ.



ಐಪಿಸಿ 353ರ ಅಡಿ ಪ್ರಕರಣ ದಾಖಲಾಗುವ ಎಲ್ಲರ ಮೇಲೆ ರೌಡಿಶೀಟರ್ ಓಪನ್ ಮಾಡುವುದಿಲ್ಲ. ಹಿಂದಿನ ನಡವಳಿಕೆ, ಅವರು ಮಾಡಿರುವ ಕೃತ್ಯದ ಆಧಾರದ ಮೇಲೆ ರೌಡಿಶೀಟರ್ ಓಪನ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಐಪಿಸಿ ಕಲಂ 353 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ 615 ಜನರಲ್ಲಿ 192 ಜನರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ಏಳೆಂಟು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೌಡಿಶೀಟರ್ ಓಪನ್ ಮಾಡಲಾಗಿದೆ.
ಟಿ ಡಾ. ಚೇತನ್ ಸಿಂಗ್ ರಾಥೋರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.