ಪ್ರಧಾನ ಸುದ್ದಿ

ಅರಣ್ಯ ರಕ್ಷಣೆಗೆ ಹೊಸ ಹೆಜ್ಜೆ

ಅರಣ್ಯ ರಕ್ಷಣೆಗೆ ಹೊಸ ಹೆಜ್ಜೆ
Published On :

ಕನ್ನಡಪ್ರಭ ವಾರ್ತೆ     ಚಾಮರಾಜನಗರ     ಫೆ.3
ಇನ್ನು ಕಾಡು ಕಾಯುವ ಸಮಯ!
ಹೌದು. ಅರಣ್ಯ ಇಲಾಖೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹೊಸತನದ 'ಹೆಜ್ಜೆ' ಇಡಲು ಮುಂದಾಗಿದೆ. ವಾಕಿಟಾಕಿಯನ್ನು ಬಿಟ್ಹಾಕಿದೆ. ತನ್ನ ಸಿಬ್ಬಂದಿಗೆ ಸ್ಮಾರ್ಟ್ ಫೋನ್ ಕೊಟ್ಟಿದೆ. ಕಾಡಿನಲ್ಲಾದ ಘಟನೆ, ಮಾಹಿತಿಯನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಲು ಇಂಥದ್ದೊಂದು ಹೊಸ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಈ ಸ್ಮಾರ್ಟ್ಫೋನ್ನಲ್ಲಿ 'ಹೆಜ್ಜೆ' ಎಂಬ ಸಾಫ್ಟ್ವೇರ್ ಅಳವಡಿಸಿದ್ದು, ಇದಕ್ಕೆ ಇಂಟರ್ನೆಟ್ ಬೇಕಿಲ್ಲ. ಜಿಪಿಎಸ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಆಧಾರಿತವಾಗಿ ಈ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
46 ಶಿಬಿರಕ್ಕೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 11 ವಲಯಗಳಲ್ಲಿರುವ 46 ಕಳ್ಳಬೇಟೆ ಶಿಬಿರಕ್ಕೆ 4 ಲಕ್ಷ ವೆಚ್ಚದಲ್ಲಿ ತಲಾ 9 ಸಾವಿರದ ಈ ಮೊಬೈಲ್ ನೀಡಲಾಗಿದೆ.
ಹೆಜ್ಜೆ ಕೆಲಸವೇನು?: ಪ್ರಾಣಿಗಳ ಆವಾಸ ಸ್ಥಳ ಸೇರಿದಂತೆ ಕಾಡಿನೊಳಗಿನ ಮಾಹಿತಿ ಸಂಗ್ರಹಿಸುವ ಒಂದು ವ್ಯವಸ್ಥೆ ಇದಾಗಿದ್ದು, ಇದರ ಮೂಲಕ ಮಾನವ, ಪ್ರಾಣಿಗಳ ಸಂಘರ್ಷ, ಪ್ರಾಣಿಗಳಿಗೆ ಅಪಾಯ ಎದುರಾದರೆ, ಬೆಂಕಿ ಕಾಣಿಸಿಕೊಂಡರೆ, ಸಸ್ಯಾಹಾರಿ, ಮಾಂಸಾಹಾರಿ ಪ್ರಾಣಿಗಳು, ನೀರು, ಸಸ್ಯಗಳು ಸೇರಿದಂತೆ ಪ್ರತಿ ಘಟನೆಯನ್ನು ಸಂಗ್ರಹಿಸಿ ತಕ್ಷಣದಲ್ಲಿ ರವಾನಿಸಬಹುದಾಗಿದೆ.      


ಸಂಶೋಧನೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಇದು ಸಹಕಾರಿಯೂ ಆಗಿದೆ.
ಸಂಪೂರ್ಣ ಮಾಹಿತಿ: ಅರಣ್ಯ ವೀಕ್ಷಕರು ಪ್ರತಿ ನಿತ್ಯ ಗಸ್ತು ತಿರುಗುವ ಸಂದರ್ಭದಲ್ಲಿ ಈ ಸ್ಮಾರ್ಟ್ಫೋನ್ ತೆಗೆದುಕೊಂಡು ಹೋಗಬೇಕು. ಅವರು ಗಸ್ತಿಗೆ ಹೊರಡುತ್ತಿದ್ದಂತೆ ಮೊಬೈಲ್ ಆನ್ ಆಗಬೇಕು. ಆಗ ಸಿಬ್ಬಂದಿ ಕರ್ತವ್ಯದ ಮಾಹಿತಿ ಹಿರಿಯ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಅಷ್ಟೇ ಅಲ್ಲ ಈ ಸಿಬ್ಬಂದಿ ಎಲ್ಲಿ ಹೋಗುತ್ತಿದ್ದಾರೆ? ಯಾವ ಸ್ಥಳದಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಷ್ಟು ಕಿ.ಮೀ. ಗಸ್ತು ತಿರುಗಿದ್ದಾರೆ? ಯಾವ ಪ್ರಾಣಿಯನ್ನು ನೋಡಿದ್ದಾರೆ? ಗಸ್ತು ತಿರುಗುವಾಗ ಅವರಿಗೆ ಏನೇನು ಸಿಕ್ಕಿವೆ ಎಂಬ ಸಮಗ್ರ ಮಾಹಿತಿ ಸೇರಿದಂತೆ ಅವರು ಕರ್ತವ್ಯ ಮುಗಿದ ನಂತರ ಕ್ಯಾಂಪ್ಗೆ ಬಂದು ಸೇರಿದ್ದಾರೆಯೇ ಎಂಬ ಬಗ್ಗೆಯೂ ಇದರ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲ ಮಾಹಿತಿ ಆರ್ಎಫ್ಓ, ಎಸಿಎಫ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ರವಾನೆಯಾಗುತ್ತಿರುತ್ತದೆ. ಬೆಂಗಳೂರಿನ ಕೀಫಾಲ್ಕನ್ ಸಲ್ಯೂಷನ್ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಕಾಡಿನಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಂದ ಹಿಡಿದು ಅನಕ್ಷರಸ್ಥರೂ ಕೂಡ ಸುಲಭವಾಗಿ ಬಳಕೆ ಮಾಡುವಂತೆ ಸರಳವಾಗಿದೆ. ಈ ಪರಿಕಲ್ಪನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಚ್.ಸಿ. ಕಾಂತರಾಜು ಅವರದ್ದು. ಆದರೆ ಸಾಫ್ಟ್ವೇರ್ ಅಭಿವೃದ್ಧಿ ಮಾಡಿದ್ದು ಬೆಂಗಳೂರಿನ ಕೀ ಫಾಲ್ಕನ್ ಸಲ್ಯೂಷನ್ನ ತೇಜೋಮಯ ಎ. ರಾಜ್ಅರಸ್, ಶಂಕರ್ ಮತ್ತು ಶಕ್ತಿ ಪೊನ್ನುಸ್ವಾಮಿ.


ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 'ಹೆಜ್ಜೆ' ಕಾಡು ಕಾಯದೇ ಕಳ್ಳಾಟವಾಡುತ್ತಿದ್ದ ಸಿಬ್ಬಂದಿಗೆ ಭಯ ಹುಟ್ಟಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ನೆರವಾಗಿದೆ.
ಟಿ ಎನ್.ಎಂ. ನವೀನ್ ಕುಮಾರ್ ಮತ್ತು ಎ. ರಾಜ್ಕುಮಾರ್, ವನ್ಯಜೀವಿ ಪರಿಪಾಲಕರು
ಈ ಹೆಜ್ಜೆ ಸಾಫ್ಟ್ವೇರ್ ಬಗ್ಗೆ ತಜ್ಞರು ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮತ್ತಷ್ಟು ವ್ಯವಸ್ಥಿತವಾಗಿ ಈ ತಂತ್ರಜ್ಞಾನ ಸುಧಾರಿಸಿ ಎಲ್ಲೆಡೆ ವಿಸ್ತರಣೆ ಮಾಡಲಾಗುವುದು.
- ಎಚ್.ಸಿ. ಕಾಂತರಾಜು, ಅರಣ್ಯ ಸಂರಕ್ಷಣಾಧಿಕಾರಿ


 ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.