ಪ್ರಧಾನ ಸುದ್ದಿ

ಬಡ್ಡಿರಹಿತ ಸಾಲ

Published On :

ಕ.ಪ್ರ.ವಾರ್ತೆ     ಬೆಂಗಳೂರು     ಫೆ. 3
ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಎಲ್ಲ ಬಡ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ಓದಲು ಇಚ್ಚಿಸುವ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ 60 ಸಾವಿರ ಸಾಲ ನೀಡಲಾಗುತ್ತದೆ. ವಿದ್ಯಾರ್ಥಿಗಳ ಶಿಕ್ಷಣ ಮುಗಿದ 6 ತಿಂಗಳವರೆಗೂ ಬಡ್ಡಿಯನ್ನು ಸರ್ಕಾರವೇ ತುಂಬಿಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ಕೆಲ ನೂತನ ಯೋಜನೆಗಳನ್ನು ಪ್ರಕಟಿಸಲು ವಿಕಾಸಸೌಧದಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿ ನಡೆಸಿದರು.
ವೃತ್ತಿಪರ ಕೋರ್ಸ್ಗಳಲ್ಲಿ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಬಡ್ಡಿ ತುಂಬಿಕೊಡುತ್ತದೆ. ಆದರೆ ಇತರ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಷಿಕ ಎರಡೂವರೆ ಲಕ್ಷ ರುಪಾಯಿಗಿಂತ ಕಡಿಮೆ ಆದಾಯ ಹೊಂದಿದ ವಿದ್ಯಾರ್ಥಿಗಳಿಗೆ ರಾಜೀವ ಗಾಂಧಿ ವಿದ್ಯಾರ್ಥಿ ವೇತನ ಯೋಜನೆ ಪ್ರಾರಂಭಿಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ದೇಶಪಾಂಡೆ ತಿಳಿಸಿದರು.
ಪದವಿ ಕೋರ್ಸ್ಗಳಿಗೆ ವಾರ್ಷಿಕವಾಗಿ 60 ಸಾವಿರದಂತೆ ಗರಿಷ್ಠ 1.80 ಲಕ್ಷ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇನ್ನು 1.20 ಲಕ್ಷ ಹೆಚ್ಚಿನ ಸಾಲ ನೀಡಲಾಗುತ್ತದೆ. ಇದಲ್ಲದೇ ಆರು ತಿಂಗಳೊಳಗಿನ ಕೋರ್ಸ್ಗಳಿಗೆ 20 ಸಾವಿರ, ಒಂದು ವರ್ಷದೊಳಗಿನ ಕೋರ್ಸ್ಗಳಿಗೆ 40 ಸಾವಿರ, ಒಂದು ವರ್ಷದ ಕೋರ್ಸ್ಗೆ 60 ಸಾವಿರ ಹಾಗೂ ಒಂದು ವರ್ಷದ ಅವಧಿಗೆ ಮೀರಿದ ಕೋರ್ಸ್ಗಳಿಗೆ 1 ಲಕ್ಷ ಶೈಕ್ಷಣಿಕ ಸಾಲ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ದ್ವಿತೀಯ ಪಿಯುವಿನಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದು ಸರ್ಕಾರಿ ಅಥವಾ ಅನುದಾನಿತ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿಯೇ ಓದುತ್ತಿದ್ದರೇ ಮಾತ್ರ ಈ ಸಾಲ ಯೋಜನೆಯ ಲಾಭ ಪಡೆಯಬಹುದು. ವಿದ್ಯಾರ್ಥಿಗಳ ಗುರುತು ಪತ್ತೆಗೆ ಸಾಲ ಯೋಜನೆಯ ಜತೆಗೆ ಆಧಾರ್ ಗುರುತು ಸಂಖ್ಯೆಯನ್ನು ಜೋಡಿಸಲಾಗುವುದು ಎಂದು ದೇಶಪಾಂಡೆ ಹೇಳಿದರು.
ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿ: ರಾಜ್ಯದ ನಾನಾ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ವ್ಯವಸ್ಥೆಯು 2014-15ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ. ಆದರೆ ಪರೀಕ್ಷೆ ಫಲಿತಾಂಶ ಹಾಗೂ ಪ್ರಮಾಣಪತ್ರ ವಿತರಣೆಯನ್ನು ಮಾತ್ರ ಎಲ್ಲ ವಿವಿಗಳು ಒಂದೇ ಸಮಯದಲ್ಲಿ ಮಾಡಬೇಕು ಎಂದು ದೇಶಪಾಂಡೆ ಸೂಚಿಸಿದರು.
ಈ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಎಲ್ಲ ವಿವಿಗಳ ಕುಲಪತಿಗಳ ಜತೆ ರಾಜ್ಯ ಸರ್ಕಾರ ಚರ್ಚೆ ನಡೆಸಿದೆ. ಈ ಹಿಂದಿನ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಬೇರೆ ವಿವಿಗಳಲ್ಲಿ ಪ್ರವೇಶ ಪಡೆಯುವುದು ಕಷ್ಟವಾಗುತ್ತಿತ್ತು. ಕೆಲ ವರ್ಷಗಳಿಂದ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ವಿದ್ಯಾರ್ಥಿಗಳಿಂದ ಮನವಿ ಬಂದಿತ್ತು. ಈ ವ್ಯವಸ್ಥೆಯಿಂದ ರಾಜ್ಯದ ಎಲ್ಲ ವಿವಿಗಳಲ್ಲಿ ಒಂದೇ ಸಮಯಕ್ಕೆ ತರಗತಿಗಳು ಆರಂಭವಾಗಿ, ಏಕಕಾಲಕ್ಕೆ ಪರೀಕ್ಷೆ, ಫಲಿತಾಂಶ ಹಾಗೂ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಮಾಧ್ಯಮ: ಅಧ್ಯಯನ ಸಮಿತಿ ರಚನೆ: ರಾಜ್ಯದ ವಿವಿಗಳ ಸಾಮಾಜಿಕ ವಿಜ್ಞಾನ ವಿಷಯಗಳಲ್ಲಿ ಅಭ್ಯಾಸ ಮಾಡುತ್ತಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆಯುತ್ತಿಲ್ಲ. ಪಠ್ಯಕ್ರಮದ ಕೊರತೆಯಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಾಗಲು ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಕೋರಿ ಖ್ಯಾತ ಸಾಹಿತಿ ಪ್ರೊ.ಸಾ.ಶಿ. ಮರುಳಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.



ವೃತ್ತಿಪರ ಶುಲ್ಕ ಬದಲಾವಣೆಯಿಲ್ಲ
ವೃತ್ತಿ ಶಿಕ್ಷಣ ಕಾಲೇಜುಗಳ ವಿಧೇಯಕವನ್ನು ಮತ್ತೆ ತಡೆಹಿಡಿದಿರುವುದರಿಂದ ಹಳೆಯ ಒಪ್ಪಂದದಂತೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಪ್ರವೇಶ ಶುಲ್ಕದಲ್ಲಿ ಯಾವುದೇ ಬದಲಾವಣೆ ತರಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ವಾರಾಂತ್ಯದೊಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇಶಪಾಂಡೆ ತಿಳಿಸಿದರು. 2006 ಕಾಯಿದೆ ಜಾರಿಗೆ ಸಂಬಂಧ ರಚಿಸಿದ್ದ ಎರಡು ಸಮಿತಿಗಳು ಇನ್ನೂ ಅಸ್ತಿತ್ವದಲ್ಲಿದೆ ಎಂದು ಸ್ಪಷ್ಟಪಡಿಸಿದರು.


 ಏಕರೂಪ ವೇಳಾಪಟ್ಟಿ



ಪದವಿ ಕೋರ್ಸ್ಗಳು
  1, 3, 5ನೇ ಸೆಮಿಸ್ಟರ್ ತರಗತಿ ಪ್ರಾರಂಭ- ಜೂ.15ರಿಂದ ಜೂ.30
  ಮೊದಲನೇ ಸೆಮಿಸ್ಟರ್ ಪ್ರವೇಶಕ್ಕೆ ಕೊನೆಯ ದಿನ- ಜು.1ರಿಂದ ಜು.15
  ದಂಡ ಸಹಿತ ಶುಲ್ಕ ತುಂಬಿ ಮೊದಲನೇ ಸೆಮಿಸ್ಟರ್ ಪ್ರವೇಶಕ್ಕೆ ಕೊನೆಯ ದಿನ- ಜು.16ರಿಂದ ಜು.30
  1, 3 ಹಾಗೂ 5ನೇ ಸೆಮಿಸ್ಟರ್ ತರಗತಿ ಅಂತ್ಯ- ಅ.16ರಿಂದ ಅ.30
  1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆ ಅ.25ರಿಂದ ನ.10
  2,4 ಮತ್ತು 6ನೇ ಸೆಮಿಸ್ಟರ್ ತರಗತಿ ಪ್ರಾರಂಭ- ನ.15ರಿಂದ ನ.30
  2,4 ಮತ್ತು 6ನೇ ಸೆಮಿಸ್ಟರ್ ತರಗತಿ ಅಂತ್ಯ- ಮಾ.30ರಿಂದ ಎ.15
  2,4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆ- ಎ.10ರಿಂದ ಎ.30
ಸ್ನಾತಕೋತ್ತರ ಕೋರ್ಸ್ಗಳು
  ಶೈಕ್ಷಣಿಕ ವರ್ಷ ಪ್ರಾರಂಭ- ಜು.15ರಿಂದ ಜು.31
  ಪ್ರವೇಶಕ್ಕೆ ಕೊನೆಯ ದಿನ- ಆ.1ರಿಂದ ಆ.15
  1 ಮತ್ತು 3ನೇ ಸೆಮಿಸ್ಟರ್ ತರಗತಿ ಆರಂಭ- ಆ.1ರಿಂದ ಆ.15
 1 ಮತ್ತು 3ನೇ ಸೆಮಿಸ್ಟರ್ ತರಗತಿ ಅಂತ್ಯ- ನ.30ರಿಂದ ಡಿ.15
 1 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆ- ಡಿ.10ರಿಂದ ಡಿ.25
  2 ಮತ್ತು 4ನೇ ಸೆಮಿಸ್ಟರ್ ತರಗತಿ ಆರಂಭ- ಜ.1ರಿಂದ ಜ.15
  2 ಮತ್ತು 4ನೇ ಸೆಮಿಸ್ಟರ್ ತರಗತಿ ಅಂತ್ಯ- ಎ.30ರಿಂದ ಮೇ.15
  2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ- ಮೇ.10ರಿಂದ ಮೇ.25

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.