ರಾಜ್ಯ ಬಜೆಟ್ಗೆ ಅಹರ್ನಿಶಿ ಸಿದ್ಧತೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.3
ಜನಪ್ರಿಯ ಬಜೆಟ್ ನೀಡುವುದಕ್ಕೆ ಚಾಲನೆ, ದಿನ ಪೂರ್ತಿ ಸಮಾಲೋಚನೆ...
ಎಂಟನೇ ಬಾರಿಗೆ ರಾಜ್ಯ ಮುಂಗಡಪತ್ರ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಪರಿ ಇದು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಿದ್ದರಾಮಯ್ಯನವರು ಪೂರ್ಣ ಪ್ರಮಾಣದಲ್ಲಿ ಮಂಡಿಸುತ್ತಿರುವ ಬಜೆಟ್ ಇದು. ಫೆ.14ರಂದು ಅವರು ವಿಧಾನಮಂಡಲದ ಆಯವ್ಯಯ ಮಂಡಿಸಲಿದ್ದಾರೆ. ಅಂದು ಪ್ರೇಮಿಗಳ ದಿನ ಬೇರೆ. ಹೀಗಾಗಿ ಯಾರ್ಯಾರಿಗೆ ತೆರಿಗೆ ವಿನಾಯ್ತಿಯ ಪ್ರೇಮ ನಿವೇದನೆ ತೋರಬೇಕು, ಇನ್ಯಾರ ಮೇಲೆ ಕರಭಾರದ ಕೋಪ ಪ್ರದರ್ಶನ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಅವರು ಮುಳುಗಿದ್ದಾರೆ. ಚುನಾವಣೆ ಬರುತ್ತಿದೆ. ಹೀಗಾಗಿ ಆದಾಯ ಸಂಗ್ರಹಣೆ, ತೆರಿಗೆ ಸೋರಿಕೆ ತಡೆ, ವಿವಿಧ ವಲಯಗಳ ಸಮತೋಲನ ಜತೆಗೆ ಜನಪ್ರಿಯ ಬಜೆಟ್ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಅವರು, ಭಾರಿ ಸಿದ್ಧತೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿಯವರೆಗೂ ಅವರು ಸಿದ್ಧತೆಯಲ್ಲಿ ಮುಳುಗಿದ್ದಾರೆ. ವಿವಿಧ ಇಲಾಖೆ ಮುಖ್ಯಸ್ಥರು, ಐಎಎಸ್ ಅಧಿಕಾರಿಗಳು ಹಾಗೂ ಆರ್ಥಿಕ ತಜ್ಞರ ಜತೆ ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಕೆಲವೇ ಕೆಲವು ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಬಿಟ್ಟರೆ ಉಳಿದವುಗಳಿಗೆ ಹಾಜರಾಗದೇ ಇರಲು ನಿರ್ಧರಿಸಿದ್ದಾರೆ. ಫೆ.14 ರಂದು ಬಜೆಟ್ ಮಂಡಿಸುವುದರಿಂದ ಮುಂದಿನ ಹತ್ತು ದಿನಗಳ ಕಾಲ ಎಡಬಿಡದೇ ತಯಾರಿ ನಡೆಸಲು ನಿರ್ಧರಿಸಿದ್ದಾರೆ.
ಬೇಡಿಕೆಗೆ ಕಿವಿಯಾದರು: ಮಾತೃ ವಿಯೋಗ ಹೊಂದಿರುವ ರಾಜ್ಯ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರ ನಿವಾಸಕ್ಕೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿದರು. ನಂತರ ವಿಧಾನಸೌಧಕ್ಕೆ ಆಗಮಿಸಿದ ಅವರು ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ತಾಲೂಕಿಗೊಂದು ಚಿತ್ರ ಮಂದಿರ: ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಪ್ರತಿ ತಾಲೂಕಿನಲ್ಲಿ 300 ಆಸನಗಳ ಸಾಮರ್ಥ್ಯದ ಚಿತ್ರಮಂದಿರವನ್ನು ನಿರ್ಮಿಸುವುದಕ್ಕೆ ಈ ಸಾಲಿನ ಬಜೆಟ್ನಲ್ಲಿ ಹಣ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಮಲ್ಟಿಫ್ಲೆಕ್ಸ್ಗಳು, ಮಾಲ್ಗಳಿಂದ ಜನರು ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಚಿತ್ರಮಂದಿರಗಳು ಮುಚ್ಚಿ ಹೋಗಿವೆ. ಇದರಿಂದ ಕನ್ನಡ ಚಲನಚಿತ್ರ ಉದ್ಯಮಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಪ್ರತಿ ತಾಲೂಕಿನಲ್ಲಿ ಒಂದು ಚಿತ್ರಮಂದಿರ ನಿರ್ಮಿಸುವಂತೆ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


