ಗಣಿ ಅಕ್ರಮ ಬೆಂಬಲಿಸಿದವರಿಗೇ ಮಣೆ

ಕನ್ನಡಪ್ರಭವಾರ್ತೆ , ಬೆಂಗಳೂರು , ಫೆ.5
ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿದ ಐಪಿಎಸ್ ಅಧಿಕಾರಿಗಳನ್ನೇ ವಿಶೇಷ ತನಿಖಾ ಸಂಸ್ಥೆಗೆ (ಎಸ್ಐಟಿ) ನೇಮಕಗೊಳಿಸುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಪ್ರಯತ್ನ ಆರಂಭವಾಗಿದ್ದು, ಲೋಕಾಯುಕ್ತ ವರದಿಯನ್ನು ಹಳ್ಳ ಹಿಡಿಸುವ ಪರೋಕ್ಷ ಪ್ರಯತ್ನ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ.
ಅಕ್ರಮ ಗಣಿಗಾರಿಕೆ ದಂಧೆ ತಾರಕಕ್ಕೆ ಏರಿದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಧಿಕಾರಿಯನ್ನೇ ಈಗ ಎಸ್ಐಟಿಯ ಡಿಐಜಿಯಾಗಿ ನೇಮಕ ಮಾಡುವ ಪ್ರಯತ್ನ ನಡೆದಿದೆ. ಇದರ ಜತೆಗೆ ಲೋಕಾಯುಕ್ತ ಸಂಸ್ಥೆಯಿಂದ ವರ್ಗವಾಗಿ ಹೋಗಿದ್ದ ಅಧಿಕಾರಿಯನ್ನು ಐಜಿಪಿಯಾಗಿ ನೇಮಕ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಒಂದೆಡೆ ಎಸ್ಐಟಿಯನ್ನು ದುರ್ಬಲಗೊಳಿಸಲು ಸರ್ಕಾರ ಪರೋಕ್ಷ ಪ್ರಯತ್ನ ನಡೆಸುತ್ತಿದ್ದರೆ ಹಾಲಿ ಲೋಕಾಯುಕ್ತ ಎಡಿಜಿಪಿಯಾಗಿರುವ ಸತ್ಯನಾರಾಯಣ ರಾವ್ ಅವರನ್ನು ತಕ್ಷಣ ವರ್ಗಾಯಿಸುವಂತೆ ಸಮಾಜ ಪರಿವರ್ತನೆ ಸಂಸ್ಥೆ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.
ಹೊಸ ಲೋಕಾಯುಕ್ತರ ನೇಮಕವಾದ ನಂತರ ಈ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಸತ್ಯನಾರಾಯಣ ರಾವ್ ಅವರೇ ಲೋಕಾಯುಕ್ತ ಎಡಿಜಿಪಿಯಾಗಿದ್ದಾರೆ. ಇದರಿಂದ ತನಿಖೆ ಮೇಲೆ ಪ್ರತಿಕೂಲ ಪರಿಣಾಮವುಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ವರ್ಗಾಯಿಸಿ ಪ್ರಾಮಾಣಿಕ ಅಧಿಕಾರಿಯನ್ನು ಆ ಸ್ಥಾನದಲ್ಲಿ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರ್ರಾವ್ ಅವರನ್ನು ಭೇಟಿ ಮಾಡಿ ದಾಖಲೆಗಳನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
26 ಲಕ್ಷ ಪಡೆದಿದ್ದರು: ಬಳ್ಳಾರಿ ಜಿಲ್ಲೆ ಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರು ರು. 26 ಲಕ್ಷವನ್ನು ಪಡೆದು ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿದ್ದರು. ಆದರೆ ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಅವರನ್ನೇ ಅಕ್ರಮ ಗಣಿಗಾರಿಕೆ ತನಿಖೆಗೆ ರಚಿಸಿರುವ ಎಸ್ಐಟಿಯ ಡಿಐಜಿಯಾಗಿ ನೇಮಿಸಲು ಪ್ರಯತ್ನ ನಡೆಯುತ್ತಿದೆ. ಹಿರಿಯ ಸಚಿವರೊಬ್ಬರು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


