ಪ್ರಧಾನ ಸುದ್ದಿ

ಬಹುಮತ ಕಳಕೊಂಡ ಕೇಜ್ರಿವಾಲ್; ಬೆಂಬಲ ವಾಪಸ್ ತಗೊಂಡ ಶಾಸಕ; ತೂಗುಯ್ಯಾಲೆಯಲ್ಲಿ ಆಪ್ ಸರ್ಕಾರ

ಬಹುಮತ ಕಳಕೊಂಡ ಕೇಜ್ರಿವಾಲ್; ಬೆಂಬಲ ವಾಪಸ್ ತಗೊಂಡ ಶಾಸಕ; ತೂಗುಯ್ಯಾಲೆಯಲ್ಲಿ ಆಪ್ ಸರ್ಕಾರ
Published On :

ಪಿಟಿಐ ನವದೆಹಲಿ ಫೆ.10-
ಒಂದೂವರೆ ತಿಂಗಳ ಅವಧಿಯ ದೆಹಲಿ ಸರ್ಕಾರಕ್ಕೆ ಈಗ ಬಹುಮತದ ಕೊರತೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಆಪ್) ಸರ್ಕಾರಕ್ಕೆ  ಬೆಂಬಲ ನೀಡಿದ್ದ ಸ್ವತಂತ್ರ ಶಾಸಕ ರಾಮ್‌ಬೀರ್ ಶೋಕಿನ್ ಬೆಂಬಲ ವಾಪಸ್ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಇದರ ಜತೆಗೆ ಏಕೈಕ ಜೆಡಿಯು ಶಾಸಕ ಶೋಯಬ್ ಇಕ್ಬಾಲ್ ಕೂಡ ಬೆಂಬಲ ಹಿಂಪಡೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಇಬ್ಬರು ಶಾಸಕರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿಯಾಗಿ ಬೆಂಬಲ ಹಿಂತೆಗೆತದ ಪತ್ರವನ್ನು ಸಲ್ಲಿಸಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆಮ್ ಆದ್ಮಿ ಪಕ್ಷದಿಂದ ಉಚ್ಚಾಟಿತರಾಗಿರುವ ಶಾಸಕ ವಿನೋದ್ ಕುಮಾರ್ ಬಿನ್ನಿ ಈಗಾಗಲೇ ಸರ್ಕಾರಕ್ಕೆ ಬೆಂಬಲ ಹಿಂಪಡೆದುಕೊಂಡಿದ್ದಾರೆ.

ವಾಗ್ದಾನ ಈಡೇರಿಸಿಲ್ಲ: ಆಮ್ ಆದ್ಮಿ ಪಕ್ಷ ಚುನಾವಣೆ ವೇಳೆ ನೀಡಿದ್ದ ವಾಗ್ದಾನಗಳನ್ನು ಸಮರ್ಪಕವಾಗಿ ಈಡೇರಿಸಿಲ್ಲ. ಆದರೆ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ವಿದ್ಯುತ್ ಮತ್ತು ನೀರು ಪೂರೈಕೆ ವಿಚಾರದಲ್ಲಿ ತೃಪ್ತಿದಾಯಕವಾದ ಸಾಧನೆ ಮಾಡಿಯೇ ಇಲ್ಲ ಎಂದು ಸ್ವತಂತ್ರ ಶಾಸಕ ರಾಮ್‌ಬೀರ್ ಶೋಕಿನ್ ಆಪಾದಿಸಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಬೆಂಬಲ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಬೇಕಾಯಿತು ಎಂದು ಹೇಳಿದ್ದಾರೆ.

ಸಿಎಂ-ಜಂಗ್ ಭೇಟಿ: ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಜತೆ  ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜನಲೋಕಪಾಲ ಮಸೂದೆಯನ್ನು ಮಂಡಿಸುವ ಉದ್ದೇಶದ ಬಗ್ಗೆ ಮುಖ್ಯಮಂತ್ರಿ ವಿವರಿಸಿದರು ಎಂದು ಹೇಳಲಾಗಿದೆ. ಭೇಟಿಯ ಬಳಿಕ ಲೆಫ್ಟಿನೆಂಟ್ ಗವರ್ನರ್ ದೆಹಲಿ ವಿಧಾಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಮಂಡಿಸುವ ಬಗ್ಗೆ ಕೇಂದ್ರ ಕಾನೂನು ಸಚಿವಾಲಯದ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ. ಇದೇ ವೇಳೆ 1984ರ ಸಿಖ್ ವಿರೋಧಿ ದಂಗೆ ಬಗ್ಗೆ ವಿಶೇಷ ತನಿಖಾ ದಳದಿಂದ ತನಿಖೆ ನಡೆಸುವ ಕೇಜ್ರಿವಾಲ್ ಸರ್ಕಾರದ ಪ್ರಸ್ತಾಪಕ್ಕೆ ಜಂಗ್ ಒಪ್ಪಿದ್ದಾರೆ.

ಆಡಳಿತ ನಡೆಸುವುದಕ್ಕೇ ಬರುವುದಿಲ್ಲ - ಬಿಜೆಪಿ:
ಕೇಜ್ರಿವಾಲ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸುವುದಕ್ಕೇ ಬರುವುದಿಲ್ಲ. ಆ ಪಕ್ಷದ ನಾಯಕರು ಏನಿದ್ದರೂ ತಪ್ಪಿಸಿಕೊಳ್ಳುವ ಮಾರ್ಗದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಟೀಕಿಸಿದ್ದಾರೆ. ಕೇಜ್ರಿವಾಲ್ ಅವರ ಹಲವು ನಿರ್ಧಾರಗಳಿಂದ ಅದು ಸಾಬೀತಾಗಿದೆ ಎಂದಿದ್ದಾರೆ.

ಭೂಷಣ್‌ಗೆ ಭೂ ಉರುಳು: ಆಮ್ ಆದ್ಮಿ ಪಕ್ಷದ ಸದಸ್ಯ ಪ್ರಶಾಂತ್ ಭೂಷಣ್ ಹಿಮಾಚಲ ಪ್ರದೇಶದಲ್ಲಿ ಭೂಹಗರಣದಲ್ಲಿ ಭಾಗಿಯಾಗಿದ್ದಾರೆ. ಹೀಗೆಂದು ಹಿಮಾಚಲ ಪ್ರದೇಶ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನ್ನ ತನಿಖಾ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಭೂಷಣ್ ಖರೀದಿಸಿರುವ ಜಮೀನನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಬಹುದು ಎಂದು ಶಿಫಾರಸು ಮಾಡಿದೆ. 2010ರ ಫೆಬ್ರವರಿಯಲ್ಲಿ ಅಂದಿನ ಬಿಜೆಪಿ ಸರ್ಕಾರ ಭೂಷಣ್ ನೇತೃತ್ವದಲ್ಲಿನ ಸಂಸ್ಥೆಯೊಂದಕ್ಕೆ ಭೂಮಿ ಮಂಜೂರು ಮಾಡಿತ್ತು. ಹಿಮಾಚಲ ಪ್ರದೇಶದಲ್ಲಿ ಟೀ ತೋಟವನ್ನು ಕೃಷಿಯೇತರರಿಗೆ ಮಾರುವಂತಿಲ್ಲ.

ದೆಹಲಿ ವಿಧಾನಭೆ ಬಲಾಬಲ
ಬಿಜೆಪಿ 32
ಆಮ್ ಆದ್ಮಿ 28
ಕಾಂಗ್ರೆಸ್ 08

ಒಟ್ಟು ಸ್ಥಾನ 70
ಸರಳ ಬಹುಮತಕ್ಕೆ  36

ಕೇಜ್ರಿವಾಲ್‌ಗೆ ಇದೆ ಅದೃಷ್ಟ
ಗಮನಾರ್ಹ ಅಂಶವೆಂದರೆ ದೆಹಲಿ ಸರ್ಕಾರದ ವಿರುದ್ಧ ಯಾವ ಪಕ್ಷವೂ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧವಾಗಿಯೇ ಇಲ್ಲ. ಒಂದು ವೇಳೆ ನಿರ್ಣಯಕ್ಕೆ ಬೆಂಬಲ ವ್ಯಕ್ತವಾಗಿ ಸರ್ಕಾರ ಬಿದ್ದು ಹೋದರೆ ಅದರ ಲಾಭವನ್ನು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತೆಗೆದುಕೊಳ್ಳಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ಗೆ ಅನುಕೂಲವಾಗಲಿದೆ ಎಂಬ ಭಯ ಎಲ್ಲ ಪಕ್ಷಗಳದ್ದು.ಹೀಗಾಗಿ, ಸರ್ಕಾರ ಪತನವಾದರೆ ತನ್ನಷ್ಟಕ್ಕೇ ಪತನವಾಗಲಿ ಎಂಬ ಇರಾದೆ ಎಲ್ಲ ಪಕ್ಷಗಳದ್ದು ಎನ್ನುತ್ತಾರೆ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕೆ.ಎನ್.ಭಟ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.