ಪ್ರಧಾನ ಸುದ್ದಿ

ಎತ್ತಿನಹೊಳೆಗೆ ಹಣದ ಹೊಳೆ, ಕಾವೇರಿ ತೀರ ನೀಗಿತು ನೆರವಿನ ಬರ

ಎತ್ತಿನಹೊಳೆಗೆ ಹಣದ  ಹೊಳೆ, ಕಾವೇರಿ ತೀರ ನೀಗಿತು ನೆರವಿನ ಬರ
Published On :

ಬೆಂಗಳೂರು: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ರು. 12912.36 ಕೋಟಿ ಮೊತ್ತದ ಪರಿಷ್ಕೃತ ವರದಿಗೆ ಅನುಮೋದನೆ ಹಾಗೂ ಕಾವೇರಿ ಮತ್ತು ಕಬಿನಿ ತೀರದ ವಿವಿಧ ಕಾಮಗಾರಿಗಳಿಗೆ ರು. 333. 77 ಕೋಟಿ ಬಿಡುಗಡೆ ಸೇರಿದಂತೆ ಮಹತ್ವದ ಯೋಜನೆಗಳಿಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಭಾಗದ ನೀರಾವರಿ ಯೋಜನೆಗಳಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ಹಳೆ ಮೈಸೂರು ಭಾಗದಲ್ಲಿನ ನೀರಾವರಿ ಯೋಜನೆಗಳಿಗೆ ಸರ್ಕಾರ ವಿಶೇಷ ಒತ್ತು ನೀಡಿದೆ.
ಆದರೆ ಕೆಪಿಎಸ್‌ಸಿ ರಾಜ್ಯ ಪತ್ರಾಂಕಿತ ನೇಮಕ ಅವ್ಯವಹಾರ ಪ್ರಕರಣ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಂಪುಟದಲ್ಲಿ ಒಮ್ಮತ ಮೂಡದೇ ಇರುವ ಹಿನ್ನೆಲೆಯಲ್ಲಿ ಕಾನೂನು ತೊಡಕುಗಳ ಬಗ್ಗೆ ಅಧ್ಯಯನ ನಡೆಸಲು ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಂಪುಟ ಉಪಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ.
ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದ್ದು ಪ್ರಮುಖ ನಿರ್ಧಾರಗಳ ವಿವರ ಹೀಗಿದೆ.

ಸಂಪುಟದ ಪ್ರಮುಖ ನಿರ್ಧಾರಗಳು
ಎತ್ತಿನಹೊಳೆಗೆ ಒಪ್ಪಿಗೆ:
ಅರವನಹಳ್ಳಿಯಿಂದ ಕೋಲಾರದವರೆಗೆ 24 ಟಿಎಂಸಿ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆ ಪರಿಷ್ಕೃತ ವರದಿಗೆ ಒಪ್ಪಿಗೆ ನೀಡಲಾಗಿದೆ. ಇದು ಎರಡು ಹಂತದಲ್ಲಿದೆ. ಮೊದಲ ಹಂತದ ಏತ ಕಾಮಗಾರಿಗೆ ರು. 3508.87 ಕೋಟಿ, ಎರಡನೇ ಹಂತಕ್ಕೆ ರು. 9403.56 ಕೋಟಿ ಸೇರಿದಂತೆ ರು. 12912.36 ಕೋಟಿಯ ಮಹತ್ವದ ಯೋಜನೆ ಇದಾಗಿದೆ. ಸದ್ಯದಲ್ಲೇ ಇದಕ್ಕೆ ಟೆಂಡರ್ ಕರೆಯಲಾಗುತ್ತದೆ.
ಐಇಬಿಆರ್ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ರು. 100 ಕೋಟಿ ಹಣ ಸಂಗ್ರಹಿಸುವುದಕ್ಕೆ ಸರ್ಕಾರಿ ಖಾತರಿ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮದ ಬಲಮುರಿ ಕ್ಷೇತ್ರದ ಮಿರ್ಜಾ ಆಣೆಕಟ್ಟು ನಾಲೆ ದುರಸ್ತಿ ಮತ್ತು ಆಧುನೀಕರಣಕ್ಕೆ ರು. 83 ಕೋಟಿ.
ಎಚ್.ಡಿ.ಕೋಟೆ ನುಗು ಎಡದಂಡೆ ಮತ್ತು ಬಲದಂಡೆ ನಾಲೆಗಳ ಅಭಿವೃದ್ಧಿಗೆ ರು. 35 ಕೋಟಿ.
ಕಬಿನಿ ಬಲದಂಡೆ ನಾಲೆ ವಿತರಣೆ 42ರ ಹೊನ್ನೂರು ಉಪನಾಲೆ ಮತ್ತು ಸಂತೆಮರಹಳ್ಳಿ ಉಪನಾಲೆ ಕಾಮಗಾರಿಗೆ ರು. 11.10 ಕೋಟಿ.
ಕಬಿನಿ ನದಿ ಬೆದರಗೂಡು ಗ್ರಾಮದ ಬಳಿ ನೀರನ್ನು ಎತ್ತಿ ಮೈಸೂರು, ನಂಜನಗೂಡು ಮತ್ತು ಎಚ್.ಡಿ.ಕೋಟೆ ತಾಲೂಕಿನ 23 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ರು. 45 ಕೋಟಿ ಬಿಡುಗಡೆಗೆ ನಿರ್ಧರಿಸಲಾಗಿದೆ.
ಪರಿವಾರ ಮತ್ತು ತಳವಾರ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಒಪ್ಪಿಗೆ. ವಾಲ್ಮೀಕಿ ಉಪಪಂಗಡಕ್ಕೆ ಸೇರುತ್ತಿದ್ದ ಈ ಎರಡು ಜಾತಿ ಈ ಹಿಂದೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.