ಅಂಕೆ ಮೀರಿದ ಸಂಸದರಿಂದ ಸಂಸತ್ತಲ್ಲಿ ಲಜ್ಜೆಗೇಡಿ ವರ್ತನೆ, ತೆಲಂಗಾಣ ಬಿಲ್ ಮಂಡನೆ ತಡೆಯಲು ಪೆಪ್ಪರ್ ದಾಳಿ

ಪಿಟಿಐ ನವದೆಹಲಿ ಫೆ.13
ಸದನದಲ್ಲಿ ಕನಿಷ್ಠತಮ ವರ್ತನೆ ಎಂದರೆ ಇದುವೇ? ಅಂಥ ಒಂದು ಕೆಟ್ಟ ಪರಂಪರೆಗೆ ನಮ್ಮ ಸಂಸದರು ಗುರುವಾರ ದಾರಿ ಮಾಡಿಕೊಟ್ಟಿದ್ದಾರೆ. ಆಕ್ರೋಶ ತೀರಿಸಿಕೊಳ್ಳಲು ಸಂಸದರು ಎಂಥಾ ಕೆಳಮಟ್ಟಕ್ಕೂ ಇಳಿಯಲು ಸಿದ್ಧರಿರುವ ಬಗ್ಗೆ ತೋರಿಸಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಮಂಡನೆ ವಿರೋಧಿಸಿ ಸೀಮಾಂಧ್ರ ಪ್ರದೇಶದ ಉಚ್ಚಾಟಿತ ಕಾಂಗ್ರೆಸ್ ಸಂಸದ ಲಗಡಪಾಟಿ ರಾಜಗೋಪಾಲ್ ಕಾಳುಮೆಣಸಿನ ದ್ರವ್ಯ (ಪೆಪ್ಪರ್ ಸ್ಪ್ರೇ) ಸಿಂಪಡಿಸಿದರೆ, ಟಿಡಿಪಿ ಸಂಸದರೊಬ್ಬರು ಸ್ಪೀಕರ್ ಪೀಠದ ಮುಂದಿದ್ದ ಗಾಜು ಒಡೆದಿದ್ದಾರೆ. ಜತೆಗೆ ಕಾಗದಪತ್ರಗಳನ್ನೂ ಎಳೆದು ಬಿಸಾಡಿದ್ದಾರೆ.
ಸಂಸತ್ ಪ್ರಜಾಪ್ರಭುತ್ವದ ಗಂಗೋತ್ರಿ. ಅದನ್ನು ಮಲಿನ ಮಾಡಬಾರದು ಎಂದು ರಾಷ್ಟ್ರಪತಿ ಸಂಸದರಿಗೆ ಕೆಲ ದಿನಗಳ ಹಿಂದೆ ಮನವಿ ಮಾಡಿಕೊಂಡಿದ್ದರು. ಅದನ್ನೆಲ್ಲ ಗಾಳಿಗೆ ತೂರಿ ನಮ್ಮ ಜನಪ್ರತಿನಿಧಿಗಳು ತಲೆತಗ್ಗಿಸುವ ಕೆಲಸ ಮಾಡಿದ್ದಾರೆ.
ಪ್ರತಿಪಕ್ಷ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್, ಗೃಹ ಸಚಿವ ಸುಶೀಲ್ಕುಮಾರ್ ಶಿಂದೆ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಸಂಸದರ ದುರ್ವರ್ತನೆ ಖಂಡಿಸಿದ್ದಾರೆ.
ಎರಡೂ ಸದನಗಳಲ್ಲಿ ಏನಾಯಿತು?: ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಆಂಧ್ರಪ್ರದೇಶ ಉಳಿಸಿ ಎಂದು ಸೀಮಾಂಧ್ರ ಪ್ರದೇಶದ ಸಂಸದರು ಘೋಷಣೆ ಕೂಗುತ್ತಿದ್ದರು. ಮಧ್ಯಾಹ್ನ 12 ಗಂಟೆ ವರೆಗೆ ಪದೇ ಪದೆ ಕಲಾಪ ಮುಂದೂಡಲಾಗುತ್ತಿತ್ತು. ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂದೆ, ಮಧ್ಯಾಹ್ನ 12.15ಕ್ಕೆ ತೆಲಂಗಾಣ ಮಸೂದೆ ಮಂಡಿಸಲು ಮುಂದಾದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡ ಸಂಸದ ಲಗಡಪಾಟಿ ರಾಜಗೋಪಾಲ್ ಸ್ಪೀಕರ್ ಪೀಠದ ಮುಂದಕ್ಕೆ ನುಗ್ಗಿದರು. ಈ ಸಂದರ್ಭದಲ್ಲಿ ಅವರು ಕಾಳುಮೆಣಸಿನ ದ್ರವ್ಯವನ್ನು (ಪೆಪ್ಪರ್ ಸ್ಪ್ರೇ) ಸಿಂಪಡಿಸಿದರು. ಅದರ ಪ್ರಭಾವ ಎಷ್ಟಿತ್ತೆಂದರೆ ಸದನದಲ್ಲಿ ಉಸಿರುಗಟ್ಟಿದ ವಾತಾವರಣದ ಅನುಭವ ಆಯಿತು. ಸ್ಪೀಕರ್ ಮೀರಾ ಕುಮಾರ್ ಕೂಡ ಒಂದು ಹಂತದಲ್ಲಿ ಮೂಗು ಹಿಡಿದುಕೊಂಡ ದೃಶ್ಯಾವಳಿ ನೇರ ಪ್ರಸಾರವಾಯಿತು. ಮಾತ್ರವಲ್ಲದೆ ಪ್ರೇಕ್ಷಕರ ಮತ್ತು ಪತ್ರಕರ್ತರ ಗ್ಯಾಲರಿ, ಸಂಸತ್ ಭವನದ ಆವರಣದಲ್ಲಿ ಕೂಡ ಕಾಳುಮೆಣಸಿನ ದ್ರವ್ಯದ ಘಾಟು ಹರಡಿತ್ತು.
ನಾಲ್ವರು ಸಂಸದರು ಅಸ್ವಸ್ಥ: ಸದನದಲ್ಲಿ ಉಸಿರುಗಟ್ಟಿಸುವ ವಾತಾವರಣ ಉಂಟಾದ್ದರಿಂದಾಗಿ ನಾಲ್ವರು ಸಂಸದರು ಅಸ್ವಸ್ಥರಾದರು. ಉಳಿದ ಸಂಸದರು ಮೂಗಿಗೆ ಕರವಸ್ತ್ರ ಹಿಡಿದುಕೊಂಡು ಸದನದಿಂದ ಹೊರನಡೆಯಲಾರಂಭಿಸಿದರು. ಅಸ್ವಸ್ಥಗೊಂಡ ಸಂಸದರನ್ನು ತುರ್ತಾಗಿ ಆಸ್ಪತ್ರಗೆ ಕರೆದೊಯ್ಯಲಾಯಿತು. ಇದಾದ ಬಳಿಕ ರಾಜಗೋಪಾಲ್ ಅವರು ಸೆಕ್ರೆಟರಿ ಜನರಲ್ ಮುಂಭಾಗದ ಟೇಬಲ್ನ ಗಾಜು ಪುಡಿಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸದನದಲ್ಲಿದ್ದ ಇತರ ಸದಸ್ಯರು ರಾಜಗೋಪಾಲ್ ಮೇಲೆ ಹಲ್ಲೆ ನಡೆಸಿದರು. ಅಲ್ಲಿದ್ದ ಸಿಬ್ಬಂದಿ ರಾಜಗೋಪಾಲ್ ಅವರನ್ನು ಸ್ಪೀಕರ್ ಕಚೇರಿಗೆ ಕರೆದುಕೊಂಡು ಹೋದರು.
ಮೈಕ್ ಮುರಿದ ಟಿಡಿಪಿ ಸಂಸದ: ಕಾಂಗ್ರೆಸ್ನ ಉಚ್ಚಾಟಿತ ಸಂಸದನಿಗೆ ಜತೆಯಾದ ಟಿಡಿಪಿ ಸಂಸದ ಎಂ.ವೇಣುಗೋಪಾಲ್ ಸೆಕ್ರೆಟರಿ ಜನರಲ್ ಟೇಬಲ್ ಮೇಲಿದ್ದ ಮೈಕ್ ಅನ್ನು ಹಾಳುಗೆಡವಿದರು. ಮಾತ್ರವಲ್ಲದೆ ಸ್ಪೀಕರ್ ಪೀಠದ ಮೇಲಿದ್ದ ದಾಖಲೆಗಳನ್ನು ಎಳೆದು ಬಿಸಾಡಿದರು. ಜತೆಗೆ ಸೆಕ್ರೆಟರಿ ಜನರಲ್ ಅವರ ಕಂಪ್ಯೂಟರ್ ಸ್ಕ್ರೀನ್ನ ಗಾಜನ್ನು ಪುಡಿಗುಟ್ಟಿದರು.
ಮುಷ್ಟಿ ಕಾದಾಟ: ಇದರ ಜತೆಗೆ ಸೀಮಾಂಧ್ರ ಪ್ರದೇಶದ ಸದಸ್ಯರು ಮತ್ತು ಇತರ ಸಂಸದರ ನಡುವೆ ಮುಷ್ಟಿ ಕಾದಾಟ ನಡೆಯಿತು. ಈ ಸಂದರ್ಭದಲ್ಲಿ ರಾಜ್ಬಬ್ಬರ್, ಅಜರುದ್ದೀನ್ ಲಾಲ್ ಸಿಂಗ್ ಮತ್ತು ಟಿಎಂಸಿಯ ಸುಗತ ರಾಯ್ ಜಗಳ ಬಿಡಿಸಲು ಮುಂದಾದರು. ಎಲ್ಲ ಗದ್ದಲ, ಗೊಂದಲಗಳಿಂದಾಗಿ ಸದನವನ್ನು ಸ್ಪೀಕರ್ ಮಧ್ಯಾಹ್ನ 2 ಗಂಟೆ ವರೆಗೆ ಮುಂದೂಡಿದರು.
ರಾಜ್ಯಸಭೆಯಲ್ಲಿ: ರಾಜ್ಯಸಭೆಯಲ್ಲಿ ಟಿಡಿಪಿ ಸಂಸದ ಸಿ.ಎಂ. ರಮೇಶ್ ಸಭಾಪತಿ ಪೀಠದಲ್ಲಿದ್ದ ಮೈಕ್ ಕಿತ್ತು ಎಸೆಯಲು ಮುಂದಾದರು. ಇದಕ್ಕೂ ಮೊದಲು 2 ಬಾರಿ ಕಲಾಪ ಮುಂದೂಡಲ್ಪಟ್ಟಿತ್ತು. ಟಿಡಿಪಿ ಸಂಸದ ರಮೇಶ್ ಮೈಕ್ ಕೀಳಲು ಮುಂದಾಗುತ್ತಿದ್ದಂತೆ ಉಪಸಭಾಪತಿ ಪಿ.ಜೆ.ಕುರಿಯನ್ 'ಹೌದು, ಇದು ನಿಜಕ್ಕೂ ಉತ್ತಮ ಕೆಲಸ. ಈ ಕೃತ್ಯವನ್ನು ಪ್ರಜಾಪ್ರಭುತ್ವ ಎಂದು ಭಾವಿಸುವುದಾದರೆ ಮುಂದುವರಿಸಿರಿ' ಎಂದು ಬೇಸರದಿಂದ ಆಕ್ರೋಶ ವ್ಯಕ್ತಪಡಿಸಿದರು. ಅದರ ಜತೆಗೆ ಉಳಿದ ಟಿಡಿಪಿ ಸದಸ್ಯರು 'ಆಂಧ್ರ ಉಳಿಸಿ' ಎಂಬ ಫಲಕ ಹಿಡಿದು ಘೋಷಣೆ ಹಾಕುತ್ತಿದ್ದರೆ, ತಮಿಳುನಾಡಿದ ಡಿಎಂಕೆ ಸಂಸದರು 'ತಮಿಳುನಾಡಿನ ಮೀನುಗಾರರನ್ನು ರಕ್ಷಿಸಿ' ಎಂದು ಘೋಷಣೆ ಹಾಕುತ್ತಿದ್ದರು. ಅಂತಿಮವಾಗಿ ಪಿ.ಜೆ.ಕುರಿಯನ್ 2 ಗಂಟೆಗೆ ಕಲಾಪ ಮುಂದೂಡಿದರು. 2 ಗಂಟೆಗೆ ಕಲಾಪ ಪುನರಾರಂಭ ಗೊಂಡಾಗಲೂ ಡಿಎಂಕೆ, ಅಣ್ಣಾಡಿಎಂಕೆ ಮತ್ತು ಟಿಡಿಪಿ ಸಂಸದರ ಗದ್ದಲ ಮುಂದುವರಿದಿತ್ತು. ಅಂತಿಮವಾಗಿ ಉಪಸಭಾಪತಿ ಸೋಮವಾರಕ್ಕೆ ಕಲಾಪ ಮುಂದೂಡಿದರು.
ಸರ್ಕಾರ ಈ ರೀತಿಯಾಗಿ ಮಸೂದೆ ಮಂಡನೆ ಮಾಡಲಿದೆ ಎಂಬ ಕಲ್ಪನೆ ನಮಗೆ ಇರಲೇ ಇಲ್ಲ. ಯಾವುದೇ ವಿಚಾರದ ಬಗ್ಗೆ ಮಾತುಕತೆ ನಡೆಸಲು ಪ್ರತಿಪಕ್ಷಗಳನ್ನು ಕರೆಯುತ್ತದೆ. ನಮ್ಮ ಸಲಹೆ ಕೇಳಿಕೊಂಡ ಬಳಿಕ ಅದನ್ನು ಅನುಷ್ಠಾನ ಮಾಡುವುದಿಲ್ಲ. ಇನ್ನು ಮುಂದೆ ಸರ್ಕಾರದ ಜತೆ ಯಾವುದೇ ವಿಚಾರಕ್ಕೆ ಮಾತುಕತೆ ಇಲ್ಲ.
-ಸುಷ್ಮಾ ಸ್ವರಾಜ್, ಲೋಕಸಭೆ ಪ್ರತಿಪಕ್ಷ ನಾಯಕಿ
16 ಸಂಸದರ ಸಸ್ಪೆಂಡ್
ಲೋಕಸಭೆಯಲ್ಲಿ ಅಸಂಸದೀಯ ವರ್ತನೆ ತೋರಿದ 16 ಸಂಸದರನ್ನು ಸ್ಪೀಕರ್ ಮೀರಾ ಕುಮಾರ್ ಸಸ್ಪೆಂಡ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಫೆ.20ರ ವರೆಗೆ ಸದನದ ಯಾವುದೇ ಅಧಿಕೃತ ಸಭೆ, ಚರ್ಚೆಗಳಲ್ಲಿ ಭಾಗವಹಿಸುವಂತಿಲ್ಲ.
ಚಾಕು ಪ್ರದರ್ಶಿಸಿಲ್ಲ
ಪ್ರತಿಭಟನೆ ವೇಳೆ ತಾವು ಚಾಕು ಪ್ರದರ್ಶಿಸಿಲ್ಲ ಎಂದು ಟಿಡಿಪಿ ಸಂಸದ ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ. ಮೈಕ್ ಅನ್ನೇ ನಾನು ಎತ್ತಿಹಿಡಿದಿದ್ದೆ. ಅದು ಚಾಕುವಿನಂತೆ ಕಂಡಿರಬಹುದು ಎಂದು ಅವರು ಹೇಳಿಕೊಂಡಿದ್ದಾರೆ.
ಗಲಭೆ ಉಂಟಾದದ್ದು ಏಕೆ?
ವಿವಾದಿತ ತೆಲಂಗಾಣ ಮಸೂದೆಯನ್ನು ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಲು ಮುಂದಾಯಿತು. ಸೂಕ್ತ ಕ್ರಮದಲ್ಲಿ ಕೇಂದ್ರ ಸರ್ಕಾರ ಮಸೂದೆ ಮಂಡನೆಗೆ ಮುಂದಾಗಲಿಲ್ಲ ಎನ್ನುವುದು ಬಿಜೆಪಿ ಸೇರಿದಂತೆ 6 ಪಕ್ಷಗಳ ಆರೋಪ.
ಲೋಕಸಭೆಯಲ್ಲಿ ಗುರುವಾರ ನಡೆದ ಘಟನೆ ನಮಗೆ ಕಪ್ಪುಚುಕ್ಕೆ. ವಿಶ್ವಾದ್ಯಂತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಹೆಗ್ಗಳಿಕೆ ಇದೆ. ಹೀಗಾಗಿ ಇದು ನಿಜಕ್ಕೂ ತಲೆತಗ್ಗಿಸುವ ವಿಚಾರ.
-ಮೀರಾ ಕುಮಾರ್, ಸ್ಪೀಕರ್
ಸಂಸತ್ನಲ್ಲಿ ನಡೆದಿರುವ ಘಟನೆ ನಿಜಕ್ಕೂ ನಮಗೆ ಶೋಭೆ ತರುವ ವಿಚಾರ ಅಲ್ಲ. ಇದು ತಲೆತಗ್ಗಿಸುವ ವಿಚಾರವೂ ಹೌದು. ಈ ಎಲ್ಲ ಪ್ರಕರಣಗಳಿಗೆ ಕಾಂಗ್ರೆಸ್ ನೇರ ಹೊಣೆ. ಈ ಎಲ್ಲ ನಾಟಕಕ್ಕೆ ಅದುವೇ ಕಾರಣ.
-ಆಡ್ವಾಣಿ, ಬಿಜೆಪಿ ನಾಯಕ
ಪೆಪ್ಪರ್ ಸ್ಪ್ರೇ ಮತ್ತು ಸಂಸತ್ನಲ್ಲಿ ಉಂಟಾದ ಗದ್ದಲದಿಂದ ಅಸ್ವಸ್ಥಗೊಂಡ ಟಿಡಿಸಿ ಸಂಸದ ಎಂ.ನಾರಾಯಣರಾವ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು. ಸದನದಿಂದ ಹೊರಬರುತ್ತಿರುವ ಸ್ಪೀಕರ್ ಮೀರಾ ಕುಮಾರ್ ಮತ್ತು ಸಂಸದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


