ಪ್ರಧಾನ ಸುದ್ದಿ

ರಾಹುಲ್ ಬಾಯಲ್ಲಿ ಮತ್ತೆ ಮಹಿಳಾ ಶಕ್ತಿ ಜಪ, ಮಂಡ್ಯ ಮೈಸೂರಲ್ಲಿ ರೋಡ್ ಶೋ

ರಾಹುಲ್ ಬಾಯಲ್ಲಿ ಮತ್ತೆ ಮಹಿಳಾ ಶಕ್ತಿ ಜಪ, ಮಂಡ್ಯ ಮೈಸೂರಲ್ಲಿ ರೋಡ್ ಶೋ
Published On :

ಕನ್ನಡಪ್ರಭ ವಾರ್ತೆ, ತುಮಕೂರು, ಫೆ.16-
ಪ್ರತಿಪಕ್ಷಗಳ ಸಂಘಟನೆ ಹಾಗೂ ಅವರ ಸಿದ್ಧಾಂತಗಳಲ್ಲಿ ಮಹಿಳೆಯರಿಗೆ ಜಾಗವೇ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಕ್ಷಗಳ ಮೇಲೆ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಪ್ರತಿಪಕ್ಷದ ನಾಯಕರು ಏನು ಹೇಳುತ್ತಾರೆ ಹಾಗೂ ಏನು ಮಾಡುತ್ತಾರೆ ಎನ್ನುವುದು ನಿಮಗೆ ತಿಳಿದಿದೆ, ನಾನು ವಿವರಿಸುವ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸುವ ಮೂಲಕ ಬಿಜೆಪಿಯ ಸಂಘಟನಾ ಶಕ್ತಿಯಾಗಿರುವ ಆರ್‌ಎಸ್‌ಎಸ್ ಸಿದ್ಧಾಂತಗಳ ವಿರುದ್ಧ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ಉದ್ದಕ್ಕೂ ಮಹಿಳಾ ಸಬಲೀಕರಣದ ಕುರಿತಂತೆ ತಮ್ಮ ನಿಲುವುಗಳನ್ನು ಪ್ರಚುರಪಡಿಸಲು ಯತ್ನಿಸಿದರು. ಮತ್ತೊಂದೆಡೆ ಮಹಿಳಾ ಸಮಾವೇಶದಲ್ಲಿ ಪುರುಷರೇ ಹೆಚ್ಚಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿ, ಈ ಪರಿಸ್ಥಿತಿಯನ್ನು ಬದಲಾಯಿಸುವುದೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಸಿದ್ಧಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮೀಜಿಯ ಶಿಕ್ಷಣ ಸೇವೆಯನ್ನು ಹೊಗಳುವ ಮೂಲಕ ತುಮಕೂರಿನಲ್ಲಿ ನಡೆದ ಸ್ತ್ರೀ ಸಮಾನಾಧಿಕಾರ ಸಮಾವೇಶದಲ್ಲಿ ಭಾಷಣ ಪ್ರಾರಂಭಿಸಿದ ರಾಹುಲ್ ಗಾಂಧಿ, ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯವನ್ನು ಶ್ಲಾಘಿಸಿದರು.
ರಾಜಕೀಯದಲ್ಲಿ ಮಹಿಳಾ ಸಬಲೀಕರಣವಾಗಬೇಕು ಎಂದು ಭಾಷಣದುದ್ದಕ್ಕೂ ವಾದಿಸಿದ ರಾಹುಲ್ ಗಾಂಧಿ, ಮಹಿಳಾ ಮೀಸಲು ಕಾಯಿದೆ ಜಾರಿಗೆ ಪ್ರತಿಪಕ್ಷಗಳು ತಡೆಯೊಡ್ಡುತ್ತಿವೆ. ಆದಷ್ಟು ಬೇಗ ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದಿಸುತ್ತೇವೆ. ವಿಧಾನಸಭೆ, ಲೋಕಸಭೆಯಲ್ಲಿ ಹೆಚ್ಚಿನ ಮಹಿಳಾ ಸದಸ್ಯರನ್ನು ಕಾಣುವುದು ಕಾಂಗ್ರೆಸ್‌ನ ಕನಸಾಗಿದೆ. ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡದ ಹೊರತು ಭಾರತ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂದು ಹೇಳಿದರು.

ದಢೂತಿಯಿಂದ ಹೊಡೆತ ತಿಂದಿದ್ದ ರಾಹುಲ್:
12 ವರ್ಷದವನಿದ್ದಾಗ ಅಪ್ಪ- ಅಮ್ಮ ನನ್ನನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿದ್ದರು. ಅಲ್ಲಿದ್ದ 16 ವರ್ಷದ ಧಡೂತಿಯೊಬ್ಬನನ್ನು ನೋಡಿದಾಗಲೆಲ್ಲ ಹೆದರಿಕೆಯಾಗುತ್ತಿತ್ತು. ನನಗೆ ಆತ ಯಾವಾಗಲೂ ಬೈಯುತ್ತಿದ್ದ, ಹೊಡೆಯುತ್ತಿದ್ದ. ನಾನು ಎಲ್ಲೇ ಹೋದ್ರು ಅವನದ್ದೇ ಹೆದರಿಕೆ. ಆತ ಬರದಿರಲಿ ಎಂದು ಬೇಡ್ಕೋತಿದ್ದೆ. ಆದರೆ ಒಂದೆರಡು ವರ್ಷದ ನಂತರ ನಾನು ಸ್ವಲ್ಪ ಎತ್ತರ ದಪ್ಪ ಆದ ಬಳಿಕ ಅವನು ನನ್ನ ನೋಡಿ ಹೆದರಿ ಮಾಯವಾಗ್ತಿದ್ದ. ಇದನ್ನು ನೋಡಿ ನನಗೆ ಖುಷಿಯಾಗಿತ್ತು, ಸ್ವಾತಂತ್ರ್ಯ ಸಿಗ್ತು. ನನ್ನ ಕ್ಷೇತ್ರ ಅಮೇಥಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅಲ್ಲಿಯೂ ಮಹಿಳೆಯರನ್ನು ಹತ್ತಿಕ್ಕುತ್ತಿದ್ದಾರೆ ಎಂದು ಎನಿಸಿತು.
ಮನೆ, ಕಚೇರಿ, ಬಸ್, ಬೀದಿಯಲ್ಲಿ ಕೆಲಸದಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎನ್ನುವುದು ಗೊತ್ತಾಯಿತು. ನನಗೆ ಶಾಲೆಯಲ್ಲಿ ಸಿಕ್ಕ ಖುಷಿ ಹಾಗೂ ಸ್ವಾತಂತ್ರ್ಯವನ್ನು ನಿಮಗೆ ನೀಡುವುದೇ ನನ್ನ ಪ್ರಯತ್ನವಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ಚಿಂತನೆ ಹರಿಬಿಟ್ಟರು. ಈ ನಿಟ್ಟಿನಲ್ಲಿ ಕರ್ನಾಟಕವು ಸಂಪೂರ್ಣ ಭಾರತಕ್ಕೆ ದಾರಿ ತೋರಿಸಿದೆ. ಇಲ್ಲಿಯ ಸ್ವ ಸಹಾಯ ಸಂಘಗಳು ದೇಶಕ್ಕೆ ಮಾದರಿಯಾಗಿದೆ. ಕರ್ನಾಟಕದಲ್ಲಿ 20 ಲಕ್ಷ ಮಹಿಳೆಯರನ್ನು ಸಂಘದ ಜತೆಗೆ ಜತೆ ಜೋಡಿಸಲಾಗಿದೆ. ಇದರಿಂದ ಅವರ ಬದುಕು ಬದಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು.

ಮಹಿಳಾ ಸಮಾವೇಶದಲ್ಲಿ ಪುರುಷರು!: ಮಹಿಳೆಯರ ಸಮಾವೇಶವಾಗಿತ್ತು, ಆದರೆ ಇಲ್ಲಿ ಮಹಿಳೆಯರೇ ಕಡಿಮೆಯಿದ್ದಾರೆ. ಪುರುಷರೇ ಹೆಚ್ಚಿದ್ದಾರೆ. ಈ ಸಭೆಯಲ್ಲಿ ಆಗುತ್ತಿರುವುದೇ ಕಾಂಗ್ರೆಸ್‌ನ ಸಂಘಟನೆ ಹಾಗೂ ಟಿಕೆಟ್ ನೀಡುವಾಗ ನಡೆಯುತ್ತದೆ. ಈ ಸ್ಥಿತಿಯನ್ನು ಬದಲಿಸುವುದೇ ನನ್ನ ಪ್ರಯತ್ನ. ಮಹಿಳೆಯರನ್ನು ಸಮಾವೇಶಕ್ಕೆ ಕರೆತರುವುದು, ಸಂಘಟನೆಯಲ್ಲಿ ಸೇರಿಸಿಕೊಳ್ಳುವುದು, ಚುನಾವಣೆಯಲ್ಲಿ ಟಿಕೆಟ್ ನೀಡುವುದು ನನ್ನ ಕನಸಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಎರಡು ತಾಸು ಕಾದ ಜನರಿಗೆ ಎಂಟು ನಿಮಿಷದ ಭಾಷಣ:
ಸಮಾವೇಶದ ಮೈದಾನ ತುಂಬದ ಕಾರಣದಿಂದ ವೇದಿಕೆಗೆ ಒಂದೂವರೆ ಗಂಟೆ ತಡವಾಗಿ ಬಂದ ರಾಹುಲ್ ಗಾಂಧಿ, ಅರ್ಧ ಗಂಟೆ ಬಳಿಕ ಭಾಷಣ ಪ್ರಾರಂಭಿಸಿದರು. ಆದರೆ ಒಟ್ಟು ಭಾಷಣಕ್ಕೆ ವ್ಯಯಿಸಿದ ಸಮಯ ಕೇವಲ 17 ನಿಮಿಷ 50 ಸೆಕೆಂಡ್. ಅದರಲ್ಲಿ ಅರ್ಧಕ್ಕೂ ಅಧಿಕ ಸಮಯವನ್ನು ತರ್ಜುಮೆದಾರ ಬಿ.ಎಲ್. ಶಂಕರ್ ತೆಗೆದುಕೊಂಡರು. ರಾಹುಲ್ ಭಾಷಣ ಮಾಡಿದ್ದು ಸುಮಾರು 8 ನಿಮಿಷಗಳ ಕಾಲ ಮಾತ್ರ. ಇದಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಹುಲ್ ಗಾಂಧಿ ಮಾತಿಗೆ ನೀವು ಕಾಯುತ್ತಿದ್ದೀರಿ ಭಾಷಣ ಮೊಟಕುಗೊಳಿಸುತ್ತೇನೆ ಎಂದಿದ್ದರು.

ಎಲ್ಲೆಡೆ ಜನ ಕಾದುನಿಂತರು
ತುಮಕೂರು/ಮೈಸೂರು/ ಮಂಡ್ಯ:
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಭರ್ಜರಿ ಕಾವು ನೀಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ತುಮಕೂರಿನಿಂದ ಮೈಸೂರಿನವರೆಗೆ ರೋಡ್ ಶೋ ನಡೆಸಿದರು.
ತುಮಕೂರಿನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ರೋಡ್ ಶೋ ಆರಂಭಿಸಿದ ರಾಹುಲ್, ಕುಣಿಗಲ್, ಕೊಪ್ಪ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಮೂಲಕ ಸಂಚರಿಸಿ ರಾತ್ರಿ 8.30ರ ಸುಮಾರಿಗೆ ಮೈಸೂರು ತಲುಪಿದರು. ತೆರೆದ ವಾಹನದಲ್ಲಿ ದಾರಿಯುದ್ದಕ್ಕೂ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರತ್ತ ಕೈ ಬೀಸಿ ಮುಗುಳ್ನಗುತ್ತ ಸಾಗಿ ಹೊಸ ಹುರುಪು ತುಂಬುವ ಪ್ರಯತ್ನ ಮಾಡಿದರು.
ಸಂಜೆ ನಾಲ್ಕು ಗಂಟೆ ವೇಳೆಗೆ ಕುಣಿಗಲ್‌ಗೆ ಆಗಮಿಸಿದ ರಾಹುಲ್ ಗಾಂಧಿ, ಗ್ರಾಮ ದೇವತೆ ವೃತ್ತದ ಬಳಿ ವಾಹನದಲ್ಲೇ ನಿಂತು ನೆರೆದ ಜನರತ್ತ ಕೈ ಬೀಸಿದರು. ನಂತರ ಇದ್ದಕ್ಕಿದ್ದಂತೆ ವಾಹನದಿಂದ ಕೆಳಗಿಳಿದು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಬಳಿ ತೆರಳಿ ಕೈ ಕುಲುಕಿದರು. ಹುಲಿಯೂರು ದುರ್ಗದಲ್ಲಿ ಕುಡಿಯುವ ನೀರು ಪೂರೈಕೆ ಘಟಕ ಉದ್ಘಾಟಿಸಿದರು. ಬಳಿಕ ಅಲ್ಲಿಂದ ತೆರಳಿ ಕೊಪ್ಪ, ಮದ್ದೂರು ಮಾರ್ಗವಾಗಿ 6.30ರ ಸುಮಾರಿಗೆ ಮಂಡ್ಯಕ್ಕೆ ಆಗಮಿಸಿದರು. ಶುಗರ್ ಫ್ಯಾಕ್ಟರಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎನ್‌ಎಸ್‌ಯು ಘಟಕದ ಕಾರ್ಯಕರ್ತರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಅಲ್ಲದೇ ಅಭಿಮಾನಿಗಳು ಹಾಗೂ ಮಹಿಳೆಯರು ಪೇಟ ಹಾಕಿ ಸನ್ಮಾನಿಸಿದರು. ಶ್ರೀರಂಗಪಟ್ಟಣದ ಮೂಲಕ ರಾತ್ರಿ 7.30ರ ಸುಮಾರಿಗೆ ಮೈಸೂರು ತಲುಪಿದ ರಾಹುಲ್‌ಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಕಳಸ್ತವಾಡಿಯಿಂದ ಆರಂಭವಾಗಿ ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಅಂತ್ಯಗೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಸಚಿವರಾದ ಡಿ.ಕೆ.ಶಿವಕುಮಾರ್, ಟಿ.ಬಿ. ಜಯಚಂದ್ರ, ಉಮಾಶ್ರೀ, ಸಂಸದೆ ರಮ್ಯಾ ಸೇರಿದಂತೆ ಇತರೆ ನಾಯಕರು ರಾಹುಲ್ ರೋಡ್ ಶೋಗೆ ಸಾಥ್ ನೀಡಿದರು.

ಪೊಲೀಸರ ಲಾಠಿ ರುಚಿ
ಶ್ರೀರಂಗಪಟ್ಟಣ:
ರಾಹುಲ್ ರೋಡ್ ಶೋ ವೇಳೆ ದಾಂಧಲೆ ನಡೆಸಲು ಮುಂದಾದ ವಸತಿ ಸಚಿವ ಅಂಬರೀಷ್, ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಸಂಜೆ 7.25ರ ಸಮಾರಿಗೆ ಪಟ್ಟಣಕ್ಕೆ ಆಗಮಿಸಿದ ರಾಹುಲ್ ಅವರನ್ನು ಸ್ವಾಗತಿಸಲು ಅಂಬರೀಷ್ ಮತ್ತು ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಜಮಾಯಿಸಿದ್ದರು. ಸ್ವಾಗತ ಕೋರುವ ವಿಚಾರವಾಗಿ ಎರಡೂ ಬಣದವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಸಮಾಧಾನ ಪಡಿಸಿದರು. ರೋಡ್ ಶೋ ಮುಗಿಯುತ್ತಿದ್ದಂತೆ ಮತ್ತೆ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ತಕ್ಷಣ ಎಚ್ಚೆತ್ತ ಪೊಲೀಸರು ಬೆಂಬಲಿಗರತ್ತ ಲಘು ಲಾಠಿ ಪ್ರಹಾರ ನಡೆಸಿದರು.

ಈ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಂದರೆ ತ್ಯಾಗದ ಸಂಕೇತ. ಆದರೆ ಈ ಬಿಜೆಪಿಯವರ ಮನೆಯ ನಾಯಿ ಕೂಡ ದೇಶಕ್ಕಾಗಿ ಜೀವ ತ್ಯಾಗ ಮಾಡಿಲ್ಲ.
- ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ರಾಜ್ಯ ಸಚಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.