ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಆಂತರಿಕ ಚುನಾವಣೆ ಶುರು
ಕ.ಪ್ರ.ವಾರ್ತೆ ಬೆಂಗಳೂರು ಫೆ. 21
ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ಪ್ರಾಯೋಗಿಕವಾಗಿ ಆರಂಭಿಸಿರುವ ಕಾಂಗ್ರೆಸ್ನ ಬಹು ನಿರೀಕ್ಷಿತ ಆಂತರಿಕ ಚುನಾವಣೆಗೆ ಎಐಸಿಸಿ ವೇಳಾಪಟ್ಟಿ ಪ್ರಕಟಿಸಿದೆ.
ದೇಶದ 15 ಲೋಕಸಭಾ ಕ್ಷೇತ್ರಗಳನ್ನು ಪ್ರಾಯೋಗಿಕವಾಗಿ ಆಯ್ದುಕೊಳ್ಳಲಾಗಿದ್ದು, ರಾಜ್ಯದ ಬೆಂಗಳೂರು ಉತ್ತರ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಎಐಸಿಸಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಮಾರ್ಚ್ 9ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಂತರಿಕ ಚುನಾವಣೆಗೆ ಅರ್ಹರಾದ 'ಕಾಂಗ್ರೆಸ್' ಮತದಾರರ ನೋಂದಣಿ ಕಾರ್ಯ ಫೆ.22ರಿಂದ 24 ರವರೆಗೆ ನಡೆಯಲಿದೆ. ಮತದಾರರ ಪರಿಶೀಲನೆ ಫೆ.28ಕ್ಕೆ ಮುಕ್ತಾಯವಾಗಲಿದ್ದು, ಅದೇ ದಿನ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ. ಮಾರ್ಚ್ 2ಕ್ಕೆ ನಾಮಪತ್ರ ಪರಿಶೀಲನೆ ಹಾಗೂ ಚಿಹ್ನೆ ಹಂಚಿಕೆ ಪ್ರಕ್ರಿಯೆ ನಡೆಯಲಿದ್ದು ಮಾ.9ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಪ್ರಬಲ ಆಕಾಂಕ್ಷಿ. ಪ್ರಾಯೋಗಿಕ ಚುನಾವಣೆ ನಡೆಸುವುದಕ್ಕೆ ಈ ಕ್ಷೇತ್ರವನ್ನು ಎಐಸಿಸಿ ಆಯ್ದುಕೊಂಡ ನಂತರ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಉಮೇದುವಾರಿಕೆ ತೋರಿದ್ದಾರೆ. ಹೀಗಾಗಿ ಇದು ಮೊಯ್ಲಿ ಅವರಿಗೆ ಅನುಕೂಲ ಕಲ್ಪಿಸಲು ಮಾಡಿದ ವ್ಯವಸ್ಥೆ ಎಂದೇ ಕಾಂಗ್ರೆಸ್ನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪ್ರಾಯೋಗಿಕ ಚುನಾವಣೆ ಮಾರ್ಚ್ 13ರಂದು ನಡೆಯಲಿದೆ. ಮಾ.1ರಿಂದ 4ರ ವರೆಗೆ ಮತದಾರರ ನೋಂದಣಿ, ಮಾ. 6ರಿಂದ 7 ಪರಿಶೀಲನೆ, ಮಾ. 7ರಂದು ನಾಮಪತ್ರ ಸಲ್ಲಿಕೆ, ಮಾ. 9ರಂದು ನಾಮಪತ್ರ ಪರಿಶೀಲನೆ,ಚಿಹ್ನೆ ಹಂಚಿಕೆ ಕಾರ್ಯ ನಡೆಯಲಿದೆ.
ಸಿಎಂ ಆಸಕ್ತಿ: ಮಂಗಳೂರು ಕ್ಷೇತ್ರಕ್ಕೆ ಹೋಲಿಸಿದರೆ ಬೆಂಗಳೂರು ಉತ್ತರದಲ್ಲಿ ಆಕಾಂಕ್ಷಿಗಳ ದೊಡ್ಡಪಟ್ಟಿಯೇ ಇದೆ. ಕೃಷಿ ಇಲಾಖೆ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅತೀವ ಆಸಕ್ತಿ ತೋರಿದ್ದಾರೆ. ಒಕ್ಕಲಿಗ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಜತೆಗೆ ಬಿಜೆಪಿ ಅಭ್ಯರ್ಥಿಗಳಿಗೆ ಸೂಕ್ತ ಸವಾಲು ಹಾಕುವುದಕ್ಕೆ ಕೃಷ್ಣ ಬೈರೇಗೌಡರೆ ಸೂಕ್ತ ಎಂಬುದು ಸಿದ್ದರಾಮಯ್ಯನವರ ಅಭಿಮತ. ಈ ಹಿನ್ನೆಲೆಯಲ್ಲಿ ಕೃಷ್ಣ ಬೈರೇಗೌಡ ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಈ ನಡುವೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಆರತಿ ಕೃಷ್ಣ ಎಂಬುವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲು ಉತ್ಸಾಹ ತೋರಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಆರತಿ, ಅಮೆರಿಕ ರಾಯಭಾರ ಕಚೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರ ಜತೆಗೆ ರಮೇಶ್ ಬಿ.ಗೌಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಕೂಡಾ ರೇಸ್ನಲ್ಲಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

