ಚೀನಾ ಅತಿಕ್ರಮಣ ಮೋದಿ ಎಚ್ಚರಿಕೆ

ಪಾಸಿಘಾಟ್/ಸಿಲ್ಚಾರ್: ಅರುಣಾಚಲ ಪ್ರದೇಶವನ್ನು ಅತಿಕ್ರಮಿಸುವ ಕನಸು ಬಿಟ್ಟುಬಿಡಿ. ಈ ರಾಜ್ಯವನ್ನು ಭಾರತದಿಂದ ಕಿತ್ತುಕೊಳ್ಳಲು ಭೂಮಿಯ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ...
ಚೀನಾದ ಅತಿಕ್ರಮಣ ನೀತಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದು ಹೀಗೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಶನಿವಾರ ನಡೆದ ಸರಣಿ ರ್ಯಾಲಿಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ವಿದೇಶ ನೀತಿ ಕುರಿತು ಮಾತನಾಡಿದ ಅವರು, ಚೀನಾದ ಆಕ್ರಮಣಶೀಲ ಮನೋಭಾವಕ್ಕೆ ತಕ್ಕ ತಿರುಗೇಟು ನೀಡಿದ್ದಾರೆ.
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಅದು ಮುಂದೆಯೂ ಭಾರತದ ಭಾಗವಾಗಿಯೇ ಉಳಿಯಲಿದೆ. ಭೂಮಿ ಮೇಲಿನ ಯಾವುದೇ ಶಕ್ತಿಗೂ ಈ ರಾಜ್ಯವನ್ನು ಭಾರತದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಮೋದಿ.
ಅರುಣಾಚಲ ಪ್ರದೇಶದ ವಿಚಾರದಲ್ಲಿ ಭಾರತದ ಜತೆ ಕಾಲುಕೆದರಿ ಜಗಳಕ್ಕೆ ನಿಲ್ಲುವ ಚೀನಾ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ನೆರೆಯ ದೇಶ ತನ್ನ ವಿಸ್ತರಣಾ ನೀತಿ ಕೈಬಿಡಬೇಕು. ಭಾರತದ ಜತೆಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಲು ಮುಂದಾಗಬೇಕು ಎಂದಿದ್ದಾರೆ.
ರ್ಯಾಲಿ ಮೇಲೆ ಮಹಿಳಾ ಬಾಂಬರ್ ದಾಳಿ ಸಾಧ್ಯತೆ?
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹತ್ಯೆಗೆ ಉಗ್ರರು ಮತ್ತೊಮ್ಮೆ ಸಂಚು ರೂಪಿಸಿರುವ ವಿಚಾರ ಬಹಿರಂಗವಾಗಿದೆ. ಈ ಬಾರಿ ಮುಜಾಫರಪುರದಲ್ಲಿ ಮಾ.3ರಂದು ನಡೆಯಲಿರುವ ಮೋದಿ ರ್ಯಾಲಿ ಮೇಲೆ ಮಹಿಳಾ ಆತ್ಮಾಹುತಿ ಬಾಂಬರ್‌ವೊಬ್ಬಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಗಳು ಎಚ್ಚರಿಸಿವೆ. ರ್ಯಾಲಿ ವೇಳೆ ಗರ್ಭಿಣಿಯರ ಮೇಲೆ ಕಣ್ಣಿಡುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪಟನಾದಲ್ಲಿ ಅ.27ರಂದು ನಡೆದ ಮೋದಿ ರ್ಯಾಲಿ ಮೇಲೆಯೂ ಉಗ್ರರು ದಾಳಿ ನಡೆಸಿದ್ದರು. ಮೋದಿ ಅವರು ಸಿಮಿ, ಐಎಂ ಸೇರಿ ಹಲವು ಉಗ್ರ ಸಂಘಟನೆಗಳ ಹಿಟ್‌ಲಿಸ್ಟ್‌ನಲ್ಲಿದ್ದಾರೆ.
ಚು.ಆಯೋಗಕ್ಕೆ ಸೂಚನೆ
'ಸಂದೇಹಾಸ್ಪದ ಮತದಾರರು' ವಿಚಾರದ ಕುರಿತೂ ಧ್ವನಿ ಎತ್ತಿರುವ ಅವರು, ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆಯೂ ಚುನಾವಣಾ ಆಯೋಗಕ್ಕೆ ಮೋದಿ ಮನವಿ ಮಾಡಿದ್ದಾರೆ. 'ಸಂದೇಹಾಸ್ಪದ ಮತದಾರರು' ಕಾಂಗ್ರೆಸ್‌ನ ವೋಟ್‌ಬ್ಯಾಂಕ್ ರಾಜಕೀಯದ ಒಂದು ಭಾಗ. ಈ ಮೂಲಕ ಒಂದು ವರ್ಗದ ಜನರಿಗೆ ಮತದಾನದ ಹಕ್ಕು ನಿರಾಕರಿಸಲಾಗುತ್ತದೆ ಎಂದಿದ್ದಾರೆ ಮೋದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


