'ಸಂಸ್ಕಾರ'ವಂತನ ಪಯಣ ಚಿತ್ರ
ಹಿರಿಯ ನಟ, ರಂಗಕರ್ಮಿ ಹಾಗೂ ನಿರ್ದೇಶಕ ಸಿ.ಆರ್. ಸಿಂಹ ಅವರು ತಮ್ಮ ಸಿನಿಮಾ ಪಯಣ ಆರಂಭಿಸಿದ್ದು 'ಸಂಸ್ಕಾರ' ಚಿತ್ರದ ಮೂಲಕ. ನಂತರ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಟ್ಟಾಭಿರಾಮಿ ರೆಡ್ಡಿ ಅವರು ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿರುವ ಈ ಚಿತ್ರ 1970 ಬಿಡುಗಡೆಯಾಯಿತು.
ಸಾಹಿತಿ ಯು.ಆರ್. ಅನಂತ್ಮೂರ್ತಿ ಅವರ ಕಥೆ ಆಧರಿಸಿದ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಚಿತ್ರಕಥೆ ಬರೆದಿದ್ದಾರೆ. ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ದಶರಥಿ ದೀಕ್ಷಿತ್, ಬಿ.ಆರ್. ಜಯರಾಂ, ಲಕ್ಷ್ಮಿ ಕೃಷ್ಣಮೂರ್ತಿ, ಸ್ನೇಹಲತಾ ರೆಡ್ಡಿ ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ನಟ ಸಿ.ಆರ್. ಸಿಂಹ ಅವರದ್ದೂ ಒಂದು ಮುಖ್ಯ ಪಾತ್ರ ಈ ಚಿತ್ರದಲ್ಲಿದೆ.
1970ರಲ್ಲಿ ರಾಷ್ಟ್ರ ಪ್ರಶಸ್ತಿ ಹಾಗೂ 1970- 71ನೇ ಸಾಲಿನಲ್ಲಿ ಎರಡನೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟ (ಬಿ.ಆರ್. ಜಯರಾಂ), ಅತ್ಯುತ್ತಮ ಕಥೆ (ಯು.ಆರ್. ಅನಂತ್ಮೂರ್ತಿ), ಅತ್ಯುತ್ತಮ ಛಾಯಾಗ್ರಾಹಣ (ಟಾಮ್ ಕೌವನ್) ಸೇರಿದಂತೆ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಪಟ್ಟಾಭಿರಾಮಿ ರೆಡ್ಡಿ ನಿರ್ದೇಶನದ ಈ ಚಿತ್ರ ಅಂದಿನ ಮಟ್ಟಿಗೆ ಹೊಸ ಅಲೆಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಚಿತ್ರದಲ್ಲಿ ಸಿ.ಆರ್. ಸಿಂಹ ಅವರದ್ದು ತುಂಬಾ ದೊಡ್ಡ ಪಾತ್ರವಲ್ಲ. ಆದರೆ, ಈ ಚಿತ್ರದ ಮೂಲಕ ಸಿಂಹ ಬೆಳ್ಳೆತೆರೆಯಲ್ಲಿ ಪಯಣ ಆರಂಭಿಸಿದರು.
ಸಿಂಹ ನಡೆದ ಹಾದಿ: 1942ರಲ್ಲಿ ಜೂನ್ 16ರಂದು ಹುಟ್ಟಿದ ಸಿ.ಆರ್. ಸಿಂಹ ಅವರ ಕುಟುಂಬದ ಮೂಲ ಚೆನ್ನಪಟ್ಟಣ. ಅವರ ತಂದೆ ಕಾಲದಲ್ಲೇ ಬೆಂಗಳೂರಿಗೆ ಬಂದವರು.
ನಟ, ನಿರ್ದೇಶನ, ಕಥೆ ಹೀಗೆ ಮೂರು ವಿಭಾಗಗಲ್ಲಿ ತೊಡಗಿಸಿಕೊಂಡಿದ್ದ ಸಿ.ಆರ್. ಸಿಂಹ, ಆರಂಭ ದಿನಗಳಲ್ಲಿ ಪ್ರಭಾತ್ ಕಲಾವಿದರು ಎನ್ನುವ ರಂಗ ತಂಡದಲ್ಲಿ ಗುರುತಿಸಿಕೊಂಡವರು. ರಂಗಭೂಮಿಯ ಜೊತೆಗೆ ಸಿನಿಮಾಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಸಿ.ಆರ್. ಸಿಂಹ, 'ನೀ ಬರೆದ ಕಾದಂಬರಿ', ಕಾಡು, ಬರ, ಸಂಕಲ್ಪ, ಚಿತೆಗೂ ಚಿಂತೆ, ಅನುರೂಪ, ಇಂದಿನ ರಾಮಯಾಣ, ಪರಮೇಶಿ ಪ್ರೇಮ ಪ್ರಸಂಗ, ರಾಯರು ಬಂದರು ಮಾವನ ಮನೆಗೆ, ನೀ ತಂದ ಕಾಣಿಕೆ, ರಾಮಪುರದ ರಾವಣ, ಹೊಸ ನೀರು, ಸಂಕ್ರಾಂತಿ, ಬಾಳೊಂದು ಭಾವಗೀತೆ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಂಹ, ಕುಮಾರ್ ಬಂಗಾರಪ್ಪ ಅಭಿನಯದ ಅಶ್ವಮೇಧ, ಲೋಕೇಶ್ ಅಭಿನಯದ ಕಾಕನಕೋಟೆ, ಹಾಗೂ ಶಿಕಾರಿ, ಸಿಂಹಾಸನ, ಅಂಗೈಯಲ್ಲಿ ಅಪ್ಸರೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ರಸಋಷಿ ಕುವೆಂಪು ನಾಟಕವನ್ನು ಸಿಂಹ ಅವರ ಪುತ್ರ ಋತ್ವಿಕ್ ಅವರೇ ಸಿನಿಮಾ ಮಾಡಿದಾಗ ಈ ಚಿತ್ರದಲ್ಲಿ ಸಿ.ಆರ್. ಸಿಂಹ ಅವರೇ ಕುವೆಂಪು ಪಾತ್ರ ಮಾಡಿ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡಿದ 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲೂ ಸಿ.ಆರ್. ಸಿಂಹ ನಟಿಸಿದ್ದಾರೆ. ರಾಜ್ಯ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳು ಸಿ.ಆರ್. ಸಿಂಹ ಅವರ ಸಾಧನೆಗೆ ಒಲಿದು ಬಂದಿವೆ.
ಅಂದ ಹಾಗೆ ಸಿಂಹ ಬಣ್ಣದ ಜಗತ್ತಿಗೆ ಬರುವ ಮುನ್ನ ವಾರ್ತಾ ಇಲಾಖೆಯಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ತಂಪು ಗುಹೆ
ಸಿಂಹ ಅವರ ಲಕ್ಷಾಂತರ ಹೆಜ್ಜೆ ಸಪ್ಪಳಕ್ಕೆ ಮೈಯೆಲ್ಲಾ ಕಿವಿಯಾಗಿ ಹರಡಿದ ನೆಲ, ಉಸಿರಾಟಕ್ಕೆ ತಂಪು ಗಾಳಿಯೊದಗಿಸಿದ ಕಿಟಕಿಗಳು, ಹರಡಿಕೊಂಡ ಮರದ ಬಾಹುಗಳು, ಅಬ್ಬರಕ್ಕೆ ಪ್ರತಿಧ್ವನಿಯೊದಗಿಸಿದ ಎತ್ತರದ ಚಾವಣಿ, ರಂಗಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡ ವರ್ತುಲ ರಂಗಸ್ಥಳ, ಸಂತೋಷಕ್ಕೆ ಕಾರಣವಾಗಿ, ಸಾಕ್ಷಿಯೂ ಆದ ಹತ್ತು ಹಲವು ಹಣ್ಣಿನ ಮರಗಳು.... ಹೀಗೆ ಸಿಂಹ ಅವರ ಬಹುಮುಖಿ ಆಸಕ್ತಿಗೆ ಬೆರಗಾದ ತನ್ನ ದೇಹದ ಗೋಡೆಗೋಡೆಯಲ್ಲೂ ನೆನಪುಗಳ ತೋರಣವನ್ನೇ ಹೊತ್ತುಕೊಂಡು, ಯಜಮಾನನ ಅಗಲಿಕೆಯ ನೋವು ಅನುಭವಿಸುತ್ತಾ ಮೌನಕ್ಕೆ ಮೊರೆ ಹೋಗಿದೆ ಬನಶಂಕರಿ ಮೂರನೇ ಹಂತದಲ್ಲಿ ನಿಂತ ಸಿಂಹದ 'ಗುಹೆ'. ಸಿಂಹ ಅವರ ಕನಸಿನ ಕೂಸಾಗಿ, ಹೆಮ್ಮೆಯ ನೆರಳಾಗಿದ್ದ ಗುಹೆ, ತನ್ನ ಅನೇಕ ವೈಶಿಷ್ಟ್ಯಗಳಿಂದ ಪತ್ರಿಕೆಗಳಲ್ಲಿ ಸೆಲೆಬ್ರಿಟಿಯಂತೆ ಪೋಸ್ ಕೊಟ್ಟು ಮೆರೆದಿದೆ. ಆವರಣದ ಜಾಗದ ಮೂರನೇ ಒಂದು ಭಾಗದಲ್ಲಿ ಮನೆ ನಿಂತಿದ್ದು, ಹೊರಾಂಗಣದಲ್ಲೊಂದು ಚಂದ್ರಾಂಗಣ (ಆ್ಯಂಫಿಥಿಯೇಟರ್) ಸಿಂಹ ಅವರ ಕಲಾಭಿರುಚಿಗೆ ತಕ್ಕ ಗಾಂಭೀರ್ಯದಲ್ಲಿ ಮೈ ಚೆಲ್ಲಿದೆ. ಅಲ್ಲದೆ ಉಳಿದ ಉದ್ಯಾನವನದ ಜಾಗದಲ್ಲಿ ವಿವಿಧ ಹಣ್ಣಿನ ಮರಗಳಿದ್ದು ಅವೆಲ್ಲಕ್ಕೂ ಬಿದಿರಿನ ಬೇಲಿಯಿಂದ ಅಲಂಕರಿಸಲಾಗಿದೆ.
ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

