ಪ್ರಧಾನ ಸುದ್ದಿ

ವೈದ್ಯರೇ ನಿಂತು ಮಲ ಹೊರಿಸಿದರು!

Published On :

ಕನ್ನಡಪ್ರಭ ವಾರ್ತೆ  ಬಾಗೇಪಲ್ಲಿ  ಜ.1
ಕಾಲ ಹಾಗೂ ಗೋಡೆ ಮೇಲಿನ ಕ್ಯಾಲೆಂಡರ್ ಬದಲಾದರೂ ಅನಿಷ್ಠ ಪದ್ಧತಿ ಮಾತ್ರ ಅಳಿಯುತ್ತಿಲ್ಲ. ಕಟ್ಟುನಿಟ್ಟಿನ ಕಾನೂನಿದ್ದರೂ ಬುಧವಾರ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ಅಧಿಕಾರಿಗಳು, ವೈದ್ಯರೇ ಮುಂದೆ ನಿಂತು ಮಲ, ಮೂತ್ರ ಹಾಗೂ ತ್ಯಾಜ್ಯ ತುಂಬಿದ್ದ ಗುಂಡಿಯನ್ನು ಕಾರ್ಮಿಕರಿಂದಲೇ ಸ್ವಚ್ಛಗೊಳಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಅವರು ಜಿಲ್ಲೆಗೆ ಭೇಟಿ ನೀಡಿ 'ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ' ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಬಾಗೇಪಲ್ಲಿಯಲ್ಲಿ ಇಂಥದೊಂದು ಹೀನ ಕೃತ್ಯ ನಡೆದಿರುವುದು ಸರ್ಕಾರಿ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಆಶ್ಚರ್ಯಕರ ವಿಷಯವೆಂದರೆ ಇದು ನಡೆದದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ. ಸರ್ಕಾರಿ ಅಧಿಕಾರಿಗಳು, ವೈದ್ಯರು ಇದಕ್ಕೆ ಮೂಕಪ್ರೇಕ್ಷಕರಾಗಿದ್ದರು.                     

ಏನಾಯ್ತು?: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಲ, ಮೂತ್ರ ಹಾಗೂ ಆಸ್ಪತ್ರೆಯ ತ್ಯಾಜ್ಯ ಸಂಗ್ರಹಣೆಗಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿದೆ. ಈ ಟ್ಯಾಂಕ್ ತುಂಬಿದ್ದರಿಂದ ಸಾರ್ವಜನಿಕ ಆಸ್ಪತ್ರೆಯ ನಾನ್ ಕ್ಲಿನಿಕಲ್ ವಿಭಾಗದ ಅಧಿಕಾರಿಗಳು ವ್ಯಕ್ತಿಯೊಬ್ಬನಿಗೆ ಸ್ವಚ್ಛಗೊಳಿಸಲು ಗುತ್ತಿಗೆ ನೀಡಿದ್ದರು. ಗುತ್ತಿಗೆ ಪಡೆದ ವ್ಯಕ್ತಿ ಬುಧವಾರ ಮಧ್ಯಾಹ್ನ ಮೂವರು ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದ. ಒಬ್ಬ ಕಾರ್ಮಿಕ ಟ್ಯಾಂಕ್‌ನೊಳಗೆ ಇಳಿದು ಮಲ, ಮೂತ್ರ, ತ್ಯಾಜ್ಯಯುಕ್ತ ಕೊಳಕು ತುಂಬಿ ಕೊಡುತ್ತಿದ್ದರೆ ಇನ್ನಿಬ್ಬರು ಕಾರ್ಮಿಕರು ಅದನ್ನು ಎತ್ತಿ ಟ್ರ್ಯಾಕ್ಟರ್‌ಗೆ ಸುರಿದಿದ್ದಾರೆ. ಅಧಿಕಾರಿಗಳು, ವೈದ್ಯರು ಸ್ಥಳದಲ್ಲೇ ಇದ್ದರೂ ಯಾರೊಬ್ಬರೂ ಇದನ್ನು ಪ್ರಶ್ನಿಸಿಲ್ಲ.
ಮಲ ಹೊರುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರ ಅರಿವಿದ್ದರೂ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ತಮ್ಮ ಕಣ್ಣೆದುರೆ ಇಂಥ ಅಮಾನವೀಯ ಕೆಲಸ ನಡೆಯುತ್ತಿದ್ದರೂ ತುಟಿಪಿಟಕ್ ಎಂದಿಲ್ಲ. ಅಲ್ಲದೇ ಪುರಸಭೆ ಸದಸ್ಯರು, ಅಧಿಕಾರಿಗಳು ಕೂಡ ಇದರ ಬಗ್ಗೆ ಚಕಾರ ಎತ್ತಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಲು ವೈದ್ಯರು, ಅಧಿಕಾರಿಗಳು ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.