ಪ್ರಧಾನ ಸುದ್ದಿ

ಅದಿರು ಉತ್ಪಾದನೆ ಮಿತಿ ಹೆಚ್ಚಳಕ್ಕೆ ಇಲ್ಲ ಅನುಮತಿ

Published On :

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಕರ್ನಾಟಕದಲ್ಲಿ ಅದಿರು ಉತ್ಪಾದನೆಗೆ ವಿಧಿಸಿರುವ ಮಿತಿ ಸಡಿಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅದಿರು ಮಿತಿ ಸಡಿಲಿಸುವಂತೆ ಕೇಂದ್ರದ ಉಕ್ಕು ಸಚಿವಾಲಯ ಸಲ್ಲಿಸಿದ್ದ ಮನವಿಯನ್ನು ನ್ಯಾ. ಎ.ಕೆ. ಪಟ್ನಾಯಕ್ ನೇತೃತ್ವದ ತ್ರಿ ಸದಸ್ಯ ಪೀಠ ತಿರಸ್ಕರಿಸಿದೆ. ಜತೆಗೆ 30 ದಶಲಕ್ಷ ಮಿತಿ ವಿಧಿಸಿ ಹೊರಡಿಸಿರುವ ಆದೇಶದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವಂತೆಯೂ ಕೇಂದ್ರಕ್ಕೆ ಸೂಚಿಸಿದೆ.
ದೇಶದ ಆರ್ಥಿಕ ಅಭಿವೃದ್ಧಿ ಹಿನ್ನಡೆಗೆ ಉಕ್ಕಿನ ಅದಿರು ಕೊರತೆಯೂ ಒಂದು ಕಾರಣ. ಅದಿರು ಕೊರತೆ ಇರುವುದರಿಂದ ಉಕ್ಕು ಉದ್ಯಮ ಹಿನ್ನಡೆಯನ್ನನುಭವಿಸಿದೆ. ಕಚ್ಚಾ ವಸ್ತುವನ್ನು ರಫ್ತು ಮಾಡಿಕೊಳ್ಳುವ ಪರಿಸ್ಥಿತಿ ಉದ್ಯಮದ ಮುಂದಿದೆ. ಆದ್ದರಿಂದ ಕರ್ನಾಟಕದಲ್ಲಿ ಅದಿರು ಉತ್ಪಾದನೆ ಮಿತಿಯನ್ನು ಸಡಿಲಿಸಬೇಕು. ಈಗ ಇರುವ ವಾರ್ಷಿಕ 30 ದಶಲಕ್ಷ ಟನ್ ಮಿತಿಯನ್ನು 50 ದಶಲಕ್ಷ ಟನ್‌ಗೆ ಏರಿಸಬೇಕು ಎಂದು ಉಕ್ಕು ಸಚಿವಾಲಯ ತನ್ನ ಮನವಿಯಲ್ಲಿ ಕೋರಿತ್ತು.      
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ 'ಎ' ಮತ್ತು 'ಬಿ' ವರ್ಗದ ಪರವಾನಗಿಗಳಿಗೆ ಮಾತ್ರ ಅದಿರು ಉತ್ಪಾದಿಸಲು ಅನುಮತಿ ಇದೆ. ಈ ಪರವಾನಗಿಗಳಿಗೆ ನೀಡಿರುವ ಉತ್ಪಾದನೆ ಮಿತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿತ್ತು.
ವಿಚಾರಣೆ ವೇಳೆ ಕೇಂದ್ರ ಪರ ವಕೀಲರ ಮನವಿಗೆ ಆಕ್ಷೇಪಿಸಿದ ಸಮುದಾಯ ಪರಿವರ್ತನ ಸಂಸ್ಥೆ ಪರ ವಕೀಲ ಪ್ರಶಾಂತ್ ಭೂಷಣ್ ಅವರು, 'ವಾರ್ಷಿಕ 15 ದಶಲಕ್ಷ ಟನ್ ಅದಿರು ಸಾಕಾಗುತ್ತದೆ. ಈಗ 30 ದಶಲಕ್ಷ ಟನ್‌ಗೆ ಅನುಮತಿ ನೀಡಿರುವುದೇ ಹೆಚ್ಚು. ಹೀಗಾಗಿ ಕೇಂದ್ರದ ಮನವಿ ಪುರಸ್ಕರಿಸಬಾರದು' ಎಂದು ಮನವಿ ಮಾಡಿದರು. ಅದನ್ನು ಒಪ್ಪಿದ ನ್ಯಾ. ಎ.ಕೆ.ಪಟ್ನಾಯಕ್ ಅವರು, ಅದಿರು ಉತ್ಪಾದನೆ ಮಿತಿ ಹೆಚ್ಚಿಸಲು ನಿರಾಕರಿಸಿದರು. ಕೆಲವು ದಿನಗಳ ಹಿಂದಷ್ಟೆ ಕರ್ನಾಟಕ ಸರ್ಕಾರವೂ ಅದಿರು ಉತ್ಪಾದನೆ ಮಿತಿಯನ್ನು 40 ದಶಲಕ್ಷಕ್ಕೆ ಹೆಚ್ಚಿಸಬೇಕೆಂದು ಕೋರಿ ಮನವಿ ಸಲ್ಲಿಸಿತ್ತು. ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ಸಮಗ್ರ ತನಿಖೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಅಕ್ರಮ ತಡೆಗಟ್ಟಲು ಅದಿರು ಉತ್ಪಾದನೆಗೆ ಮಿತಿ ವಿಧಿಸಲು ಶಿಫಾರಸು ಮಾಡಿತ್ತು. ಸಿಇಸಿ ಶಿಫಾರಸಿನಂತೆ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಅದಿರು ಉತ್ಪಾದನೆಯನ್ನು ವಾರ್ಷಿಕ 30 ದಶಲಕ್ಷ ಟನ್‌ಗೆ ಮಿತಿಗೊಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.