ಪ್ರಧಾನ ಸುದ್ದಿ

ಕನ್ನಡ ಸೊಗಡು ಬೆರೆವ ಘಳಿಗೆಗೆ ಕೊಡಗು ಸನ್ನದ್ಧ

Published On :

ಮಡಿಕೇರಿ: ಕಾಫಿಯ ಘಮದೊಂದಿಗೆ ಕನ್ನಡದ ಕಸ್ತೂರಿ ಪರಿಮಳ, ಕೊಡಗಿನ ಸೊಬಗಿನೊಂದಿಗೆ ಕನ್ನಡದ ಸೊಗಡು ಬೆರೆಯುವ ಘಳಿಗೆಗೆ ಸಾಕ್ಷಿಯಾಗಲು ಮಡಿಕೇರಿ ಸರ್ವ ಸನ್ನದ್ಧವಾಗಿ ನಿಂತಿದೆ. ಕೊರೆಯುವ ಚಳಿ ಜತೆಗೆ, ಭಾಷಣಗಳ ಕೊರೆತವೂ ಸೇರಿಕೊಳ್ಳಲಿದೆ!
32 ವರ್ಷಗಳ ನಂತರ ಕೊಡಗಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ಭರ್ಜರಿ ಕನ್ನಡದ ಬಾವುಟಗಳು ನಿಮ್ಮನ್ನು ಸ್ವಾಗತಿಸಲಿಕ್ಕಿಲ್ಲ. ಪ್ರತಿ ಆಟೋ, ಪ್ರತಿ ಕಟ್ಟಡದಲ್ಲೂ ಕನ್ನಡದ ಧ್ವಜ ಹಾರಾಡಲಿಕ್ಕಿಲ್ಲ. ಭರ್ಜರಿ ಕಮಾನುಗಳು, ಊರ ರಸ್ತೆಯ ಇಕ್ಕೆಲಗಳಲ್ಲಿ ಸಾಹಿತಿಗಳ ಫ್ಲೆಕ್ಸ್‌ಗಳು ಗೋಚರಿಸಲಿಕ್ಕಿಲ್ಲ. ಆದರೆ, ಸದ್ದಿಲ್ಲದೆ ಉತ್ತಮ ಕೆಲಸ ಮಾಡುವುದು ಹೇಗೆ ಎಂಬುದನ್ನು ಸಮ್ಮೇಳನದ ಮುಖ್ಯ ವೇದಿಕೆ ಮತ್ತು ಪುಸ್ತಕ ಮಳಿಗೆಗಳನ್ನು ನೋಡಿದರೆ ಅರಿವಾಗುತ್ತದೆ.
ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿರುವ ಕೊಡಗಿನಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದೇ ಒಂದು ವಿಶೇಷ.      

ಆದರೆ, ವಾರದ ಮಧ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, ಸಾಹಿತ್ಯ ಸಮ್ಮೇಳನದ ಕುರಿತು ಅಷ್ಟೇನೂ ಉತ್ಸಾಹ ಕಾಣದಿರುವುದು ಸೇರಿದಂತೆ ಸಾಹಿತ್ಯ ಸಮ್ಮೇಳನದ ಬಗ್ಗೆ ಅನುಮಾನಗಳಿದ್ದವು. ಆದರೆ, ಇದೆಲ್ಲ ಟೀಕೆಗಳಿಗೆ ಉತ್ತರ ನೀಡುವ ರೀತಿಯಲ್ಲಿ ಮಡಿಕೇರಿಯ ಕಾರ್ಯಪ್ಪ ಕಾಲೇಜಿನಲ್ಲಿರುವ ಮೈದಾನದಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಸಿದ್ಧವಾಗಿ ನಿಂತಿದೆ. ಜಾಗದ ಸಮಸ್ಯೆ ಇದೆ. ಬರುವ ಜನರ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ ಇದೆ. ಜಾಗದ ಕೊರತೆಯಿಂದ ಮುಖ್ಯ ವೇದಿಕೆಗೂ ಜನರ ಊಟದ ವ್ಯವಸ್ಥೆಗೂ ಕಿಲೋ ಮೀಟರ್‌ಗಟ್ಟಲೆ ದೂರವಿದೆ. ಆದರೆ, ಇರುವ ಇತಿಮಿತಿಗಳ ನಡುವೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಬೇರೆ ವ್ಯವಸ್ಥೆಗಳು ಹೇಗೇ ಇರಲಿ. ಸಮ್ಮೇಳನ ಮುಖ್ಯ ವೇದಿಕೆ ಆಸುಪಾಸಿನ ವ್ಯವಸ್ಥೆಗಳು ನಿಜವಾಗಿಯೂ ಮುಂದಿನ ಸಮ್ಮೇಳನಗಳಿಗೆ ಮಾದರಿಯಾಗುವಂತಿವೆ.
ಕಾಣದ ತೊಡಗಿಕೊಳ್ಳುವಿಕೆ!: ಸಾಹಿತ್ಯ ಸಮ್ಮೇಳನ ಅಂದರೆ ಊರಿಗೆ ಊರು ಸಂಭ್ರಮದಲ್ಲಿರುತ್ತದೆ. ಮನೆ-ಮನಗಳೆಲ್ಲ ಕನ್ನಡವಾಗಿರುತ್ತದೆ. ಎಲ್ಲರೂ ನಮ್ಮ ಮನೆಯಲ್ಲೇ ಹಬ್ಬ ನಡೆಯುತ್ತಿದೆಯೇನೋ ಎಂಬಂತೆ ಸಂಭ್ರಮಿಸುತ್ತಿರುತ್ತಾರೆ. ಬಹುತೇಕ ಸಾಹಿತ್ಯ ಸಮ್ಮೇಳನಗಳು ನಡೆದ ಊರುಗಳಲ್ಲಿ ಹಿಂದಿನ ದಿನ ಕಾಣುವ ಸ್ಥಿತಿ, ಕೊಡಗಿನಲ್ಲಿರಲಿಲ್ಲ.  ಕೊಡಗಿಗೆ ಬರುವ ದಾರಿಯಲ್ಲಿ ಕುಶಾಲನಗರದಲ್ಲಿ ಒಂದಷ್ಟು ಕನ್ನಡ ಧ್ವಜಗಳು ಗೋಚರಿಸುವುದನ್ನು ಬಿಟ್ಟರೆ ಬೇರೇನೂ ಕಾಣುವುದಿಲ್ಲ. ಮಡಿಕೇರಿ ಆರಂಭವಾಗುತ್ತಿದ್ದಂತೆ ವಾಹನ ನಿಲುಗಡೆ ಸೂಚನೆಯ ಫಲಕಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅದೆಲ್ಲ ಆದ ಮೇಲೆ ಸ್ವಾಗತ ಕಮಾನುಗಳು, ಅಷ್ಟೇ. ಹೆಚ್ಚು ಕಡಿಮೆ ಸಮ್ಮೇಳನ ನಡೆಯುವ ಸ್ಥಳಕ್ಕೆ ಬರುವವರೆಗೂ ನಿಮಗೆ ಸಿಗುವುದು ಇಷ್ಟೇ. ಊರಿನ ಜನರು ಸಮ್ಮೇಳನದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಭಾವಿಸಬಹುದು ಅಥವಾ ಜನ ಕನ್ನಡ ಪ್ರೀತಿಯನ್ನು ಪ್ರಕಟಪಡಿಸುವ ರೀತಿ ಬೇರೆ ಇರಬಹುದೇನೊ! ಆದರೆ, ಸಮ್ಮೇಳನನ ಆರಂಭವಾದ ನಂತರ ಜನ ಇದರತ್ತ ಆಕರ್ಷಿತರಾಗಬಹುದು ಎಂಬ ಆಸೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನದು.

ಪುಸ್ತಕ ಮಳಿಗೆ ತಂಪು ತಂಪು
ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಬಹುಶಃ ಅತ್ಯಂತ ಹೆಚ್ಚು ಖುಷಿಪಡುವವರು ಪುಸ್ತಕ ಪ್ರಕಾಶಕರು.  ಈವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈವರೆಗೆ ಸಿದ್ಧಗೊಂಡಿರದಷ್ಟು ಉತ್ತಮ ಪುಸ್ತಕ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. 350 ಮಳಿಗೆಗಳನ್ನು ಅವುಗಳನ್ನು ಸಂಪೂರ್ಣವಾಗಿ ಹೊದಿಕೆ ಹೊಂದಿವೆ. ಇದೇ ಮೊದಲ ಬಾರಿಗೆ ಬಹುಶಃ ಪುಸ್ತಕ ಪ್ರಿಯರು ಸೂರ್ಯನ ಬಿಸಿಲಿನ ಕಾಟವಿಲ್ಲದೆ ತಂಪಾದ ವಾತಾವರಣದಲ್ಲಿ ಪುಸ್ತಕಗಳನ್ನು ನೋಡಿ, ಖರೀದಿಸಬಹುದು. ಪ್ರತಿ ಮಳಿಗೆಗಳನ್ನು ಶೀಟ್‌ಗಳಿಂದ ವಿಗಂಡಿಸಲಾಗಿದೆ. ಸಾಮಾನ್ಯವಾಗಿ ಕರವಸ್ತ್ರ ಮುಖಕ್ಕೆ ಕಟ್ಟಿಕೊಂಡೇ ಹೋಗಬೇಕಾದ ಸ್ಥಿತಿ ಇರುತ್ತದೆ. ಈ ಬಾರಿ ಧೂಳು ಪುಸ್ತಕಪ್ರಿಯರನ್ನು ಹಾಗೂ ಪ್ರಕಾಶಕರನ್ನು ಕಾಡದಂತೆ ನೆಲಹಾಸು ಹಾಕಲಾಗಿದೆ.  


ಇಂದು ಮೆರವಣಿಗೆ
ಮಂಗಳವಾರ ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷ ಡಾ.ನಾ'ಡಿಸೋಜ ಅವರ ಪುರಮೆರವಣಿಗೆ ನಂತರ, ಮ.12 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸುವುದರೊಂದಿಗೆ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಮುಖ್ಯ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, 79ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಕೊ. ಚನ್ನಬಸಪ್ಪ, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಚಿವರಾದ ಕೆ.ಜೆ. ಜಾರ್ಜ್, ಉಮಾಶ್ರೀ, ದಿನೇಶ್ ಗೂಂಡೂರಾವ್, ಸಂಸದ ಎಚ್. ವಿಶ್ವನಾಥ, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ, ಗಣೇಶ ಕಾರ್ಣಿಕ್, ಟಿ.ಜಾನ್ ಭಾಗವಹಿಸಲಿದ್ದಾರೆ.

-ವಿನಾಯಕ ಭಟ್ಟ ಮೂರೂರು/ ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.