ಆರಕ್ಷಕರಿಗಿಲ್ಲ ಗುಂಡು ರಕ್ಷಣೆ
ಬೆಂಗಳೂರು: ಠಾಣೆಗೊಂದು ಗುಂಡು ನಿರೋಧಕ ಜಾಕೆಟ್ ಇಲ್ಲ. ಒಂದು ಗುಂಡು ನಿರೋಧಕ ಹೆಲ್ಮೆಟ್ ಇಲ್ಲ. ಅಪರಾಧಿಗಳ ಗುಂಡಿಗೆ ಎದೆಯೊಡ್ಡುವ ಗುಂಡಿಗೆ ಇದ್ದವರು ಮಾತ್ರ ಅವರನ್ನು ಬಂಧಿಸಲು ಹೋಗಬೇಕಷ್ಟೇ!
ಬುಧವಾರ ಗುಲ್ಬಗದಲ್ಲಿ ಇನ್ಸ್ಪೆಕ್ಟರ್ ತಲೆಗೆ ಗುಂಡು ಬೀಳಲು ಇದೂ ಒಂದು ಕಾರಣ. ಇತ್ತೀಚೆಗಷ್ಟೇ ಅಂಕೋಲಾದಂತಹ ತಾಲೂಕು ಪ್ರದೇಶದಲ್ಲೂ ಶೂಟೌಟ್ ನಡೆದಿರುವುದನ್ನು ಸ್ಮರಿಸಬಹುದು. ಪೊಲೀಸ್ ವ್ಯವಸ್ಥೆ ಧುನೀಕರಣ ಎಂದು ಸರ್ಕಾರ ಹೇಳುತ್ತಲೇ ಇದೆ. ಆದರೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಒಂದೇ ಒಂದು ಗುಂಡು ನಿರೋಧಕ ಜಾಕೆಟ್ ಇಲ್ಲ. ಒಂದು ಗುಂಡುನಿರೋಧಕ ಹೆಲ್ಮೆಟ್ ಇಲ್ಲ. ಯಾರಾದರೂ ದಾಳಿ ಮಾಡಿದರೆ ಅಥವಾ ಅಗತ್ಯಬಿದ್ದರೆ ಅರ್ಜೆಂಟಿಗೆ ಜಿಲ್ಲಾ ಶಸ್ತ್ರ ಸಂಗ್ರಹಾಗಾರಕ್ಕೆ ಓಡಬೇಕು ಅಥವಾ ಕೈಗೆ ಸಿಕ್ಕ ವಸ್ತುವುನಿಂದ ರಕ್ಷಣೆ ಪಡೆಯಬೇಕು. ಇದು ಕರ್ನಾಟಕ ಪೊಲೀಸರ ಸ್ಥಿತಿ.
ಪಚಾವೊ ಅವರು ಡಿಜಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಯಾರೂ ಗಲಾಟೆ ಸ್ಥಳಗಳಿಗೆ ಹೋಗುವಾಗ ಹೆಲ್ಮೆಟ್ ಮತ್ತು ದೇಹರಕ್ಷಕ ಕವಚಗಳನ್ನು ಧರಿಸದೇ ಹೋಗಬಾರದು ಎಂಬ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ನೀಡುವ ಮನಸ್ಸು ಮಾಡಿಲ್ಲ. ಪೊಲೀಸ್ ಆಧುನೀಕರಣ ಎಂದು ಮಾತನಾಡುವವರು ಕೂಡ ಈ ಬಗ್ಗೆ ಗಮನ ಹರಿಸಿಲ್ಲ.
ಅಪರಾಧ ಜಗತ್ತು ಯಾವ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂಬುದು ಗುಟ್ಟೇನೂ ಅಲ್ಲ. ಅಲ್ಲದೇ ರಾಜ್ಯಾದ್ಯಂತ ಉಗ್ರಗಾಮಿ ಸಂಘಟನೆಗಳು ಸಂಪರ್ಕ ಹೊಂದಿವೆ ಎಂಬುದು ಕೂಡ ತಿಳಿದಿರುವ ವಿಷಯ. ಅಂತಹ ಅಪರಾಧಿಗಳನ್ನು ಎದುರಿಸುವ, ಮಣಿಸಿ, ಬಂಧಿಸುವ ಪೊಲೀಸರಿಗೆ ಅವರ ಅರ್ಧದಷ್ಟಾದರೂ ಸೌಲಭ್ಯಗಳನ್ನು ನೀಡಬೇಕು ಎಂಬುದರ ಬಗ್ಗೆ ಸರ್ಕಾರಗಳು ಚಿಂತಿಸಿದಂತಿಲ್ಲ. ಗುಲ್ಬರ್ಗ ನಗರದಲ್ಲಿ ನಡೆದ ಘಟನೆ ಇದಕ್ಕೊಂದು ಸ್ಪಷ್ಟ ನಿದರ್ಶನ.
ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾ ಶಸ್ತ್ರಾಗಾರದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ಗಳು ಲಭ್ಯವಿರುತ್ತವೆ. ಅಗತ್ಯವಿದ್ದಾಗ ಅಧಿಕಾರಿಗಳು ಪಡೆಯಬಹುದು. ಆದರೆ ಅವರು ನಿರ್ಲಕ್ಷ್ಯ ಮಾಡುತ್ತಾರೆ ಎನ್ನುತ್ತಾರೆ. ಆದರೆ ಕೆಳ ಹಂತದ ಅಧಿಕಾರಿಗಳನ್ನು ಕೇಳಿದರೆ, ಒಂದು ಮಾಹಿತಿ ದೊರೆತಾಗ ಅದು ಸತ್ಯವೋ, ಸುಳ್ಳೋ ಎಂಬುದೂ ಗೊತ್ತಿರುವುದಿಲ್ಲ. ಆಗ ಗುಂಡುನಿರೋಧಕ ಜಾಕೆಟ್ ಕೇಳಲು ಹೋಗಿ, ಮಾಹಿತಿ ಸುಳ್ಳು ಎಂದಾದರೆ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಬಹುತೇಕ ಸಂದರ್ಭಗಳಲ್ಲಿ ಅಂತಹ ಸಾಧನಗಳನ್ನು ಬಳಸದೇ ಹೋಗಬೇಕಾಗುತ್ತದೆ ಎನ್ನುತ್ತಾರೆ.
ಮುಂಬೈ ದಾಳಿಯ ಘಟನೆ ನಮ್ಮನ್ನು ಎಚ್ಚರಿಸಬೇಕಿತ್ತು. ಮುಂಬೈ ಘಟನೆಯಂತಹ ದಾಳಿಗಳು ನಡೆದ ತುರ್ತು ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಾಗಾರಕ್ಕೆ ಹೋಗಿ ಗುಂಡುನಿರೋಧಕಗಳನ್ನು ತರುವಷ್ಟು ಕೂಡ ವ್ಯವಧಾನ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಠಾಣೆಯಲ್ಲೇ 5-10 ಗುಂಡು ನಿರೋಧಕ ಜಾಕೆಟ್ ಮತ್ತು ಹೆಲ್ಮೆಟ್ಗಳು ಲಭ್ಯವಿದ್ದರೆ ಅನುಕೂಲವಾಗುತ್ತದೆ.
ಸಾಮಾನ್ಯವಾಗಿ ಜಿಲ್ಲಾ ಶಸ್ತ್ರಾಗಾರಗಳು ಜಿಲ್ಲಾ ಕೇಂದ್ರದಲ್ಲಿರುತ್ತವೆ. ಗುಲ್ಬರ್ಗ ಜಿಲ್ಲಾ ಕೇಂದ್ರ. ಅಲ್ಲಿ ಅರ್ಧಗಂಟೆಯಲ್ಲಿ ಗುಂಡುನಿರೋಧಕ ಜಾಕೆಟ್ ಮತ್ತು ಹೆಲ್ಮೆಟ್ ಪಡೆಯುವ ಅವಕಾಶವಿತ್ತು. ಆದರೆ ಜಿಲ್ಲಾ ಕೇಂದ್ರದಿಂದ ಹೊರಗಿರುವ ಪೊಲೀಸರ ಕತೆಯೇನು? ಈ ಬಗ್ಗೆ ಇಲಾಖೆಯಲ್ಲಿ ಯಾರ ಬಳಿಯೂ ಉತ್ತರವಿಲ್ಲ. ಪ್ರತಿ ಠಾಣೆಯಲ್ಲೂ ಗದ್ದಲ, ಗಲಾಟೆಗಳಾದಾಗ ಪೊಲೀಸರು ಧರಿಸಬಹುದಾದ ಹೆಲ್ಮೆಟ್ ಮತ್ತು ದೇಹ ರಕ್ಷಕ ಸಾಧನಗಳಿರುತ್ತವೆ. ಆದರೆ ಅವು ಗುಂಡು ನಿರೋಧಕ ಸಾಮರ್ಥ್ಯ ಹೊಂದಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಪೊಲೀಸರಿಗೆ ಗುಂಡಿಗೆ ಎದೆಯೊಡ್ಡುವುದೊಂದೇ ದಾರಿ.
ಪೊಲೀಸ್ ಠಾಣೆಗಳ ಆಧುನೀಕರಣ ಅಂದರೆ ಅವುಗಳಿಗೆ ಕಂಪ್ಯೂಟರ್ಗಳನ್ನು ನೀಡುವುದು ಮಾತ್ರವಲ್ಲ. ಬದಲಾಗಿ ಪೊಲೀಸರಿಗೆ ಅಪರಾಧಿಗಳನ್ನು ಎದುರಿಸಲು ಸಹಕಾರಿಯಾಗುವ ರಕ್ಷಣಾ ಸಾಧನಗಳನ್ನು ಒದಗಿಸುವುದು ಕೂಡ ಎಂಬುದು ನಮ್ಮನ್ನಾಳುವವರಿಗೆ ಅರ್ಥವಾಗುವುದು ಯಾವಾಗ ಎಂಬುದು ಸಾಮಾನ್ಯ ಪೊಲೀಸರ ಪ್ರಶ್ನೆ.
ಬುಲೆಟ್ ಪ್ರೂಫ್ ಹೆಲ್ಮೆಟ್ಗಳು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಜಾಕೆಟ್ಗಳು ಇದ್ದರೂ ಅವು ಎದೆ ಭಾಗವನ್ನು ಮಾತ್ರ ರಕ್ಷಿಸುತ್ತವೆ. ಇಂಥ ಸಾಧನಗಳು ಹೆಚ್ಚಿನ ಪ್ರಮಾಣದಲ್ಲಿ ಇಲಾಖೆಗೆ ಅಗತ್ಯವಿದೆ. ಆಯುಧಗಳನ್ನು ಬಳಕೆ ಮಾಡುವ ಮತ್ತು ಕುಖ್ಯಾತ ಕ್ರಿಮಿನಲ್ಗಳನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಬುಲೆಟ್ ಪ್ರೂಫ್ ಹೆಲ್ಮೆಟ್ಗಳು ಮತ್ತು ಜಾಕೆಟ್ಗಳನ್ನು ಬಳಸಬೇಕಾಗುತ್ತದೆ.
- ಬಿ.ಬಿ.ಅಶೋಕ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ
ಹಳೇ ವಾಹನಗಳು
ಇದೊಂದೇ ಅಲ್ಲ ಹೆಚ್ಚಿನ ಪೊಲೀಸ್ ಠಾಣೆಗಳಲ್ಲಿ ಹಳೇ ವಾಹನಗಳೇ ಇರುವುದು. ಪೊಲೀಸ್ ಇಲಾಖೆಗೆ ಹೊಸ ವಾಹನಗಳು ಬಂದಾಗೆಲ್ಲ ಅವು ಹಿರಿಯ ಅಧಿಕಾರಿಗಳ ಬಳಿಗೇ ಹೋಗುತ್ತವೆ. ಅವರು ಬಳಸುತ್ತಿದ್ದ ವಾಹನಗಳು ಕೆಳಗಿನ ಅಧಿಕಾರಿಗೆ. ಹೀಗೆ ಕೆಳಗೆ ಬರುತ್ತ ಬರುತ್ತ ಠಾಣೆಗಳಿಗೆ ತಲುಪುವುದು ಹಳೇ ವಾಹನವೇ. ಆದರೆ ಅತ್ಯಂತ ತುರ್ತಾಗಿ ಬಳಕೆಗೆ ಬೇಕಾಗುವುದು ಇದೇ ವಾಹನಗಳು. ನಗರ ಪ್ರದೇಶದ ಠಾಣೆಗಳಲ್ಲಿ ವಾಹನಗಳು ಕೊಂಚ ಸಮಾಧಾನಕರವಾಗಿದೆ. ಆದರೆ ಗ್ರಾಮೀಣ ಪ್ರದೇಶದ ಮತ್ತು ಜಿಲ್ಲಾ ಕೇಂದ್ರದಿಂದ ದೂರವಿರುವ ಪ್ರದೇಶದ ಠಾಣೆಗಳಲ್ಲಿ ಕೆಟ್ಟ ವಾಹನಗಳೇ ಇರುವುದು.
-ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

