ಮಹದೇವಪ್ಪ- ರೇವಣ್ಣ ಜುಗಲ್‌ಬಂದಿ
ಹಾಸನ: 'ಪಕ್ಷ ಯಾವಾದಾದರೇನು ನಾನು- ನೀವು ಒಂದೇ ಕಡೇ ಕೆಲ್ಸ ಮಾಡಿದ್ದೀವಿ. ನೀವು ತುಂಬಾ ಒಳ್ಳೇಯವರು' - ಇದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ, ಉಸ್ತುವಾರಿ ಸಚಿವ ಮಹದೇವಪ್ಪ ಅವರ ಬಳಿ ಹೇಳಿದ ಮಾತುಗಳು.
ಇದಕ್ಕೆ ಪ್ರತ್ಯುತ್ತರವಾಗಿ, ಮಹದೇವಪ್ಪ, 'ರೇವಣ್ಣ ನಿನ್ ಕೆಲ್ಸದ ಬಗ್ಗೆ ಯಾರು ಮಾತನಾಡುವಂತಿಲ್ಲ. ವಿಧಾನಸಭೆಯಲ್ಲಿ ದಾಖಲೆ ಇಟ್ಟುಕೊಂಡು ಮಾತನಾಡುವ ಶಾಸಕನೆಂದರೇ ನೀನೊಬ್ಬನೇ...'
ಹೀಗೆ ಇವರಿಬ್ಬರ ಜುಗಲ್‌ಬಂದಿ ಬುಧವಾರ ಹಾಸನದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಚಿವ ಮಹದೇವಪ್ಪ ಮತ್ತು ಜೆಡಿಎಸ್ ನಾಯಕ ರೇವಣ್ಣನವರ ನಡುವೆ ನಡೆಯಿತು. ಹೀಗೆ ವಿರೋಧ ಪಕ್ಷಗಳ ನಾಯಕರು ಪರಸ್ವರ ಕೊಂಡಾಡಿದ್ದು ಅಲ್ಲಿದ್ದ ಅಧಿಕಾರಿಗಳಿಗೆ ಮತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಅಚ್ಚರಿಯನ್ನುಂಟು ಮಾಡಿತು. ಆದರೆ, ಶಾಸಕ ಎ.ಮಂಜು ಮಾತ್ರ ಇಬ್ಬರ ಹೊಗಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬರ ಮತ್ತಿತರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ರೇವಣ್ಣ, ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರದ ಮಾಹಿತಿ ಕೊಡದಿದ್ದರೆ ನನಗೆ ತೆಗೆದುಕೊಳ್ಳುವುದು ಗೊತ್ತು. ಸರ್ಕಾರದ ಬೀರುವಿನ ಕೀಲಿ ಕೈ ಸರ್ಕಾರದ ಬಳಿ ಒಂದಿದ್ದರೇ ನನ್ನ ಬಳಿಯೇ ಒಂದು ಕೀಲಿಕೈ ಇದೆ. ದಾಖಲೆಗಳ ಆಧಾರದ ಮೇಲೆ ಹೋರಾಟ ಮಾಡುವುದು ನನಗೆ ಗೊತ್ತಿಲ್ಲ. ಸಚಿವ ಮಹದೇಪ್ಪನವರು ಅಭಿವೃದ್ಧಿ ವಿಚಾರದಲ್ಲಿ ಕಾಳಜಿ ಹೊಂದಿದ್ದಾರೆ. ಮಹದೇವಪನವರೇ ನಾನು- ನೀವು ಒಂದೇ ಕಡೆ ಮಾಡಿದವರು. ಹಿಂದಿನ ಬಿಜೆಪಿ ಸರ್ಕಾರವೂ ಹಾಸನ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿತು. ನೀವಾದರೂ ಸಹಾಯ ಮಾಡಿ. ತೆಂಗಿನ ನಾಶ ಬಗ್ಗೆ ಅಧ್ಯಯನ ಮಾಡಿ ಹೋದ ಕೇಂದ್ರ ತಂಡ ಇಲ್ಲಿಯವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ. ಕೇಂದ್ರ ನಂಬಿಕೊಂಡರೆ ಏನು ಆಗಲ್ಲ. ರಾಜ್ಯ ಸರ್ಕಾರದಿಂದ ಹಣವನ್ನು ಅಭಿವೃದ್ಧಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಸಾಹೇಬ್ರರೇ ಎಂದರು.
ಮಾತಿನಲ್ಲಿ, ಚರ್ಚೆಯಲ್ಲಿ ಇತರೇ ಸಚಿವರಿಗಿಂತ ಒಂದು ಹೆಜ್ಜೆ ಮುಂದೆ ಇರುವ ಸಚಿವ ಮಹದೇವಪನವರು ಸುಮ್ಮನಿರಲು ಹೇಗೆ ಸಾಧ್ಯವಾದೀತು ..... ನೋಡು ರೇವಣ್ಣ, ಅಭಿವೃದ್ಧಿ ವಿಚಾರದಲ್ಲಿ ನಿನ್ ಬಗ್ಗೆ ಯಾರೂ ಮಾತನಾಡುವಂತಿಲ್ಲ. ನಾವೆಲ್ಲಾ ಒಂದೇ ಕಡೆ ಕೆಲ್ಸ ಮಾಡ್ದೋರು. ನಾನು ಏನಾದ್ರೂ ದಾಖಲೆ ಬೇಕು ಎಂದ್ರೆ., ರೇವಣ್ಣನನ್ನು ಕೇಳಿ ಅಂತ ಹೇಳ್ತಿನಿ ಗೊತ್ತಾ . ರೇವಣ್ಣ ನೀನ್ ಏನೇ ಹೇಳು, ಮಾಡಿಕೊಡ್ತೀನಿ. ಚಿಂತೆ ಮಾಡ್ಬೇಡ ಎಂದು ಏಕಕಾಲದಲ್ಲಿ ರೇವಣ್ಣನವರ ಬಗ್ಗೆ ಹೊಗಳಿಕೆ ಮತ್ತು ಅಭಯ ನೀಡಿದರು ಸಚಿವ ಮಹದೇವಪನವರು. ಇದು ಸಾಲದೆಂಬಂತೆ ಸಚಿವ ಮಹದೇವಪ, ದೇವೇಗೌಡರು, ನಮ್ ರಾಷ್ಟ್ರೀಯ ನಾಯಕರು. ಅವರು ಪತ್ರ ಬರೆದಂತೆ ಎಲ್ಲಾ ಕೆಲಸಗಳನ್ನು ಮಾಡಿರುವೆ ಎಂದು ಹೇಳಬೇಕೇ...
ಇವರಿಬ್ಬರ ಮಾತು ಕೇಳಿ, ಕೇಳಿ ಕಣ್ಣು ಉಬ್ಬನ್ನು ಏರಿಸಿಕೊಂಡ ಜೆಡಿಎಸ್ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಪಟೇಲ್ ಶಿವರಾಂ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಮತ್ತು ಕಾಂಗ್ರೆಸ್ಶಾಸಕ ವೈ.ಎನ್. ರುದ್ರೇಶ್ ಗೌಡರು ಹೀಗೂ ಉಂಟಾಪ್ಪ ಎಂದು ಮೌನಕ್ಕೆ ಶರಣಾದರು. ಆದರೆ ಶಾಸಕ ಕುಮಾರಸ್ವಾಮಿ ಅವರು ಮಾತ್ರ., ರೇವಣ್ಣ.. ಜಿಲ್ಲೆಯಲ್ಲಿ ಅಭಿವೃದ್ಧಿ ಆಗದಿದ್ದರೇ ನೀವೇ (ಸಚಿವ ಮಹದೇವಪನವರೇ) ಹೊಣೆ ಎಂದು ಹೇಳು. ಸಚಿವರು ಒಳ್ಳೆಯವರು, ಪ್ರಾಮಾಣಿಕರು ಎಂದೆಲ್ಲಾ ಹೇಳಬೇಡ. ಇದರ ಹಿಂದೆ ಬೇರೆ ಉದ್ದೇಶವಿದೆ ಎಂದು ಹೇಳಿದಾಗ ಸಭೆಯಲ್ಲಿ ನಗೆಯ ಹೊನಲು ಹರಿಯಿತು.
ಸಿದ್ದರಾಮೇಶ್ವರನೇ ಮೆಚ್ಚಬೇಕು: ಕೆಲ ಅಧಿಕಾರಿಗಳು ಸಭೆಯಿಂದ ಹೊರ ಬಂದು, ರೇವಣ್ಣ, ಮಹದೇವಪನವರ ಆಟನ ಆ ಸಿದ್ದರಾಮೇಶ್ವರ ಮೆಚ್ಚಬೇಕು. ಏನಾದರೂ ಆಗ್ಲಿ... ಮೇಲ್ಮಟ್ಟದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದಾಗಿ ಇರ್ತಾರೆ. ನಾವು ಹುಷಾರ್ ಆಗಿ ಸೇಫ್ ಆಗಿ ಇರಬೇಕು ಎಂದು ಹೇಳುತ್ತಿದ್ದದ್ದು ಕಂಡು ಬಂತು.
-ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

