ನಗರಾಡಳಿತ ಮತ್ತಷ್ಟು ಕಗ್ಗಂಟು
ಬೆಂಗಳೂರು: ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ತ್ರಿಶಂಕು ಸ್ಥಿತಿಯಲ್ಲಿರುವ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಸ್ಥಿತಿ ಇನ್ನೂ ಶೋಚನೀಯ ಆಗಲಿದೆ.
ಹೈಕೋರ್ಟ್ ಆದೇಶದಂತೆ ಮೀಸಲು ಪಟ್ಟಿ ಸರಿಪಡಿಸುವ ಬದಲು ಮತ್ತೆ ಕಾನೂನು ಸಮರಕ್ಕೆ ಸರ್ಕಾರ ಸಜ್ಜಾಗುತ್ತಿರುವುದೇ ಇದಕ್ಕೆ ಕಾರಣ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಪಟ್ಟಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸರ್ಕಾರ ತಯಾರಿ ನಡೆಸಿದೆ. ಹೀಗಾಗಿ ಮೀಸಲು ಗೊಂದಲ ಮತ್ತೆ ಕೋರ್ಟ್ ಮೆಟ್ಟಿಲೇರುತ್ತಿದ್ದು, ಸಮಸ್ಯೆ ಇನ್ನೂ ಬಿಗಡಾಯಿಸಲಿವೆ. ಇದರಿಂದ ಸ್ಥಳೀಯ ಸಂಸ್ಥೆಗಳ ಸ್ಥಿತಿ ಮತ್ತಷ್ಟು ಅತಂತ್ರ ಆಗಲಿದ್ದು, ಅಭಿವೃದ್ಧಿ ಯೋಜನೆಗಳು ಸಂಪೂರ್ಣ ನೆಲಕಚ್ಚಲಿವೆ. ವಿಚಿತ್ರವೆಂದರೆ, ಮೀಸಲು ವಿವಾದ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಕೆಲವು ಸ್ಥಳೀಯ ಸಂಸ್ಥೆಗಳು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಿಕೊಂಡಿವೆ. ಶೇ.70ರಷ್ಟು ಸಂಸ್ಥೆಗಳು ಇನ್ನೂ ಚುನಾವಣೆ ನಡೆಸಿಲ್ಲ. ಹೀಗಾಗಿ ಸದಸ್ಯರು ಆಯ್ಕೆಯಾಗಿ 9 ತಿಂಗಳಾದರೂ ಸಾಮಾನ್ಯ ಸಭೆಗಳನ್ನೂ ನಡೆಸದಂತಾಗಿದೆ. ಯಾವುದೇ ಕಾಮಗಾರಿ ಕೈಗೊಳ್ಳದಂತಾಗಿದೆ. ಅಷ್ಟೇ ಏಕೆ ? ಕಸ ನಿರ್ವಹಣೆ, ಚರಂಡಿ ಸ್ವಚ್ಛತೆ ಮತ್ತು ನೀರು ಪೂರೈಕೆ ಕೆಲಸಗಳೂ ನಡೆಯುತ್ತಿಲ್ಲ. ಬಹುತೇಕ ಪಟ್ಟಣಗಳ ಅಭಿವೃದ್ಧಿ ನಿಂತ ನೀರಾಗಿದೆ. ಇದರಿಂದಾಗಿ ಆಗಾಗ ಕಚೇರಿ ಕಡೆ ಬರುತ್ತಿದ್ದ ಸದಸ್ಯರು ಅತ್ತ ತಲೆ ಹಾಕುವುದನ್ನೇ ಬಿಟ್ಟಿದ್ದಾರೆ. ಈಗ ಸರ್ಕಾರ ಮತ್ತೆ ಕೋರ್ಟ್ ಮೊರೆ ಹೋದರೆ ಸದಸ್ಯರು ಇನ್ನೂ ಅತಂತ್ರರಾಗುತ್ತಾರೆ.
ಏನಿದು ಮೀಸಲು ಗೊಂದಲ?: ರಾಜ್ಯದ 7 ಮಹಾನಗರ ಪಾಲಿಕೆಗಳು, 43 ನಗರಸಭೆಗಳು, 65 ಪುರಸಭೆಗಳು ಹಾಗೂ 92 ಪಟ್ಟಣಪಂಚಾಯಿತಿಗಳೂ ಸೇರಿ ಒಟ್ಟು 207 ಸ್ಥಳೀಯ ಸಂಸ್ಥೆಗಳಿಗೆ ಮಾಚ್ 7ರಂದು ಚುನಾವಣೆ ನಡೆದಿತ್ತು. ನಿಯಮದಂತೆ ಎಲ್ಲಾ ಸಂಸ್ಥೆಗಳು ಮಾರ್ಚ್ ತಿಂಗಳಿನಲ್ಲೇ ಪ್ರಥಮ ಸಭೆ ನಡೆಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಬೇಕಿತ್ತು. ಈ ಮಧ್ಯೆ ಕಳೆದ ಸಾಲಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದಿದ್ದ ವರ್ಗದವರಿಗೇ ಮತ್ತೆ ಅವಕಾಶ ನೀಡಲಾಗಿದೆ ಎಂಬ 39ಕ್ಕೂ ಹೆಚ್ಚಿನ ರಿಟ್ ಅರ್ಜಿಗಳು ಮಂಗಳೂರು, ದೇವನಹಳ್ಳಿ, ಗುಂಡ್ಲುಪೇಟೆ, ಕನಕಪುರ, ಮುಧೋಳ, ಸಕಲೇಶಪುರ ಸೇರಿದಂತೆ ಅನೇಕ ಭಾಗದಿಂದ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದವು.
ವಿಚಾರಣೆ ನಡೆಸಿದ ಹೈಕೋರ್ಟ್, ಸ್ಥಳೀಯ ಸಂಸ್ಥೆಗಳು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿದಂತೆ 2013ರ ಆಗಸ್ಟ್ 21ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತು. ಅಷ್ಟೊತ್ತಿಗೆ 70ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿಸಿದ್ದವು. ಉಳಿದವು ತಡೆಯಾಜ್ಞೆಯಿಂದ ಚುನಾವಣೆ ನಡೆಸಲಾಗಲಿಲ್ಲ. ಆನಂತರ ಮೀಸಲು ಪಟ್ಟಿ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎಚ್.ಜಿ. ರಮೇಶ್, ಮೀಸಲು ಪಟ್ಟಿ ದೋಷವನ್ನು ಸರ್ಕಾರ ಸರಿಪಡಿಸಬೇಕು. ಅಗತ್ಯವಿದ್ದರೆ ಇಡೀ ಮೀಸಲು ಪಟ್ಟಿ ಪುನರ್ರಚಿಸಬಹುದು ಎಂದು ತೀರ್ಪು ನೀಡಿದರು.
ತಡೆಯಾಜ್ಞೆ ಕೋರುವ ಉದ್ದೇಶ: ಆದರೆ ಸರ್ಕಾರಕ್ಕೆ ಈಗ ಮೀಸಲು ಪಟ್ಟಿ ಸರಿಪಡಿಸಲು ಆಸಕ್ತಿ ಇಲ್ಲ. ಏಕೆಂದರೆ, ಯಾವುದಾದರೂ ಒಂದು ಸಂಸ್ಥೆ ಮೀಸಲು ಸರಿಪಡಿಸಲು ಹೋದರೆ ಇತರ ಸಂಸ್ಥೆಗಳೂ ಅದೇ ಕೇಳುತ್ತವೆ. ಆದ್ದರಿಂದ ಈಗಾಗಲೇ ಪ್ರಕಟವಾದ ಮೀಸಲು ಪಟ್ಟಿ ಕಾನೂನು ಬದ್ಧವಾಗಿಯೇ ಇದೆ ಎಂದು ವಾದಿಸಲು ರಿಟ್ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಜತೆಗೆ ಏಕ ಸದಸ್ಯ ಪೀಠ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ಕೋರುವುದಕ್ಕೂ ಚಿಂತಿಸಿದೆ. ಈ ಬಗ್ಗೆ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಗಳನ್ನು ಖಾಲಿ ಬಿಡಬಾರದು
207 ಸ್ಥಳೀಯ ಸಂಸ್ಥೆಗಳಿಗೆ ಮಾಚ್ 7ರಂದೇ ಚುನಾವಣೆ ನಡೆದಿದ್ದರಿಂದ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ ಸೆಕ್ಷನ್ 10ರ ಪ್ರಕಾರ, ಎಲ್ಲಾ ಸಂಸ್ಥೆಗಳು ಮಾರ್ಚ್ ತಿಂಗಳಿನಲ್ಲೇ ಪ್ರಥಮ ಸಭೆ ನಡೆಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಬೇಕಿತ್ತು. ಆದರೆ, ಸರ್ಕಾರ ಮೀಸಲು ಪಟ್ಟಿ ಗೊಂದಲ ಸೃಷ್ಟಿಸಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಖಾಲಿ ಬಿಡುವಂತೆ ಮಾಡಿದೆ. ಆದ್ದರಿಂದ ಇದು ಕೆಎಂಸಿ ಕಾಯ್ದೆ ಸ್ಪಷ್ಟ ಉಲ್ಲಂಘನೆ ಎನ್ನುತ್ತಾರೆ ನೊಂದ ಸದಸ್ಯ ಶಂಕರ್ ಹೇಳಿದ್ದಾರೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಮ್ಮ ಇಲಾಖೆ ಯಾವ ನಿರ್ಧಾರ ಕೈಗೊಳ್ಳಬೇಕೆನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಕಾನೂನು ಸಲಹೆ ಪಡೆಯಲಾಗುತ್ತಿದ್ದು, ಉನ್ನತಮಟ್ಟದಲ್ಲಿ ಚರ್ಚಿಸಿ ಇನ್ನೆರಡು ದಿನಗಳಲ್ಲಿ ತೀರ್ಮಾನಿಸಲಾಗುವುದು.
- ಟಿ.ಕೆ. ಅನಿಲ್ಕುಮಾರ್, ಪೌರಾಡಳಿತ ಇಲಾಖೆ ಕಾರ್ಯದರ್ಶಿ
-ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

