ಪ್ರಧಾನ ಸುದ್ದಿ

ರದ್ದಾದ ರೌಡಿ ಶೀಟ್: ನಿಯಮ ಉಲ್ಲಂಘನೆ

Published On :

ಗುಲ್ಬರ್ಗ: ರೌಡಿ ಶೀಟ್ ರದ್ದುಗೊಳಿಸುವ ವಿಚಾರದಲ್ಲಿ ಜಿಲ್ಲಾ ಪೊಲೀಸ್ ಕಾನೂನು-ಕಟ್ಟಳೆಗಳನ್ನೆಲ್ಲ ಗಾಳಿಗೆ ತೂರಲಾಗಿದೆ!
ನ.6, 2013ರಂದು ಇಲ್ಲಿನ ಮಹಾತ್ಮ ಬಸವೇಶ್ವರ ನಗರ ಠಾಣೆಯ 11 ರೌಡಿಗಳ ಪಟ್ಟಿಯ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ಪೊಲೀಸ್ ಮ್ಯಾನುಯಲ್ ನಿಮಯಗಳನ್ನೇ ಗಾಳಿಗೆ ತೂರಲಾಗಿದೆ. ಅದರಲ್ಲಿಯೂ ಒಂದೇ ಕೋಮಿಗೆ ಸೇರಿರುವ 11 ರೌಡಿಗಳ ವಿರುದ್ಧವಿದ್ದ ಆರೋಪಗಳನ್ನು ಒಂದೇ ದಿನದಲ್ಲಿ ರದ್ದುಗೊಳಿಸಿರುವುದು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದೆ. ಮ್ಯಾನುಯಲ್‌ನಲ್ಲಿರುವಂತೆ ರೌಡಿ ಶೀಟ್‌ಗಳನ್ನು ತೆರೆಯುವ ಅಧಿಕಾರ ಡಿವೈಎಸ್ಪಿಗಿದ್ದರೆ, ಅವುಗಳನ್ನು ಮುಚ್ಚುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪರಮಾಧಿಕಾರ. ಇಲ್ಲಿ ಬೇರಾವ ಅಧಿಕಾರಿಯೂ ಮೂಗು ತೂರಿಸುವಂತಿಲ್ಲ.  ಇಲ್ಲಿನ ಎಸ್ಪಿ ರಜೆಯಲ್ಲಿದ್ದಾಗ ಈ ಪ್ರಕ್ರಿಯೆ ನಡೆದಿದ್ದು, ಅಪರ ಪೊಲೀಸ್ ಅಧೀಕ್ಷಕರು (ಎಎಸ್ಪಿ) ಆದೇಶ ಹೊರಡಿಸಿದ್ದಾರೆ. ಅಲ್ಲದೇ, 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ರೌಡಿ ಶೀಟ್‌ಗಳನ್ನು ಪರಿಶೀಲಿಸುವುದು, ವರದಿ ಸಲ್ಲಿಸುವುದೂ ಎಲ್ಲ ಪ್ರಕ್ರಿಯೆಗಳೂ ಒಂದೇ ದಿನ ನಡೆದಿದೆ.
ಒಂದೇ ವಿಷಯ ಪುನರಾವರ್ತನೆ: 11 ರೌಡಿಗಳ ವಿರುದ್ಧ ಆರೋಪ ಮುಕ್ತಾಯಕ್ಕೆ 'ಕಳೆದ 4-5 ವರ್ಷಗಳಲ್ಲಿ ಈತನ ವಿರುದ್ಧ ಯಾವುದೇ ಪ್ರಕರಣವೂ ದಾಖಲಾಗಿಲ್ಲ' ಎಂಬ ಒಂದೇ ಕಾರಣವನ್ನು ನಮೂದಿಸಲಾಗಿದೆ.
ಪಿಎಸ್‌ಐ, ಸಿಪಿಐ ಎಂಬಿ ನಗರ ಠಾಣೆ, ಡಿವೈಎಸ್ಪಿ ಗ್ರಾಮಾಂತರ ಠಾಣೆ ಇವರೆಲ್ಲರೂ 11 ರೌಡಿಗಳ ಪಟ್ಟಿಯನ್ನು ರದ್ದುಗೊಳಿಸಲು ನಿವೇದಿಸಿದ್ದಾರೆ. ಡಿವೈಎಸ್‌ಪಿ (ಡಿಸಿಆರ್‌ಬಿ ಘಟಕ)ಯೂ ಈ ರೌಡಿ ಶೀಟ್‌ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಅಪರ ಪೊಲೀಸ್ ಅಧೀಕ್ಷಕರು ತಮ್ಮ ನ.6ರ ಆದೇಶದಲ್ಲಿ ಹೇಳುವ ಮೂಲಕ ತಮ್ಮ ವ್ಯಾಪ್ತಿಯಲ್ಲಿರದ ಅಧಿಕಾರ ಚಲಾಯಿಸಿದ್ದಾರೆ.
ಹಿರಿಯ ಅಧಿಕಾರಿಗಳ ಪ್ರಭಾವ: ರೌಡಿ ಶೀಟನ್ನು ರದ್ದುಗೊಳಿಸಲು ಎಸ್ಪಿಯವರಿಗೆ ಅರ್ಜಿ ಸಲ್ಲಿಸಬೇಕು. ಗಮನಾರ್ಹ ಸಂಗತಿ ಎಂದರೆ ಈ ರೌಡಿ ಶೀಟ್ ರದ್ದುಗೊಳಿಸುವ ಆದೇಶದಲ್ಲಿ ಎಎಸ್ಪಿ ಅರ್ಜಿದಾರರ ಅರ್ಜಿ ಐಜಿಪಿ ಕಚೇರಿ ಮೂಲಕ ತಮ್ಮ ಕಾರ್ಯಾಲಯಕ್ಕೆ ಸ್ವೀಕೃತವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಅರ್ಜಿ ಬಂದದ್ದೆಲ್ಲಿಂದ? ಸಲ್ಲಿಸಿದವರು ಯಾರು? ಎಂಬುದೆಲ್ಲವೂ ಹಲವು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ.
ಬಲ್ಲ ಮೂಲಗಳ ಪ್ರಕಾರ ರೌಡಿಶೀಟುಗಳನ್ನು ತೆರೆಯುವುದು, ನಿರ್ವಹಣೆ ಹಾಗೂ ಮುಕ್ತಾಯದಂಥ ವಿಶ್ವಸನೀಯ ಕೆಲಸಗಳಲ್ಲಿ ಹೊರಗಿನ ಪಟ್ಟಭದ್ರ ಶಕ್ತಿಗಳು, ರಾಜಕೀಯ ಶಿಫಾರಸುಗಳೂ ತಮ್ಮ ಪ್ರಭಾವ ಬೀರುತ್ತಿವೆ. ಈ ಪ್ರಕರಣದಲ್ಲಿ ರಾಜಕೀಯವೂ ಮೇಲುಗೈ ಸಾಧಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಬಸವೇಶ್ವರ ನಗರ ಠಾಣೆಯ ರೌಡಿಗಳ ಶೀಟ್ ರದ್ದುಗೊಳಿಸುವಾಗ ನಾನು ರಜೆ ಮೇಲಿದ್ದೆ. ಈ ವಿಷಯ ಗಮನಕ್ಕೆ ಬಂದಿದೆ. ಈ ಕುರಿತು ವಿಚಾರಣೆ ನಡೆಸುವೆ.
- ಅಮೀತ್ ಸಿಂಗ್
ಎಸ್ಪಿ, ಗುಲ್ಬರ್ಗ
ರೌಡಿಶೀಟಿನಿಂದೇನು ಅನುಕೂಲ?
ಆಯಾ ಠಾಣೆಗಳಲ್ಲಿ ಅಧಿಕಾರಿಗಳು ಬದಲಾವಣೆ ಆಗುತ್ತಿರುತ್ತಾರೆ. ಆದರೆ ಅಲ್ಲಿನ ರೌಡಿಗಳ ಕುರಿತು ಪಕ್ಕಾ ಮಾಹಿತಿಗಳನ್ನು ಈ ಪಟ್ಟಿ ಹೊಂದಿರುತ್ತದೆ. ಬೀಟ್ ಪೊಲೀಸರೂ ರೌಡಿಗಳ ಚಲನವನಲನದ ಮೇಲೆ ನಿಗಾ ಇಟ್ಟು ಕಾಲಕಾಲಕ್ಕೆ ಮಾಹಿತಿ ಪರಿಷ್ಕರಿಸುತ್ತಿರುತ್ತಾರೆ.


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.