ಸೈನಿಕರಿಗೆ ಇಂಟರ್ನೆಟ್ ಮತ ಹಕ್ಕು ಇರಲಿ

- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಎಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ) ಅಥವಾ ಇಂಟರ್ನೆಟ್ ಮೂಲಕ ಸೇವೆಯಲ್ಲಿರುವ ಸೈನಿಕರಿಗೆ ಮತ್ತವರ ಕುಟುಂಬದವರಿಗೆ ಮತದಾನದ ವ್ಯವಸ್ಥೆಗೆ ಸೂಚಿಸುವಂತೆ ಇಂದಿಲ್ಲಿ 'ಫ್ಲ್ಯಾಗ್ ಆಫ್ ಆನರ್' ಸಂಸ್ಥೆ ಏರ್ಪಡಿಸಿದ್ದ ಸಭೆ ಆಗ್ರಹಿಸಿದೆ.
ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಫ್ಲ್ಯಾಗ್ ಆಫ್ ಆನರ್ ಫೌಂಡೇಷನ್ ಏರ್ಪಡಿಸಿದ್ದ ಸಭೆಯಲ್ಲಿ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸೈನಿಕರು ಮತ್ತವರ ಕುಟುಂಬದವರು ಸಂವಿಧಾನದತ್ತವಾಗಿ ದಕ್ಕಿರುವ ಮತದಾನದ ಹಕ್ಕು ಚಲಾಯಿಸಲು ಈಗ ಇರುವ ಅಡ್ಡಿ ಮತ್ತು ವ್ಯವಸ್ಥೆಯ ಲೋಪಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು, ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ಸೈನಿಕರು ಮಾತ್ರ ಈ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದತ್ತವಾಗಿ ದಕ್ಕಿರುವ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.
ಅದಕ್ಕೆ ಮುಖ್ಯ ಕಾರಣ ಈಗ ಸೈನಿಕರಿಗೆ ಮತದಾನ ಮಾಡಲು ರೂಪಿಸಿರುವ ವ್ಯವಸ್ಥೆಯಲ್ಲಿನ ಲೋಪ ಹಾಗೂ ಸಮನ್ವಯದ ಕೊರತೆ. ಈ ಎರಡನ್ನೂ ಸರಿಪಡಿಸಬೇಕು. ಅದಕ್ಕೆ ಲಭ್ಯ ಇರುವ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಈಗ ಇರುವ ವ್ಯವಸ್ಥೆಯಡಿ ಸೈನಿಕರು ಅಂಚೆ ಮತದಾನ ಮತ್ತು ಪ್ರಾಕ್ಸಿ ಮಾತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಬಹುದು. ಆದರೆ, ಬಹುತೇಕ ಸಂದರ್ಭಗಳಲ್ಲಿ ಅಂಚೆ ಮತಪತ್ರಗಳು ಗಡಿಯಲ್ಲಿರುವ ಸೈನಿಕರನ್ನು ತಲುಪುವುದೇ ಇಲ್ಲ. ತಲುಪಿದರೂ ಸಕಾಲದಲ್ಲಿ ತಲುವುದಿಲ್ಲ. ಪ್ರಾಕ್ಸಿ ಮತದಾನ ಕೂಡ ಪರಿಣಾಮಕಾರಿಯಾಗಿಲ್ಲ.
ಸೈನಿಕ ತನ್ನ ಕುಟುಂಬದ ವಯಸ್ಕ ಸದಸ್ಯರಿಗೆ ತಮ್ಮ ಪರವಾಗಿ ಮತದಾನ ಮಾಡುವ ವ್ಯವಸ್ಥೆಯೇ ಪ್ರಾಕ್ಸಿ ಮತದಾನ. ಈ ವ್ಯವಸ್ಥೆಯಲ್ಲಿ ಕೂಡ ಸೈನಿಕರಿಗೆ ಯಾರಿಗೆ ಮತಾದಾನ ಮಾಡಬೇಕೆಂದುಕೊಂಡಿರುತ್ತಾರೋ ಅವರಿಗೆ ಮತದಾನ ಮಾಡಿರುವ ಬಗ್ಗೆ ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಪರಿಹಾರ ಸೂಚಿಸಿದ ಆಯುಕ್ತ: ಚರ್ಚೆಯಲ್ಲಿ ಪಾಲ್ಗೊಂಡಿದ್ದ ಚುನಾವಣಾ ಆಯುಕ್ತ ಎಚ್.ಎಸ್. ಬ್ರಹ್ಮ ಅವರು, ವಿವಿಧ ಸೈನಿಕ ಸಂಘಟನೆಗಳು ಎತ್ತಿದ ಪ್ರಶ್ನೆ ಹಾಗೂ ಸಂಶಯಗಳಿಗೆ ಉತ್ತರಿಸಿದರು. ಸೈನಿಕರು ಎಲ್ಲಿ ನಿಯುಕ್ತರಾಗಿರುತ್ತಾರೋ ಅಲ್ಲಿ ಅವರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಮತ ಚಲಾಯಿಸಬಹುದು. ಸೈನಿಕರ ಕುಟುಂಬದವರು ಎಲ್ಲಿ ವಾಸವಾಗಿರುತ್ತಾರೋ ಅಲ್ಲಿ ಹೆಸರು ನೊಂದಾಯಿಸಿ ತಮ ಚಲಾಯಿಸಬಹುದು ಎಂದು ಸ್ಪಷ್ಟ ಪಡಿಸಿದರು. ಯಾವುದೇ ವ್ಯಕ್ತಿ ಒಂದು ಪ್ರದೇಶದಲ್ಲಿ ಆರು ತಿಂಗಳು ವಾಸವಾಗಿದ್ದರೆ, ಆ ವಿಳಾಸದಲ್ಲೇ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಬಹುದು ಎಂದು ಆಯುಕ್ತ ಬ್ರಹ್ಮ ಅವರು ಸ್ಪಷ್ಟಪಡಿಸಿದರು.
ಬಾರ್ಡರ್ ರೋಡ್ ಆರ್ಗನೈಷನ್ ಮಾಜಿ ಡಿಜಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅಶೋಕ್ ಪುರಿ ಅವರು ಗಡಿಯಲ್ಲಿ ನಿಯೋಜಿತ ಸೈನಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿದರು. ಲೆಫ್ಟಿನೆಂಟ್ ಜನರಲ್ ಅನಿಲ್ ಮಾಲಿಕ್ ಮತದಾನ ಮಾಡುವಲ್ಲಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಆನ್ಲೈನ್ ಮೂಲಕ ಮತದಾನ ಚಲಾಯಿಸುವ ಬಗ್ಗೆ ವಿವರಿಸಿದರು. ಬ್ರಿಗೇಡಿಯರ್ ವಿ. ಮಹಾಲಿಂಗಮ್ ಹಾಗೂ ನ್ಯಾಯವಾದಿ ನೀಲಾ ಗೋಖಲೆ ಅವರು ಸೈನಿಕರ ಮತದಾನಕ್ಕಾಗಿ ನ್ಯಾಯಲಯದಲ್ಲಿರುವ ನಡೆದಿರುವ ಹೋರಾಟಗಳು ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ವಿವರಿಸಿದರು.
ಆನ್ಲೈನ್ ಮತದಾನಕ್ಕೆ ಒಲವು: ಬಹುತೇಕ ಸೈನಿಕರ ಬಳಿಯೂ ಈಗ ಸ್ಮಾರ್ಟ್ ಫೋನ್ ಇರುವುದರಿಂದ ಇಂಟರ್ನೆಟ್ ಬಳಕೆ ಗೊತ್ತಿರುವುದರಿಂದ ಇಂಟರ್ನೆಟ್ ಮೂಲಕ ಮತಾದನಕ್ಕೆ ವ್ಯವಸ್ಥೆ ಮಾಡಬೇಕು ಹಾಗೂ ಸೈನಿಕರು ನಿಯೋಜಿಸಲ್ಪಟ್ಟಿರುವ ರೆಜಿಮೆಂಟ್ ಸೆಂಟರ್ಗಳಿಗೆ ಮುಂಚಿತವಾಗಿಯೇ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ರವಾನಿಸಿ, ಮತದಾನಕ್ಕೆ ವ್ಯವಸ್ಥೆ ಮಾಡಬೇಕು ಎಂಬ ಸಲಹೆಗಳನ್ನು ಸಭೆಯಲ್ಲಿ ಒಪ್ಪಲಾಯಿತು.
ರಾಜೀವ್ ಚಂದ್ರಶೇಖರ್ ಅವರು ಫ್ಲ್ಯಾಗ್ ಆಫ್ ಆನರ್ ಫೌಂಡೇಷನ್ ಮೂಲಕ ಸಭೆಯಲ್ಲಿ ಹೊರಹೊಮ್ಮಿದ ಸಲಹೆ- ಪರಿಹಾರಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ, ಮುಖ್ಯ ಚುನಾವಣಾ ಆಯುಕ್ತರಿಗೆ, ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆದು, ಗಡಿಕಾಯುವ ಸೈನಿಕರ ಸಂವಿಧಾನ ದತ್ತ ಹಕ್ಕು ಚಲಾಯಿಸಲು ವ್ಯವಸ್ಥೆ ಮಾಡುವಂತೆ ಕೋರಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


