ಪ್ರಧಾನ ಸುದ್ದಿ

ವಿದ್ಯಾರ್ಥಿಗಳಿಗಿಂತ ಸಿಬ್ಬಂದಿ ಖರ್ಚೇ ಹೆಚ್ಚು!

Published On :

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಸ್ಥಿತಿ 'ಮೂಗಿಗಿಂತ ಮೂಗುತಿಯೇ ಬಲು ಭಾರ' ಎನ್ನುವಂತಾಗಿದೆ.
ಕೆಲವು ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗಿಂತ ಸಿಬ್ಬಂದಿ ಸಂಖ್ಯೆಯೇ ಹೆಚ್ಚಾಗುತ್ತಿದೆ.
ಇದರಿಂದ ಹಾಸ್ಟೆಲ್ಗಳಲ್ಲಿ ಸರ್ಕಾರ ವಿದ್ಯಾರ್ಥಿಗಳ ವಸತಿ ಮತ್ತು ಶಿಕ್ಷಣಕ್ಕೆ ಮಾಡುವ ವೆಚ್ಚಕ್ಕಿಂತ ಸಿಬ್ಬಂದಿಗಾಗಿ ಮಾಡುವ ವೆಚ್ಚವೇ ಹೆಚ್ಚಾಗುತ್ತಿದೆ.
ಅನಗತ್ಯ ವೆಚ್ಚ ಮತ್ತು ವಿದ್ಯಾರ್ಥಿ ಸಂಖ್ಯೆ ಕುಸಿತದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡುವ ಅನುದಾನ ಹಾಸ್ಟೆಲ್ಗಳಿಗೆ ಸಾಲುತ್ತಿಲ್ಲ. ಅನೇಕ ಕಡೆ ಬಾಡಿಗೆ ಕಟ್ಟಡಗಳಲ್ಲೇ ಹಾಸ್ಟೆಲ್ ನಡೆಸುತ್ತಿರುವುದು ಕೂಡ ಇಲಾಖೆಗೆ ಆರ್ಥಿಕ ಹೊರೆಯಾಗಿದೆ ಎಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ವರದಿ ನೀಡಿದೆ. ಹಾಗೆಯೇ ಹಾಸ್ಟೆಲ್ಗಳ ಸುಧಾರಣೆಗೆ ಅನೇಕ ಶಿಫಾರಸುಗಳನ್ನೂ ಮಾಡಿದೆ.
ಇದನ್ನಾಧರಿಸಿ ಇಲಾಖೆ ಈಗ ಕಡಿಮೆ ವಿದ್ಯಾರ್ಥಿಗಳಿರುವ 2ರಿಂದ 3 ಹಾಸ್ಟೆಲ್ಗಳನ್ನು ಮುಚ್ಚಿ, ಪಕ್ಕದ ಹಾಸ್ಟೆಲ್ಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಬ್ಬರನ್ನೂ ವಿಲೀನ ಮಾಡಲು ಚಿಂತಿಸುತ್ತಿದೆ. ಇದರಿಂದ ಕಟ್ಟಡ ಮತ್ತು ಸಿಬ್ಬಂದಿ ನಿರ್ವಹಣೆ ವೆಚ್ಚ ಕಡಿಮೆಯಾಗಲಿದ್ದು, ಉಳಿತಾಯವಾಗುವ ಹಣದಲ್ಲಿ ಹಾಸ್ಟೆಲ್ ಸೌಲಭ್ಯ ಹೆಚ್ಚಿಸುವಂತೆ ಸಲಹೆ ನೀಡಿದೆ. ಅಲ್ಲದೆ ವಿಲೀನ ಪ್ರಕ್ರಿಯೆದಿಂದ ಖಾಲಿ ಉಳಿಯುವ ಕಟ್ಟಡಗಳನ್ನು ಅಂಗನವಾಡಿ, ಸರ್ಕಾರಿ ಕಚೇರಿ, ಸಮುದಾಯ ಭವನ ಅಥವಾ ಆರೋಗ್ಯ ಕೇಂದ್ರಗಳಿಗೆ ಬಳಸಿಕೊಳ್ಳುವ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಫಲಿತಾಂಶ ಇಲ್ಲ ಏಕೆ?: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 2194 ಹಾಸ್ಟೆಲ್ಗಳಿದ್ದು, 1,58,547 ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಒಟ್ಟಾರೆ ಹಾಸ್ಟೆಲ್ಗಳಲ್ಲಿ 942 ಹಾಸ್ಟೆಲ್ಗಳು ಬಾಡಿಗೆ ಕಟ್ಟಡಗಳಲ್ಲಿದ್ದು, ಇದರಿಂದಲೂ ಇಲಾಖೆ ಸಾಕಷ್ಟು ನಷ್ಟ ಅನುಭವಿಸುತ್ತಿದೆ.
ಇತ್ತೀಚಿಗೆ ಖಾಸಗಿ ಶಾಲೆಗಳು ಹಳ್ಳಿ ಹಳ್ಳಿಗಳನ್ನೂ ಹೊಕ್ಕಿದ್ದು, ಶಾಲಾ ವಾಹನ ಕಳುಹಿಸುತ್ತಿವೆ. ಇದರಿಂದಾಗಿ ಗ್ರಾಮೀಣ ಮಕ್ಕಳು ಖಾಸಗಿ ಶಾಲೆ ಸೇರುತ್ತಿದ್ದು, ಹಾಸ್ಟೆಲ್ಗೆ ಹೆಚ್ಚು ಬೇಡಿಕೆ ಇಲ್ಲ. ಅದರಲ್ಲೂ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡಿದ್ದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಬದಲು ಮನೆಯಿಂದಲೇ ಹೋಗುತ್ತಿದ್ದಾರೆ. ಇದರಿಂದಾಗಿ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗತ್ತಿದ್ದಾರೆ.
ಹಾಗಿದ್ದರೂ ಇಲಾಖೆ ಈ ಹಾಸ್ಟೆಲ್ಗಳಲ್ಲಿ ಮೇಲ್ವಿಚಾರಕ ಸೇರಿದಂತೆ 5ರಿಂದ 6 ಸಿಬ್ಬಂದಿ ನಿಯೋಜಿಸಿ ವೇತನ ನೀಡುತ್ತಿದೆ. ಇದರೊಂದಿಗೆ ದಿನಗೂಲಿ ನೌಕರರೂ ಇದ್ದಾರೆ.
ಜತೆಗೆ ವಿದ್ಯಾರ್ಥಿಗಳ ಪರಿಹಾರ ಬೋಧನೆಗಾಗಿ ಹಾಸ್ಟೆಲ್ಗೆ 3 ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಇವರ ವೇತನ ವರ್ಷಕ್ಕೆ 2.42ಕೋಟಿ ವೆಚ್ಚವಾಗುತ್ತಿದೆ. ಇಷ್ಟಾದರೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳು ಶೇ.50 ಫಲಿತಾಂಶ ಪಡೆಯುವುದೂ ಕಷ್ಟವಾಗಿದೆ. ಆದರೆ ಸರ್ಕಾರವೇ ನಡೆಸುವ ವಸತಿ ಶಾಲೆಗಳು ಶೇ.97.5 ಫಲಿತಾಂಶ ಗಳಿಸಿ ಗಮನ ಸೆಳೆಯುತ್ತಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.


ಎಲ್ಲ ಜಾತಿಗಳಿಗೂ ಒಂದೇ ಹಾಸ್ಟೆಲ್!
ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಡೆಸುತ್ತಿದೆ. ಇದರಿಂದ ಎಲ್ಲ ಹಾಸ್ಟೆಲ್ಗಳಿಗೂ ಪ್ರತ್ಯೇಕ ಸಿಬ್ಬಂದಿ, ಕಟ್ಟಡ, ಊಟದ ವ್ಯವಸ್ಥೆ ಮತ್ತು ಶೈಕ್ಷಣಿಕ ಸೌಲಭ್ಯ ನೀಡುತ್ತಿದೆ.  ಕಡಿಮೆ ವಿದ್ಯಾರ್ಥಿಗಳಿರುವ ಕಡೆ ಹಾಸ್ಟೆಲ್ ನಡೆಸುವುದು ಇಲಾಖೆಗೆ ದೊಡ್ಡ ನಷ್ಟವೇ ಆಗಿದೆ. ಆದ್ದರಿಂದ ಈಗ ಇರುವ ಹಾಸ್ಟೆಲ್ಗಳನ್ನೆಲ್ಲಾ ಒಂದೆಡೆ ವಿಲೀನಗೊಳಿಸಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ದೊಡ್ಡ ಹಾಸ್ಟೆಲ್ ನಿರ್ಮಿಸಲಾಗುತ್ತದೆ. ಅಂದರೆ, ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲ ಹಾಸ್ಟೆಲ್ಗಳೂ ಒಂದೇ ಸಂಕೀರ್ಣದಲ್ಲಿ ಇರುವಂತಾಗುತ್ತದೆ. ಇದರಿಂದ ಪ್ರತ್ಯೇಕ ಕಟ್ಟಡ, ಸಿಬ್ಬಂದಿ ವೆಚ್ಚ ಉಳಿತಾಯವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಸಾಮರಸ್ಯ ಹೆಚ್ಚುತ್ತದೆ. ಉಳಿತಾಯ ಯೋಜನೆಯಿಂದ ಸಿಗುವ ಅನುದಾನದಲ್ಲಿ ಹಾಸ್ಟೆಲ್ ಸೌಲಭ್ಯವನ್ನು ಇನ್ನೂ ಹೆಚ್ಚಿಸಲಾಗುತ್ತದೆ. ಇದು ಯಶಸ್ವಿಯಾದರೆ ಹಾಸ್ಟೆಲ್ಗಳಲ್ಲೇ ಪಾಠ, ಪ್ರವಚನ ನಡೆಯುವಂತೆ ಮಾಡಿ ಅವುಗಳನ್ನು ವಸತಿ ಶಾಲೆಗಳಾಗಿ ಪರಿವರ್ತಿಸಿ, ವಿದ್ಯಾರ್ಥಿಗೆ ಎಲ್ಲ ಸೌಲಭ್ಯವೂ ಒಂದೇ ಕಡೆ ಸಿಗುವ ಏಕೀಕೃತ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.


ಮೆಟ್ರಿಕ್ ಪೂರ್ವ 1347 ಹಾಸ್ಟೆಲ್ಗಳು

69707 ವಿದ್ಯಾರ್ಥಿಗಳು

ಮೆಟ್ರಿಕ್ ನಂತರ 847 ಹಾಸ್ಟೆಲ್ಗಳು
88,840 ವಿದ್ಯಾರ್ಥಿಗಳು

 ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.