ಅಧ್ಯಕ್ಷ, ಸದಸ್ಯರಿಲ್ಲದೆ ಅನಾಥವಾಗಿರುವ ಕೆಪಿಎಸ್ಸಿ

ಬೆಂಗಳೂರು: ಸದಾ ಒಂದಲ್ಲ ಒಂದು ಹಗರಣದಿಂದ ಸುದ್ದಿ ಮಾಡುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಈಗ ಅಧ್ಯಕ್ಷ ಹಾಗೂ ಸದಸ್ಯರಿಲ್ಲದೆ ಅಕ್ಷರ ಸಹ ಅನಾಥವಾಗುತ್ತಿದೆ. ಸದ್ಯ ಹಂಗಾಮಿ ಅಧ್ಯಕ್ಷರಾಗಿರುವ ಆಯೋಗದ ಹಿರಿಯ ಸದಸ್ಯ ಡಾ.ಬಿ.ಎಸ್. ಕೃಷ್ಣಪ್ರಸಾದ್ ಅವರು ಸಹ ಈ ತಿಂಗಳು 17ಕ್ಕೆ ನಿವೃತ್ತಿಯಾಗುತ್ತಿದ್ದು, ರಾಜ್ಯ ಸರ್ಕಾರದ ಪಾಲಿಗೆ ಕೆಪಿಎಸ್ಸಿ ಇದ್ದೂ ಇಲ್ಲದಂತಾಗಿದೆ. ವರ್ಷ ಕಳೆದರೂ ಅಧ್ಯಕ್ಷರನ್ನು ಕಾಣದೆ, ನೇಮಕಾತಿ ವ್ಯವಸ್ಥೆಗೆ ಗ್ರಹಣ ಹಿಡಿದಿದೆ.
ಸರ್ಕಾರದ ತೀವ್ರ ವಿರೋಧದ ನಡುವೆಯೂ ಕಳೆದ ವರ್ಷ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 362 ನಾನಾ ಹುದ್ದೆಗಳಿಗೆ ನಡೆಸಿದ ನೇಮಕಾತಿ ನಂತರ ಸರಿಯಾಗಿ ಯಾವುದೇ ಪ್ರಮುಖ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
ತೀವ್ರ ವಿವಾದಕ್ಕೆ ಕಾರಣವಾಗಿದ್ದ 2011ನೇ ಸಾಲಿನ ಗೆಜೆಟಡ್ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿ ಸಂಬಂಧ ಆಯೋಗ ಮತ್ತು ರಾಜ್ಯ ಸರ್ಕಾರದ ಮಧ್ಯೆ ತೀವ್ರ ಜಟಾಪಟಿ ನಡೆದಿದೆ. ಸಿಐಡಿ ವರದಿ ಆಧರಿಸಿ ಮರು ಸಂದರ್ಶನಕ್ಕೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಆಯೋಗ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ, ನಮ್ಮದು ಸ್ವಾಯತ್ತ ಸಂಸ್ಥೆ ಎಂದು ಹಟಕ್ಕೆ ಬಿದ್ದು ಆಯ್ಕೆ ಪಟ್ಟಿ ಪ್ರಕಟಿಸಿದೆ. ಆದರೆ ಆ ಪಟ್ಟಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಸರ್ಕಾರ ಇಲ್ಲ. ಹೀಗಾಗಿ ಆಯೋಗ ಮತ್ತು ಸರ್ಕಾರದ ನಡುವಿನ ಹಗ್ಗ ಜಗ್ಗಾಟದಿಂದ ನೂರಾರು ಪ್ರತಿಭಾವಂತ ಅಭ್ಯರ್ಥಿಗಳು ಅತಂತ್ರವಾಗಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರ ಅನುಪಸ್ಥಿತಿಯಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಆಯೋಗಕ್ಕೆ ಅಧ್ಯಕ್ಷರ ಹಾಗೂ ಸದಸ್ಯರ ನೇಮಕದಲ್ಲಿ ಅದ್ಯಾಕ್ಕಿಷ್ಟು ತಾತ್ಸಾರವೋ ಗೊತ್ತಿಲ್ಲ. ಸಕಾಲಕ್ಕೆ ಅಧ್ಯಕ್ಷರನ್ನು ನೇಮಿಸುವಲ್ಲಿ ತೋರಿದ ನಿರ್ಲಕ್ಷದಿಂದ ಆಯೋಗದ ವ್ಯವಸ್ಥೆ ತೀರಾ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಈಗಾಗಲೇ ಹಗರಣದಲ್ಲಿ ಮುಳಿಗೇಳುತ್ತಿರುವ ಕೆಪಿಎಸ್ಸಿ ಇನ್ನೂ ಅದೋಗತಿಗೆ ತಲುಪುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಗೋನಾಲ್ ಭೀಮಪ್ಪ ಅವರು ಕಳೆದ ವರ್ಷ ಮೇ 10ರಂದು ನಿವೃತ್ತಿಯಾಗಿದ್ದು, ಅವರೊಂದಿಗೆ ಇಬ್ಬರು ಸದಸ್ಯರೂ ಸಹ ನಿವೃತ್ತಿಯಾಗಿದ್ದಾರೆ. ಒಟ್ಟು ಒಂಬತ್ತು ಸದಸ್ಯರನ್ನು ಹೊಂದಿರುವ ಕೆಪಿಎಸ್ಸಿಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವುದು ಕೇವಲ ಏಳು ಸದಸ್ಯರು ಮಾತ್ರ. ಕೃಷ್ಣಪ್ರಸಾದ್ ಅವರ ನಿವೃತ್ತಿ ನಂತರ ಉಳಿಯುವುದು ಆರು ಸದಸ್ಯರು. ಈ ಪೈಕಿ ಮತ್ತೊಬ್ಬ ಸದಸ್ಯೆ ಮಂಗಳಾ ಶ್ರೀಧರ್ ಅವರನ್ನು 2011ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಅಮಾನತುಗೊಳಿಸಲಾಗಿದೆ. ಹೀಗಾಗಿ ಆಯೋಗದಲ್ಲಿ ಅಧಿಕೃತವಾಗಿ ಉಳಿಯುವುದು ಐವರು ಮಾತ್ರ.
ಈ ಮಧ್ಯೆ ಖಾಲಿ ಇರುವ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳಿಗೆ ನೇಮಕ ಮಾಡದ ರಾಜ್ಯ ಸರ್ಕಾರ ಈಗ ಆಯೋಗದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಕಳೆದ ತಿಂಗಳು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ಸದಸ್ಯರ ಸಂಖ್ಯೆಯನ್ನು 9ರಿಂದ 13ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ಈ ತಿಂಗಳು ನಿವೃತ್ತಿಯಾಗುತ್ತಿರುವ ಸದಸ್ಯರು ಸೇರಿದಂತೆ 7 ಸದಸ್ಯರನ್ನು ಮತ್ತು ಅಧ್ಯಕ್ಷರನ್ನು ನೇಮಕ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಪ್ರಸ್ತುತ ಆಯೋಗದ ಹಿರಿಯ ಸದಸ್ಯರಾಗಿರುವ ಡಾ.ಬಿ.ಎಸ್.ಕೃಷ್ಣಪ್ರಸಾದ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಸ್.ಆರ್.ರಂಗಮೂರ್ತಿ, ಡಾ.ಎಂ.ಎಂ.ಮಹಾದೇವ್, ಡಾ.ಎಚ್.ವಿ. ಪಾರ್ಶ್ವನಾಥ್, ಎಸ್.ದಯಾಶಂಕರ್, ಡಾ.ಮಂಗಳಾ ಶ್ರೀಧರ್ ಹಾಗೂ ಡಾ.ಎಚ್.ಡಿ.ಪಾಟೀಲ್ ಅವರು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
-ಲಿಂಗರಾಜ್ ಬಡಿಗೇರ
kannadaprabha.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


