ಈರುಳ್ಳಿ ಕಾರಕ್ಕೆ ಕೇಂದ್ರದ ಕಡಿವಾಣ

ನವದೆಹಲಿ: 1998ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈರುಳ್ಳಿ ನೀಡಿದ ಆಘಾತವನ್ನು ಬಿಜೆಪಿ ಮರೆತಿಲ್ಲ. ಹೀಗಾಗಿ ಏರುತ್ತಿರುವ ಧಾರಣೆಯನ್ನು ಆರಂಭದಲ್ಲಿಯೇ ನಿಯಂತ್ರಿಸಲು ಕಠಿಣ ಕ್ರಮಗಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈರುಳ್ಳಿ ಮತ್ತು ಆಲೂಗಡ್ಡೆ ದಾಸ್ತಾನಿಗೆ ಮಿತಿ ಹೇರಲು ಹಾಗೂ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳನ್ನು ಕುರಿತ ಸಂಪುಟ ಸಮಿತಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಇವುಗಳ ಲಭ್ಯತೆ ಹೆಚ್ಚಿಸಿ ಏರುತ್ತಿರುವ ಬೆಲೆಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶ.
ಈರುಳ್ಳಿ, ಆಲೂಗಡ್ಡೆಗಳನ್ನು ಯಾವುದೇ ವ್ಯಕ್ತಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡುವಂತಿಲ್ಲ.
ಮಿತಿ ನಿಗದಿಪಡಿಸುವುದು ರಾಜ್ಯ ಸರ್ಕಾರಗಳ ಹೊಣೆ. ನಿರ್ಬಂಧ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಇನ್ನು ಇವನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ಅಗತ್ಯ ವಸ್ತುಗಳ ಕಾಯ್ದೆ 1955ಕ್ಕೆ ತಿದ್ದುಪಡಿ ತರುವುದು ಅಗತ್ಯವಾಗಿದೆ.
ಎನ್ಡಿಎ ಈ ಹಿಂದೆ ಅಧಿಕಾರದಲ್ಲಿದ್ದಾಗ 1999ರಿಂದ 2004ರ ಅವಧಿಯಲ್ಲಿ ಈರುಳ್ಳಿ, ಆಲೂಗಡ್ಡೆಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿದ್ದವು.
ಎಂಇಪಿ ಏರಿಕೆ: ದೇಶಿ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸುವ ಮತ್ತೊಂದು ಕ್ರಮವಾಗಿ ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಟನ್ಗೆ 200 ಅಮೆರಿಕನ್ ಡಾಲರ್ನಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಯುಪಿಎ ಸರ್ಕಾರ ಮಾರ್ಚ್ನಲ್ಲಿ ತೆಗೆದುಹಾಕಿದ್ದ ಎಂಇಪಿಯನ್ನು ಕಳೆದ ತಿಂಗಳಷ್ಟೇ ಮತ್ತೆ ಜಾರಿಗೆ ತಂದಿದ್ದ ಎನ್ಡಿಎ ಸರ್ಕಾರ, ಪ್ರತಿ ಟನ್ಗೆ 300 ಅಮೆರಿಕನ್ ಡಾಲರ್ ನಿಗದಿಪಡಿಸಿತ್ತು. ಆದರೆ ದೇಶೀಯ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಮುಖಿಯಾಗಿರುವುದರಿಂದ ಎಂಇಪಿಯನ್ನು ಟನ್ಗೆ 500 ಅಮೆರಿಕನ್ ಡಾಲರ್ ನಿಗದಿಗೊಳಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.
'ಎಂಇಪಿ ಜಾರಿಯಲ್ಲಿದ್ದರೂ ದೇಶಿ ಮಾರುಕಟ್ಟೆ ಮೇಲೆ ಅದು ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದನ್ನು ಅಂತರ್ ಸಚಿವಾಲಯ ಸಮಿತಿ ಗಮನಿಸಿದೆ. ಅಲ್ಲದೆ ಮುಂಗಾರು ವಿಳಂಬವಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಬಹುದು ಎಂಬ ಆತಂಕವೂ ಮನೆ ಮಾಡಿದ್ದು, ಬೆಲೆ ಏರಿಕೆಗೆ ಅದೂ ಪ್ರಮುಖ ಕಾರಣವಾಗಿದೆ. ಹೀಗಾಗಿ ರಫ್ತಿಗೆ ಕಡಿವಾಣ ಹಾಕಿ ದೇಶೀಯವಾಗಿ ಪೂರೈಕೆ ಹೆಚ್ಚಿಸಲು ಎಂಇಪಿ ಹೆಚ್ಚಳ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಷ್ಯದ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಯಾದ ಮಹಾರಾಷ್ಟ್ರದ ಲಾಸಲ್ಗಾಂವ್ನಲ್ಲಿಯೇ ಜೂನ್ನಲ್ಲಿ ಈರುಳ್ಳಿ ಧಾರಣೆ ಕೆ.ಜಿಗೆ 18.50 ದಾಟಿತ್ತು. ದೇಶದ ಹಲವೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ರು. 30 ದಾಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


