539 ಶಾಲೆ ಮುಚ್ಚಿಸಿದ ಮಾತೃಭಾಷಾ ಶಿಕ್ಷಣ ತೀರ್ಪು

ಕನ್ನಡಪ್ರಭ ವಾರ್ತೆ ಗದಗ ಜು.2
ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ರಾಜ್ಯಾದ್ಯಂತ 539 ಸರ್ಕಾರಿ ಶಾಲೆಗಳು ಬಾಗಿಲು ಹಾಕಲಿವೆ.
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಲ್ಲ ಎನ್ನುವ ತೀರ್ಪು ನೀಡಿದ ಮೇಲೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿದೆ. ಮಕ್ಕಳ ಕೊರತೆ ಹಿನ್ನೆಲೆಯಲ್ಲಿ ಶಾಲೆಗಳ ವಿಲೀನಕ್ಕೂ ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮಕ್ಕಳ ಕೊರತೆ ಎದುರಿಸುತ್ತಿರುವ 539 ಶಾಲೆಗಳ ವಿಲೀನಕ್ಕೆ ಸರ್ಕಾರ ಅಸ್ತು ಎಂದಿದ್ದು, ಸದ್ಯದಲ್ಲೇ ವಿಲೀನ ಪ್ರಕ್ರಿಯೆ ನಡೆಯಲಿದೆ.
ಒಂದು ತಿಂಗಳ ಬಳಿಕ ಸ್ಪಷ್ಟ: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆದಿದೆ. ಶಿಕ್ಷಕ ಸಮುದಾಯ ಶಾಲೆ ಬಿಟ್ಟು ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ನಡೆಸಿದ ಪ್ರಯತ್ನ ವಿಶೇಷ ಫಲ ನೀಡಿಲ್ಲ. ಪಾಲಕರೇ ತಮ್ಮ ಮಕ್ಕಳನ್ನು ಸರ್ಕಾರಿ (ಕನ್ನಡ) ಶಾಲೆಗಳಿಂದ ಬಿಡಿಸಿ, ಖಾಸಗಿ (ಇಂಗ್ಲಿಷ್) ಶಾಲೆಗಳಿಗೆ ಸೇರಿಸುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣ ಎನ್ನುವುದು ಒಂದು ತಿಂಗಳ ಅವಧಿಯಲ್ಲಿ ಸ್ಪಷ್ಟವಾಗಿದೆ.
ನಗರಗಳಲ್ಲಿ ಹೆಚ್ಚು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದು ನಗರ ಪ್ರದೇಶಗಳಲ್ಲೇ ಜಾಸ್ತಿ. ಸುಪ್ರೀಂ ತೀರ್ಪು ಬಂದ ಮೇಲೆ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ 1.65 ಲಕ್ಷ ಮಕ್ಕಳು ಸರ್ಕಾರಿ ಶಾಲೆ ಬಿಟ್ಟಿದ್ದಾರೆ. ಅವರ ಪೈಕಿ 98 ಸಾವಿರ ಮಕ್ಕಳು ನಗರ ಪ್ರದೇಶದವರು ಎನ್ನುವುದು ಗಮನಿಸಬೇಕಾದ ಅಂಶ. ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಯಾವುದೇ ತೊಂದರೆ ಇಲ್ಲ ಎಂದು ಕೋರ್ಟ್ ಹೇಳಿದೆ. ಅದಕ್ಕಾಗಿ ನಮ್ಮ ಮಕ್ಕಳನ್ನು ಖಾಸಗಿ (ಇಂಗ್ಲಿಷ್) ಶಾಲೆಗೆ ಕಳಿಸುತ್ತೇವೆ ಎಂದು ಪಾಲಕರು ಹೇಳುತ್ತಾರೆ ಎಂದು ಶಿಕ್ಷಕರೊಬ್ಬರು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ಬಡವರಿಗೆ ತೊಂದರೆ: ಸರ್ಕಾರದ ನಿಯಮಾನುಸಾರ ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಯನ್ನು ಪಕ್ಕದ ಶಾಲೆಯಲ್ಲಿ ವಿಲೀನಗೊಳಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಮಾತ್ರ ಸರ್ಕಾರ ವಿಲೀನಗೊಳಿಸಿದ ಶಾಲೆಗೇ ಹೋಗಿ ಶಿಕ್ಷಣ ಪಡೆಯುವ ಅನಿವಾರ್ಯತೆ ಎದುರಾಗಿದೆ.
ಸರ್ಕಾರದ ಮೌನವೇಕೆ?
ಭಾಷಾ ಮಾಧ್ಯಮದ ಕುರಿತು ನ್ಯಾಯಾಲಯದ ತೀರ್ಪು ಬಂದ ಮೇಲೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ನೂರಾರು ಶಾಲೆಗಳು ಮಕ್ಕಳ ಕೊರತೆ ಎದುರಿಸುತ್ತಿವೆ. ಇಷ್ಟಾದರೂ ರಾಜ್ಯ ಸರ್ಕಾರವೇಕೆ ಮೌನ ವಹಿಸಿದೆ? ಸರ್ಕಾರ ಪರೋಕ್ಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆಯೇ ಎಂಬ ಜನರ ಪ್ರಶ್ನೆಗೆ ಶಿಕ್ಷಣ ಸಚಿವರೇ ಉತ್ತರಿಸಬೇಕು.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


