ಪ್ರಧಾನ ಸುದ್ದಿ

ದೂರ ಶಿಕ್ಷಣ ಹೆಸರಲ್ಲಿ ಲೂಟಿ!

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.3
ನೀಡುವುದು 'ದೂರ' ಶಿಕ್ಷಣ, ಆದರೆ ಶುಲ್ಕ ಮಾತ್ರ ಕಾಯಂ ಕೋರ್ಸ್ಗಿಂತಲೂ ಹೆಚ್ಚು!
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರಗಳ ಜಂಟಿ ಗೋಲ್ಮಾಲ್ನ ಪರಿಣಾಮವಿದು. ರಾಜ್ಯದ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶ ಶುಲ್ಕದ ಬಗ್ಗೆ ಹಗಲಿರುಳು ವಾದ-ವಿವಾದಗಳು ನಡೆಯುತ್ತಿವೆ. ಆದರೆ ದೂರ ಶಿಕ್ಷಣ ನೀಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಟೋಪಿ ಹಾಕುತ್ತಿರುವ ಕರ್ನಾಟಕ ಮುಕ್ತ ವಿವಿ, ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳಿಗೆ 28 ಸಾವಿರದಿಂದ 45 ಸಾವಿರದವರೆಗೆ ವಸೂಲಿ ಮಾಡುತ್ತಿದೆ.
ವಿವಿಯ ಅಧಿಕೃತ ಕೋರ್ಸ್ಗಳ ಪಟ್ಟಿಯಲ್ಲಿ ವೃತ್ತಿಶಿಕ್ಷಣಕ್ಕೆ ಜಾಗವಿರದಿದ್ದರೂ ಅಧ್ಯಯನ ಕೇಂದ್ರಗಳಿಗೆ ಮಾತ್ರ ವಿಶೇಷವಾಗಿ ವಿವಿಯ ಅಧಿಕಾರಿಗಳು ಕರುಣೆ ತೋರಿಸಿದ್ದಾರೆ. ಯಾವುದೇ ಮೂಲಭೂತ ಸೌಕರ್ಯವಿಲ್ಲದ ಇಂತಹ ಅಧ್ಯಯನ ಕೇಂದ್ರಗಳಿಗೆ ಹಣ ಲೂಟಿ ಮಾಡಲು ಮುಕ್ತ ವಿವಿ ಆಡಳಿತ ಮಂಡಳಿಯೇ ಹಸಿರು ನಿಶಾನೆ ತೋರಿದೆ. ಇವೆಲ್ಲ ಅಕ್ರಮದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಎಂದಿನಂತೆ ಜಾಣಕುರುಡು ಪ್ರದರ್ಶಿಸುತ್ತಿದೆ.
ಎಐಸಿಟಿಇ ಅನುಮತಿಯಿಲ್ಲದೇ ಕೇವಲ ಅಕ್ರಮಗಳ ಗೂಡಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪರವಾನಗಿ ಪಡೆದು ನಿಯಮ ಬಾಹಿರವಾಗಿ ಈ ಕೋರ್ಸ್ ನಡೆಸಲಾಗುತ್ತಿದೆ. ಇದನ್ನು ಓದುವ ವಿದ್ಯಾರ್ಥಿಗಳಿಗೆ ಅಂತಿಮವಾಗಿ ದುಡ್ಡು ಖಾಲಿಯಾಗುವುದು ಹೊರತುಪಡಿಸಿ, ಮತ್ಯಾವ ಲಾಭವಾಗುವುದಿಲ್ಲ. ಅಧ್ಯಯನ ಕೇಂದ್ರ ಹಾಗೂ ವಿವಿಯ ಭ್ರಷ್ಟ ಅಧಿಕಾರಿಗಳು ಹೊಟ್ಟೆ ತುಂಬಿಸಿಕೊಂಡು ಖುಷಿಯಲ್ಲಿದ್ದಾರೆ.
ಎರಡು ವಾರಗಳ ದೂರ ಶಿಕ್ಷಣ ಲೂಟಿ: ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪದವಿ ಕೋರ್ಸ್ಗಳ ವಾರ್ಷಿಕ ಶುಲ್ಕ 15 ಸಾವಿರ. ಇದಕ್ಕೆ ವಿವಿ ಶುಲ್ಕ 3090 ಸೇರುತ್ತದೆ. ಇನ್ನು ಎಂಟೆಕ್ ಕೋರ್ಸ್ಗೆ 24,390 ಆಗುತ್ತದೆ. ಆದರೆ ಕರ್ನಾಟಕ ಮುಕ್ತ ವಿವಿಯ ಸುತ್ತೋಲೆ ಪ್ರಕಾರ ಅಧ್ಯಯನ ಕೇಂದ್ರಗಳಲ್ಲಿ ವಾರ್ಷಿಕವಾಗಿ ಪ್ರತಿಯೊಬ್ಬ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಯಿಂದ ಲೂಟಿ ಮಾಡುವ ಪ್ರವೇಶ ಶುಲ್ಕ ಬರೋಬ್ಬರಿ 28,400. ಖಾಸಗಿ ಕಾಲೇಜುಗಳ ಶುಲ್ಕಕ್ಕಿಂತ ಕೇವಲ 8 ಸಾವಿರ ಕಡಿಮೆ. ಇನ್ನು ಸ್ನಾತಕೋತ್ತರ ಕೋರ್ಸ್ಗಳಿಗೆ 45,400 ಪಡೆಯಲಾಗುತ್ತದೆ.
ಈ ಅಧ್ಯಯನ ಕೇಂದ್ರಗಳು ತಾಂತ್ರಿಕ ಕೋರ್ಸ್ಗೆ ಸೂಕ್ತ ಪ್ರಯೋಗಾಲಯ, ಪ್ರಾಧ್ಯಾಪಕರನ್ನು ಹೊಂದಿಲ್ಲ, ಎಐಸಿಟಿಇಯಿಂದ ಅನುಮತಿ ಪಡೆದಿಲ್ಲ. ಆದಾಗ್ಯೂ ಇವೆಲ್ಲ ಮಾನ್ಯತೆ ಹಾಗೂ ಸೌಕರ್ಯ ಹೊಂದಿರುವ ಕಾಯಂ ಕಾಲೇಜುಗಳಿಗಿಂತ ಹೆಚ್ಚಿನ ಶುಲ್ಕ ಮಾತ್ರ ಪಡೆಯುತ್ತಾರೆ. ಈ ಶುಲ್ಕ ನಿಗದಿಪಡಿಸಿದ್ದು ಅಧ್ಯಯನ ಕೇಂದ್ರಗಳಲ್ಲ, ವಿವಿಯ ಭ್ರಷ್ಟ ಅಧಿಕಾರಿಗಳೇ ನಿಗದಿ ಮಾಡಿದ್ದಾರೆ.


ಮಾನ್ಯತೆ ಬಗ್ಗೆ ಮೌನ!
ಕೆಎಸ್ಒಯು ಅನುಮತಿಯಿಂದ ನಡೆಯುತ್ತಿರುವ ಸ್ಕೋಪ್, ಭರತ್ ಸ್ನಾತಕೋತ್ತರ ಕಾಲೇಜು ಹಾಗೂ ದೆಹಲಿಯ ಅಧ್ಯಯನ ಕೇಂದ್ರವನ್ನು ಸಂಪರ್ಕಿಸಿ ಪ್ರವೇಶದ ಬಗ್ಗೆ ವಿಚಾರಿಸಿದಾಗ ಶುಲ್ಕ ಹಾಗೂ ಪ್ರವೇಶ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಆದರೆ ಎಐಸಿಟಿಇ ಅಥವಾ ಯಾವುದಾದರೂ ವಿವಿಯ ಮಾನ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ ಉತ್ತರ ನೀಡಲಿಲ್ಲ. ಆದರೆ ಅವರಿಗೆ ನೀಡಿರುವ ಒಪ್ಪಿಗೆ ಪತ್ರದ ಪ್ರಕಾರ ಮಾನ್ಯತೆ ಇರುವುದು ಕೇವಲ ಅಧ್ಯಯನ ಕೇಂದ್ರಕ್ಕೆ ಹೊರತು ತಾಂತ್ರಿಕ ಕೋರ್ಸ್ ನಡೆಸಲಲ್ಲ. ಇದಕ್ಕೆ ಎಐಸಿಟಿಇ ಅನುಮತಿ ಕಡ್ಡಾಯ. ಇದೇ ರೀತಿ ಎಂಸಿಎ, ಎಂಬಿಎ ಕೋರ್ಸ್ಗಳನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಇದರಿಂದ ಇಲ್ಲಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳಿಗೆ ಎಲ್ಲಿಯೂ ಉದ್ಯೋಗ ದೊರೆಯುವುದಿಲ್ಲ.



ಮುಕ್ತ ವಿವಿಯ ದ್ವಂದ್ವ
ಕರ್ನಾಟಕ ಮುಕ್ತ ವಿವಿಯು
ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಕೋರ್ಸ್ಗಳಲ್ಲಿ ಎಲ್ಲಿಯೂ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಅಧ್ಯಯನ ಕೇಂದ್ರಗಳಿಗೆ ವೈಯಕ್ತಿಕವಾಗಿ ನೀಡಿದ ಸುತ್ತೋಲೆಯಲ್ಲಿ ಇವೆಲ್ಲ ಕೋರ್ಸ್ಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಅದರಲ್ಲಿ ನಿರ್ದಿಷ್ಟ ಶುಲ್ಕ ಕೂಡ ಪ್ರಕಟಿಸಲಾಗಿದೆ. ಇಂತಹ 47ಕ್ಕೂ ಅಧಿಕ ಅಧ್ಯಯನ ಕೇಂದ್ರಗಳು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಮುಕ್ತ ವಿವಿ ಹೆಸರಲ್ಲಿ  ನಡೆಯುತ್ತಿವೆ.

ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.