ಕಣ್ಣುಮಚ್ಚಿ ಹಾಲು ಕುಡಿದ ಕುಮಾರಸ್ವಾಮಿ

ಮೇಲ್ಮನೆ ಸದಸ್ಯತ್ವಕ್ಕೆ ಹಣದ ಬೇಡಿಕೆ, ರಾಜಕೀಯ, ಸಾಹಿತ್ಯ ವಲಯದ ವ್ಯಾಪಕ ಖಂಡನೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.6
ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ನೀಡಬೇಕಾಗುತ್ತದೆ ಎಂಬ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ, ಸಾಹಿತ್ಯ ಸೇರಿದಂತೆ ಸಾರ್ವಜನಿಕ ವಲಯ ಅತ್ಯುಘ್ರವಾಗಿ ಈ ಬೆಳವಣಿಗೆಯನ್ನು ಖಂಡಿಸಿದೆ.
ಹಿರಿಯರ ಮನೆ ಎಂದು ಕರೆಸಿಕೊಳ್ಳುವ ವಿಧಾನಪರಿಷತ್ ಅನ್ನು ಇಂದು ಉಳ್ಳವರ ಸ್ವತ್ತೆಂಬಂತೆ ಕುಮಾರಸ್ವಾಮಿ ಬಿಂಬಿಸಿರುವುದಕ್ಕೆ ಹಿರಿಯ ರಾಜಕಾರಣಿಗಳಿಂದಲೂ ವಿರೋಧ ವ್ಯಕ್ತವಾಗಿದ್ದ, ಸಾಮಾಜಿಕ ವಲಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಇಂತಹ ವ್ಯವಸ್ಥೆಗೆ ಇಳಿದಿರುವುದು ನಮ್ಮ ದುಸ್ಥಿತಿಯ ಕನ್ನಡಿ ಎಂದೇ ಸಾಹಿತ್ಯ ಕ್ಷೇತ್ರದ ಹಿರಿಯರು ಜರಿದಿದ್ದಾರೆ. ತನಿಖೆಗೆ ಒತ್ತಾಯಿಸಿದ್ದಾರೆ.
ಮೇಲ್ಮನೆ ಸದಸ್ಯನಾಗಬೇಕಾದರೆ ಅದಕ್ಕೊಂದು ಅರ್ಹತೆ ಇತ್ತು. ಅನುಭವ, ಬುದ್ಧಿಮತ್ತೆ, ಚಾಕಚಕ್ಯತೆ, ಪರಿಣತಿ ಎಲ್ಲವೂ ಅಗತ್ಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ದುಡ್ಡೊಂದಿದ್ದರೆ ಆ ಸ್ಥಾನಗಳಿಸಿಕೊಳ್ಳಬಹುದಾಗಿದೆ. ಯಾವ 'ಎಸ್ಟೇಟ್'ನಲ್ಲಿದ್ದರೂ ಪರವಾಗಿಲ್ಲ, ಹಣದ ಸುರಿಮಳೆ ಮಾಡುವಂತಿದ್ದರೆ ಮೇಲ್ಮನೆ ಸ್ಥಾನದಲ್ಲಿ ಕುಳಿತುಕೊಳ್ಳಬಹುದು. ಅದಕ್ಕೇ ನಾಣಯ್ಯರಂಥ ಹಿರಿಯರು, ಬುದ್ಧಿವಂತರಿಗೆ ಮೇಲ್ಮನೆ ಇಲ್ಲದಂತಾಗಿದೆ. ಕೋಟಿ ಕೋಟಿ ಹಣದ ಮುಂದೆ ಬುದ್ಧಿವಂತಿಕೆ, ಹಿರಿತನ ನಾಚಿ, ನಿಬ್ಬೆರಗಾಗಿದೆ ಎಂಬ ಟೀಕೆ ವ್ಯಾಪಕವಾಗಿದೆ.
ಇದೆಲ್ಲ ಆರಂಭವಾಗಿದ್ದೇ 2006ರಿಂದ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಯಾವುದನ್ನಾದರೂ ತೊರೆಯುತ್ತಾರೆ. ಯಾವ ನೈತಿಕತೆಯೂ ಇರುವುದಿಲ್ಲ. ಅಧಿಕಾರವೊಂದೇ ಆದ್ಯತೆ. ನಂತರ ಅದರಿಂದ ಹಣ ಮಾಡುವುದೇ ಮೂಲೋದ್ದೇಶ. ಕೋಟಿ ಕೋಟಿ ಹಣ ಇದ್ದರೆ ಮೇಲ್ಮನೆ ಸ್ಥಾನ ಹತ್ತಿರವಾಗುತ್ತದೆ. ಮುಖಂಡರನ್ನು ಹಿಡಿದರೆ ಶಾಸಕರನ್ನು ಅವರೇ ಮೈಂಟೇನ್ ಮಾಡುತ್ತಾರೆ. ಅವರಿಗೆ ಎಲ್ಲ ಕೊಟ್ಟರೆ ಆಯಿತು ಎಂಬಂದಿತ್ತು. ಅದು ತೆರೆಮರೆಯಲ್ಲಿ ಇಷ್ಟು ದಿನ ನಡೆಯುತ್ತಿತ್ತು. ಆದರೆ ಕುಮಾರಸ್ವಾಮಿ ಅವರಿಂದ ಹಿಂದೆ ನಡೆಯುತ್ತಿದ್ದ ಎಲ್ಲ 'ಡೀಲ್'ಗಳೂ ಸತ್ಯ ಎಂದು ಸಾಬೀತಾದಂತಾಯಿತು ಎಂಬುದು ಸಾರ್ವಜನಿಕ ವಲಯದ ಮಾತು.
ಕುಮಾರಸ್ವಾಮಿ ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಿದ್ದಾರೆ. ಬೆಕ್ಕು ಕಣ್ಣುಮಚ್ಚಿಕೊಂಡು ಹಾಲು ಕುಡಿದು, ತನ್ನ ಕೆಲಸ ಯಾರಿಗೂ ತಿಳಿಯುವುದಿಲ್ಲ ಎಂದುಕೊಳ್ಳುತ್ತದೆ. ಆ ರೀತಿ ಕುಮಾರಸ್ವಾಮಿ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅದು ಯಾರಿಗೂ ಗೊತ್ತಾಗಿಲ್ಲ ಎಂದು ಭಾವಿಸಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡುತ್ತಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂಬುದಕ್ಕೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿಕೆ ಸಾಕ್ಷಿಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೆಡಿಎಸ್ನಲ್ಲಿರುವ ವಾತಾವರಣ ಕಾಂಗ್ರೆಸ್ನಲ್ಲಿ ಇಲ್ಲ. ಈ ಹೇಳಿಕೆಯಿಂದ ಜೆಡಿಎಸ್ ಪಕ್ಷದೊಳಗಿನ ವಾಸ್ತವಾಂಶ ಬಯಲಾಗಿದೆ. ಆ ಪಕ್ಷದ ವಾಸ್ತವ ಚಿತ್ರಣ ತೆರೆದಿಟ್ಟಿದೆ.
-ಡಿ.ಕೆ.ಶಿವಕುಮಾರ್, ಇಂಧನ ಸಚಿವ
ಶಾಸಕರನ್ನು ಖರೀದಿಸುವ ಜೆಡಿಎಸ್ನ 'ಅನಿವಾರ್ಯ' ವಾಗಿದ್ದರೆ ತನಿಖೆಯಾಗಲಿ. ತಪ್ಪಿತಸ್ಥರಾಗಿ ಕಟಕಟೆಯಲ್ಲಿ ನಿಂತಿರುವವರು ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಸಾರಾಸಗಟಾಗಿ ಹೇಳಿಕೆ ನೀಡುವುದು ತಪ್ಪು. ಶಾಸಕರನ್ನು ಖರೀದಿಸುವ ಅನಿವಾರ್ಯ ಜೆಡಿಎಸ್ಗೆ ಇರಬಹುದು.
- ಅನಂತಕುಮಾರ್, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


