ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ; ಕ್ರಮಕ್ಕೆ ಆಗ್ರಹ
ಚಿತ್ರದುರ್ಗ: ಮನೆ ಜಾಗದ ವಿವಾದಕ್ಕೆ ಸಂಬಂಧಿಸಿದ ಜಗಳದ ನೆಪದಲ್ಲಿ ಮನೆಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಹಲ್ಲೆಕೋರರನ್ನು ಕೂಡಲೇ ಬಂಧಿಸಿ, ನೊಂದ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದುರ್ಗ ತಾಲೂಕಿನ ಮೆಂಗಸಂದ್ರ ಗ್ರಾಮದಲ್ಲಿ ರಂಗಪ್ಪ ಎಂಬುವರ ಮಕ್ಕಳಾದ ರೇಖಾ, ಸೌಜನ್ಯ ಇವರ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೇ ಅವರು ಈಗ ವಾಸಿಸುತ್ತಿರುವ ಮನೆಯ ಜಾಗ ನಮಗೆ ಸೇರಿದ್ದು, ಅದನ್ನು ನಮಗೆ ಬಿಟ್ಟು ಕೊಡಿ ಎಂದು ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಹೆಣ್ಣುಮಕ್ಕಳಿರುವ ಮನೆಯ ಬಾಗಿಲನ್ನು ಕಲ್ಲಿನಿಂದ ಒಡೆದು ಒಳಗೆ ನುಗ್ಗಿ ಇಬ್ಬರು ಯುವತಿಯರು ಮತ್ತು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದು ಖಂಡನೀಯ ಎಂದರು. ಗ್ರಾಮದವರಾದ ನಿಜಲಿಂಗಪ್ಪ, ದಯಾನಂದ, ರವಿ, ದೇವೇಂದ್ರಪ್ಪ, ರಾಘವೇಂದ್ರ, ಲೋಹಿತ, ದೇವರಾಜ್, ಮಹಂತೇಶ್, ಗಿಡ್ಡರಂಗಪ್ಪ, ಭೈರಪ್ಪ ಇವರು ರಂಗಪ್ಪ ಅವರ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಹಲ್ಲೆಕೋರರನ್ನು ಬಂಧಿಸಿಲ್ಲ. ಘಟನೆಯಿಂದ ಭಯಭೀತರಾಗಿರುವ ಈ ಮಹಿಳೆಯರು ಗ್ರಾಮವನ್ನು ತೊರೆದು ಗುಳೆ ಹೋಗಲು ಸಿದ್ಧರಾಗಿದ್ದಾರೆ.
ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಇವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ನೊಂದಿರುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸೇಬೇಕೆಂದು ಆಗ್ರಹಿಸಿದರು.
ರಂಗಪ್ಪ ಅವರ ಮಡದಿ, ಮಕ್ಕಳಾದ ಇಂದ್ರಮ್ಮ, ಸುಮಿತ್ರಾ, ಸೌಜನ್ಯಾ, ರೇಖಾ ಇವರು ಮೇಲೆ ಹಲ್ಲೆ ನಡೆಸಿರುವುದಲ್ಲದೇ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ಅವರನ್ನು ಗ್ರಾಮದ ಇತರರು ಮಾತನಾಡಿಸಬಾರದೆಂದು ಹಲ್ಲೆಕೋರರ ಗುಂಪಿನವರು ಗ್ರಾಮದ ಜನರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಹಲ್ಲೆಯ ಸಮಯದಲ್ಲಿ ಯುವತಿಯರನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು. ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಈ ಕುರಿತು ಏಕೆ ಮೌನ ವಹಿಸಿದ್ದಾರೆ. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಈ ಕುರಿತು ಗಮನ ನೀಡುತ್ತಿಲ್ಲ ಎಂದು ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಂಗಪ್ಪ, ಮಕ್ಕಳಾದ ರೇಖಾ, ಸೌಜನ್ಯ ಹಲ್ಲೆಕೋರರ ಉಪಟಳಕ್ಕೆ ಹೆದರಿರುವ ನಾವು ಊರು ಬಿಟ್ಟು ಬಂದಿದ್ದೇವೆ. ದುಷ್ಕರ್ಮಿಗಳು ಮುರಿದ ಮನೆಯ ಬಾಗಿಲು ರಿಪೇರಿ ಮಾಡಿಸಲೂ ಅವಕಾಶ ನೀಡುತ್ತಿಲ್ಲ. ಕೈಗೆ ಸಿಕ್ಕಿದರೆ ಪೆಟ್ರೋಲ್ ಹಾಕಿ ಸುಟ್ಟು ಹಾಕುವುದಾಗಿ ಬೆದರಿಸುತ್ತಿದ್ದಾರೆ. ಪೊಲೀಸರು ನಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅಳಲು ತೋಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

