ಪ್ರಧಾನ ಸುದ್ದಿ

ವರ್ಷೋಲ್ಲಾಸ

ವರ್ಷೋಲ್ಲಾಸ
ಹರ್ಷದ ವರ್ಷ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಕ್ಕೆಸುಬ್ರಹ್ಮಣ್ಯದಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ದ್ವೀಪದಂತಾಗಿರುವುದು.
Published On :

ಬೆಂಗಳೂರು: ಬರದ ಆತಂಕದಲ್ಲಿದ್ದ ರಾಜ್ಯದ ಜನರಿಗೆ ವರುಣ ಕೊನೆಗೂ ಕೃಪೆ ತೋರಿದ್ದಾನೆ. ಕೊಡಗು, ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸುಬ್ರಹ್ಮಣ್ಯ, ಭಾಗಮಂಡಲ, ಮಂಡಗದ್ದೆ ಸೇರಿದಂತೆ ಹಲವೆಡೆ ರಸ್ತೆ ಸಂಚಾರ ಕಡಿತಗೊಂಡಿದೆ. ಕೊಡಗು ಜಿಲ್ಲಾದ್ಯಂತ ಶನಿವಾರದಿಂದೀಚೆಗೆ ಸುರಿಯುತ್ತಿರುವ ಭರ್ಜರಿ ಮಳೆಗೆ ಕಾವೇರಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಇದೆ. ಭಗಂಡೇಶ್ವರ ಕ್ಷೇತ್ರ ಭಾಗಮಂಡಲವೊಂದರಲ್ಲೇ 50 ಸೆಂ.ಮೀ.ಗೂ ಹೆಚ್ಚು ಮಳೆ ಸುರಿದಿದೆ. ಭಾಗಮಂಡಲ- ಮಡಿಕೇರಿ, ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತಲಕಾವೇರಿ ದರ್ಶನಕ್ಕೆ ಬಂದಿದ್ದ ಭಕ್ತರು ವಾಪಸ್ ತೆರಳಿದ್ದಾರೆ. ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನದಿ ದಡದಲ್ಲಿ ಯಾಂತ್ರಿಕ ಬೋಟ್ ಹಾಗೂ 10 ಮಂದಿ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

- ಸೇತುವೆ ಮುಳುಗಡೆ
ವಿರಾಜಪೇಟೆಯಲ್ಲಿ ಲಕ್ಷ್ಮಣ ತೀರ್ಥ ನದಿ ಅಪಾಯ ಮಟ್ಟ ಮೀರಿದೆ. ಹರಿಹರದ ಸೇತುವೆ ಮುಳುಗಡೆಯಾಗಿದ್ದರೆ, ಶ್ರೀಮಂಗಲ ಸೇತುವೆಯೂ ತುಂಬುವ ಹಂತಕ್ಕೆ ಬಂದಿದೆ. ಹರಿಹರ-ಕಾನೂರು, ಶ್ರೀಮಂಗಲ-ನಾಲ್ಕೇರಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಅಪಾಯವಿದೆ. ಕಾವೇರಿಯ ಪ್ರವಾಹದಿಂದ ಮೂರ್ನಾಡು ಬಳಿಯ ಬಲಮುರಿಯಲ್ಲಿ ಹಳೆ ಸೇತುವೆ ಮುಳುಗಿದೆ. ಕೊಡಗಿನ ಹಲವೆಡೆ ಧರೆ ಕುಸಿದು ಮನೆಗಳಿಗೆ ಹಾನಿಯಾಗಿವೆ.

- ರಸ್ತೆ ಕೊಚ್ಚಿ ಹೋಯ್ತು
ದ.ಕ. ಜಿಲ್ಲಾದ್ಯಂತ ಬಿರುಸಿನ ಮಳೆಯಾಗಿದ್ದು, ನೇತ್ರಾವತಿ, ಕುಮಾರಧಾರ ನದಿ ಮಟ್ಟ ಏರತೊಡಗಿದೆ. ಸುರತ್ಕಲ್‌ನ ಮೀನಕಳಿಯಲ್ಲಿ ಪಣಂಬೂರು ಸಂಪರ್ಕಿಸುವ 300 ಮೀಟರ್ ಮೀನುಗಾರಿಕಾ ರಸ್ತೆ ಕಡಲ್ಕೊರೆತದಿಂದ ಸಮುದ್ರ ಪಾಲಾಗಿದೆ. ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಮುಳುಗಡೆಯಾಗಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಸುಳ್ಯ ತಾಲೂಕಿನ ಅಲ್ಲಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

-ದಿನವಿಡೀ ಮಳೆ
ಬೆಂಗಳೂರು, ಬೆಳಗಾವಿ, ಗದಗ, ಧಾರವಾಡ, ಕೊಪ್ಪಳ ಹಾವೇರಿ ಜಿಲ್ಲೆಯಲ್ಲಿ ದಿನವಿಡೀ ಜಿಟಿ ಜಿಟಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರಿ, ಬಳ್ಳಾರಿಯಲ್ಲಿ ಉತ್ತಮ ಹಾಗೂ ರಾಯಚೂರು, ಬೀದರ್, ಮೈಸೂರು ಜಿಲ್ಲೆಯಲ್ಲಿ ಅಲ್ಪ ಮಳೆಯಾಗಿದೆ.

-ಮಲೆನಾಡಲ್ಲೂ ಅಬ್ಬರ
ಮಲೆನಾಡಿನಲ್ಲಿ ದಿನವಿಡೀ ಧಾರಾಕಾರ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ದಿನವಿಡೀ ಉತ್ತಮ ಮಳೆಯಾಗಿದೆ. ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲೂ ಧಾರಾಕಾರ ಮಳೆ ಸುರಿದಿದ್ದು, ತುಂಗಾ ನದಿ ತುಂಬಿಹರಿಯುತ್ತಿದೆ. ಮಂಡಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿರುವ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ತೀವ್ರ ಮಳೆಯಿಂದಾಗಿ ಜೀವನದಿ ತುಂಗಾ, ಭದ್ರಾ ಹಾಗೂ ಹೇಮಾವತಿ ನೀರಿನ ಮಟ್ಟ ಏರಿಕೆಯಾಗಿದೆ.

ಇಲ್ಲಿಗಿಲ್ಲ ವರುಣನ ಕೃಪೆ
ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಬಿಜಾಪುರ, ಮಂಡ್ಯ, ಯಾದಗಿರಿ, ಗುಲ್ಬರ್ಗ, ರಾಮನಗರ, ತುಮಕೂರು, ಕೋಲಾರ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಮೋಡಕಟ್ಟಿದ ವಾತಾವರಣವಿದ್ದರೂ ರಾತ್ರಿವರೆಗೂ ಮಳೆಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.