ಪ್ರಧಾನ ಸುದ್ದಿ

ರಾಜ್ಯಾದ್ಯಂತ ಅಂತೂ ಮೊಳಗಿತು ವರ್ಷೋದ್ಗಾರ, ತುಂಬಿ - ತುಳುಕಿದ ಜಲಾಶಯಗಳು

ರಾಜ್ಯಾದ್ಯಂತ ಅಂತೂ ಮೊಳಗಿತು ವರ್ಷೋದ್ಗಾರ, ತುಂಬಿ - ತುಳುಕಿದ ಜಲಾಶಯಗಳು
Published On :

ಇಳೆಗೆ ಮಳೆ ಸುರಿಯುತ್ತಿಲ್ಲ ಬೇಸರ, ಹತಾಶೆ, ಆಕ್ರೋಶಕ್ಕೆ ಇವೆಲ್ಲವಕ್ಕೂ ಭಾನುವಾರ ಒಂದು ರೀತಿಯಲ್ಲಿ ಪೂರ್ಣವಿರಾಮ ಹಾಕಿದಂತಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸಿದೆ ವರ್ಷಧಾರೆ. ಪ್ರಮುಖ ಜಲಾಶಯಗಳ ಒಳಹರಿವಿನ ಜತೆ ಜತೆಗೆ ನೀರಿನ ಮಟ್ಟವೂ ಹೆಚ್ಚಿದೆ. ಕೆಲವು ನದಿಗಳು ಉಕ್ಕಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಕೊಡಗು: ಭರ್ಜರಿ ಮಳೆ
ಮಡಿಕೇರಿ:
ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ತಲಕಾವೇರಿ ಮತ್ತು ಭಾಗಮಂಡಲದಲ್ಲಿ 50 ಸೆಂ.ಮೀ.ಗೂ ಹೆಚ್ಚಿನ ಮಳೆಯಾಗಿ ಕಾವೇರಿ ನದಿ ನೀರಿನ ಮಟ್ಟವೇ ಬದಲಾಗಿತ್ತು. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾವೇರಿಯಲ್ಲಿ ಪ್ರವಾಹ ಕಾಣಿಸಿಕೊಂಡು ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅಪಾಯಕಾರಿ ಮಟ್ಟ ತಲುಪುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ, ಕರಡಿಗೋಡು, ಗುಹ್ಯ ವ್ಯಾಪ್ತಿಯ ನದಿ ಪಾತ್ರದ ಮನೆಗಳು ಮುಳುಗಡೆಯ ಭೀತಿಗೆ ಒಳಗಾಗಿದ್ದು, ಜಿಲ್ಲಾಡಳಿತ ಈಗಾಗಲೇ ನದಿ ಕರೆ ಬಳಿ ವಾಸವಿರುವ 150ಕ್ಕೂ ಹೆಚ್ಚಿನ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ಇಲ್ಲವೆ ಗಂಜಿ ಕೇಂದ್ರಕ್ಕೆ ತೆರಳಲು ಸೂಚಿಸಿದೆ. ವಿರಾಜಪೇಟೆ ತಾಲೂಕಿನಲ್ಲೂ ಮಳೆ ಮುಂದುವರಿದು ಲಕ್ಷ್ಮಣ ತೀರ್ಥ ನದಿ ಅಪಾಯದ ಮಟ್ಟ ಮೀರಿದ್ದರಿಂದ ಹರಿಹರದ ಸೇತುವೆ ಮುಳುಗಡೆಯಾಗಿದ್ದರೆ, ಶ್ರೀಮಂಗಲ ಸೇತುವೆಯ ಮೇಲ್ಭಾಗಕ್ಕೆ ನೀರು ಸ್ಪರ್ಶಿಸಿದೆ. ಮಳೆಯ ಪ್ರಮಾಣ ಇದೇ ರೀತಿಯಲ್ಲಿ ಮುಂದುವರಿದಲ್ಲಿ ಹರಿಹರ-ಕಾನೂರು, ಶ್ರೀಮಂಗಲ-ನಾಲ್ಕೇರಿ ರಸ್ತೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುವ ಅಪಾಯವಿದೆ. ಬಲಮುರಿಯಲ್ಲಿ ಕಾವೇರಿ ಹೊಳೆಗೆ ಅಡ್ಡಲಾಗಿರುವ ಕಿರು ಸೇತುವೆ ಮುಳುಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾರಿ ಮಳೆಯಿಂದಾಗಿ ಕೊಡಗಿನ ಹಲವೆಡೆ ಧರೆ ಕುಸಿದು ಮನೆಗಳಿಗೆ ಹಾನಿಯಾಗಿವೆ.

ರಸ್ತೆ ಸಂಪರ್ಕ ಕಡಿತ
ಭರ್ಜರಿ ವರ್ಷಕ್ಕೆ ಮರ- ಗಿಡಗಳು ಬಿದ್ದು ಹಲವೆಡೆ ಭಾರಿ ಹಾನಿಯಾಗಿದೆ. ನದಿಗಳು ತುಂಬಿ ಹರಿದು ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ. ನಾಪೋಕ್ಲು, ಅಯ್ಯಂಗೇರಿ ತಂಡ್ರಾ ಹೊಳೆಯೂ ತುಂಬಿದ್ದು, ರಸ್ತೆ ಮೇಲೆ 3 ಅಡಿ ನೀರು ಹರಿಯುತ್ತಿದೆ. ಮಳೆ ಹೀಗೇ ಮುಂದುವರಿದರೆ ನಾಪೋಕ್ಲು ದ್ವೀಪವಾಗುವುದರಲ್ಲಿ ಸಂಶಯವಿಲ್ಲ.ಇದು ರೈತರಲ್ಲಿ ಹರ್ಷ ಮೂಡಿಸಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಹಾರಂಗಿಗೆ ಜಲಧಾರೆ
ಹಾರಂಗಿ ಜಲಾಶಯದಲ್ಲಿ ಅಣೆಕಟ್ಟಿಗೆ 6647 ಕ್ಯುಸೆಕ್ ನೀರು ಹರಿದುಬಂದಿದೆ. ಭಾನುವಾರ ಜಲಾಶಯದ ನೀರಿನ ಮಟ್ಟ 2838.65 ಕಂಡುಬಂದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿ ಇದೆ.

ಬೆಂಗಳೂರಿನಲ್ಲೂ ಮಳೆಯ ಸಿಂಚನ
ಬೆಂಗಳೂರು:
ಹಲವು ದಿನಗಳ ಬಿಸಿಲಿನಿಂದ ಬೇಸತ್ತಿದ್ದ ನಗರವಾಸಿಗಳಿಗೆ ಭಾನುವಾರ ಸುರಿದ ಮಳೆ ತಂಪಿನ ಸಿಂಚನ ನೀಡಿತು. ಒಂದು ವಾರದಿಂದ ಸಂಜೆಯ ವೇಳೆ ಮಳೆರಾಯನ ಆಗಮನವಾಗುತ್ತಿದ್ದರೂ ಮಧ್ಯಾಹ್ನದ ವೇಳೆ ಬಿಸಿಲು ಯಥಾಪ್ರಕಾರ ಸುಡುತ್ತಿತ್ತು. ಆದರೆ ಭಾನುವಾರ ನಗರದ ಹವಾಮಾನದಲ್ಲಿ ಕೊಂಚ ಬದಲಾವಣೆ ಕಂಡುಬಂದಿದ್ದು, ಬೆಳಗ್ಗಿನಿಂದಲೇ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ಸುರಿದ ಮಳೆ ಜನರಿಗೆ ತಂಪೆರಚಿತು. ವಾರಾಂತ್ಯದ ಬಿಡುವಾಗಿದ್ದರಿಂದ ಕುಟುಂಬ ಸಮೇತರಾಗಿ ಸುತ್ತಾಡಲು ಬಂದಿದ್ದ ಮಂದಿ ಮಳೆಯಿಂದ ಪರದಾಡಿದ್ದೂ ಕಂಡುಬಂತು. ದಕ್ಷಿಣ ಭಾಗದ ತಾವರೆಕೆರೆ, ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತ 0.5 ಮಿ.ಮೀನಿಂದ 15 ಮಿ.ಮೀ ಮಳೆಯಾಗಿದೆ. ಆನೇಕಲ್ ಹಾಗೂ ಸಮೀಪದ ಸ್ಥಳಗಳಲ್ಲಿ 5 ರಿಂದ 10 ಮಿ.ಮೀ ಮಳೆಯಾಗಿದೆ. ಉತ್ತರ ಭಾಗದ ಪೀಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 13 ಮಿ.ಮೀ, ಸಂಪಂಗಿರಾಮನಗರ ಸೇರಿದಂತೆ ಪೂರ್ವದಲ್ಲಿ 2 ಮಿ.ಮೀ-8 ಮಿ.ಮೀ ಮಳೆ ದಾಖಲಾಗಿದೆ. ಮಂಗಳವಾರದವರೆಗೂ ಇದೇ ಹವಾಮಾನ ಮುಂದುವರಿಯುವ ಸಾಧ್ಯತೆಯಿದ್ದು, ರಭಸದ ಗಾಳಿಸಹಿತ ಮಳೆಯಾಗಲಿದೆ. 20-28 ಡಿ.ಸೆ. ತಾಪಮಾನವಿದೆ.

ಶಿವಮೊಗ್ಗವನ್ನು ಅಪ್ಪಿದ ಮಳೆ, ತುಂಗಾ ಪ್ರವಾಹ
ಬರದ ಆತಂಕದಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಚಿತ್ರಣ ಭಾನುವಾರ ಸಂಪೂರ್ಣ ಬದಲಾಗಿದೆ. ಶನಿವಾರ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಂಡಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಆಗುಂಬೆಯಲ್ಲಿ ದಾಖಲೆಯ 25 ಸೆಂಟಿ ಮೀಟರ್ ಮಳೆ ಬಿದ್ದಿದೆ. ಘಾಟಿಯ 9ನೇ ತಿರುವಿನಲ್ಲಿ ಭೂಕುಸಿದಿದೆ. ಹೊಸನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಉಡುಪಿಯಲ್ಲೂ ವರ್ಷದ ಹರ್ಷ
ಉಡುಪಿ:
ಜಿಲ್ಲೆಯಾದ್ಯಂತ ಮುಂಗಾರು ಭರ್ಜರಿಯಾಗಿದೆ. ಶನಿವಾರ ರಾತ್ರಿ ಗಾಳಿ ಸಹಿತ ಹಾಗೂ ಭಾನುವಾರವಿಡೀ ವರ್ಷಧಾರೆ ಮೂಡಿದೆ. ನದಿ, ತಗ್ಗು, ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿದೆ. ಆದರೆ ಅಪಾಯ ಮಟ್ಟ ತಲುಪಿಲ್ಲ. ಅಲ್ಲಲ್ಲಿ ಮರಗಳು ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭಾನುವಾರ ಮುಂಜಾನೆಯವರೆಗೆ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 148.48 ಮಿ.ಮೀ. ಮಳೆ ದಾಖಲಾಗಿದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 123.36 ಮಿ.ಮಿ., ಕುಂದಾಪುರ ತಾಲೂಕಿನಲ್ಲಿ 143.40 ಮಿ.ಮಿ. ಮತ್ತು ಕಾರ್ಕಳ ತಾಲೂಕಿನಲ್ಲಿ 177.80 ಮಿ.ಮಿ. ಮಳೆಯಾಗಿದೆ.

ಕೇರಳದಲ್ಲಿ ಮಳೆ: ಕಬಿನಿ ಜಲಾಶಯ ಒಳಹರಿವು ಹೆಚ್ಚಳ
ಮೈಸೂರು:
ಕೇರಳದ ವಯನಾಡು ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಭಾನುವಾರ ಜಲಾಶಯಕ್ಕೆ 8,000 ಕ್ಯುಸೆಕ್ ನೀರು ಬರುತ್ತಿದ್ದು, 1000 ಕ್ಯುಸೆಕ್ ಹೊರಬಿಡಲಾಗುತ್ತಿದೆ. ಜಲಾಶಯದ ಈಗಿನ ಮಟ್ಟ 2272.70 ಅಡಿ. ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ 13 ಟಿಎಂಸಿ ನೀರು ಸಂಗ್ರಹವಾಗಿದೆ.

ಚಿಕ್ಕಮಗಳೂರು
ಜಿಲ್ಲೆಯ ಮಲೆನಾಡು ಮಾತ್ರವಲ್ಲದೆ ಬಯಲುಸೀಮೆಯಲ್ಲೂ ದಿನವಿಡೀ ಉತ್ತಮ ಮಳೆ ಸುರಿದಿದೆ. ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ ಸುತ್ತಮುತ್ತ ಸುರಿದ ವರ್ಷಧಾರೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ.

ಬೀದರ್‌ನಲ್ಲೂ ಸ್ವಲ್ಪ
ನಗರ ಸೇರಿದಂತೆ ಬಸವಕಲ್ಯಾಣ ಪಟ್ಟಣದಲ್ಲಿ ಸಾಯಂಕಾಲ ಅಲ್ಪ ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಇನ್ನುಳಿದ ಭಾಲ್ಕಿ, ಹುಮನಾಬಾದ್, ಔರಾದ್ ತಾಲೂಕುಗಳಲ್ಲಿ ಮಳೆಯಾದ ವರಿಯಾಗಿಲ್ಲ.

ಯಾದಗಿರಿ
ಜಿಲ್ಲೆಯ ಯಾದಗಿರಿ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ಬೆಳಗಿನವರೆಗೆ 6 ಮಿಮೀ, ಸುರಪುರ ಮತ್ತು ಶಹಾಪುರ ತಾಲೂಕಿನಲ್ಲಿ ಭಾನುವಾರ ಸಂಜೆ ಸುಮಾರು 5ರಿಂದ 6 ಮಿಮೀ. ಮಳೆ ಸುರಿದಿದೆ. ಎಲ್ಲಿಯೂ ಮಳೆ ಹಾನಿಯಾದ ವರದಿಯಾಗಿಲ್ಲ.

ಗುಲ್ಬರ್ಗದಲ್ಲಿಲ್ಲ ಮಳೆ
ಗುಲ್ಬರ್ಗ ನಗರ ಹಾಗೂ ಜಿಲ್ಲೆಯಲ್ಲಿ ಭಾನುವಾರ ಮಳೆ ಸುರಿದಿಲ್ಲ, ಮೋಡ ಕವಿದ ವಾತಾವರಣವಿತ್ತು. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ.80ರಷ್ಟು ಮಳೆಯ ಕೊರತೆಯಾಗಿದ್ದು, ಮುಂಗಾರು ಬಿತ್ತನೆ ಪ್ರಮಾಣ ತೀವ್ರ ಕುಸಿತವಾಗಿದೆ. ಈ ಬಾರಿ ಶೇ.13 ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಬಾರದೆ ಹೋದರೂ ಒಣ ಮಣ್ಣಲ್ಲೇ ಬಿತ್ತನೆ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಹಣದ ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದಿ, ತೊಗರಿ ಬಿತ್ತನೆಯ ಅವಧಿ ಮುಗಿದಿದ್ದರಿಂದ ಆತಂಕದಲ್ಲಿ ರೈತರಿದ್ದಾರೆ. ಗುಲ್ಬರ್ಗ ನಗರದಲ್ಲೇ ಆಗೀಗ ಅಲ್ಪ ಮಳೆ ಸುರಿದಿದ್ದು ಬಿಟ್ಟರೆ ಜಿಲ್ಲೆಯ ಎಲ್ಲ 7 ತಾಲೂಕುಗಳಲ್ಲಿ ಬಿತ್ತನೆಗೆ ಅನುಕೂಲವಾಗುವಂಥ ಮಳೆ ಸುರಿದಿಲ್ಲ.

ರಾಯಚೂರು ಅತ್ಯಲ್ಪ
ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ಹಾನಿ ಸಂಭವಿಸಿಲ್ಲ. ರಾಯಚೂರು, ಸಿಂಧನೂರು, ಲಿಂಗಸ್ಗೂರು, ದೇವದುರ್ಗ ತಾಲೂಕುಗಳಲ್ಲಿ ಮಳೆಯಾದ ವರದಿಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.