ಮೋದಿಗೆ ಮಿಶ್ರಾ ಜಯ; ಟ್ರಾಯ್ ಕಾಯ್ದೆ ತಿದ್ದುಪಡಿಗೆ ಲೋಕದೊಪ್ಪಿಗೆ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೊದಲ ರಾಜಕೀಯ ಜಯ. ಲೋಕಸಭೆಯಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ.
ರಾಜಕೀಯ ವಿರೋಧಿಗಳ ಹೃದಯವನ್ನೂ ಗೆಲ್ಲುವ ಮೂಲಕ ಪ್ರಧಾನಿ ಮೋದಿ ಅವರು ಟ್ರಾಯ್ ಮಾಜಿ ಅಧ್ಯಕ್ಷ ನೃಪೇಂದ್ರ ಮಿಶ್ರಾರನ್ನು ತನ್ನ ಪ್ರಧಾನ ಕಾರ್ಯದರ್ಶಿಯನ್ನಾಗಿ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಚ್ಚರಿಯ ಬೆಳವಣಿಗೆ: ಟ್ರಾಯ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಮಸೂದೆ ಮಂಡನೆಯಾಗುತ್ತಿದ್ದಂತೆ 'ಬೇಡ' ಎನ್ನುವ ಧ್ವನಿ ಕ್ಷೀಣವಾಗಿತ್ತು. ಏಕೆಂದರೆ, ಕಾಂಗ್ರೆಸ್ ಅನ್ನು ಏಕಾಂಗಿಯಾಗಲು ಬಿಟ್ಟ ಉಳಿದ ಪ್ರತಿಪಕ್ಷಗಳು ಸರ್ಕಾರದ ಪರ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದವು.
ಮಮತಾ ಯೂಟರ್ನ್: ಮಿಶ್ರಾರನ್ನು ಪ್ರಧಾನಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವುದಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. 'ಇದು ಕೇವಲ ಒಬ್ಬ ವ್ಯಕ್ತಿಗಾಗಿ ಮಾಡುತ್ತಿರುವ ಸುಗ್ರೀವಾಜ್ಞೆ' ಎಂದು ಕಾಂಗ್ರೆಸ್ ಆರೋಪಿಸಿತ್ತು. ಕಾಂಗ್ರೆಸ್ ಮಾತಿಗೆ ಧ್ವನಿಗೂಡಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಸರ್ಕಾರದ ಮಸೂದೆ ವಿರುದ್ಧ ನಿರ್ಣಯ ಮಂಡಿಸಲು ನಿರ್ಧರಿಸಿತ್ತು. ಆದರೆ ಸೋಮವಾರ ಧ್ವನಿಮತದ ಮೂಲಕ ಮಸೂದೆ ಅಂಗೀಕಾರವಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಉಲ್ಟಾ ಹೊಡೆಯಿತು. ಮತ್ತೊಂದೆಡೆ ಮಾಯಾವತಿ ನೇತೃತ್ವದ ಬಿಎಸ್ಪಿ ಕೂಡ ಸರ್ಕಾರದ ವಿರುದ್ಧ ತುಟಿ ಬಿಚ್ಚದೆ ಮಸೂದೆಯನ್ನು ಬೆಂಬಲಿಸಿತು. ಹೀಗಾಗಿ ಸರ್ಕಾರ ಸುಲಭವಾಗಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯಿತು.
ಇದಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ತೃಣಮೂಲ ಕಾಂಗ್ರೆಸ್, ಬಿಎಸ್ಪಿ, ಎಡಿಎಂಕೆ, ಎಸ್ಪಿ ಮತ್ತು ಜೆಡಿಯು ನಾಯಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿದ್ದರು. ಕೊನೆಗೂ ಈ ಯತ್ನ ಸಫಲವಾಯಿತು. ಕಾಂಗ್ರೆಸ್, ಆರ್ಜೆಡಿ, ಆರ್ಎಸ್ಪಿ ಮತ್ತು ಆಮ್ ಆದ್ಮಿ ಪಕ್ಷಗಳು ಮಾತ್ರ ಮಸೂದೆ ವಿರೋಧಿಸಿದವು.
ರಾಜ್ಯಸಭೆ ಬಲಾಬಲ
ಎನ್ಡಿಎ 64
ಯುಪಿಎ 85
ತೃಣಮೂಲ ಕಾಂಗ್ರೆಸ್ 12
ಬಿಎಸ್ಪಿ 14
ಎಡಿಎಂಕೆ 11
ಇತರರು 59
ಒಟ್ಟು 245
ಬಹುಮತಕ್ಕೆ ಬೇಕಾದದ್ದು 123
ಗೆಲ್ಲುವ ವಿಶ್ವಾಸ
ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡರೂ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸತ್ವಪರೀಕ್ಷೆ ಎದುರಾಗಲಿದೆ. ಏಕೆಂದರೆ ರಾಜ್ಯಸಭೆಯಲ್ಲಿ ಯುಪಿಎಗೆ ಬಹುಮತವಿದೆ. ಆದರೆ, ಲೋಕಸಭೆಯಲ್ಲಿ ಪ್ರತಿಪಕ್ಷಗಳ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಸರ್ಕಾರ ರಾಜ್ಯಸಭೆಯಲ್ಲೂ ಅದೇ ದಾಳ ಪ್ರಯೋಗಿಸಿ ಪ್ರತಿಪಕ್ಷಗಳ ಬೆಂಬಲ ಪಡೆಯುವ ವಿಶ್ವಾಸ ಹೊಂದಿದೆ.
ಏನಿದು ವಿವಾದ?
1967ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ನೃಪೇಂದ್ರ ಮಿಶ್ರಾರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದರು. ಆದರೆ ನಿಯಮದ ಪ್ರಕಾರ ಟ್ರಾಯ್ನ ಅಧ್ಯಕ್ಷರಾಗಿದ್ದವರು ಮತ್ತು ಸದಸ್ಯರಾಗಿದ್ದವರು ನಿವೃತ್ತಿಯಾಗಿ 2 ವರ್ಷಗಳ ಕಾಲ ಯಾವುದೇ ಸರ್ಕಾರಿ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಮಿಶ್ರಾ ಅವರೂ ಟ್ರಾಯ್ ಮಾಜಿ ಅಧ್ಯಕ್ಷರಾಗಿದ್ದ ಕಾರಣ ಅವರ ನೇಮಕ ವಿವಾದಕ್ಕೆ ಕಾರಣವಾಗಿತ್ತು.
ಟಿಎಂಸಿ ಒಂದು ಜವಾಬ್ದಾರಿಯುತ ಪಕ್ಷ. ಒಂದು ಹುದ್ದೆಗೆ ಒಬ್ಬ ವ್ಯಕ್ತಿ ಅರ್ಹ ಎಂದಾದರೆ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ಪ್ರಧಾನಿಗಿದೆ.
-ಸುದೀಪ್ ಬಂಡೋಪಾಧ್ಯಾಯ, ತೃಣಮೂಲ ಕಾಂಗ್ರೆಸ್ ನಾಯಕ
ಅಧಿಕಾರಿಯು ಉತ್ತಮ ಹಾಗೂ ಪ್ರಾಮಾಣಿಕನಾಗಿದ್ದರೆ ಅಂಥವರ ಆಯ್ಕೆಯನ್ನು ನಾವು ಎಂದಿಗೂ ವಿರೋಧಿಸುವುದಿಲ್ಲ.
-ಮಾಯಾವತಿ, ಬಿಎಸ್ಪಿ ನಾಯಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


