ಪ್ರಧಾನ ಸುದ್ದಿ

ಯಳ್ಳೂರಿನಲ್ಲಿ ಮರಾಠಿಗರು ನೆಟ್ಟ ಕಲ್ಲು ತೆರವು: ಹೈ ಆದೇಶ

ಯಳ್ಳೂರಿನಲ್ಲಿ ಮರಾಠಿಗರು ನೆಟ್ಟ ಕಲ್ಲು ತೆರವು: ಹೈ ಆದೇಶ
Published On :

ಬೆಂಗಳೂರು: ಬೆಳಗಾವಿ ವ್ಯಾಪ್ತಿಗೆ ಸೇರುವ ಯಳ್ಳೂರಿನಲ್ಲಿ ಮರಾಠಿಗರು ಅಕ್ರಮವಾಗಿ ನೆಟ್ಟಿರುವ ಕಲ್ಲನ್ನು ಜು.28ರ ಒಳಗೆ ತೆರವುಗೊಳಿಸಲು ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ನಿರ್ದೇಶಿಸಿದೆ.
'ಮಹಾರಾಷ್ಟ್ರ ಯಳ್ಳೂರು' ಎಂದು ಅಕ್ರಮವಾಗಿ ಎಂಇಎಸ್ ಕಾರ್ಯಕರ್ತರು ಕಲ್ಲು ನೆಟ್ಟಿದ್ದಾರೆಂದು ಭೀಮಪ್ಪ ಗುಂಡಪ್ಪ ಗಡಾದ್ ಎಂಬುವರು ಹೈಕೋರ್ಟ್ ಮೆಟ್ಟಲೇರಿದ್ದರು.
ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಮತ್ತು ನ್ಯಾ.ಎಚ್. ಜಿ.ರಮೇಶ್ ಅವರ ಪೀಠ, ಕಾನೂನಿನ ಪ್ರಕಾರ ಕಲ್ಲು ತೆಗೆಸಲು ಜಿಲ್ಲಾಧಿಕಾರಿಗಳಿಗೆ ಆಗದಿದ್ದರೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದು ಹೇಳಿದೆ.
ಪ್ರಕರಣ ಹಿನ್ನೆಲೆ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಯಳ್ಳೂರಿನಲ್ಲಿ ಮರಾಠಿಗರು ಮಹಾರಾಷ್ಟ್ರ ಸರಹದ್ದು ಪ್ರಾರಂಭವಾಗುವುದಾಗಿ 'ಮಹಾರಾಷ್ಟ್ರ ಯಳ್ಳೂರು' ಎಂದು ಕಲ್ಲು ನೆಟ್ಟು ಧ್ವಜ ಹಾರಿಸಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ ಕಲ್ಲನ್ನು ತೆಗೆಸಿದರೂ ಮತ್ತದೇ ಪೊಲೀಸರ ಸಹಾಯದಿಂದ ಮರುದಿನ ಅದೇ ಸ್ಥಳದಲ್ಲಿ ಕಲ್ಲು ಪ್ರತ್ಯಕ್ಷವಾಗುತ್ತಿತ್ತು.
ಯಳ್ಳೂರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯ ಕರ್ನಾಟಕ ರಾಜ್ಯದಿಂದ ದೊರಕುತ್ತಿದ್ದು ಎಂಇಎಸ್‌ನವರು ಅಕ್ರಮವಾಗಿ ಕಲ್ಲು ನೆಡುವ ಮೂಲಕ ಪುಂಡಾಟಿಕೆ ಮಾಡುತ್ತಿರುವುದು ಕನ್ನಡಿಗರ ಮನಸ್ಸನ್ನು ಕೆರಳಿಸಿತ್ತು.
ಅಷ್ಟೇ ಅಲ್ಲದೇ ಕಲ್ಲು ತೆಗೆಸಿದ ನಂತರ ಕರ್ನಾಟಕದ ಗಡಿಭಾಗದಲ್ಲಿರುವ ಎಂಇಎಸ್ ಕಾರ್ಯಕರ್ತರು ಹತ್ತಿರದ ದಲಿತರ ಕೇರಿಗೆ ಕಲ್ಲು ತೂರುತ್ತಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಈ ಸಂಬಂಧ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು 'ಕಲ್ಲು ತೆಗೆಸಲು ಕೆಲವು ತೊಡಕುಗಳಿದ್ದು ಜಿಲ್ಲಾಧಿಕಾರಿ ಅಥವಾ ನ್ಯಾಯಾಲಯದಿಂದ ಆದೇಶವಿಲ್ಲದೇ ಕ್ರಮ ಜರುಗಿಸಲು ಅಸಾಧ್ಯ ಹಾಗೂ ಫಲಕ ತೆಗೆಸಲು ಮುಂದಾದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ' ಎಂದು ತಿಳಿಸಿದ್ದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಭಾಗೀಯ ಪೀಠ, ಜಿಲ್ಲಾಧಿಕಾರಿ ಕ್ರಮ ತೆಗದುಕೊಳ್ಳದಿದ್ದರೆ ನ್ಯಾಯಾಲಯವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಎಚ್ಚರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.