ತ್ವರಿತ ಕೋರ್ಟ್: ದ್ವಂದ್ವ ಉತ್ತರ
ರಾಜೀವ ಹೆಗಡೆ
ಬೆಂಗಳೂರು: ತ್ವರಿತಗತಿ ನ್ಯಾಯಾಲಯ ಆರಂಭ ಕುರಿತಂತೆ ಗೃಹ, ಕಾನೂನು ಇಲಾಖೆಯಿಂದ ದ್ವಂದ್ವ ಉತ್ತರ ಲಭ್ಯವಾಗುತ್ತಿದೆ.
ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ರಾಜ್ಯದಲ್ಲಿ ಈಗಾಗಲೇ 10 ತ್ವರಿತಗತಿ ನ್ಯಾಯಾಲಯಗಳಿದ್ದು, ಮತ್ತೆ 10 ನ್ಯಾಯಾಲಯ ಆರಂಭಿಸಲು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಹೇಳುತ್ತಾರೆ. ಆದರೆ ಇಂತಹದೊಂದು ಪ್ರಸ್ತಾವನೆ ತಯಾರಾಗುತ್ತಿದೆಯಷ್ಟೇ. ಹೈಕೋರ್ಟ್ಗೆ ಸಲ್ಲಿಸಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಸತ್ಯವೇನೆಂದರೆ ರಾಜ್ಯದಲ್ಲಿ ಕಳೆದ 11 ತಿಂಗಳಿಂದ 10 ತ್ವರಿಗತಗತಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ವಿಚಾರಣೆಗಾಗಿ 39 ವಿಶೇಷ ನ್ಯಾಯಾಲಯಗಳನ್ನು ತೆರೆಯಲಾಗಿದೆ. ಆದರೆ ಕಳೆದ ಕೆಲವು ತಿಂಗಳಿಂದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚುವರಿಯಾಗಿ ಇನ್ನು 10 ನ್ಯಾಯಾಲಯ ಆರಂಭಕ್ಕೆ ಅನುಮತಿ ಕೇಳಲು ಚಿಂತನೆ ನಡೆಸಲಾಗಿದೆ. ಜೂನ್ ಅಂತ್ಯಕ್ಕೆ ರಾಜ್ಯದಲ್ಲಿ 1054 ಅತ್ಯಾಚಾರ ಪ್ರಕರಣ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯಿದೆಯಲ್ಲಿ 833 ಪ್ರಕರಣಗಳ ವಿಚಾರಣೆ ಬಾಕಿಯಿವೆ. ತ್ವರಿತಗತಿ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದ್ದರೂ ತ್ವರಿತ ವಿಚಾರಣೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಕೇಳಲು ಸರ್ಕಾರ ನಿರ್ಧರಿಸಿದೆ.
ತ್ವರಿತಗತಿ ನ್ಯಾಯಾಲಯ ಸುಲಭವಲ್ಲ: ತ್ವರಿತಗತಿ ನ್ಯಾಯಾಲಯ ಆರಂಭಿಸಲು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅನುಮತಿ ಕಡ್ಡಾಯ. ಸುಪ್ರೀಂ ಕೋರ್ಟ್ ತೀರ್ಪಿನಂತೆ ನೆಪ ಮಾತ್ರಕ್ಕೆ ತ್ವರಿತಗತಿ ನ್ಯಾಯಾಲಯ ಆರಂಭಿಸಲು ಸಾಧ್ಯವಿಲ್ಲ. ಹಾಗೆಯೇ ಈ ನ್ಯಾಯಾಲಯಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇದೇ ಕಾರಣದಿಂದ ರಾಜ್ಯ ಸರ್ಕಾರ ಮತ್ತೆ ಅನುಮತಿ ಕೇಳಲು ನಿರ್ಧರಿಸಿರುವ ಕೋರ್ಟ್ಗಳಿಗೆ ಅನುಮತಿ ಸಿಗುವುದು ಕಷ್ಟ ಎಂದು ಕಾನೂನು ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಈಗಿರುವ ತ್ವರಿತಗತಿ ನ್ಯಾಯಾಯಲಯಕ್ಕೆ ಹೆಚ್ಚುವರಿ ಅಭಿಯೋಜಕರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ.
ಈಗಿರುವ ಕೋರ್ಟ್ಗಳ ಮೇಲೆ ಒತ್ತಡವಿದೆ, ಅಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಹಾಗೂ ಕೆಲ ಜಿಲ್ಲೆಗಳಲ್ಲಿ ಇಂತಹ ವಿಶೇಷ ಕೋರ್ಟ್ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುವುದು ಕಾನೂನು ಹಾಗೂ ಗೃಹ ಇಲಾಖೆಯ ವಾದ.
ತ್ವರಿತಗತಿ ನ್ಯಾಯಾಲಯವೇಕೆ?: ಬೆಂಗಳೂರು ವಿವಿ ಆವರಣದಲ್ಲಿ ನ್ಯಾಷನಲ್ ಲಾ ಸ್ಕೂಲ್ನ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವಾದಾಗ ಕೇವಲ 11 ತಿಂಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿತ್ತು. ಬೆಂಗಳೂರಿನಲ್ಲಿ ಆರಂಭವಾದ 2 ತ್ವರಿತಗತಿ ನ್ಯಾಯಲವೊಂದರಲ್ಲಿಯೇ ಈ ಪ್ರಕರಣದ ವಿಚಾರಣೆ ನಡೆದಿತ್ತು. ಅಂದಹಾಗೆ ಈ ಪ್ರಕರಣ ನಡೆದ ಸಂದರ್ಭದಲ್ಲಿಯೇ ಅಂದರೆ 2013ರ ಆಗಸ್ಟ್ನಲ್ಲಿ ತ್ವರಿತಗತಿಯ ನ್ಯಾಯಾಲಯ ಆರಂಭಿಸಲಾಗಿತ್ತು. ತ್ವರಿತಗತಿ ನ್ಯಾಯಾಲಯಗಳಲ್ಲಿ ಆರೋಪಿ, ನೊಂದವರು ಹಾಗೂ ಪೊಲೀಸರ ವಿಚಾರಣೆ ಹೇಳಿಕೆಗಳನ್ನು ಕಡಿಮೆ ಅವಧಿಯಲ್ಲಿ ದಾಖಲಿಸಲಾಗುತ್ತದೆ. ಇದಲ್ಲದೇ ವಿಚಾರಣೆಯನ್ನು ಕಡಿಮೆ ಅವಧಿಗೆ ಮುಂದೂಡಲಾಗುತ್ತದೆ.
ರಾಜ್ಯದಲ್ಲಿರುವ ತ್ವರಿತಗತಿ
ನ್ಯಾಯಾಲಯಗಳು
ಬೆಂಗಳೂರು ನಗರ(2), ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಮಂಗಳೂರು, ಗುಲ್ಬರ್ಗ, ಮಡಿಕೇರಿ, ಮಂಡ್ಯ, ಮೈಸೂರು, ರಾಮನಗರ
ಬಾಕಿ ಪ್ರಕರಣಗಳ ವಿವರ(ಜೂ.30ಕ್ಕೆ)
ಜಿಲ್ಲೆ ಮಕ್ಕಳ ದೌರ್ಜನ್ಯ ಅತ್ಯಾಚಾರ
ಬೆಂಗಳೂರು ನಗರ 231 108
ಬೆಂಗಳೂರು ಗ್ರಾ 47 0
ಬಾಗಲಕೋಟೆ 15 30
ಬೆಳಗಾವಿ 37 67
ಬಳ್ಳಾರಿ 22 32
ಬಿಜಾಪುರ 23 20
ಚಾಮರಾಜನಗರ 10 14
ಚಿಕ್ಕಮಗಳೂರು 17 6
ಚಿಕ್ಕಬಳ್ಳಾಪುರ 13 37
ಚಿತ್ರದುರ್ಗ 6 37
ದಕ್ಷಿಣ ಕನ್ನಡ 36 62
ಧಾರವಾಡ 13 14
ದಾವಣಗೆರೆ 6 22
ಗದಗ 14 9
ಗುಲ್ಬರ್ಗ 17 35
ಹಾಸನ 51 53
ಹಾವೇರಿ 14 44
ಕೊಡಗು 19 39
ಕೋಲಾರ 36 33
ಕೊಪ್ಪಳ 7 27
ಮಂಡ್ಯ 19 69
ಮೈಸೂರು 35 80
ರಾಯಚೂರು 7 47
ರಾಮನಗರ 10 48
ಶಿವಮೊಗ್ಗ 37 21
ತುಮಕೂರು 38 38
ಉತ್ತರ ಕನ್ನಡ 22 19
ಉಡುಪಿ 13 22
ಯಾದಗಿರಿ 11 14
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

