ಬೈನಾ ಸಂತ್ರಸ್ತರ ಪುನರ್ವಸತಿಗೆ ಗೋವಾ ಅಸ್ತು

ವಾಸ್ಕೋ: ಬೈನಾ ನಿರಾಶ್ರಿತರ ಸಮಸ್ಯೆ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರೊಂದಿಗೆ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಬುಧವಾರ ಸಂಜೆ ನಡೆಸಿದ ಮಾತುಕತೆ ಫಲಪ್ರದವಾಗಿದೆ.
ಸದ್ಯ ಮಳೆಗಾಲವಾಗಿದ್ದು, ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಕಷ್ಟ. ಇನ್ನೆರಡು ತಿಂಗಳ ಬಳಿಕ ಎಲ್ಲರಿಗೂ ಕಾಯಂ ಪುನರ್ವಸತಿ ಕಲ್ಪಿಸಲು ಗೋವಾ ಸರ್ಕಾರ ಸಮ್ಮತಿಸಿದೆ. ಬೈನಾದಲ್ಲಿ ಮನೆಗಳನ್ನು ನೆಲಸಮಗೊಳಿಸಿದ ಮೇಲೆ ನಿರಾಶ್ರಿತರಾದ ಕನ್ನಡಿಗರಿಗಾಗಿ ಸದ್ಯ ನಾಲ್ಕು ಕಡೆಗಳಲ್ಲಿ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಇದಕ್ಕಾಗಿ ಜಾಗೆಯನ್ನೂ ಗುರುತಿಸಲಾಗಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
ಗೋವಾದಲ್ಲಿ ಐದು ವರ್ಷಗಳಿಂದ ವಾಸ್ತವ್ಯ ಇರುವುದಕ್ಕೆ ದಾಖಲೆ ಒದಗಿಸಿದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಶಾಶ್ವತ ಪುನರ್ವಸತಿ ಆಗುವ ತನಕ ಸಂತ್ರಸ್ತರು ಬಾಡಿಗೆ ಮನೆಗಳಲ್ಲಿದ್ದರೆ ಅದರ ವೆಚ್ಚವನ್ನು ಗೋವಾ ಸರ್ಕಾರದಿಂದ ಭರಿಸಲು ಪರಿಶೀಲಿಸಲಾಗುವುದು. ಮಳೆಗಾಲ ಕಳೆಯುವಷ್ಟರಲ್ಲಿ ಎಲ್ಲರಿಗೂ ಪುನರ್ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಪರಿಕ್ಕರ್ ಭರವಸೆ ನೀಡಿದ್ದಾರೆ.
ಸಂಜೆ 5ರಿಂದ 6.30ರ ತನಕ ನಡೆದ ಸುದೀರ್ಘ ಮಾತುಕತೆ ವೇಳೆ ಸಚಿವ ದೇಶಪಾಂಡೆ ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿ'ಸೋಜ, ಮಠಾಧೀಶರು, ಗೋವಾ ಕನ್ನಡ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಇದ್ದರು.
ಇದಕ್ಕೂ ಮೊದಲು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ಗೋವಾದ ಕನ್ನಡಿಗರು ರಾಜ್ಯಕ್ಕೆ ಮರಳಲು ನಿರ್ಧರಿಸಿದರೆ, ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಇತರ ಸೌಲಭ್ಯ ನೀಡುವ ಕುರಿತಂತೆ ವಿಚಾರ ಮಾಡಲು ಸರ್ಕಾರ ಸಿದ್ಧವಿದೆ ಎಂದರು.
ನಮಗೆ ಗೋವಾ ಜನ ಮತ್ತು ಕರ್ನಾಟಕದ ಜನ ಎಂಬ ಭೇದ-ಭಾವವಿಲ್ಲ. ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಬೈನಾ ಬೀಚ್‌ನಲ್ಲಿನ ಮನೆಗಳನ್ನು ತೆರವುಗೊಳಿಸಿಲ್ಲ. ಅಸುರಕ್ಷಿತ ಪ್ರದೇಶವಾಗಿದ್ದರಿಂದ ಅಲ್ಲಿನ ಮನೆಗಳನ್ನು ತೆರವುಗೊಳಿಸಲಾಗಿದೆ. 5 ವರ್ಷಗಳ ಮೊದಲಿನಿಂದ ವಾಸವಾಗಿರುವವರಿಗಷ್ಟೇ ಪುನರ್ವಸತಿ ವ್ಯವಸ್ಥೆ ಮಾಡಲಾಗುವುದು.
-ಮನೋಹರ್ ಪರಿಕ್ಕರ್, ಗೋವಾ ಸಿಎಂ
ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


