ದಾಖಲೆ ಅಧಿವೇಶನ ಟೀಕೆಗಳ ಮಧ್ಯೆಯೂ ಯಶ ಸಾಧಿಸಿದ ಸಿಎಂ

ಕನ್ನಡ ಪ್ರಭ ವಾರ್ತೆ ಬೆಂಗಳೂರು ಜು. 29
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ವರ್ಷಗಳ ನಂತರ ಇಲಾಖಾವಾರು ಬೇಡಿಕೆ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ವಿಧಾನಮಂಡಲ ಅಧಿವೇಶನ ಟೀಕೆಗಳ ಮಧ್ಯೆಯೂ ಹಲವು ದಾಖಲೆ ಬರೆದಿದೆ.
ಬೇಡಿಕೆ ಚರ್ಚೆ, ಬಜೆಟ್ ಚರ್ಚೆಯನ್ನು 'ತೌಡು ಕುಟ್ಟುವುದು' ಎಂದೇ ಕರೆಯಲಾಗುತ್ತದೆ. ಆದರೆ ಶಾಸಕರ ನೈಜ ಕರ್ತವ್ಯ ವ್ಯಾಪ್ತಿಯಲ್ಲಿ ಇಂಥ ಚರ್ಚೆ ಸರ್ಕಾರದ ಗಮನ ಸೆಳೆಯುತ್ತದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಆಸ್ಥೆ ವಹಿಸಿ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಿ ಕರೆದ ಈ ಅಧಿವೇಶನ ಹೊಸ ನಿರೀಕ್ಷೆ ಹುಟ್ಟುಹಾಕಿದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್) ವ್ಯಾಪ್ತಿಯ ಎಲ್ಲ ಇಲಾಖೆಗಳ ಬೇಡಿಕೆ ಚರ್ಚೆ ನಡೆಸುವುದು ಪ್ರಧಾನ ಉದ್ದೇಶವಾಗಿತ್ತು. ಇದರಲ್ಲಿ ಅರ್ಧಯಶ ಸಿಕ್ಕಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಆಹಾರ, ಅರಣ್ಯ, ಆರೋಗ್ಯ, ಶಿಕ್ಷಣ ಸೇರಿ 11 ಇಲಾಖೆ ಬಗ್ಗೆ 78 ಗಂಟೆ 8 ನಿಮಿಷ ಚರ್ಚೆ ನಡೆದಿದೆ. 246 ಮಂದಿ ಭಾಗವಹಿಸಿರುವುದು ವಿಶೇಷ.
ಜತೆಗೆ ಧನವಿನಿಯೋಗ ವಿಧೇಯಕ, ಗೂಂಡಾ ಕಾಯ್ದೆ ತಿದ್ದುಪಡಿ, ಕಬ್ಬು ಬೆಲೆ ನಿಗದಿ, ಸಹಕಾರ ಕಾಯ್ದೆ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸೇರಿ 15 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.
ಡಿನೋಟಿಫಿಕೇಶನ್ ಅವ್ಯವಹಾರದ ಗದ್ದಲದಲ್ಲಿ ಕೊನೆಯ ದಿನ ನಾಲ್ಕು ವಿಧೇಯಕಗಳು ಚರ್ಚೆ ಇಲ್ಲದೇ ಅಂಗೀಕರಿಸಲ್ಪಟ್ಟಿದ್ದನ್ನು ಹೊರತುಪಡಿಸಿದರೆ ಉಳಿದ 11 ವಿಧೇಯಕಗಳ ಬಗ್ಗೆ ಉಭಯ ಸದನಗಳಲ್ಲಿ ಆಡಳಿತ-ವಿಪಕ್ಷ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಇತ್ತು.
ಭಾರಿ ಪ್ರಶ್ನೆಗಳು: ಕಲಾಪ ಎಂದರೆ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಯಮ 69ರ ಅನ್ವಯ ಸಾರ್ವಜನಿಕ ಮಹತ್ವದ ಚರ್ಚೆ ಇರಲೇಬೇಕು. ಈ ವಿಚಾರದಲ್ಲೂ ದಾಖಲೆ ಕಾಣಬಹುದು. ಈ ಅಧಿವೇಶನದಲ್ಲಿ ವಿಧಾನಸಭೆಯೊಂದರಲ್ಲೇ 4932 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು.
11ಇಲಾಖೆಗಳ ಮೇಲೆ
78 ಗಂಟೆ ಚರ್ಚೆ
15 ವಿಧೇಯಕಗಳಿಗೆ ಅಂಗೀಕಾರ
03 ಹಗರಣಗಳ ಬಗ್ಗೆ ತನಿಖೆ ಘೋಷಣೆ
ಗೆದ್ದ ನಿಯಮ 60
ವಿಧಾನಸಭೆ ಕಲಾಪದಲ್ಲಿ ನಿಯಮ 60ರ ಅನ್ವಯ ಚರ್ಚೆಯಾಗುವ ಸಾರ್ವಜನಿಕ ಮಹತ್ವದ ವಿಚಾರಕ್ಕೆ ಅದರದ್ದೇ ಆದ ಗತ್ತು ಇದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ ಪ್ರತಿಪಕ್ಷಗಳು ಪ್ರಯೋಗಿಸುವ ಮಹಾನ್ ಅಸ್ತ್ರವಿದು. ಅದರಲ್ಲಿಯೂ ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಈ ನಿಯಮ ಪಾಲನೆ ಸಂದರ್ಭದಲ್ಲಿ ಪ್ರತಿಪಕ್ಷಗಳತ್ತ ತುಸು ಹೆಚ್ಚಿನ ಪ್ರೀತಿ ತೋರಿದರು. ಹೀಗಾಗಿ 18 ಸೂಚನೆಗಳು ಸ್ವೀಕಾರವಾಗಿದ್ದು, 8 ಸೂಚನೆಗಳಿಗೆ ಸರ್ಕಾರ ಕಷ್ಟಪಟ್ಟು ಉತ್ತರಿಸಿದೆ. ನಿಯಮ 69ರ ಅನ್ವಯ 27 ಸೂಚನೆ ಸ್ವೀಕರಿಸಲಾಗಿದ್ದು, 3ಕ್ಕೆ ಸರ್ಕಾರದಿಂದ ಉತ್ತರ ಕೊಡಿಸುವಲ್ಲಿ ಸ್ಪೀಕರ್ ಸಫಲರಾಗಿದ್ದಾರೆ. ಆಡಳಿತ-ಪ್ರತಿಪಕ್ಷ ಸಾಲಿನಿಂದ ಹೊಸ ವಾಗ್ಮಿಗಳ ಪರಿಚಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


