ಪ್ರಧಾನ ಸುದ್ದಿ

ಮಧ್ಯದಲ್ಲೇ ಮದುವೆ ಏನಾದರೂ ಮುರಿದು ಬಿದ್ರೆ ನಾವು ಕಟ್ಟಿದ ತೆರಿಗೆ ಹಣ ವಾಪಸ್ ಕೊಡ್ತೀರಾ...?

ಮಧ್ಯದಲ್ಲೇ ಮದುವೆ ಏನಾದರೂ  ಮುರಿದು ಬಿದ್ರೆ ನಾವು ಕಟ್ಟಿದ ತೆರಿಗೆ ಹಣ ವಾಪಸ್ ಕೊಡ್ತೀರಾ...?
Published On :

ಬಡ ಕನ್ಯಾಪಿತೃಗಳೆಡೆಗೆ ತಮ್ಮ ಮೂರನೇ ಕಣ್ಣು ಬೀರುತ್ತಿರುವ ರಾಜಕೀಯದ 'ಕ್ರೇಜಿ' ಸಚಿವ ಟಿ.ಬಿ.ಜಯಚಂದ್ರರ ಹೊಸ ಕಾನ್ಸೆಪ್ಟ್ 'ಮದುವೆ ಕರ'!!!
ಒಂದೇ ದಿನ 2-3 ಸಮಾರಂಭ ಇದ್ದಾಗ ಬರೀ ಭೇಟಿ ನೀಡಬಹುದು. ಸುಮ್ಮನೆ ಜನ ಸೇರಿದರೆ ಟ್ಯಾಕ್ಸ್, 999 ಜನ ಇದ್ದರೆ ತೆರಿಗೆ ಇಲ್ಲ. ಇದನ್ನು ಎಣಿಸುವವರು ಯಾರು?

ಇವತ್ತು ಮದುವೆಗೆ ನಾವು ಏನೆಲ್ಲ ಖರೀದಿ ಮಾಡುತ್ತೇವೆಯೋ ಅದಕ್ಕೆಲ್ಲ ತೆರಿಗೆ ಕಟ್ಟುತ್ತೇವೆ. ಊಟವೊಂದನ್ನು ಬಿಟ್ಟು ಉಳಿದಿಕ್ಕೆಲ್ಲ ಅದು ಸಹಜವೇ. ಇಂತಹ ಸಂದರ್ಭದಲ್ಲಿ ಮದುವೆಯ ವೆಚ್ಚದ ಮೇಲೆ ಮತ್ತೆ ಪ್ರತ್ಯೇಕವಾಗಿ ತೆರಿಗೆ ವಿಧಿಸುವುದು ಸರಿಯಲ್ಲ. ಸರ್ಕಾರದ ಈ ಧೋರಣೆ ಹಾಸ್ಯಾಸ್ಪದ. ಹಾಗೊಂದು ವೇಳೆ, ಮದುವೆ ವೆಚ್ಚದ ಮೇಲೆ ನಾವು ತೆರಿಗೆ ಕಟ್ಟಿಯೂ ಮದುವೆ ಆಗಿ, ನಡುವೆ ದಾಂಪತ್ಯ ಮುರಿದು ಬಿದ್ದರೆ, ಆ ಹಣವನ್ನು ಸರ್ಕಾರ ವಾಪಸ್ ಕೊಡುತ್ತದೆಯೇ? ಇವತ್ತು ಮದುವೆ ಅಂತಾರೆ, ನಾಳೆ ಹುಟ್ಟು ಹಬ್ಬ, ಗೌರಿಹಬ್ಬ ಅಂತೆಲ್ಲ ತೆರಿಗೆ ಹಾಕುವುದನ್ನೆ ಅಭ್ಯಾಸವಾಗಿಸಿಕೊಂಡರೆ ಅರ್ಥವಿದೆಯೇ? ಸರ್ಕಾರ ಇಂತಹ ನಿರ್ಧಾರಗಳ ಮುಂಚೆ ಯೋಚನೆ ಮಾಡಲಿ.
-ಪ್ರಕಾಶ, ಬೆಂಗಳೂರು

ಮದುವೆ ಮೇಲೆ ತೆರಿಗೆ ಎಂಬುದು ಹಾಸ್ಯಾಸ್ಪದ

ಇತ್ತೀಚೆಗೆ ನಮ್ಮ ಸರ್ಕಾರ ಪೆದ್ದುಪೆದ್ದಾಗಿ ಕಾಯ್ದೆಗಳನ್ನು ತರುತ್ತಿದೆ. ತೆರಿಗೆ ಎಂಬುದು ಆರ್ಥಿಕ ರಂಗಕಷ್ಟೇ ಸೀಮಿತವಾಗದೆ ಜನರ ಸಂಸ್ಕೃತಿ, ಆಚಾರ ವಿಚಾರಗಳಲ್ಲೂ ಲಗ್ಗೆ ಇಟ್ಟಿರುವುದು ವಿಪರ್ಯಾಸ. ಮದುವೆ ಎಂಬುದು ಎರಡು ಮನೆಯವರ ಆರ್ಥಿಕ ಸ್ಥಿತಿಗತಿಗೆ ಸಂಭಂದಿಸಿದ್ದು. ಎಷ್ಟೋ ಜನ ಸಾಲಸೂಲ ಮಾಡಿ ಮದುವೆ ಮಾಡುತ್ತಾರೆ. ಅದರ ಮೇಲೂ ತೆರಿಗೆ ಹಾಕುವುದು ಸರಿಯಲ್ಲ. ಬಟ್ಟೆಗೆ ಎಷ್ಟು ಖರ್ಚಾಯಿತು? ಊಟಕ್ಕೆ ಎಷ್ಟು ಖರ್ಚಾಯಿತು? ಆಭರಣಕ್ಕೆ ಎಷ್ಟು ಖರ್ಚಾಯಿತು ಇತ್ಯಾದಿಯಾಗಿ ಸರ್ಕಾರ ಲೆಕ್ಕಹಾಕಿ ಟ್ಯಾಕ್ಸ್ ಹೇರುವುದು ಹಾಸ್ಯಾಸ್ಪದ. ಸಂಪೂರ್ಣ ಮದುವೆ ಮೇಲಾದ ಖರ್ಚಿನ ಮೇಲೆ ತೆರಿಗೆ ವಿಧಿಸುವುದಾದರೆ ಯಾರು ತಾನೆ ಸರಿಯಾದ ಲೆಕ್ಕ ಕೊಟ್ಟಾರು? ಸರ್ಕಾರ ಮೂರ್ಖತನದಲ್ಲಿ ಈ ಚಿಂತನೆ ಮಾಡಿರಬಹುದು. ಈಗಾಲಾದರೂ ಗಂಭೀರವಾಗಿ ಯೋಚಿಸಬೇಕಿದೆ.
-ರಶ್ಮಿ ಹಾಸಿನಿ, ಕುವೆಂಪು ವಿಶ್ವವಿದ್ಯಾಲಯ

ಭ್ರಷ್ಟಾಚಾರಕ್ಕೆ ಮತ್ತೊಂದು ರಹದಾರಿ!

ಭ್ರಷ್ಟಾಚಾರ ನಿರ್ಮೂಲನೆ ಮಾತು ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವೈಭವೋಪೇತ ಮದುವೆಗೆ ತೆರಿಗೆ ವಿಧಿಸುವ ಕಾನೂನು ಮತ್ತೊಂದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಮದುವೆ ತೀರ ವೈಯಕ್ತಿಕ ವಿಚಾರ. ಒಂದು ವೇಳೆ ಸರ್ಕಾರ ಅದ್ಧೂರಿ ಮದುವೆಗೆ ಕಡಿವಾಣ ಹಾಕಬೇಕೆಂದು ಉದ್ದೇಶಿಸಿದ್ದರೆ, ಈ ಕುರಿತು ಜನಜಾಗೃತಿ ಮೂಡಿಸಲಿ. ಅದ್ಧೂರಿ ಮದುವೆಗಳ ಮೂಲಕ ಹಣ ವ್ಯಯಿಸದಂತೆ ಜನತೆಗೆ ತಿಳಿವಳಿಕೆ ನೀಡಲಿ. ಅದ್ಧೂರಿಯೇ ಆಗಲಿ ಅಥವಾ ಸರಳವಾಗಿಯೇ ಆಗಲಿ, ಅದೊಂದು ಮದುವೆಯಷ್ಟೇ. ಆದ ಕಾರಣ ಅನವಶ್ಯಕವಾಗಿ ಮದುವೆಗಳಿಗೆ ಹಣ ವ್ಯಯಿಸುವ ಬದಲು ಸರಳವಾಗಿ ಮದುವೆ ಮಾಡಿ, ಅದೇ ಹಣವನ್ನು ಬೇರೆ ಕಾರ್ಯಗಳಿಗೆ ವಿನಿಯೋಗಿಸಲೆಂಬ ತಿಳಿವಳಿಕೆಯನ್ನು ಸಮಾಜದ ಜನತೆಯಲ್ಲಿ ಮೂಡಿಸಲು ಪ್ರಯತ್ನಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಬೇಕಿದೆ.
-ಡಾ. ಆನಂದ ಪಾಂಡುರಂಗಿ ಮನೋವೈದ್ಯರು, ಧಾರವಾಡ

ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತು

ವೈಭವೋಪೇತ ಮದುವೆಗೆ ತೆರಿಗೆ ವಿಧಿಸುವ ಕಾಯಿದೆ ಎಳ್ಳಷ್ಟೂ ಸಮಂಜಸವಲ್ಲ. ಸಾಮಾಜಿಕವಾಗಿ ಹೇರುವ ಎಲ್ಲ ಕಾಯಿದೆಗಳ ಬಿಸಿಯೂ ನೇರವಾಗಿ ತಟ್ಟೋದು ಮಧ್ಯಮ ವರ್ಗದ ಮೇಲೆ. ಮದುವೆ ಸಮಾರಂಭಕ್ಕೆ ಸಮಾಜದ ಎಲ್ಲ ಬಂಧುಗಳನ್ನು ಕರೆದು ಅತ್ಯಂತ ಪ್ರೀತಿಯಿಂದ ಉಣಬಡಿಸುವುದು ನಮ್ಮ ಸಂಸ್ಕೃತಿ. ವಿವಾಹ ಕಾರ್ಯಗಳಿಗೆ ತೆರಿಗೆ ವಿಧಿಸುವ ಕಾಯಿದೆ ಬಂದಾಗ ವಿವಾಹಕ್ಕೆ ಆಗಮಿಸಲಿರುವ ಜನರ ತಲೆ ಲೆಕ್ಕ ಮಾಡುತ್ತಾ, ಮದುವೆ ನಿರ್ವಹಣೆಗೆ ಬೇಕಾದ ಹಣ ಸಂಗ್ರಹಣೆ ಹಾಗೂ ಆದಾಯದ ಮೂಲ ಒದಗಿಸುವ ಎಲ್ಲ ವಿಚಾರದಲ್ಲಿ ಕನ್ಯಾಪಿತೃಗಳಿಗೆ ಹೆಚ್ಚಿನ ಉದ್ವೇಗ, ಮಾನಸಿಕ ಹಿಂಸೆ ಹೀಗೆ ಅನೇಕ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ. ಅನೇಕ ಪೋಷಕರು ಮಗಳ ಮದುವೆಯನ್ನು ಶಕ್ತಿ ಮೀರಿ ಸಡಗರದಿಂದ ಮಾಡಬೇಕೆಂಬ ಹಂಬಲದಿಂದ ಪೈಸೆ ಪೈಸೆಗಳನ್ನು ಸೇರಿಸುತ್ತಾ ಲೆಕ್ಕಾಚಾರದಲ್ಲೇ ಜೀವನ ಸಾಗಿಸುತ್ತಾರೆ. ತೆರಿಗೆ ಕಟ್ಟುವುದೆಂದರೆ ದೊಡ್ಡ ತಲೆನೋವಿನ ಸಂಗತಿಯಾದೀತು.
-ಶಾಂತಲಾ ವಿಶ್ವಾಸ್, ಮಂಗಳೂರು

ವಿವಾಹ ಸಮಾರಂಭ ತೀರಾ ಖಾಸಗಿ ವಿಚಾರ. ಈ ವಿಚಾರದಲ್ಲಿ ಸರ್ಕಾರ ಮೂಗು ತೋರುತ್ತಿರುವ ಬೆಳವಣಿಗೆ ಸರಿಯಲ್ಲ. ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿದರೆ ತಪ್ಪೇನಿಲ್ಲ. ಆದರೆ, ಅದ್ಧೂರಿ ಮದುವೆ ಸಮಾರಂಭಗಳಿಗೆ ತೆರಿಗೆ ವಿಧಿಸುವ ಕಾನೂನು ತರಲು ಹೊರಟಿರುವ ರಾಜ್ಯ ಸರ್ಕಾರದ ವಿಚಾರ ಮೂರ್ಖತನದ ಪರಮಾವಧಿ. ಅದ್ಧೂರಿ ವಿವಾಹ ಸಮಾರಂಭಗಳಿಗೆ ತೆರಿಗೆ ವಿಧಿಸುವ ಮೂಲಕ ಕಾನೂನು ದೃಷ್ಟಿಯಿಂದ ದುದ್ದುವೆಚ್ಚ ನಿಯಂತ್ರಿಸಲು ಸಾಧ್ಯವಿಲ್ಲ. ಸಚಿವರ ತೀರ್ಮಾನ ಹುಚ್ಚುತನದಿಂದ ಕೂಡಿದೆ.
-ಅಶೋಕ ಚಂದರಗಿ, ಕನ್ನಡ ಹೋರಾಟಗಾರ, ಬೆಳಗಾವಿ

ಸರ್ಕಾರಗಳು ತೆರಿಗೆ ರೂಪದಲ್ಲಿ ಸಾರ್ವಜನಿಕರಿಂದ ಹಣ ವಸೂಲು ಮಾಡುತ್ತಿರುವುದು ಹೊಸದೇನಲ್ಲ. ಆದರೆ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಾಗೆ ಛತ್ರದ ಬಾಡಿಗೆ ಇನ್ನಿತರೆ ಬೆಲೆಗಳು ಹೆಚ್ಚಾಗುತ್ತಿವೆ. ಮಧ್ಯಮ ವರ್ಗದವರೂ ಮದುವೆಗೆ ಏನಿಲ್ಲವಾದರೂ ಕನಿಷ್ಠ  5-6ಲಕ್ಷ ವ್ಯಯಿಸಬೇಕಾಗುತ್ತದೆ. ಕನಿಷ್ಠ ವೆಚ್ಚದಲ್ಲಿ ನಾಗರಿಕರಿಗೆ ಅನುಕೂಲ ಮಾಡುವ ಕಡೆ ಸರ್ಕಾರಗಳು ಗಮನಹರಿಸಿದರೆ ಮಾತ್ರ ಈ ಕಾಯ್ದೆಗೆ ಮಹತ್ವ ಸಿಗುವುದು.
-ಶಿವಶಂಕರ್, ಕೋಣನಕುಂಟೆ

ಮದುವೆ ಎಂಬುದು ತೀರಾ ಖಾಸಗಿ ವಿಷಯ. ಎರಡು ಕುಟುಂಬಗಳ ನಡುವೆ ಸಾಮರಸ್ಯ ಬೆಸೆಯುವ ಹಾಗೂ ಹೊಸ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ. ಮದುವೆ ಎಂಬುದು ಇಂದು ಕೇವಲ ಎರಡು ಯುವ ಮನಸ್ಸುಗಳ ಒಂದುಗೂಡಿಸಿ ದಾಂಪತ್ಯ ಬದುಕಿಗೆ ಪ್ರವೇಶ ಕೊಡಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರಾಚೆಗೂ ಅದರದ್ದೇ ಆದ ಸಂಸ್ಕೃತಿಯೊಂದನ್ನು ಬಿಂಬಿಸುತ್ತದೆ. ನೆಂಟರಿಷ್ಟರು ಒಂದೆಡೆ ಸೇರುವ, ಅಲ್ಲಿಯೇ ಹೆಣ್ಣು ಗಂಡುಗಳ ಹುಡುಕಾಟವೂ ನಡೆಯುತ್ತಿದೆ. ಇಂತಹದ್ದರಲ್ಲಿ ಸಾವಿರ ಮಂದಿ ಮಾತ್ರ ಬರಬೇಕೆಂಬುದು ತರವಲ್ಲ.
-ಸತ್ಯಾನಂದ ಪಾತ್ರೋಟ, ಬಾಗಲಕೋಟೆ

ರಾಜ್ಯ ಸರ್ಕಾರ ಬೇಡದ ವಿಷಯಗಳನ್ನು ಕೆದಕಿ ಸುಮ್ಮನೆ ಗಾಯ ಮಾಡಿಕೊಳ್ಳಲು ಮುಂದಾಗುತ್ತಿದೆ. ಮನೆ ಕಟ್ಟುವುದು, ಮದುವೆ ಮಾಡುವುದು ಸುಲಭದ ಮಾತಲ್ಲ. ಹಣಕಾಸು ಹೊಂದಿಸುವುದು ತುಂಬ ಕಷ್ಟದ ಕೆಲಸ. ನವದಂಪತಿಗಳಿಗೆ ಶುಭ ಕೋರಲು ನೆಂಟಸ್ಥರು, ಪರಿಚಯಸ್ಥರು ಹಾಗೂ ಸ್ನೇಹಿತರನ್ನು ಮದುವೆಗೆ ಆಮಂತ್ರಿಸಿರುತ್ತಾರೆ. ಬಂದವರಿಗೆ ಸೌಜನ್ಯಕ್ಕೂ ಊಟದ ವ್ಯವಸ್ಥೆ ಮಾಡಬಾರದೇ? ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ, ನೀವು ಉಪವಾಸ ಹೋಗಿ ಎಂದು ಮದುವೆಗೆ ಬಂದವರಿಗೆ ಹೇಳಲು ಸಾಧ್ಯವೇ?
-ಜಯಕುಮಾರ ಓಜಿನಹಳ್ಳಿ, ಕೊಪ್ಪಳ

ಮದುವೆ ಮೇಲೆ ತೆರಿಗೆ ವಿಧಿಸುವ ಕಾಯ್ದೆ ಜಾರಿಗೆ ತರುವ ಮೂಲಕ ಸರ್ಕಾರ ಜನಸಾಮಾನ್ಯರ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡಲು ಹೊರಟಿದೆ. ಮದುವೆಗೆ ಹಣ ಖರ್ಚು ಮಾಡುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರ. ಸರ್ಕಾರ ಅದರೊಳಗೆ ಮೂಗು ತೂರಿಸಬಾರದು. ಒಂದು ವೇಳೆ ಕಾಯ್ದೆ ಜಾರಿಗೆ ಮಾಡುವುದಾರೆ ಇದು ಕೇವಲ ಐಷಾರಾಮಿ ಜೀವನ ಸಾಗಿಸುವ ಮೂಲಕ ಅನಗತ್ಯ ಹಣ ವ್ಯಯ ಮಾಡುವರಿಗೆ ಅಷ್ಟೇ ಸೀಮಿತಗೊಳಿಸಿ ಜನಸಾಮಾನ್ಯರ ಹಿತವನ್ನು ಕಾಪಾಡಲು ಸರ್ಕಾರ ಮುಂದಾಗಬೇಕು.
-ಪರಶುರಾಮ ಅಗಡಿ, ನ್ಯಾಯವಾದಿಗಳು, ಹಾವೇರಿ

ಅದ್ಧೂರಿ ಮದುವೆಗಳ ಮೇಲೆ ಕಣ್ಣಿಟ್ಟ ಸರ್ಕಾರ ದುಂದುವೆಚ್ಚದ ನೆಪದಲ್ಲಿ ಮದುವೆಗೂ ತೆರಿಗೆ ಹೇರಲು ಮುಂದಾಗಿದ್ದು ಹಾಸ್ಯಾಸ್ಪದ. ಸರ್ಕಾರ ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಅದನ್ನು ಬಿಟ್ಟು ಸಾರ್ವಜನಿಕ, ಸಾಮಾಜಿಕ ಬದುಕಿನೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಸರ್ಕಾರ ವಿದ್ಯುತ್, ಕುಡಿಯುವ ನೀರು, ರೈತರ ಸಮಸ್ಯೆಗಳಿಗೆ ಸ್ಪಂದಿಸಲಿ. ವರದಕ್ಷಿಣೆ ನಿಷೇಧ ಕಾನೂನು ಜಾರಿಯಾಗಿದ್ದರೂ ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ವರದಕ್ಷಿಣೆಯ ಕಿರುಕುಳಕ್ಕೆ ಈಗಲೂ ಬಲಿಯಾಗುತ್ತಿದ್ದಾರೆ ಎಂಬುದನ್ನು ಗಮನಿಸಲಿ.
-ಬಸವರಾಜ ಆಕಳವಾಡಿ, ನಿವೃತ್ತ ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ

ಅದ್ಧೂರಿ ಮದುವೆಗೆ ಕಡಿವಾಣ ಹಾಕುತ್ತೇನೆ ಎಂಬುದು ಬಾಲಿಶ ಹೇಳಿಕೆ. ತಮ್ಮದೇ ಸರ್ಕಾರದ ಸಚಿವರು ವಿಧಾನಸೌಧದ ಗೋಡೆ ಒಡೆದು ಹಾಳು ಮಾಡಿದಾಗ ಇಲ್ಲದ ಕಾಳಜಿ ಈಗ ಇದ್ದಕ್ಕಿದ್ದಂತೆ ಏಕೆ ಬಂದಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಸಚಿವರ ತಿಕ್ಕಲು ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ವೈಯಕ್ತಿಕ ಸಂಗತಿಗಳ ಜೊತೆ ಆಟವಾಡಲು ಮುಂದಾದರೆ ಆಯ್ಕೆ ಮಾಡಿದ ಜನರೆ ಜಯಚಂದ್ರ ಅವರಿಗೆ ಮುಂದೆ ವಿರಾಮ ನೀಡಲು ಆಲೋಚಿಸಬಹುದು.
-ಸ. ಗಿರಿಜಾಶಂಕರ, ಚಿಕ್ಕಮಗಳೂರು

ಮದುವೆ ಒಂದು ಸಂಭ್ರಮ. ಅದಕ್ಕೂ ತೆರಿಗೆ ನೀಡಬೇಕೆಂದರೆ ಜನರು ಸಂಭ್ರಮವನ್ನೂ ಅನುಭವಿಸದಂತೆ ಮಾಡುವ ಕ್ರಮ. ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಕಾನೂನು ಮಾರಕವಾಗಲಿದೆ. ಸರ್ಕಾರಕ್ಕೆ ಮಾಡಲು ಬೇರೇನೂ ಕೆಲಸ ಇಲ್ಲ ಎಂದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೂಢನಂಬಿಕೆ ಕಾಯಿದೆ, ಕನಕಗೋಪುರ ವಿವಾದದಂಥ ಅನೇಕ ವಿಚಾರಗಳ ಬಗ್ಗೆ ಗೊಂದಲ ಎಬ್ಬಿಸಿದೆ. ಸದ್ಯ ಮದುವೆಗೂ ತೆರಿಗೆ ನೀಡಬೇಕೆಂಬ ಸರ್ಕಾರದ ಆಲೋಚನೆಯೂ ಅದಕ್ಕೆ ಸೇರ್ಪಡೆಯಾಗಿದೆ.
-ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್, ರಾಯಚೂರು

ಶುಭ ಸಮಾರಂಭದಲ್ಲಿ ಆಪ್ತರು, ಬಂಧುಗಳು, ಜನತೆಯನ್ನು ಕರೆದು ಊಟ ಹಾಕುವುದು ನಮ್ಮ ಸಂಪ್ರದಾಯ. ಈ ಸಂಪ್ರದಾಯಕ್ಕೆ ಹೊಡೆತ ನೀಡುವ ಹುನ್ನಾರ ತೆರಿಗೆ ವಿಧಿಸುವ ನಿರ್ಧಾರದ ಹಿಂದೆ ಅಡಕವಾಗಿದೆ. ಸರ್ಕಾರ ಯಾವುದೆ ಕಾರಣಕ್ಕೆ ಸಾವಿರದಷ್ಟು ಜನರು ಪಾಲ್ಗೊಳ್ಳುವ ವಿವಾಹಕ್ಕೆ ತೆರಿಗೆ ಹಾಕಲು ನಿರ್ಧರಿಸಿದರೆ ಉಗ್ರ ಹೋರಾಟ ನಡೆಸುತ್ತೇವೆ. ಮದುವೆ ಮಂಟಪದಲ್ಲಿ ಯಾವುದೋ ಅಧಿಕಾರಿ ಬಂದು ತಲೆ ಎಣಿಸುತ್ತ ಕುಳಿತುಕೊಳ್ಳುವುದು ಶೋಭೆ ತರುವುದಿಲ್ಲ.
-ಬಿ.ಎಸ್.ಪೈ. ಹಿಂಜಾವೇ ರಾಜ್ಯಾಧ್ಯಕ್ಷ, ಕಾರವಾರ

ಮದುವೆಗಳ ಹಿಂದೆ, ಹೂವಿನ ಅಲಂಕಾರ, ದೀಪದ ಅಲಂಕಾರ, ಪೆಂಡಾಲ್ ಕಾರ್ಮಿಕರು, ಬಟ್ಟೆ ಉದ್ಯೋಗ ಸೇರಿದಂತೆ ಅಬ್ಬರದ ಮದುವೆಗಳ ಹಿಂದೆ ನೂರಾರು ಉದ್ಯೋಗಗಳು ಅಡಗಿರುತ್ತವೆ. ಅದರಿಂದ ಸಾವಿರಾರು ಬಡ ಕಾರ್ಮಿಕರ ಅನ್ನಕ್ಕೆ ಸರ್ಕಾರ ಕುತ್ತು ತರಲು ಹೊರಟಿದೆ. ಕೇವಲ 5 ಲಕ್ಷದಲ್ಲಿ ಮದುವೆ ಮುಗಿಯಬೇಕು, ಅಲ್ಲಿ ಸಾವಿರ ಜನಕ್ಕಿಂತಲೂ ಹೆಚ್ಚಿನ ಜನ ಸೇರಿದರೆ ತೆರಿಗೆ ನೀಡಲು ಅರ್ಹರು ಎನ್ನುವ ರೀತಿಯಲ್ಲಿ ಸರ್ಕಾರ ಚಿಂತನೆ ನಡೆಸಿರುವುದು ತೀರಾ ಹಾಸ್ಯಾಸ್ಪದ ಸಂಗತಿ.
-ರಾಜು ಕುರುಡಗಿ, ವ್ಯಾಪಾರಸ್ಥ ಗದಗ

ಸಾಮಾಜಿಕ ಬಂಧನಗಳಿಗೆ ಮಿತಿಗಳನ್ನು ಹೇರುವ ಸರ್ಕಾರದ ವಿಚಾರ ಸೂಕ್ತವೇನಲ್ಲ. ಮದುವೆ ಖರ್ಚಿನ ವಿಚಾರ ಪಾಲಕರಿಗೆ ಬಿಟ್ಟದ್ದು. ಮಿತಿಗಳನ್ನು ನಾವು ನಾವುಗಳೇ ಹಾಕಿಕೊಳ್ಳಬೇಕು ಹೊರತು, ಅನಗತ್ಯ ಕಾನೂನುಗಳನ್ನು ತಲೆ ಮೇಲೆ ಹೇರುವುದಕ್ಕಿಂತ ದುಷ್ಚಟಗಳಿಗೆ ನಿಬಂಧನೆ ಹೇರುವತ್ತ ಸರ್ಕಾರ ಗಮನಹರಿಸಲಿ. ಚುನಾವಣೆಯಲ್ಲಿ ಖರ್ಚಿನ ಮಿತಿ ಹೇರಿದ್ದಾರಾದರೂ ಒಳಗಾಗುವ ಖರ್ಚೇ ಬೇರೆ. ಇದು ಸರ್ಕಾರಕ್ಕೂ ಗೊತ್ತು, ಎಲ್ಲರಿಗೂ ಗೊತ್ತು. ಇದನ್ನಾದರೂ ಸರ್ಕಾರ ಅರ್ಥ ಮಾಡಿಕೊಳ್ಳಲಿ.
-ವೈಜನಾಥ ಬಿರಾದರ್, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ಹಾಸ್ಯನಟ

ಮದುವೆ ಹೆಸರಲ್ಲಿ ವೆಚ್ಚ ಮಾಡೋದು ಅವರವರ ತಾಕತ್ತಿಗೆ ಬಿಟ್ಟ ವಿಚಾರ. ಇನ್ನು ಮದುವೆಯ ಸಮಾರಂಭಕ್ಕೆ ಟ್ಯಾಕ್ಸ್ ಹೇರಿ ಇಂತಿಷ್ಟೇ ಜನರನ್ನು ಕರೆಯಬೇಕೆಂಬ ನಿಯಮ ಬಂಧು-ಬಳಗದವರನ್ನು ದೂರವಿಡುವ ಮಾತಾಗಿದೆ. ಮನಸ್ಸುಗಳ ಬಂಧನದ ಮಧ್ಯೆ ಟ್ಯಾಕ್ಸ್ ಎಂಬ ಬಿರುಕುಂಟು ಮಾಡುವ ವಿಚಾರ ಕೈಬಿಟ್ಟು ವರದಕ್ಷಿಣೆ ಪೀಡೆಯಿಂದ ಬಳಲಿ ಬೆಂಡಾಗಿ ಸಾಲು ಸಾಲು ಆತ್ಮಹತ್ಯೆಯತ್ತ ತಲೆಯೊಡ್ಡುತ್ತಿರುವ ನವವಿವಾಹಿತರ ನೋವನ್ನು ಅರಿಯಲಿ. ವರದಕ್ಷಿಣೆ ಪಿಡುಗಿನ ವಿರುದ್ಧ ಗಂಭೀರವಾಗಲಿ.
-ಶಾಮರಾವ್ ಮೋರ್ಗಿಕರ್, ಸವಿತಾ ಸಮಾಜದ ಮುಖಂಡ, ಬೀದರ್

ಮದುವೆ ತೀರ ವೈಯಕ್ತಿಕ ವಿಚಾರ. ಸರ್ಕಾರ ಪ್ರಜೆಗಳ ಖಾಸಗಿ ಜೀವನದಲ್ಲಿ ಮೂಗು ತೂರಿಸುವ ಕೆಲಸಕ್ಕೆ ಕೈಹಾಕಬಾರದು. ಜನ ತಮ್ಮ ಯೋಗ್ಯತೆಗೆ ತಕ್ಕಂತೆ ಮದುವೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆ. ಸರ್ಕಾರ ವಿವಾಹ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದು ಮೂರ್ಖತನದ ಪರಮಾವಧಿ. ಇನ್ನು ಸರ್ಕಾರಕ್ಕೆ ತೆರಿಗೆ ನೀಡದೆ ವಂಚಿಸುತ್ತಿರುವ ಕಳ್ಳರನ್ನು ಹಿಡಿಯದೆ ಮಧ್ಯಮ ವರ್ಗದ ಜನಸಾಮಾನ್ಯರ ಮದುವೆ ಮೇಲೆ ತೆರಿಗೆ ವಿಧಿಸಿ ಯಾವ ಸಾಧನೆ ಮಾಡಲು ಹೊರಟಿದೆಯೋ ಗೊತ್ತಿಲ್ಲ.
-ಅಶೋಕ ಅಲ್ಮಾಜೆ, ಔರಾದ್

ಜನರ ವೈಯಕ್ತಿಕ ಸಮಾರಂಭದ ಮೇಲೆ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಇಂಥ ಕಾನೂನು ಸಿದ್ಧಪಡಿಸುವ ಮುಂಚೆ ಸಾಕಷ್ಟು ಯೋಚಿಸ ಬೇಕಾದ ಅನಿವಾರ್ಯತೆ ಇದೆ. ಒಬ್ಬ ವ್ಯಕ್ತಿ ನ್ಯಾಯಯುತವಾಗಿ ದುಡಿದು ಸಂಪಾದಿಸಿದ ಹಣದಲ್ಲಿ ತನ್ನ ಮಗಳ/ ಮಗನ ಮದುವೆಯನ್ನು ತನ್ನಿಷ್ಟದಂತೆ ಮಾಡುತ್ತಾನೆ. ಅದಕ್ಕೂ ಸ್ವಾತಂತ್ರ್ಯ ಇಲ್ಲದಿದ್ದರೆ ಹೇಗೆ...? ಒಬ್ಬ ವ್ಯಕ್ತಿ ಸಂಪಾದನೆ ಮೇಲೆ ಎಷ್ಟು ಸಲ ತೆರಿಗೆ ಕಟ್ಟಬೇಕು. ಈಗಾಗಲೇ ತೆರಿಗೆ ಕಟ್ಟಿದ ಹಣಕ್ಕೆ ಪುನಃ ತೆರಿಗೆ ಕಟ್ಟುವುದು ಯಾವ ನ್ಯಾಯ..?
-ಸುರೇಂದ್ರ ಅಡಿಗ, ಅಧ್ಯಕ್ಷರು, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್

ಸರ್ಕಾರದ ಸಭೆ ಸಮಾರಂಭಗಳಗಳಿಗೆ ಕೋಟ್ಯಂತರ ರು. ಖರ್ಚು ಮಾಡುತ್ತಿರುವಾಗ ಅದನ್ನು ಕೇಳುವವರು ಯಾರೂ ಇಲ್ಲ. ಬರಗಾಲದಲ್ಲೂ ಸಚಿವರ, ಶಾಸಕರ ಹುಟ್ಟುಹಬ್ಬ, ಮದುವೆ ಸಮಾರಂಭಗಳಿಗೆ ಮಿತಿಯುಂಟೇ? ಅವರುಗಳಿಂದ ನಿಖರವಾಗಿ ತೆರಿಗೆ ವಸೂಲಿ ಮಾಡಲು ಸಾಧ್ಯವೇ? ಜನಸಾಮಾನ್ಯ ಕಷ್ಟವಿರಲಿ, ಸುಖವಿರಲಿ ಮದುವೆಯೆಂಬ ಆಚರಣೆಯನ್ನು ಅವನಿಷ್ಟದಂತೆ ಆಚರಿಸಲು ಬಿಡಿ. ತೆರಿಗೆ ವಿಧಿಸಲು ಬೇಕಾದಷ್ಟು ದಾರಿಗಳಿವೆ.
- ಉಷಾ ಶ್ರೀನಿವಾಸ್, ತುರುವೇಕೆರೆ

ಮದುವೆಯನ್ನು ಅದ್ಧೂರಿಯಾಗಿ ಮಾಡುವುದು ನಮ್ಮ ಪ್ರತಿಷ್ಠೆಯ ಪ್ರತೀಕ ಎಂಬುದಾಗಿ ಪರಿಗಣಿಸಿದ್ದೇವೆ. ನಮ್ಮ ಅದ್ಧೂರಿತನಕ್ಕೆ ಕಡಿವಾಣವಿಲ್ಲದೆ ಹುಚ್ಚು ಕುದುರೆಯಂತೆ ಧಿಕ್ಕಾಪಾಲಾಗಿ ಓಡುತ್ತಿದೆ. ಇಂಥ ಅದ್ಧೂರಿತನದ ಮದುವೆಗೆ ಸರ್ಕಾರ ತೆರಿಗೆ ಎಂಬ ಲಗಾಮು ಹಾಕಿ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಇದು ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂಬುದು ಯಕ್ಷಪ್ರಶ್ನೆ.
-ಎಂ.ಎಸ್.ಶ್ರೀಕಂಠಸ್ವಾಮಿ, ಮಳವಳ್ಳಿ

ಮದುವೆಯಂಥ ಮಂಗಳ ಕಾರ್ಯದ ನೆರವೇರಿಕೆಯ ಮೇಲೂ ತೆರಿಗೆ ವಿಧಿಸುವಂಥ ಅತ್ಯಂತ ಕ್ರೂರ ನಿರ್ಧಾರ ತೆಗೆದುಕೊಳ್ಳುವುದರ ಮೂಲಕ ಈ ರಾಜ್ಯದ ಪ್ರಜೆಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ನಮ್ಮ ಹಿಂದು ಸಂಪ್ರದಾಯದ ಪ್ರಕಾರ, ಮದುವೆಗಳು ಸ್ವರ್ಗದಲ್ಲಿ ನೆರವೇರುತ್ತವೆ ಎಂಬ ಬಲವಾದ ನಂಬಿಕೆ ಇದೆ. ಈ ನಂಬಿಕೆಯೂ ಧಾರ್ಮಿಕ ಮತ್ತು ಭಾವನಾತ್ಮಕ ಪಾತಳಿಯ ಮೇಲೆಯೇ ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಂದಿದೆ. ಹೀಗಾಗಿ, ಈ ನಂಬಿಕೆಯೆಂಬ ಜೇನುಗೂಡಿಗೆ ಸರ್ಕಾರ ಕೈ ಹಾಕದಿರಲಿ.
-ಕಲ್ಲೇಶ್ ಕಂಬಾರ್, ಹಾರೂಗೇರಿ (ಬೆಳಗಾವಿ)

ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡಿ ರೂಪಿಸಿದ ನೀತಿಯಂತಿದೆ. ವಾಸ್ತವವಾಗಿ ವೈಭವೋಪೇತ ಮದುವೆಗಳು ನಡೆಯುವ ಕಲ್ಯಾಣ ಮಂಟಪಗಳಿಂದ ಮತ್ತು ಇಂಥ ಮದುವೆಗಳಿಗೆ ಖರ್ಚು ಮಾಡುವ ಪ್ರತಿಯೊಂದು ಮೂಲಗಳಿಂದ ಸರ್ಕಾರಕ್ಕೆ ತೆರಿಗೆ ಸಂದಾಯವಾಗಿರುತ್ತದೆ. ಆದರೆ ಈಗ ಮದುವೆಯ ಒಟ್ಟಾರೆ ಖರ್ಚು ಮತ್ತು ಮದುವೆಗೆ ಸೇರುವ ಜನರ ಗಣತಿ ಮೇಲೆ ತೆರಿಗೆ ವಿಧಿಸಲು ಹೊರಟಿರುವ ಕ್ರಮದಿಂದ ಮತ್ತೊಂದು ಹೊಸ ರೀತಿಯ ಭ್ರಷ್ಟಾಚಾರಕ್ಕೆ ನಾಂದಿಯಾಗುವುದರಲ್ಲಿ ಸಂಶಯವಿಲ್ಲ,
- ಆರ್.ಸಿ ಪರಶುರಾಮ್, ಶಿಕಾರಿಪುರ

ಸರಳ ಮದುವೆಗಳಿಗೆ ಮನವಿ ಮಾಡಿ. ವರದಕ್ಷಿಣೆ ಪಡೆಯದ ಮದುವೆಗಳಿಗೆ, ವರದಕ್ಷಿಣೆ ರಹಿತ ಮದುವೆಗೆ ರಿಯಾಯಿತಿ ದರದಲ್ಲಿ ಮದುವೆ ಮಂಟಪ ಕಲ್ಪಿಸಿಕೊಡಿ. ಒಟ್ಟಾರೆ ದುಂದು ವೆಚ್ಚಕ್ಕಿಂತ ವರದಕ್ಷಿಣೆ ಕಿರುಕುಳ ತಡೆಯಲು ಜಾಗೃತಿ ಮೂಡಿಸಿ. ಹಿಂಸೆ ನೀಡಿದ ತಪ್ಪಿತಸ್ತರು ತಪ್ಪಿಸಿಕೊಳ್ಳದಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲಿ. ಇದನ್ನೆಲ್ಲ ಬಿಟ್ಟು ಮದುವೆಗಳಿಗೂ ಕಟ್ಟು ಪಾಡುಗಳನ್ನು ಹೇರಲು ಸಚಿವ ಟಿ.ಬಿ ಜಯಚಂದ್ರ ಅವರಿಗೆ ಬಿಟ್ಟೋರ್ಯಾರು?
- ಕೃಷ್ಣ ಸುರೇಶರಾವ್ ಕುಲಕರ್ಣಿ, ಬೀದರ್

ಬಡ ಕನ್ಯಾಪಿತೃಗಳೆಡೆಗೆ ತಮ್ಮ ಮೂರನೇ ಕಣ್ಣು ಬೀರುತ್ತಿರುವ ರಾಜಕೀಯದ 'ಕ್ರೇಜಿ' ಸಚಿವ ಟಿ.ಬಿ.ಜಯಚಂದ್ರರ ಹೊಸ ಕಾನ್ಸೆಪ್ಟ್ 'ಮದುವೆ ಮಾಡಿ ನೋಡು, ತೆರಿಗೆ ಕಟ್ಟಿ ನೋಡು' ಸಮಸ್ಯೆಯ ವಿಶ್ವರೂಪದೊಂದಿಗೆ ಅಮೂಲಾಗ್ರ ಮಾಹಿತಿಗಳನ್ನೊಳಗೊಂಡ ವಿಶ್ವೇಶ್ವರ ಭಟ್ಟರ ಲೇಖನದಲ್ಲಿ ಕೊನೆಗೆ ಭಟ್ಟರು ನೀವೇನಂತೀರಿ ಎಂದು ಕೇಳಿದ್ದಾರೆ. ಭಟ್ಟರೇ, ಹಂಚಿಕೊಂಡು ಬರೆಯಲು ನೀವು ಬರೆಯದೇ ಉಳಿಸಿರುವುದಾದರೂ ಏನು? ಹೇಳಿದ್ದೇ ಹೇಳಿದರೆ ಕಾಪಿ ಅಂತಾರೆ. ಹಾಗಾಗಿ ನಿಮ್ಮ ಅಭಿಮತಕ್ಕೆ ಜೈ ಅಂತೀವಿ.
-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.