ಹೆರಿಗೆಗೂ ತೆರಿಗೆ ಹೇರ್ತಿರಾ? ಈಗಲೇ ಹೇಳಿ ಸ್ವಾಮಿ, ನಾನು ಅಪ್ಪ ಆಗಬೇಕೋ ಬೇಡ್ವೋ ಅಂಥಾ ನಿರ್ಧಾರ ಮಾಡ್ತೀನಿ!

ತೆರಿಗೆ ಭಾಗ್ಯ ಕ್ಕೆ ಮಂಗಳಾರತಿ..!
ಅದ್ಧೂರಿ ಮದುವೆಗೆ ಕಡಿವಾಣ ಹಾಕಲು 'ತೆರಿಗೆ ಭಾಗ್ಯ' ಕರುಣಿಸಲು ಹೊರಟ ಸರ್ಕಾರದ ಕ್ರಮಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಮ್ಮ ದುಡ್ಡಲ್ಲಿ ನಾವು ಹೇಗಾದರೂ ಮದುವೆ ಮಾಡಿ ಕೊಳ್ಳುತ್ತೇವೆ. ಮದುವೆಗೆ ಬಂದ ಅತಿಥಿಗಳ ತಲೆ ಎಣಿಸಿ 1000ಕ್ಕಿಂತ ಹೆಚ್ಚಾದ ಜನರನ್ನು ವಾಪಸ್ ಕಳುಹಿಸಿ ಮರ್ಯಾದೆ ತೆಗೆಸಿಕೊಳ್ಳಲು ನಾವು ಸಿದ್ಧರಿಲ್ಲ ಎಂಬ ವಿರೋಧ ಧ್ವನಿ ವ್ಯಕ್ತವಾಗಿದೆ. ಜನರ ದುಡ್ಡು ಸುಲಿಗೆ ಮಾಡಲು ನೂರಾರು ದಾರಿ ಕಂಡುಕೊಂಡಿದ್ದೀರಿ. ಈಗ ಮತ್ತೊಂದು ರಹದಾರಿ ನಿರ್ಮಿಸಿಕೊಳ್ಳಲು ಹೊರಟಿದ್ದೀರೇನೂ ಎಂದು ಸರ್ಕಾರದ ಕಿವಿ ಹಿಂಡಿದ್ದಾರೆ. ಅವುಗಳ ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ..
ರಾಜ್ಯದಲ್ಲಿ ಗಂಭೀರ ಸಮಸ್ಯೆಗಳಿದ್ದರೂ ಅಸ್ತವ್ಯಸ್ತವಾಗುವ ಕಾನೂನು ಜಾರಿಗೆ ತರಲು ಹೊರಟಿರುವುದು ಹಾಸ್ಯಸ್ವಾದ. ಸಿದ್ದು ಸರ್ಕಾರ ರೂಪಿಸುತ್ತಿರುವ ಹೊಸ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಅದರಲ್ಲಿ ಹಿಂದುಳಿದ ಮಕ್ಕಳ ಶಾಲಾ ಪ್ರವಾಸ, ಶಾದಿಭಾಗ್ಯ ಜೊತೆಗೆ ಈಗ ಮದುವೆಗೆ ಕರ ವಿಧಿಸುವ ಕಾನೂನು ಅಸಂಬದ್ಧವಾಗಿವೆ. ಈ ಯೋಜನೆಗಳ ಬಗ್ಗೆ ಧ್ವನಿ ಎತ್ತಿ ಜನಾಭಿಪ್ರಾಯ ವರದಿ ಮಾಡುತ್ತಿರುವ 'ಕನ್ನಡಪ್ರಭ'ಕ್ಕೆ ಧನ್ಯವಾದ.
-ದಂಡಿನಶಿವರ ಮಂಜುನಾಥ್, ಬೆಂಗಳೂರು
ಸಚಿವರೇ, ಮದುವೆ ಅನ್ನುವುದು ಬರಿಯ ಆಚರಣೆಯಷ್ಟೇ ಅಲ್ಲ. ಅದು ಸಮಾಜದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಒಂದು ವ್ಯವಸ್ಥೆ. ಜನರೆಲ್ಲಾ ಒಟ್ಟಾಗಿ ಸೇರುವ ಯಾವುದೇ ಆಚರಣೆಯಾದರೂ ಅದನ್ನು ಪ್ರೋತ್ಸಾಹಿಸಬೇಕೆ ಹೊರತು ತುಳಿಯಲು ಹೊರಡಬಾರದು. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ. ನಾಳೆ ಕೆಲವು ಜಾತಿ, ಧರ್ಮದವರು ಈ ಹೊಸ ತೆರಿಗೆಗೆ ಜಾತಿ, ಧರ್ಮಾಧಾರಿತ ವಿನಾಯಿತಿ ಕೇಳಿದರೆ ಏನು ಮಾಡುವಿರಿ? ವಿನಾಯಿತಿ ಕೊಟ್ಟರೆ ಅದು ಮತ್ತೆ ಅಸಮಾಧಾನಕ್ಕೆ ಕಾರಣವಾಗುವುದಿಲ್ಲವೇ? ನೆನಪಿಡಿ ಇದು ಹಿಂದೂ ಧರ್ಮದ ಮೇಲೆ ನೀವು ಮಾಡುತ್ತಿರುವ ಅಟ್ಯಾಕ್ ಎಂದು ಜನ ತಿಳಿದರೆ ಕೇಂದ್ರದಲ್ಲಿ ಯುಪಿಎಗೆ ಆದ ಗತಿ ನಿಮಗೂ ಕಟ್ಟಿಟ್ಟ ಬುತ್ತಿ.
-ನಾಗೇಶ ಹುಳಿಯಾರ, ಬೆಂಗಳೂರು
ಶಾದಿಭಾಗ್ಯ ಎನ್ನುವ ಸರ್ಕಾರಿ ವರದಕ್ಷಿಣೆ ಸ್ಕೀಮಿಗೆ ಹಣದ ಅವಶ್ಯಕತೆ ಇತ್ತು. ಅದೇ ಸಂದರ್ಭದಲ್ಲಿ ಸರಿಯಾಗಿ ಮದುವೆಗೆ ತೆರಿಗೆ ವಿಧಿಸಿ ಹಣ ಸಂಗ್ರಹಿಸಿ ಎಂದು ಕೆಲ ಬುದ್ಧಿಜೀವಿಗಳು ಸಲಹೆ ನೀಡಿದರು. ಹೀಗೆ ಮಾಡಿದರೆ ತನಗೆ ಕ್ರಾಂತಿಕಾರಿ, ಸಮಾಜ ಸುಧಾರಕ ಮುಂತಾದ ಬಿರುದುಗಳು ಬರುತ್ತವೆ ಎಂಬ ಮೂಢನಂಬಿಕೆಯ ಕಾರಣದಿಂದ ಸಚಿವರು ಈ ನಿರ್ಧಾರಕ್ಕೆ ಬಂದರು. ಹಾಗೆಯೇ ಇನ್ನು ಕೆಲವೇ ದಿನಗಳಲ್ಲಿ ಈ ನಿರ್ಧಾರದಿಂದ ಹೊರಬರುವ ಪ್ರಕಟಣೆಯೂ ಹೊರಬೀಳಲಿದೆ.
-ಎಚ್.ಕೆ.ವಾದಿರಾಜ, ಬೆಂಗಳೂರು
ಅದ್ಧೂರಿ ಮದುವೆಗೆ ತೆರಿಗೆ ವಿಧಿಸುವ ಯೋಜನೆಯೇನೋ ಚೆನ್ನಾಗಿದೆ. ಆದರೆ ಇಂತಹ ಹೊಸ ವಿಧೇಯಕಗಳನ್ನು ತರುವ ಮುನ್ನ ಜಾರಿಯಲ್ಲಿರುವ ವಿಧೇಯಕಗಳನ್ನು ಅನುಷ್ಠಾನಗೊಳಿಸಬೇಕು. ಮದುವೆಗಳ ತೆರಿಗೆಯಿಂದ ಬಂದ ಹಣವನ್ನು ಸಚಿವರ ಕಚೇರಿ-ಮನೆ ನವೀಕರಣ, ದುಬಾರಿ ಕಾರು ಖರೀದಿಗೆ ಉಪಯೋಗಿಸಿಕೊಂಡರೆ ತೆರಿಗೆ ವಿದಿಸಿದ್ದೂ ವ್ಯರ್ಥ. ಇದೊಂದು ನಗೆಪಾಟಲಿಗೀಡಾಗುವ ಕಾನೂನು.
-ರೂಪೇಶ, ಬೆಂಗಳೂರು
ಕೇವಲ ದಂಡ, ಕರ ಹಾಕುವುದರಿಂದ ಸಮಾಜದಲ್ಲಿನ ತಪ್ಪುಗಳನ್ನು ಸರಿ ಮಾಡಬಹುದೆಂಬುದು ಸರ್ಕಾರದ ಮೂರ್ಖತನ. ಸರಳ ಮದುವೆಗಳನ್ನು ಪೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಜಾಗೃತಿ ಕಾರ್ಯಕಮಗಳನ್ನು ಹಮ್ಮಿಕೊಳ್ಳಬೇಕು. ಮೊದಲು ಆಡಳಿತಗಾರರು ತಮ್ಮ ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಂಡಾಗ ಅದು ಇತರರಿಗೆ ಮಾದರಿಯಾಗುತ್ತದೆ. ತಾವು ವೈಭವೋಪೇತ ಜೀವನ ನಡೆಸಿ ಇತರರಿಗೆ ಸರಳ ಜೀವನ ನಡೆಸಿ ಎನ್ನುವುದು 'ಆಚಾರ ಹೇಳಿ ಬದನೆಕಾಯಿ ತಿಂದಂತಾಗುವುದು'.
-ಉದಯ ಮ. ಯಂಡಿಗೇರಿ, ಧಾರವಾಡ
ಸರ್ಕಾರ ಯಾವುದೇ ತೆರಿಗೆ ಹಾಕುವಾಗ ಅರ್ಥಶಾಸ್ತ್ರಜ್ಞರ ಜೊತೆಗೆ ಹತ್ತಾರು ಬಾರಿ ಸಮಾಲೋಚಿಸಬೇಕಾಗುತ್ತದೆ. ಧಿಡೀರನೆ ಯಾವುದೇ ಕ್ರಮ ಕೈಗೊಳ್ಳುವುದು ಯೊಗ್ಯವಲ್ಲ. ಗ್ರಾಮೀಣ ಭಾಗಗಳಲ್ಲಿ ಮದುವೆ ಕಾರ್ಯಕ್ಕೆ ಆಹ್ವಾನಿತ ಕುಟುಂಬದ ಎಲ್ಲ ಸದಸ್ಯರು ಆಗಮಿಸಿರುತ್ತಾರೆ. ಒಮ್ಮೊಮ್ಮೆ ಎಣಿಕೆಗಿಂತ ದುಪ್ಪಟ್ಟು ಜನರು ಆಗಮಿಸಿರುತ್ತಾರೆ. ಯಾರನ್ನೂ ಮದುವೆ ಮಂಟಪದಿಂದ ಹೊರದಬ್ಬಲಿಕ್ಕಾಗದು. ಸರ್ಕಾರಕ್ಕೆ ತೆರಿಗೆ ವಿಧಿಸಲು ಬೇರೆ ಬೇರೆ ವಿಷಯಗಳು ಸಾಕಷ್ಟಿವೆ. ನಾಳೆ ಹೊಸ ಬಟ್ಟೆ ತೊಟ್ಟವರ ಮೇಲೆ, ಮಾತನಾಡಿದವರ ಮೇಲೆ,ದೂರದಿಂದ ಮದುವೆ ವೀಕ್ಷಿಸಿದವರ ಮೇಲೆ, ಅಡುಗೆ ಮಾಡುವ ಭಟ್ಟರ ಮೇಲೆ ತೆರಿಗೆ ವಿಧಿಸಿದರೇನು ಗತಿ.
-ಪ್ರೊ.ಎ.ಎಲ್.ನಾಗೂರ, ಬಿಜಾಪುರ
ಭಾರತದ ಸಂಸ್ಕೃತಿಯ ಅಂಗವೇ ಮದುವೆ. ಇದು ತೀರಾ ಖಾಸಗಿ ವಿಚಾರವಾದರೂ ಈ ಅನುಕರಣಾ ಯುಗದಲ್ಲಿ ವೈಭವೋಪೇತವಾಗಿ ಮದುವೆಗಳನ್ನು ನಡೆಸುವುದು ದಿನೇ ದಿನೇ ಏರುತ್ತಿದೆ. ಭಾರತದಲ್ಲಿ ನಡೆಯುವ ಹಲವಾರು ಮದುವೆಗಳಲ್ಲಿ ಪೋಲಾಗುವ ಆಹಾರ, ದುಂದುವೆಚ್ಚಗಳು ಯಾವ ದೇಶದಲ್ಲೂ ಇಂತಹ ವ್ಯರ್ಥ ಖರ್ಚುಗಳಾಗುವುದಿಲ್ಲ. ರಾಜ್ಯ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಈ ಹೊಸ ಕಾಯ್ದೆ ಸ್ವಾಗತಾರ್ಹ.
-ಕೆಟಿಆರ್, ಬೆಂಗಳೂರು
ಸರ್ಕಾರ ಮೊದಲು ಇರುವ ಕಾನೂನುಗಳನ್ನು ಸರಿಯಾಗಿ ಅನುಷ್ಠಾನ ಮಾಡಲಿ, ಸಾಧಕ-ಬಾಧಕಗಳನ್ನು ಕಿಂಚಿತ್ತು ತಿಳಿಯದೇ ಏಕಾಏಕಿ ಹೊಸ ಕಾನೂನುಗಳನ್ನು ಅನುಷ್ಠಾನ ಮಾಡಿದರೆ ಮೌಢ್ಯತನದ ಪರಮಾವಧಿ. ಸರ್ಕಾರ, ಜನಪರ ಕಾನೂನುಗಳನ್ನು ಅನುಷ್ಠಾನಗೊಳಸಲಿ.
-ಎಸ್. ಪ್ರಸನ್ನಕುಮಾರ, ಕೊಟ್ಟೂರು
ಅವರಲ್ಲಿ ಆಡಂಬರತೆ ಮಾಡುವಷ್ಟು ಹಣವಿದೆ ಮಾಡಲಿ ಬಿಡಿ. ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಸಾಲ ಮಾಡಿ ಆಡಂಬರದ ಮದುವೆ ಮಾಡುತ್ತೇನೆಂದರೆ ಅದು ಅವರ ವಿವೇಚನೆಗೆ ಬಿಟ್ಟ ವಿಷಯ. ಆಡಂಬರದ ಮದುವೆಯಿಂದ ಹಲವಾರು ಜನರ ಜೀವನ ಸಾಗುತ್ತಿದೆ. ಅದನ್ನು ತಡೆಯ ಹೊರಟಿರುವುದು ಮೂರ್ಖತನವೇ ಸರಿ. ಪ್ರಿಂಟಿಂಗ್ ಪ್ರೆಸ್, ವಿಡಿಯೋ ಚಿತ್ರೀಕರಣ, ವಾದ್ಯದವರು, ಛತ್ರದವರು, ಬಾಣಸಿಗದವರು, ವರ್ತಮಾನ ಪತ್ರಿಕೆಯವರು, ಗಾಯನ ವೃಂದದವರು, ಹೂವಿನಿಂದ ಅಲಂಕಾರ ಮಾಡುವವರು ಇನ್ನು ಮುಂತಾದವರ ವ್ಯಾಪರಕ್ಕೆ ಪೆಟ್ಟು ಬೀಳುತ್ತದೆ.
-ಪ್ರದೀಪ್.ಎನ್., ಚೆಲುವರಸನಕೊಪ್ಪಲು
ಕಾನೂನು ಸಚಿವ ಟಿ.ಬಿ ಜಯಚಂದ್ರ ಅದ್ಧೂರಿ ಮದುವೆಗೆ ತೆರಿಗೆ ವಿಧಿಸುವ ಕಾಯಿದೆಯನ್ನು ಜಾರಿಗೆ ತರುತ್ತಿರುವುದು ಖಂಡನೀಯ. ಮದುವೆ ಎಂಬುದು ಅವರ ವಿಚಾರ ವಿವೇಚನೆಗೆ ಬಿಟ್ಟದ್ದು. ಶ್ರೀಮಂತರು ಅದ್ಧೂರಿಯಾಗಿ ಮದುವೆ ಮಾಡಿದರೆ ಬಡವರು ಸಣ್ಣ ಪ್ರಮಾಣದಲ್ಲಿ ಮಾಡುತ್ತಾರೆ. ಅವುಗಳಿಗೆ ತೆರಿಗೆ ವಿಧಿಸುವುದು ತರವಲ್ಲ.
-ಅಯ್ಯಣ ಹೊಂಡೆಕಾರ, ಹಿರಿಯ ಸಾಹಿತಿ, ಯಾದಗಿರಿ
ಅದ್ಧೂರಿ ಮದುವೆಯಲ್ಲಿ ಖರ್ಚಿನ ಲೆಕ್ಕ ಸಿಗುವುದಿಲ್ಲ. ಸರ್ಕಾರ ಜನರಿಂದ ಬೇರೊಂದು ರೀತಿಯಲ್ಲಿ ಹಣ ವಸೂಲಿ ಮಾಡಲು ಈ ಕಾಯಿದೆ ತರುತ್ತಿದೆ ಹೊರತು ಜನರ ಹಿತದೃಷ್ಟಿಯಿಂದ ಅಲ್ಲ. ಕಾನೂನು ಜಾರಿಗೆ ತಂದರೆ ಜನರು ಮದುವೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸಬೇಕಾದ ಪರಿಸ್ಥಿತಿ ಬರುತ್ತದೆ.
-ರೇವಣಸಿದ್ದಪ್ಪ ಹಣಮಂತರಾವ, ಇವಣಿ, ಯಾದಗಿರಿ
ಜನರು ಸ್ವಯಂ ಪ್ರೇರಣೆಯಿಂದ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕುವುದು ಒಳಿತು. ಬಡವ-ಬಲ್ಲಿದರೆಂಬ ವ್ಯತ್ಯಾಸ ಮಾಯವಾಗಿ ಎಲ್ಲರೂ ಸಮಾನರೆಂಬ ಭಾವನೆ ಬರಬೇಕೆಂದರೆ ಪ್ರತಿಯೊಬ್ಬರೂ ಸರಳ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಸಾಕಷ್ಟು ಹಣ ವೆಚ್ಚ ಮಾಡಿ ಮದುವೆ ಮಾಡುವುದರಲ್ಲಿ ಅರ್ಥವಿಲ್ಲ. ಅದ್ಧೂರಿ ಮದುವೆಗಳನ್ನು ಕಂಡ ಬಡವರು ತಮಗೆ ಇಂಥ ಮದುವೆ ಮಾಡಲಾಗುವುದಿಲ್ಲವೆಂದು ಸಂಕಟ ಪಡುತ್ತಾರೆ. ಜನರು ಹೆಚ್ಚು ಹಣ ವೆಚ್ಚ ಮಾಡದೇ ಸರಳ ರೀತಿಯಲ್ಲಿ ಮದುವೆಗಳನ್ನು ಮಾಡಲು ಮುಂದಾಗಬೇಕು. ಅದ್ದೂರಿ ಮದುವೆಯ ಹಣವನ್ನು ಇತರ ಕಾರ್ಯಗಳಿಗೆ ಬಳಸಬೇಕು. ಈ ಹಿಂದೆಯೂ ರೇಷನಿಂಗ್ ಎಂಬ ಯೋಜನೆಯಡಿ ಸರ್ಕಾರ ಇಂಥ ಕಾನೂನನ್ನು ಜಾರಿಗೆ ತಂದಿತ್ತು. ಆ ಕಾನೂನಿನ ಪ್ರಕಾರ 200ಕ್ಕೂ ಹೆಚ್ಚು ಜನರನ್ನು ಯಾವುದೇ ಸಮಾರಂಭಕ್ಕೆ ಊಟಕ್ಕೆ ಕರೆಯುವಂತಿರಲಿಲ್ಲ. ಒಂದು ವೇಳೆ ನಿಯಮ ಮುರಿದರೆ ದಂಡ ವಿಧಿಸಲಾಗುತ್ತಿತ್ತು. ಇದೀಗ ಸರ್ಕಾರ ಮತ್ತೆ ಅಂಥದ್ದೇ ಕಾನೂನು ಜಾರಿಗೆ ತರಲು ಹೊರಟಿದೆ. ಇಂಥ ಸಂಗತಿಗಳನ್ನೆಲ್ಲ ಜನರು ಸ್ವಯಂಪ್ರೇರಿತವಾಗಿಯೇ ಕೈಗೊಂಡರೆ ಒಳಿತು. ಸರಳ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಆವಶ್ಯಕತೆಯೂ ಇದೆ.
-ನಾರಾಯಣ ಘಳಗಿ, ಸಾಹಿತಿ, ಹುಬ್ಬಳ್ಳಿ
ಸರ್ಕಾರಕ್ಕೆ ಹಣ ಸೇರಿಸಲು ಇದು ಇನ್ನೊಂದು ಮಾರ್ಗ. ಕಾಂಗ್ರೆಸ್ ಹೈ(ಕೈ)ಕಮಾಂಡ್ ಇದನ್ನು ವಿರೋಧಿಸಿರುವುದು ಸರಿಯಾಗಿಯೇ ಇದೆ. ಯಾರೂ ಮಾಡದ್ದನ್ನು ಮಾಡಿ ಶಹಭಾಷ್ಗಿರಿ ಪಡೆಯುವ ಉತ್ಸಾಹವನ್ನು ಸರ್ಕಾರ ತೋರುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿರಬೇಕೇ ಹೊರತು ಜನವಿರೋಧಿಯಾಗಿರಬಾರದು. ಸರ್ಕಾರಕ್ಕೆ ಮದುವೆ ಖರ್ಚಿನ ವಿವರವನ್ನು ಯಾರು ತಾನೇ ಸರಿಯಾಗಿ ನೀಡುತ್ತಾರೆ. ವೈಯಕ್ತಿಕ ಆದಾಯ ತೆರಿಗೆಯೇ ಎಲ್ಲರಿಂದಲೂ ಅವರವರ ಆದಾಯಕ್ಕನುಗುಣವಾಗಿ ವಸೂಲಿಯಾಗುತ್ತಿಲ್ಲ. ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾವ ಮೂಲಗಳಿಂದಲೂ ಆದಾಯಕ್ಕೆ ಸರಿಯಾದ ತೆರಿಗೆ ವಸೂಲಾತಿ ಆಗುತ್ತಿಲ್ಲ. ಎಲ್ಲಾ ಪ್ರಜೆಗಳೂ ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸಿದರೆ ದೇಶದಲ್ಲಿ ಬಡತನವೇ ಇರುವುದಿಲ್ಲ. ಇನ್ನು ಮದುವೆ ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡುವವರು ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳು. ಕಾನೂನನ್ನು ರೂಪಿಸುವ ರಾಜಕಾರಣಿಗಳು ದುಬಾರಿ ಮದುವೆ ತೆರಿಗೆ ಕಾನೂನಿಗೆ ಬೆಂಬಲ ನೀಡಲು ಸಾಧ್ಯವೇ? ಈ ಕಾನೂನನ್ನು ಶಾಸನವನ್ನಾಗಿ ಮಾಡಲು ಸಾಧ್ಯವೇ? ಒಂದು ವೇಳೆ ಶಾಸನವಾಗಿ ಮೂಡಿ ಬಂದರೂ ಅದರ ನಿಯಮಗಳು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತವೆ?
-ಕೆ.ವಿ. ಸೀತಾರಾಮಯ್ಯ, ಹಾಸನ
ಸರ್ಕಾರ ಅದ್ಧೂರಿ ಮದುವೆ ಮಾಡಿದರೆ ತೆರಿಗೆ ಕಟ್ಟುವ ಕ್ರಮದ ಕುರಿತು ಯೋಚಿಸುತ್ತಿದ್ದು, ಅದಕ್ಕಾಗಿ ಕಾನೂನು ರೂಪಿಸುವುದು ಸರಿಯಾದ ಕ್ರಮವಲ್ಲ. ಮದುವೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ, ಎಷ್ಟು ಜನರನ್ನು ಕರೆಯುತ್ತಾರೆ ಎನ್ನುವುದು ಆಯಾ ವ್ಯಕ್ತಿಗಳಿಗೆ ಬಿಟ್ಟ ವಿಚಾರ. ಸರ್ಕಾರ ಅದಕ್ಕಾಗಿಯೇ ಒಂದು ಕಾನೂನು ಜಾರಿಗೆ ತರುತ್ತಿರುವುದು ಸರಿಯಾದುದಲ್ಲ. ಕೆಲವು ಶ್ರೀಮಂತರು ಮಾಡುವ ಅದ್ಧೂರಿ ಮದುವೆಗಳಿಗೆ ಹೆಚ್ಚು ಜನ ಬಂದರೆ ಅಂಥವರು ಮದುವೆ ಖರ್ಚಿನ ಜತೆಗೆ ತೆರಿಗೆಯನ್ನೂ ಕಟ್ಟಬಹುದು. ಆದರೆ ಕೆಲವರಿಗೆ ಮದುವೆ ಮಾಡಿಕೊಳ್ಳುವ ಖರ್ಚಿಗಾಗಿಯೇ ಒದ್ದಾಡುವಾಗ ತೆರಿಗೆ ಕಟ್ಟುವುದು ದೂರದ ಮಾತು. ಇನ್ನೊಂದು ವಿಚಾರವೇನೆಂದರೆ ಶಹರ ಮಟ್ಟದಲ್ಲಿ ನಿಗದಿತ ಜನರಿಗೆ ಆಹ್ವಾನ ನೀಡಿದರೆ ಅವರು ಮಾತ್ರ ಬರುತ್ತಾರೆ. ಆದರೆ ಗ್ರಾಮ ಮಟ್ಟದಲ್ಲಿ ಒಬ್ಬರ ಮನೆಯಲ್ಲಿ ಮದುವೆ ಇದೆ ಎಂದರೆ ಇಡೀ ಊರಿಗೆ ಊರೇ ನಿಂತು ಮದುವೆ ಮಾಡಿ ಸಂಭ್ರಮಿಸುತ್ತದೆ. ಆಗ ಮದುವೆಗೆ ಬರುವವರ ಸಂಖ್ಯೆ ತಾನಾಗಿಯೇ ಹೆಚ್ಚಿರುತ್ತದೆ. ಅಂಥವರು ತೆರಿಗೆ ಎಲ್ಲಿಂದ ಕಟ್ಟುತ್ತಾರೆ? ಸರ್ಕಾರ ಇಂಥ ಕಾನೂನು ಜಾರಿಗೊಳಿಸುವುದು ಸರಿಯಾದ ಕ್ರಮವಲ್ಲ.
-ನಾರಾಯಣಪ್ಪ ಇಲ್ಲೂರ, ಮುಂಡರಗಿ ಪಟ್ಟಣದ ವರ್ತಕರು
ಸುರಿಸಿ ದುಡಿದ ಹಣದಲ್ಲಿ ಅದ್ಧೂರಿ ವಿವಾಹ ನಡೆಸುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕೆಲವರು ಅಪಾರವಾದ ಪಿತ್ರಾರ್ಜಿತ ಆಸ್ತಿ ಹೊಂದಿದ್ದು ಅಥವಾ ಮಾವನಿಂದ ಆಸ್ತಿ ಹೊಂದಿದ್ದು, ಅದನ್ನೆಲ್ಲ ಕೂಡಿಟ್ಟು ಮರಣಕ್ಕೂ ಮುನ್ನ ಅದ್ಧೂರಿ ವಿವಾಹ ಕಾರ್ಯಕ್ಕೆ ಖರ್ಚು ಮಾಡಿದ್ದಲ್ಲಿ ಸಮಾಜಕ್ಕೆ ನಷ್ಟವೇನೂ ಇಲ್ಲ. ಆದರೆ ಒಂದು ಮಾತು ಆದಾಯ ತೆರಿಗೆ ವಂಚಿಸಿದ ಹಣ, ಅಕ್ರಮವಾಗಿ ಗಳಿಸಿದ ಹಣ, ಇನ್ನೊಬ್ಬರ ತಲೆ ಒಡೆದು ಗಳಿಸಿದ ಹಣ, ಕಪ್ಪು ಹಣ. ಇಂತಹ ವರ್ಗಗಳಿಂದ ಅದ್ದೂರಿ ವಿವಾಹ ನಡೆದಲ್ಲಿ ಅದನ್ನು ನಿಯಂತ್ರಿಸಲು ನಮ್ಮಲ್ಲಿ ಹಾಲಿ ಇರುವ ಕಾನೂನುಗಳು ಬೇಕಾದಷ್ಟಿವೆ. ಅನುಷ್ಠಾನ ಹಂಬಲದ ಕೊರತೆಯಾಗಿದೆ. ಹಾವನ್ನು ಹೊಡೆಯುವ ಬದಲು ಹುತ್ತವನ್ನೇ ಒಡೆದು ಹಾಕುವ ವ್ಯರ್ಥ ಪ್ರಯತ್ನ ವಿವಾಹ ತೆರಿಗೆ ವಿಧಿಸುವ ವಿಧಾನ. ಕೊನೆಯದಾಗಿ ಪ್ರತಿ ಕುಟುಂಬವೂ ಘನತೆ, ಗೌರವ, ಪ್ರೀತಿ- ವಿಶ್ವಾಸ, ಸ್ನೇಹ ಬಾಂಧವ್ಯ ಈ ಎಲ್ಲವನ್ನೂ ವೃದ್ಧಿಸಿಕೊಂಡಾಗ ಮಾತ್ರ ಈ ವಿವಾಹ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತದೆ. ಇಲ್ಲವಾದಲ್ಲಿ ವಿವಾಹ ಕಾರ್ಯಕ್ರಮಕ್ಕೆ ಅರ್ಥವೇ ಇರುವುದಿಲ್ಲ.
-ಶ್ರೀಲತಾ ಸುಬ್ಬಣ್ಣ, ನಾಡಗಂಟಿ, ಶಿವಮೊಗ್ಗ
1976ರ ಕರ್ನಾಟಕ ವಿವಾಹ ನಿಯಂತ್ರಣ ಕಾಯಿದೆಯು ಜಾರಿಗೆ ಬಂದ ಕೆಲವೇ ವರ್ಷಗಳಲ್ಲಿ ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು 'ಮದುವೆಯೋ? ಮನೆಹಾಳೋ?' ಎಂಬ ಮುಖಪುಟ ಲೇಖನ ಪ್ರಕಟಿಸಿತ್ತು. ಮೂಲ ಲೇಖನವನ್ನು ಬರೆದದ್ದು ಈ ಲೇಖಕನೇ. ಐದೂ ದಶಕಗಳಲ್ಲೂ ನನಗೆ, 'ವೈಭವೋಪೇತ ವಿವಾಹ'ವೆಂಬ 'ಮಹಾಮಾರಿ'ಯ ದರ್ಶನ ಬಲು ಚೆನ್ನಾಗಿ ಆಗಿದೆ. ಒಂದು ಕಾನೂನನ್ನು ಜಾರಿಗೆ ತರುವಾಗ, ಅದರ ಅನುಷ್ಠಾನದಲ್ಲಿ ಕಾಣಿಸಿಕೊಳ್ಳಬಹುದಾದ ಭ್ರಷ್ಟತೆಯ ನೆಪವೊಡ್ಡಿ ಆ ಕಾನೂನೇ ಬೇಡವೆನ್ನುವುದು ಮೂರ್ಖತನದ ಮಾತು. ನಮ್ಮ ದೇಶದಲ್ಲಿಂದು ಪ್ರತಿಯೊಂದು ಕಾನೂನಿನ ಅನುಷ್ಠಾನದಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ. ಹಾಗೆಂದು ದೇಶಕ್ಕೆ ಯಾವ ಕಾನೂನು ಬೇಡವೆಂದು ಹೇಳಲು ಸಾಧ್ಯವೆ? ಕಾನೂನು ಬೇಕು. ಜೊತೆಗೆ ಕಾನೂನಿನ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನಗಳೂ ಬೇಕು. ಗುಜರಾತ್ ರಾಜ್ಯದಲ್ಲಿ ಇಂತಹ ನಾಯಕತ್ವ ಮತ್ತು ವ್ಯವಸ್ಥೆ ಸಾಧ್ಯವಾಗುವುದಾದರೆ ಅಂತಹ ವ್ಯವಸ್ಥೆಗಾಗಿ ಅದೇ ನಾಯಕನನ್ನು ಇದೇ ನಾವು ದೇಶದ ಸಾರಥ್ಯಕ್ಕೆ ಆಯ್ಕೆ ಮಾಡುತ್ತೇವೆಂದಾದರೆ, 'ವಿವಾಹ ತೆರಿಗೆ' ಕಾನೂನಿನ ಪ್ರಾಮಾಣಿಕ ಅನುಷ್ಠಾನದ ಪ್ರಯತ್ನ ಏಕೆ ಅವಾಂಛಿತ, ಏಕೆ ಅಸಾಧ್ಯ? 'ವಿವಾಹ ತೆರಿಗೆ' ವಿಧಿಸಿರಿ. ನಿಮ್ಮೊಡನೆ ನಾನಿದ್ದೇನೆ. ನನ್ನಂತ ಅಸಂಖ್ಯ ಸಾಮಾಜಿಕರಿದ್ದಾರೆ.
-ಎಚ್. ಆನಂದರಾಮ ಶಾಸ್ತ್ರಿ, ಬೆಂಗಳೂರು
ಮದುವೆ ವೆಚ್ಚ 5 ಲಕ್ಷ ಮೀರಿದರೆ ತೆರಿಗೆ ಹಾಕುವ ತುಘಲಕ್ಶಾಹಿ ಯೋಚನೆ ನಮ್ಮ ಕಾನೂನು ಸಚಿವರಿಗೆ ಬಂದಿರುವುದು ಖಂಡನಾರ್ಹ. ಸರ್ಕಾರ ಮೊದಲು ಈ ವಿಚಿತ್ರ ತೆರಿಗೆಯ ಉದ್ದೇಶವೇನೆಂದು ತಿಳಿಸಲಿ. ಹಲವಾರು ಭಾಗ್ಯ ಯೋಜನೆಗಳ ಭಾರದಿಂದ ಸರ್ಕಾರದ ಖಜಾನೆ ಖಾಲಿಯಾಗಿ ಅದನ್ನು ತುಂಬಿಸಲು ಈ ಪ್ರಯತ್ನವೇ? ಅಥವಾ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ಉತ್ಸಾಹಪೂರಿತ ಮದುವೆ ಕಾರ್ಯಕ್ರಮವನ್ನು ಒಂದು ಸರ್ಕಾರಿ ಕಾರ್ಯಕ್ರಮದಂತೆ ನಿಸ್ತೇಜಗೊಳಿಸುವ ಹುನ್ನಾರವೇ? ಸ್ಪಷ್ಟಪಡಿಸಲಿ. ಮೊದಲೇ ಹಲವಾರು ತೆರಿಗೆಗಳ ಭಾರದಿಂದ ತಲೆ ಎತ್ತಲಾಗದ ಮಧ್ಯಮ ವರ್ಗದವರ ತಲೆ ಮೇಲೆ ಇನ್ನೊಂದು ಮೊಳೆ!
-ಎಸ್.ಎನ್. ವಾಸುದೇವ, ಶ್ರೀರಂಗಪಟ್ಟಣ
ಅದ್ಧೂರಿ ಮದುವೆಗೆ ಕಡಿವಾಣ ಹಾಕಲು ಹೊರಟಿರುವ ಸಚಿವ ಜಯಚಂದ್ರ ಅವರು ಮೊದಲು ರಾಜಕೀಯ ಪಕ್ಷಗಳ ಸಮಾವೇಶ, ರಾಜಕಾರಣಿಗಳ ಕಚೇರಿ ವಿನ್ಯಾಸಕ್ಕೆ ಮಾಡುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಿ. ಎಂಎಲ್ಎಗಳು ಮಾಡುವ ಅದ್ಧೂರಿ ಮದುವೆ ಬಗ್ಗೆ ಪ್ರಶ್ನೆ ಮಾಡಲಿ. ಅದು ಬಿಟ್ಟು ಬಡ ಜನರ ಮದುವೆ ಮೇಲೆ ಕೆಂಗಣ್ಣು ಬೀರುವುದು ಸರಿಯಲ್ಲ. ಸಾಮಾನ್ಯ ಜನರ ವೈಯಕ್ತಿಕ ಬದುಕಿನಲ್ಲಿ ಮೂಗು ತೂರಿಸುವ ಹಕ್ಕು ಅರಿಗೆ ಇಲ್ಲ.
-ಜಗದೀಶಗೌಡ, ಮೈಸೂರು
ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿದ್ದರೂ ಜರುಗುವುದು ಮಾತ್ರ ಭೂಮಿ ಮೇಲೆ. ಮಧ್ಯಮ ವರ್ಗದ ಜನರು ತಮ್ಮ ಮಕ್ಕಳ ಮದುವೆ ಮಾಡಲು ತಮ್ಮ ಜೀವವನ್ನೇ ತೇಯ್ದಿರುತ್ತಾರೆ. ವಿನಾಕಾರಣ ಹಣ ಪೋಲು ಮಾಡುವುದನ್ನು ತಪ್ಪಿಸಲು ಹೊರಟ ಸರ್ಕಾರದ ಕ್ರಮ ಸ್ವಾಗತಾರ್ಹ. ಆದಷ್ಟು ಬೇಗ ಸರ್ಕಾರ ತಜ್ಞರ ಅಭಿಪ್ರಾಯ ಪಡೆದು ಕಾನೂನು ರೂಪಿಸಬೇಕು.
-ಪ್ರದೀಪ್ ಸಂಗಮ್, ಬೆಳಗಾವಿ
ದುಂದುವೆಚ್ಚದ ಮದುವೆಗೆ ತೆರಿಗೆ ಒಂದೇ ಮದ್ದಲ್ಲ. ಜನರಲ್ಲಿ ಮೊದಲು ಜಾಗೃತಿ ಮೂಡಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕೆ ಹೊರತು ಕಾನೂನು ತಂದು ಜನರ ಮೇಲೆ ಹೇರುವುದು ಸರಿಯಾದ ಕ್ರಮವಲ್ಲ.
-ಮಲ್ಲಿಕಾರ್ಜುನ ಆಶನಾಳ, ಯಾದಗಿರಿ
ಅದ್ಧೂರಿ ಮದುವೆಗೆ ಸೀಮಿತ ಆಮಂತ್ರಣ
ಸ್ವಾಮಿ ತಮಗೆ ನನ್ನ ನಮಸ್ಕಾರಗಳು. ಜೂ.15ರಂದು ನನ್ನ ಮಗಳ ಮದುವೆಯನ್ನು ನಾನು ವಾಸವಿರುವ ಊರಿನಲ್ಲಿಯ ಕಲ್ಯಾಣಮಂಟಪದಲ್ಲಿ ನೆರವೇರಿಸುತ್ತಿದ್ದೇನೆ. ಪತ್ರಿಕೆಯನ್ನು ಇದರ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ. ಖುದ್ದಾಗಿ ನನಗೆ ಬರಲಾಗುತ್ತಿಲ್ಲ, ದಯವಿಟ್ಟು ಮನ್ನಿಸಬೇಕು. ಇದರೊಂದಿಗೆ ನನ್ನದೊಂದು ಬಿನ್ನಹ. ಮದುವೆ ಕಾರ್ಯಕ್ರಮಕ್ಕೆ ನನಗೆ ಯಾರೆಲ್ಲಾ ಸಹಾಯ ಮಾಡಿದರೋ ಅವರನ್ನೆಲ್ಲ ಮತ್ತು ನಮ್ಮೆಲ್ಲಾ ಬಂಧು ಬಳಗ, ಆತ್ಮೀಯ ಮಿತ್ರರು ಊರಿನ ಪ್ರಮುಖರು, ನನ್ನ ಓರಗೆಯವರು, ನಾನು ವಾಸಿಸುವ ಬೀದಿಯವರು, ಹೀಗೆ ಮುಂತಾದವರನ್ನೆಲ್ಲಾ ಆಮಂತ್ರಿಸಿದ್ದೇನೆ.
ತಾವುಗಳು ಅಲ್ಲಿಗೆ ಬಂದಾಗ, ಅಲ್ಲೇ ಮುಂಭಾಗದಲ್ಲಿ ಮೇಜು, ಖುರ್ಚಿ ಹಾಕಿಕೊಂಡು ಇಬ್ಬರು ವ್ಯಕ್ತಿಗಳು ಕುಳಿತಿರುತ್ತಾರೆ. ಅವರ ಬಳಿಯಲ್ಲಿ ತಾವು ಎಷ್ಟು ಮಂದಿ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದೀರೆಂದು ಬರೆಸಬೇಕಾಗಿ ವಿನಂತಿ. ಇದೀಗ ತಾನೇ ಬರಲಿರುವ ಕಾನೂನಿನಂತೆ 1000 ಜನಕ್ಕೆ ಮಾತ್ರ ಅವಕಾಶವಿರುವುದು. ಅದರ ಮೇಲಾದರೆ ತೆರಿಗೆ ಕಟ್ಟಬೇಕಂತೆ. ಅದಕ್ಕೆ ನಿಮ್ಮ ಬಳಿಯೇ ಬರಬೇಕಾಗಬಹುದು. ಆಕಸ್ಮಾತ ನೀವು ಬರುವ ಮೊದಲೇ 1000 ಮಂದಿ ಬಂದುಬಿಟ್ಟಿದ್ದಲ್ಲಿ ತಾವು ಬೇಸರಿಸಿಕೊಳ್ಳದೆ ನಿಮ್ಮ ಊರಿಗೆ ವಾಪಸ್ ಹೋಗಬೇಕಾಗಿ ಬರಬಹುದು. ಅಂತಹ ಸಮಯದಲ್ಲಿ ಅಲ್ಲೇ ಪಕ್ಕದಲ್ಲೇ ಹೋಟೆಲ್ನಲ್ಲಿ ಆಹಾರ ಸ್ವೀಕರಿಸಬೇಕೆಂದು ಮನವಿ ಮಾಡುತ್ತೇನೆ.
ನಾವುಗಳು ತುಘಲಕ್ ಸರ್ಕಾರದಲ್ಲಿರುವ ಕಾರಣ ಮದುವೆಯನ್ನೂ ಮೂಢನಂಬಿಕೆ ಕಾಯ್ದೆಯಡಿ ತಂದಲ್ಲಿ ನಮ್ಮ ಕಾರ್ಯಕ್ರಮ ನಿಂತುಹೋಗುವ ಸಂದರ್ಭ ಇರುವುದರಿಂದ ಹೊರಡುವ ಹಿಂದಿನ ದಿನ ರಾತ್ರಿ 10 ಗಂಟೆಯ ವಾರ್ತೆಗಳನ್ನು ನೋಡಿಯೇ ಹೊರಡುವುದು ಸೂಕ್ತ. ಪತ್ರಿಕೆಯಲ್ಲಿ ಸಕುಟುಂಬ ಸಮೇತರಾಗಿ ಎಂದು ವಾಡಿಕೆಯಂತೆ ಅಚ್ಚು ಹಾಕಿಸಲಾಗಿದೆ. ಹಾಗೆಂದು ಎಲ್ಲರನ್ನೂ ಕರೆತಂದು ತೊಂದರೆಗೆ ಸಿಲುಕಿಕೊಳ್ಳಬೇಡಿ.
ತಮ್ಮ ಸುಖಾಗಮನ ಬಯಸುವವರು
ಪತ್ತಂಗಿ ಹೇಮಲತ ಮುರಳಿ, ಬೆಂಗಳೂರು
ಕನ್ಯಾಪಿತೃವಿನ ಅರಿಕೆ
ಸ್ವಲ್ಪ ತಡೆಯಿರಿ ನೀವು ಎಣಿಕೆ ತಪ್ಪಿದೆ ಎಲ್ಲೋ
ಬಂದಾಯಿತು ಜನ ಸಾವಿರಕ್ಕೊಬ್ಬರೇ ಕಡಿಮೆ
ನೀವೂ ಒಳ ಬಂದರೆ ಸರ್ಕಾರ ಬರುವುದು
ತೆರಿಗೆ ಎಣಿಸುವ ಸ್ಥಿತಿಯು ಬರುವುದೆನಗೆ
ಮುತ್ತೈದೆಯೊಬ್ಬಳನೆ ಒಳಗೆ ಕಳುಹಿಸಿ ಸಾಕು
ನೀವು ಮಕ್ಕಳೊಡಗೂಡಿ ಇಲ್ಲೇ ನಿಲ್ಲಿ
ಪ್ಲೇಟುಗಳ ಹಿಡಕೊಂಡು ಪೊಲಿಸು ಕುಳಿತಿಹನು
ಮನೆಯ ಜನರಿಗೂ ಕೂಡ ಊಟವಿಲ್ಲ
ಎದುರು ಹೋಟೆಲಿನಲಿ ಊಟ ಮಾಡಿರಿ ನೀವು
ಮಕ್ಕಳನು ಜೊತೆಯಲ್ಲಿ ಕರೆದುಕೊಂಡು
ಚಿಂತೆ ಮಾಡದಿರಿ ನೀವು ಬಿಲ್ಲಿನ ಬಗೆಗೆ
ಅಲ್ಲಿಯೂ ನನ್ನದೇ ಖಾತೆ ಇಹುದು
ಆಳುವವರರಿವರು ನಮ್ಮ ಕಷ್ಟವನೆಂತು
ಮದುವೆ ಕರ ಹೇರಿ ಸುಖಪಡುವರು
ಮುನಿಸಿಕೊಳ್ಳದಿರಿ ನೀವು ದಯವಿಟ್ಟು ಈಗ
ಮಗಳ ಸೀಮಂತಕೆ ನಿಮ್ಮ ಮತ್ತೆ ಕರೆವೆ
-ಡಾ.ಶಿವಾನಂದ ಕುಬಸದ
- ಪರಮೇಶ್, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


