ಪ್ರಧಾನ ಸುದ್ದಿ

ಬಿಸಿಲ ನಾಡಲ್ಲಿ ಅರಣ್ಯ ಬೆಳೆಸಿದ ಪರಿಸರ ಪ್ರೇಮಿಗಳು!

ಬಿಸಿಲ ನಾಡಲ್ಲಿ ಅರಣ್ಯ ಬೆಳೆಸಿದ ಪರಿಸರ ಪ್ರೇಮಿಗಳು!
Published On :

ಕೊಪ್ಪಳ:  ಬಿಸಿಲ ನಾಡು ಕೊಪ್ಪಳದಲ್ಲಿ ಕೆಲ ಪರಿಸರ ಪ್ರೇಮಿಗಳು ಸೇರಿ 8 ಸಾವಿರ ಎಕೆರೆಯಲ್ಲಿ ಹಸಿರು ಕಾನನ ಬೆಳೆಸಿದ್ದಾರೆ!
ಇಂಥ ದಟ್ಟ ಕಾಡು ಮೈದಳೆದದ್ದು ಪರಿಸರ ಸಂರಕ್ಷಣಾ ಸಂಸ್ಥೆಯಿಂದ, ಸ್ವಂತ ದುಡ್ಡಿನಲ್ಲೇ ಸಾರ್ವಜನಿಕರ ಸಹಕಾರದೊಂದಿಗೆ.
ಈ ಕಾಡಿನೊಳಗೆ ತೆರಳಿದರೆ ಮಲೆನಾಡಿನಲ್ಲಿ ಸಂಚರಿಸಿದ ತಂಪು ಅನುಭವ. ನೂರಾರು ಪ್ರಾಣಿ- ಪಕ್ಷಿಗಳಿಗೆ ಇಲ್ಲಿ ನಿಶ್ಚಿಂತೆ. ಪರಿಸರವಾದಿಗಳ ಪ್ರಯತ್ನಕ್ಕೆ ಸುತ್ತಲಿನ ಗ್ರಾಮಸ್ಥರೂ ಕೈಜೋಡಿಸಿದ್ದರಿಂದ ಅತಿಕ್ರಮಣ, ಅರಣ್ಯ ನಾಶ ತಪ್ಪಿದೆ. ಸರ್ಕಾರವೇ ನಾಚುವಂತೆ ಈ ಅರಣ್ಯಕ್ಕೆ ಖಾಸಗಿ ಭದ್ರತೆಯನ್ನೂ ಒದಗಿಸಲಾಗಿದೆ.
ಇದೆಲ್ಲ 20 ವರ್ಷಗಳ ತಪಸ್ಸಿನ ಫಲ. ವಿಶಾಲ ಈ ಅರಣ್ಯ ಭೌಗೋಳಿಕ ತಾಪಮಾನ ತಡೆಯುವ ದೊಡ್ಡ ಕ್ರಾಂತಿಯೇ ಮಾಡಿದೆ.
ಯಾವುದು ಸಂಸ್ಥೆ?:   1994ರಲ್ಲಿ ಜನ್ಮ ತಳೆದ ಪರಿಸರ ಸಂರಕ್ಷಣಾ ಸಂಸ್ಥೆ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಎಡಭಾಗದ ಸರ್ಕಾರಿ ಒಡೆತನದ ಅರಣ್ಯ ಇಲಾಖೆಯ ವಿಸ್ತಾರ ಪ್ರದೇಶ ಗುರುತಿಸಿತು. ಅಲ್ಲಿ ಪರಿಸರ ಪ್ರೇಮಿಗಳು ನೆರವಿನೊಂದಿಗೆ ಕಾಡು ಸೃಷ್ಟಿಯಾಗಿದೆ.  ಸಂಸ್ಥೆಗೆ ಅತಿಕ್ರಮಣ ಸವಾಲಾಗಿತ್ತು. ಸುತ್ತಲಿನ ಗ್ರಾಮಸ್ಥರ ಸಭೆ ಕರೆದು ಅತಿಕ್ರಮಿಸಿ ನಾಶ ಮಾಡದಂತೆ ಮನವೊಲಿಸಲಾಯಿತು. ದನ ಕರು, ಕುರಿ, ಮೇಕೆಗಳನ್ನು ಮೇಯಿಸಬಹುದು. ಆದರೆ, ಹಸಿ ಗಿಡ ಕಡಿಯುವಂತಿಲ್ಲ ಎನ್ನುವ ಷರತ್ತನ್ನೂ ವಿಧಿಸಲಾಯಿತು.  ಲಾಭ ಅರಿತ ಗ್ರಾಮಸ್ಥರು ಸಮಿತಿ ಕಾರ್ಯಕ್ಕೆ ಸಹಕರಿಸಿದ್ದಾರೆ. ಯಾರಾದರೂ ತಂಟೆ-ತಕರಾರು ತೆಗೆದರೆ  ಸಮಿತಿ ಸಭೆ ಸೇರಿ ಬಗೆಹರಿಸುತ್ತದೆ.
ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ, ಮರಳುಗಾರಿಕೆ ನಿಷೇಧಿಸಲಾಗಿದೆ. ಪ್ರಾಣಿ, ಪಕ್ಷಿಗಳ ಬೇಟೆಗೂ ಅವಕಾಶ ಇಲ್ಲ. ಹೀಗಾಗಿ, ಇಲ್ಲಿ ಜೀವ ಸಂಕುಲ ನಿರ್ಭಯವಾಗಿ ಓಡಾಡಿಕೊಂಡಿವೆ. ಬೇಸಿಗೆಯಲ್ಲಿ ಈ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ.

ಎಲ್ಲಿದೆ ಈ ಕಾನನ?
ಕೊಪ್ಪಳದಿಂದ ಆನೆಗೊಂದಿಗೆ ತೆರಳುವ ಮಾರ್ಗದಲ್ಲಿ ಬಸಾಪುರ ಗ್ರಾಮ. ಅಲ್ಲಿಂದ ಎಡಕ್ಕೆ ತಿರುಗಿದರೆ ಬೆಟ್ಟದ ಸಾಲು. ಕಾಲು ದಾರಿಲಿ ಸಾಗಿದರೆ 8-10 ಕಿ.ಮೀ ಅಷ್ಟೆ. ಬಸಾಪುರ, ಬಂಡಿಹರ್ಲಾಪುರ, ಎಡೆಹಳ್ಳಿ, ಸಾಣಾಪುರ, ಮಲ್ಲಾಪುರ, ಹಳೆ ಕುಮ್ಟಾ, ಕೊಪ್ಪಳ, ಗಂಗಾವತಿಯ ಗ್ರಾಮಗಳೂ ಈ ಅರಣ್ಯ ವ್ಯಾಪ್ತಿಯಲ್ಲಿವೆ.


20 ವರ್ಷಗಳಿಂದ ಈ ಅರಣ್ಯ ಕಾಯುತ್ತಿದ್ದೇವೆ. ಅದಕ್ಕೂ ಮೊದಲು ಇದು ಮಾನವನ ಅತಿಕ್ರಮಣಕ್ಕೆ ಹಾಳಾಗಿ ಹೋಗಿತ್ತು. ಆದರೆ, ಪರಿಸರ ಸಂರಕ್ಷಣಾ ಸಮಿತಿಯವರು ಇದನ್ನು ಜೋಪಾನ ಮಾಡುತ್ತಿರುವುದರಿಂದ ಈಗ ಸಮೃದ್ಧವಾಗಿ ಬೆಳೆದು ನಿಂತಿದೆ. ದಟ್ಟಡವಿಯಾಗಿ ಪ್ರಾಣಿ, ಪಕ್ಷಿಗಳ ತಾಣವಾಗಿದೆ. ಇದರಲ್ಲಿ ಓಡಾಡುವುದೇ ಸ್ವರ್ಗೀಯ ಅನುಭವ.
- ವೆಂಕಪ್ಪ, ಭದ್ರತಾ ಸಿಬ್ಬಂದಿ

- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.