ಪ್ರಧಾನ ಸುದ್ದಿ

25 ವರ್ಷಗಳ ಹೋರಾಟ ಬಳಿಕ ಸಿಕ್ತು ಕನ್ನಡ ಪುಸ್ತಕ!

25 ವರ್ಷಗಳ ಹೋರಾಟ  ಬಳಿಕ ಸಿಕ್ತು ಕನ್ನಡ ಪುಸ್ತಕ!
Published On :

ಕನ್ನಡಪ್ರಭ ವಾರ್ತೆ  ಬಳ್ಳಾರಿ  ಜೂ. 4
25 ವರ್ಷಗಳ ಹೋರಾಟ ಅಂತೂ ಫಲ ಕಂಡಿದೆ!
ಸರ್ಕಾರ ಗಡಿನಾಡಿನ ಕನ್ನಡ ಮಾಧ್ಯಮ ಮಕ್ಕಳಿಗೆ ಪುಸ್ತಕ ವಿತರಿಸಲು ಮುಂದಾಗಿದೆ. ಕರ್ನಾಟಕ-ಆಂಧ್ರಪ್ರದೇಶದ ಗಡಿ ಗ್ರಾಮದ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಉಚಿತ ಪಠ್ಯ ಪುಸ್ತಕಗಳ ಪಡೆಯಲು ಎರಡೂವರೆ ದಶಕಗಳಿಂದ ಹೋರಾಟ ನಡೆಸುತ್ತಿದ್ದರು. ಸರ್ಕಾರದ ಕ್ರಮದಿಂದ ಕನ್ನಡಾಭಿಮಾನ ಹೊಂದಿದ ಗಡಿಭಾಗದ ಜನರು ಶಿಕ್ಷಣ ಇಲಾಖೆಯ ಈ ಆದೇಶದಿಂದ ನಿಟ್ಟುಸಿರು ಬಿಡುವಂತಾಗಿದೆ.
1991ರಿಂದ 2014ರವರೆಗೆ ಗಡಿಭಾಗದ ಕನ್ನಡಿಗರು ಕನ್ನಡ ಮಾಧ್ಯಮ ಪುಸ್ತಕಕ್ಕಾಗಿ ಹೋರಾಟ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರು, ಸರ್ಕಾರದ ಮಟ್ಟದಲ್ಲಿ ಅಧೀನ ಕಾರ್ಯದರ್ಶಿಗಳ ಕಚೇರಿಯನ್ನು ಎಡತಾಕಿದರೂ ಸಮಸ್ಯೆಗೆ ಪರಿಹಾರ ಸಿಕ್ಕರಲಿಲ್ಲ. ಆದರೂ ಕನ್ನಡ ಬಿಟ್ಟು ನಾವು ಇರಲು ಸಾಧ್ಯವಿಲ್ಲ. ಕನ್ನಡ ಮಾಧ್ಯಮ ಪುಸ್ತಕ ಬೇಕು ಎಂಬ ಮನೋಭಾವ ಗಡಿನಾಡ ಕನ್ನಡಿಗರಲ್ಲಿ ಬದಲಾಗಲಿಲ್ಲ. ಕೊನೆಗೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದಿಯಲ್ಲಿರುವ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ವಿತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
86 ಶಾಲೆಗಳಿಗೆ ಪುಸ್ತಕ ಕೊರತೆ: ಈಗಿನ ತೆಲಂಗಾಣ ರಾಜ್ಯದ ಮೆಹೆಬೂಬ್ ನಗರ, ಮೆದಕ್, ರಂಗಾರೆಡ್ಡಿ ಜಿಲ್ಲೆಯಲ್ಲಿ ಹಾಗೂ ಸೀಮಾಂಧ್ರದ ಅನಂತಪುರ, ಕರ್ನೂಲ್ ಜಿಲ್ಲೆಗಳಲ್ಲಿ 86 ಕನ್ನಡ ಪ್ರಾಥಮಿಕ, ಮಾಧ್ಯಮಿಕ ಕನ್ನಡ ಶಾಲೆಗಳಿವೆ. ಸಾವಿರಾರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಗಣಿತ, ವಿಜ್ಞಾನ, ಸಮಾಜ ವಿಷಯಗಳ ಪಠ್ಯವನ್ನು ಅಲ್ಲಿನ ಸರ್ಕಾರ ಕನ್ನಡದಲ್ಲೇ ಮುದ್ರಿಸಿ, ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಿತ್ತು. ಆದರೆ ಪ್ರಥಮ ಭಾಷೆ ಕನ್ನಡ ಪುಸ್ತಕ ಮುದ್ರಿಸಿ ಕೊಡಲಿಲ್ಲ. ಹೀಗಾಗಿ, ಗಡಿನಾಡಿನ ಕನ್ನಡ ಶಾಲೆ ಮಕ್ಕಳು ಕನ್ನಡ ಮಾಧ್ಯಮ ಪುಸ್ತಕಗಳಿಗಾಗಿ ಕರ್ನಾಟಕವನ್ನೇ ಆಶ್ರಯಿಸಬೇಕಾಗಿದೆ.
ನಕಲಿ ಮಾಡಿ ಕನ್ನಡ ಪಠ್ಯ ಓದುವ ಪರಿಸ್ಥಿತಿ: ಕನ್ನಡ ಪುಸ್ತಕಕ್ಕಾಗಿ ಗಡಿನಾಡ ಗ್ರಾಮಗಳ ಕನ್ನಡ ಸಂಘಟನೆಗಳು 25 ವರ್ಷಗಳಿಂದ ಕರ್ನಾಟಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರೂ ಪುಸ್ತಕ ಬಾರದ ಹಿನ್ನೆಲೆಯಲ್ಲಿ ಕನ್ನಡ ಪಠ್ಯವನ್ನು ಜೆರಾಕ್ಸ್ ಮಾಡಿ ಓದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೆಹೆಬೂಬ್ನಗರ ಜಿಲ್ಲೆಯ 13 ಕನ್ನಡ ಶಾಲೆಗಳು ತೆಲುಗು ಶಾಲೆಗಳಾಗಿ ಪರಿವರ್ತನೆಯಾಗಿವೆ. ಇಂಥ ಸಮಸ್ಯೆಗಳ ಮಧ್ಯೆಯೇ ಗಡಿನಾಡ ಕನ್ನಡಿಗರು ಕನ್ನಡ ಮಾಧ್ಯಮವನ್ನು ಓದಿಕೊಂಡು ಬಂದಿದ್ದರು. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಬಳ್ಳಾರಿ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದು, ಆಂಧ್ರದ ಕರ್ನೂಲ್ ಜಿಲ್ಲೆಯ ಹೊಳಗುಂದಿಯಲ್ಲಿರುವ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ನೀಡುವಂತೆ ಆದೇಶ ನೀಡಿದ್ದಾರೆ.



ಗಡಿನಾಡ ಕನ್ನಡಿಗರಿಗೆ ಕನ್ನಡ ಪಠ್ಯ ದೊರಕುವಂತೆ ಮಾಡುವಲ್ಲಿ ಕಾಳಜಿ ವಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರಿಗೆ, ಕನ್ನಡ ಪಠ್ಯಪುಸ್ತಕ ಸಂಘಕ್ಕೆ, ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿದ ಸರ್ಕಾರಕ್ಕೆ, ಪುಸ್ತಕ ನೀಡಲು ಸಹಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ. ಕರ್ನೂಲ್ ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗೆ 10,500 ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿದೆ. 25 ವರ್ಷಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ.
- ಶ್ರೀಧರಗಡ್ಡೆ ಸಿದ್ಧಬಸಪ್ಪ, ಗಡಿನಾಡ ಕನ್ನಡಿಗ

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.