ಶಾಲೆಗಳು ಶೀಘ್ರ ಜಂಕ್ ಮುಕ್ತ?

ನವದೆಹಲಿ: ದೇಶಾದ್ಯಂತ ಶಾಲೆಗಳನ್ನು ಆವರಿಸಿರುವ ಜಂಕ್ಫುಡ್ ಹಾವಳಿಯನ್ನು ತಡೆಗಟ್ಟಲು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಮಕ್ಕಳ ಆರೋಗ್ಯಕ್ಕೆ ಹಾನಿಕಾರ, ಅಸುರಕ್ಷಿತ ಎನಿಸುವ ಎಲ್ಲಾ ಜಂಕ್ಫುಡ್ಗಳನ್ನು ಶಾಲಾ ಆವರಣದಿಂದಲೇ ನಿರ್ಮೂಲನೆಗೊಳಿಸುವ ಪ್ರಸ್ತಾವನೆಯೊಂದು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಮುಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವನೆ ಹಿಂದಿನ ಉದ್ದೇಶ
ಚಿಪ್ಸ್, ಬೇಕರಿ ತಿನಿಸುಗಳು ಸೇರಿದಂತೆ ವಿವಿಧ ರೀತಿಯ ಸಂಸ್ಕರಿತ ಆಹಾರ ಪದಾರ್ಥಗಳೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಆದರೆ, ಇಂಥ ಜಂಕ್ಫುಡ್ಗಳಿಂದ ಪೋಷಕರು ಮಕ್ಕಳನ್ನು ಸದಾ ದೂರವಿಡಲು ಬಯಸುತ್ತಾರೆ. ಆದರೆ, ಶಾಲೆಗಳಲ್ಲಿನ ಕ್ಯಾಂಟೀನ್ಗಳಲ್ಲಿ ಇವು ನೇರವಾಗಿ, ಅನಾಯಾಸವಾಗಿ ಮಕ್ಕಳ ಕೈಸೇರುತ್ತವೆ. ಹಾಗಾಗಿ, ಶಾಲೆಗಳ ಆವರಣವನ್ನು ಜಂಕ್ಫುಡ್ ಮುಕ್ತವಾಗಿಸಿ, ಮಕ್ಕಳನ್ನು ಇಂಥ ಅನಾರೋಗ್ಯಕರ ಆಹಾರಗಳಿಂದ ದೂರವಿರಿಸುವುದು ಈ ಪ್ರಸ್ತಾವನೆ ಹಿಂದಿರುವ ಮುಖ್ಯ ಉದ್ದೇಶ.
ಅರಿವು ಕಾರ್ಯಕ್ರಮ
ಜಂಕ್ಫುಡ್ ನಿಷೇಧಿಸಿದ ಮಾತ್ರಕ್ಕೇ ಮಕ್ಕಳಿಗೆ ಅದರ ಮೇಲಿನ ವ್ಯಾಮೋಹ ದೂರವಾಗಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ, ಜಂಕ್ಫುಡ್ಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿಶಾಲೆಯಲ್ಲೂ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಹೀಗೆ, ಆವರಣಗಳಲ್ಲಿ ಜಂಕ್ಫುಡ್ ನಿಷೇಧದ ಜೊತೆ ಈ ಆಂದೋಲನದಿಂದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಹೆಜ್ಜೆ ಇಟ್ಟಿದೆ.
ಜಾರಿ ಯಾವಾಗ?
ಜಂಕ್ಫುಡ್ ನಿಷೇಧ ಕ್ರಮ ಪ್ರಸ್ತಾವನೆಯ ಹಂತದಲ್ಲಿದೆ. ಸದ್ಯದಲ್ಲೇ ಸಚಿವೆ ಮನೇಕಾ ಗಾಂಧಿ, ಈ ವಿಚಾರವನ್ನು ಕೇಂದ್ರ ಮಾನವ ಸಂಪನ್ಮೂಲ ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಿದ್ದಾರೆ. ಶಾಲೆಗಳಲ್ಲಿನ ಮಧ್ಯಾಹ್ನ ಭೋಜನ ಯೋಜನೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಕೈಕೆಳಗೆ ಬರುವುದರಿಂದ ಅದರ ಜತೆ ಮಾತುಕತೆ ಹೆಚ್ಚು ಮಹತ್ವದ್ದು. ಅತ್ತ, ಆರೋಗ್ಯ ಇಲಾಖೆಯ 'ಭಾರತೀಯ ಆಹಾರ ಸಂರಕ್ಷಣೆ ಹಾಗೂ ಭದ್ರತಾ ಸಮಿತಿ' ಶಾಲಾ ಆವರಣಗಳಲ್ಲಿ ಉತ್ತಮ ಆಹಾರ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಮಾರ್ಗಸೂಚಿ ನಿಗದಿಪಡಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


