ಪ್ರಧಾನ ಸುದ್ದಿ

ರಾಜ್ಯಕ್ಕೆ 250 ವೈದ್ಯ ಸೀಟು ಖೋತಾ?

ರಾಜ್ಯಕ್ಕೆ 250 ವೈದ್ಯ ಸೀಟು ಖೋತಾ?
Published On :

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಸರ್ಕಾರಿ ಕಾಲೇಜುಗಳ ಹೆಚ್ಚುವರಿ ಸೀಟಿಗೆ ಕುತ್ತು

ಕನ್ನಡಪ್ರಭ ವಾರ್ತೆ   ಬೆಂಗಳೂರು   ಜೂ.5

ಆರು ಹೊಸ ವೈದ್ಯ ಕಾಲೇಜುಗಳಿಗೆ ಮಾನ್ಯತೆ ಸಿಗುವುದು ಪಕ್ಕಕ್ಕಿರಲಿ, ಈಗಿರುವ 4 ವೈದ್ಯ ಕಾಲೇಜುಗಳ 250 ಸೀಟುಗಳು ಕೈತಪ್ಪಲಿವೆ!
ವೈದ್ಯ ಶಿಕ್ಷಣ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಆರಂಭಿಸಲು ಉದ್ದೇಶಿಸಿದ್ದ 6 ಸರ್ಕಾರಿ ಕಾಲೇಜುಗಳಿಗೆ ಅನುಮತಿ ನೀಡಲು ಭಾರತೀಯ ವೈದ್ಯ ಪರಿಷತ್ ನಿರಾಕರಿಸಿದೆ. ಇದಲ್ಲದೇ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಸರ್ಕಾರಿ ವೈದ್ಯ ಕಾಲೇಜುಗಳ 250 ಸೀಟು ಹೆಚ್ಚಳ ಮಾಡಿರುವುದನ್ನು ಹಿಂಪಡೆಯಲು ನಿರ್ಧರಿಸಿದೆ. ಸೀಟುಗಳನ್ನು ರದ್ದುಗೊಳಿಸದಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದ್ದರೂ ಶೈಕ್ಷಣಿಕ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಎಂಸಿಐ ತನ್ನ ಬಿಗಿ ನಿಲುವು ಸಡಿಲಿಸದಿರಲು ನಿರ್ಧರಿಸಿದೆ.
ಕಳೆದ ಶೈಕ್ಷಣಿಕ ವರ್ಷದ ಕೌನ್ಸೆಲಿಂಗ್ನ ಅಂತಿಮ ಕ್ಷಣದಲ್ಲಿ ಮೈಸೂರು, ಹುಬ್ಬಳ್ಳಿ, ಬಳ್ಳಾರಿ ವೈದ್ಯ ಕಾಲೇಜುಗಳ ಸೀಟುಗಳನ್ನು 100ರಿಂದ 150ಕ್ಕೆ ಏರಿಸಲಾಗಿತ್ತು. ಹಾಗೆಯೇ ಬೆಂಗಳೂರು ಸರ್ಕಾರಿ ವೈದ್ಯ ಸಂಸ್ಥೆಯ ಸೀಟುಗಳನ್ನು 150ರಿಂದ 250ಕ್ಕೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯ ಪರಿಷತ್ ಷರತ್ತು ವಿಧಿಸಿ ಮುಂದಿನ ಒಂದು ವರ್ಷದೊಳಗೆ ನಿಗದಿತ ಸೌಕರ್ಯ ಒದಗಿಸಬೇಕು ಎಂದು ಹೇಳಿತ್ತು. ಎಂಸಿಐಗೆ ರಾಜ್ಯ ಸರ್ಕಾರ ನೀಡಿದ್ದ ಮುಚ್ಚಳಿಕೆಯು ಇದೇ ಅರ್ಥದಲ್ಲಿತ್ತು. ಆದರೆ ಹೊಸ ಕಾಲೇಜು ಆರಂಭಿಸುವ ಗಡಿಬಿಡಿಯಲ್ಲಿ ಹಳೆ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಮರೆತ ರಾಜ್ಯ ಸರ್ಕಾರಕ್ಕೆ ಎಂಸಿಐ ಬುದ್ಧಿ ಕಲಿಸಿದೆ.
 ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ 250 ಅಲ್ಲದೆ ಇನ್ನೂ 600 ಸೀಟುಗಳ ನಿರೀಕ್ಷೆಯಲ್ಲಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸೀಟುಗಳ ಪ್ರಮಾಣ 3 ಸಾವಿರದ ಗಡಿ ದಾಟಲಿದೆ ಎಂದು ರಾಜ್ಯ ಸರ್ಕಾರವೇ ಅಧಿಕೃತವಾಗಿ ಹೇಳಿತ್ತು. ಆದರೆ ಸರ್ಕಾರ ಬುದ್ಧಿ ಕಲಿತುಕೊಳ್ಳದೇ ಹೋದದ್ದರಿಂದ ಸರ್ಕಾರಿ ಸೀಟುಗಳು ಕಡಿಮೆಯಾಗಲಿವೆ. ಖಾಸಗಿ ಕಾಲೇಜುಗಳ ಸೀಟು ಹಂಚಿಕೆ ವಿವರ ಇನ್ನಷ್ಟೆ ಹೊರಬರಬೇಕಿದೆ. ಜೂ.15ರೊಳಗೆ ಎಂಸಿಐ ಸೀಟುಗಳ ವಿವರವನ್ನು ಪ್ರಕಟಿಸುವ ಸಾಧ್ಯತೆಯಿದೆ.


ಈ ಬಾರಿ ಸರ್ಕಾರಿ ಸೀಟುಗಳ ಸಂಖ್ಯೆ ಕಡಿತವಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರ ಆಶಾಭಾವನೆಯಿಂದ ಇದ್ದ ಕಾಲೇಜುಗಳಿಗೆ ಅನುಮತಿ ದೊರೆಯುವುದು ಕಷ್ಟ ಎನಿಸುತ್ತಿದೆ. ಆದಾಗ್ಯೂ ಎಂಸಿಐ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ.
ಟಿ  ಶರಣಪ್ರಕಾಶ್ ಪಾಟೀಲ್, ವೈದ್ಯ ಶಿಕ್ಷಣ ಸಚಿವ


ಕಳೆದ ವರ್ಷದ ಸೀಟುಗಳು

1500
ಸರ್ಕಾರಿ ಕಾಲೇಜುಗಳು

5255
ಖಾಸಗಿಕಾಲೇಜುಗಳು



2597
ಒಟ್ಟಾರೆ ಸರ್ಕಾರಿ ಕೋಟಾ
ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.