ಬಸ್ಗಳಲ್ಲಿ ತುರ್ತು ನಿರ್ಗಮನಕ್ಕೆ ಖಾಸಗಿ ನಿರ್ಲಕ್ಷ್ಯ

ಬೆಂಗಳೂರು: ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ 570ಕ್ಕೂ ಹೆಚ್ಚು ಲಕ್ಸುರಿ ಬಸ್ಗಳಿಗೆ ತುರ್ತು ನಿರ್ಗಮನ ಬಾಗಿಲು ಅಳವಡಿಸಿದೆ. ಆದರೆ ಖಾಸಗಿ ಬಸ್ ಮಾಲೀಸರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಮಾಲೀಕರ ನಿರ್ಲಕ್ಷ್ಯದಿಂದ ರಾಜ್ಯದಲ್ಲಿರುವ ಖಾಸಗಿ ಬಸ್ಗಳಲ್ಲಿ ಶೇ.50ರಷ್ಟು ಬಸ್ಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿಲ್ಲ. ಸರ್ಕಾರ ನೀಡಿರುವ ಡೆಡ್ಲೈನ್ ಯಾವತ್ತೋ ಮುಗಿದಿದೆ. ಹಾಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರ ದುಂಬಾಲು ಬಿದ್ದಿದ್ದು, ಬಾಗಿಲು ಅಳವಡಿಸದ ಬಸ್ ಮಾಲೀಕರಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಈವರೆಗೆ ದಂಡ ವಿಧಿಸಿದ ಮಾಹಿತಿ ಇಲ್ಲ.
ಮೂರು ತಿಂಗಳಿಂದ ಸಾರಿಗೆ ಅಧಿಕಾರಿಗಳ ತಂಡ ಬಸ್ ತಪಾಸಣೆ ನಡೆಸಿದ್ದು, ಫಲ ಸಿಕ್ಕಂತಾಗಿದೆ. ಹೈದ್ರಾಬಾದ್ನಲ್ಲಿ ಜಬ್ಬಾರ್ ಟ್ರಾವಲ್ಸ್ ಬಸ್ ಸೇರಿ ಕೆಲವೆಡೆ ಬಸ್ ಬೆಂಕಿ ದುರಂತ ಸಂಭವಿಸಿದ ನಂತರ ಎಲ್ಲ ಖಾಸಗಿ ಬಸ್ಗಳಲ್ಲೂ ತುರ್ತು ನಿರ್ಗಮನ ಅಳವಡಿಸಲು ಸರ್ಕಾರ ಆದೇಶಿಸಿತ್ತು. ಈ ಆದೇಶಕ್ಕೆ ಮಾಲೀಕರು ಕಿವಿಗೊಡದ ಕಾರಣ ರಾಜ್ಯದ ಎಲ್ಲಾ ಸಾರಿಗೆ ಇಲಾಖೆ ಕಚೇರಿಗಳಲ್ಲಿ ಬಸ್ಗಳನ್ನು ಪರಿಶೀಲಿಸಲೆಂದೇ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಲಾಗಿದ್ದು, ತಪಾಸಣೆಯಿಂದ ಹೆದರಿದ ಖಾಸಗಿ ಬಸ್ ಮಾಲೀಕರು ನಿಧಾನವಾಗಿ ಈ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರಾಜ್ಯಾದ್ಯಂತ ಎಲ್ಲ ಸಾರಿಗೆ ಕಚೇರಿಗಳಲ್ಲೂ ಈ ತಂಡ ರಚಿಸಿದ್ದು, ವಾರಕ್ಕೊಮ್ಮೆ ಬಸ್ಗಳ ತಪಾಸಣೆ ನಡೆಸಲಾಗುತ್ತದೆ. ತುರ್ತು ನಿರ್ಗಮನ ಬಾಗಿಲು ಹಾಕಿರದ ಬಸ್ಗಳಿಗೆ ನೋಟೀಸ್ ನೀಡಿ ನಂತರ ರು. 500 ದಂಡ ವಿಧಿಸಲಾಗುತ್ತದೆ. ಇದು ಮುಂದುವರಿದರೆ ಬಸ್ನ ಪರವಾನಗಿ ರದ್ದು ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಎಚ್ಚೆತ್ತ ಮಾಲೀಕರು: ಸರ್ಕಾರ ನೀಡಿದ್ದ ಗಡುವು ಮುಗಿದಿದ್ದರೂ ಮಾಲೀಕರು ತಲೆಕೆಡಿಸಿಕೊಂಡಿರಲಿಲ್ಲ. ಇದನ್ನು ಅರಿತ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಹ ಬಸ್ಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡಿ ದಂಡ ಹಾಕಲು ಮುಂದಾದರು. ಹಾಗಾಗಿ ಮಾಲೀಕರು ಎಚ್ಚೆತ್ತುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸುಗಮ ಬಸ್ ಸಮೂಹದ ವ್ಯವಸ್ಥಾಪಕ ಜಗದೀಶ್, ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ಹಾಕಲು ಮುಂದಾದ ಕಾರಣ ಎಲ್ಲರೂ ಬಸ್ಗಳಿಗೆ ತುರ್ತು ನಿರ್ಗಮನ ಬಾಗಿಲು ಅಳವಡಿಸಲು ಮುಂದಾಗಿದ್ದಾರೆ.
ಒಂದು ಬಾಗಿಲು ಅಳವಡಿಸಲು ಸುಮಾರು ರು. 40 ಸಾವಿರ ವೆಚ್ಚ ತಗುಲುತ್ತದೆ. ಅಂದರೆ ಒಂದು ಬಸ್ಗೆ 3 ಬಾಗಿಲು ಇಡಲಾಗುತ್ತದೆ. ನಮ್ಮ ಸಮೂಹದ ಎಲ್ಲಾ ಬಸ್ಗಳಿಗೂ ಅಳವಡಿಸಲಾಗಿದೆ. ಈ ನಡುವೆ ಕೆಲ ಬಸ್ಗಳೂ ಇನ್ನೂ ಬಾಗಿಲು ಅಳವಡಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದರು.
ತಿಂಗಳಿಗೊಮ್ಮೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ಬರುತ್ತೇನೆ. ಪ್ರತಿಬಾರಿಯೂ ವೋಲ್ವೋ ಬಸ್ನಲ್ಲೇ ಹೋಗುತ್ತೇನೆ. ಆದರೆ, ಜಬ್ಬಾರ್ ಟ್ರಾವಲ್ ದುರಂತಕ್ಕಿಂತ ಮುಂಚೆ ಇದ್ದ ರೀತಿಯಲ್ಲೇ ಬಸ್ಗಳಿವೆ. ಅದರಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಈ ಬಗ್ಗೆ ಬಸ್ ಮಾಲೀಕರೂ ತಲೆಕೆಡಿಸಿಕೊಂಡಂತಿಲ್ಲ.
ಟಿ ಮೋಹನ್ ದೇವಯ್ಯ,
ಖಾಸಗಿ ಕಂಪನಿ ಉದ್ಯೋಗಿ, ಬೆಂಗಳೂರು
ಮೊದಲು ನಿರ್ಲಕ್ಷ್ಯಿಸಿದ್ದ ಬಸ್ ಮಾಲೀಕರು ಈಗ ಗಮನಹರಿಸಿದ್ದಾರೆ. ಕೆಲವೇ ದಿನಗಳಲ್ಲಿ ಎಲ್ಲಾ ಬಸ್ಗಳಿಗೂ ತುರ್ತು ನಿರ್ಗಮನ ಅಳವಡಿಸುವ ಭರವಸೆಯಿದೆ.
ಟಿ ಸಾರಿಗೆ ಅಧಿಕಾರಿ, ಬೆಂಗಳೂರು
ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


