ಪ್ರಧಾನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ
Published On :

ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ಗೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಕೊನೇ ದಿನದ ಮುನ್ನಾದಿನ ರಾತ್ರಿ ಆಕಾಂಕ್ಷಿಗಳ ದಂಡು ನಿದ್ರಿಸಿದ ನಂತರ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ರಾಜ್ಯಸಭೆಗೆ ಬಿ.ಕೆ.ಹರಿಪ್ರಸಾದ್, ಪ್ರೊ.ರಾಜೀವ್ ಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಸ್ನೇಹಿತ, ಉದ್ಯಮಿ ಚನ್ನಾರೆಡ್ಡಿಯವರನ್ನು  ಕಣಕ್ಕಿಳಿಸಲು ಸಿದ್ದರಾಮಯ್ಯ ಭಾರೀ ಪ್ರಯತ್ನ ನಡೆಸಿದ್ದರು. ಅಡ್ಡಮತದಾನದ ಭಯಕ್ಕೆ ಬಿದ್ದ ಸಿಎಂ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಪ್ರಸ್ತಾಪ ಕೈ ಬಿಟ್ಟಿದ್ದಾರೆ. ಹೀಗಾಗಿ ಜೆಡಿಎಸ್ನ ಕುಪ್ಪೇಂದ್ರ ರೆಡ್ಡಿ ಗೆಲವೂ ಖಾತ್ರಿಯಾಗಿದೆ. ಇನ್ನು ವಿಧಾನ ಪರಿಷತ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸ್ರಾಜ್ ಹಾಗೂ ಚಿತ್ರದುರ್ಗ ಜಿ.ಪಂ. ಮಾಜಿ ಉಪಾಧ್ಯಕ್ಷೆ ಜಯಮ್ಮ ಬಾಲರಾಜ್  ನಾಮಪತ್ರ ಸಲ್ಲಿಸಿದ್ದಾರೆ.
ಅಸಮಾಧಾನ: ಆದರೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಿರುವುದು ಕಾಂಗ್ರೆಸ್ನಲ್ಲಿ ತೀವ್ರ ಅತೃಪ್ತಿ ಸೃಷ್ಟಿಸಿದೆ. ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಮುಖಂಡರು ಕೋಪಗೊಂಡಿದ್ದಾರೆ. ಕೃಷ್ಣ ಬದಲು ರಾಜೀವ್ ಗೌಡಗೆ ಟಿಕೆಟ್ ನೀಡಿರುವುದರ ಹಿಂದೆ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಕೆಲಸ ಮಾಡಿದೆ ಎಂಬ ಮಾತು ಈಗ ಕೇಳಿಬರಲಾರಂಭಿಸಿದೆ.
ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮನ್ನು ಹಣಿಯಲು ಮಾಡಿದ ಪ್ರಯತ್ನಗಳಿಗೆ ಖರ್ಗೆ ಈಗ ಉತ್ತರ ನೀಡಿದ್ದಾರೆ. ಜಿ.ಪರಮೇಶ್ವರ ಪ್ರಭಾವ ತಗ್ಗಿಸಲು ಕೃಷ್ಣಗೆ ಅವಕಾಶ ನಿರಾಕರಿಸುವ ಮೂಲಕ ಸಿಎಂ ಕೊನೆ ಹಂತದಲ್ಲಿ ಭಾರಿ 'ಆಟ' ಆಡಿದರು ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ. ಸಿದ್ದರಾಮಯ್ಯ ದೆಹಲಿಯಿಂದ ವಾಪಸ್ ಆಗುವ ಹೊತ್ತಿಗೆ ಕೃಷ್ಣಗೆ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿತ್ತು. ಈ ಹಂತದಲ್ಲಿ ಮಾಜಿ ಸಂಸದೆ ರಮ್ಯಾ, ಸಿ.ಎಂ.ಲಿಂಗಪ್ಪ, ಡಿ.ಕೆ.ತಾರಾದೇವಿ, ರಾಜೀವ್ ಗೌಡ ಹೆಸರನ್ನು ತೇಲಿ ಬಿಡಲಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.