ಅರಮನೆ ಸ್ವರ್ಣಲೇಪನದಲ್ಲಿ ಅಕ್ರಮ

ಮೈಸೂರು: ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಸ್ವರ್ಣಲೇಪನ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ಹಾಲಿ ಮತ್ತು ನಿವೃತ್ತ ಉಪ ನಿರ್ದೇಶಕರೂ ಸೇರಿದಂತೆ 10 ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಸೋಮವಾರ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯಂ, ನಿವೃತ್ತ ಉಪ ನಿರ್ದೇಶಕ ಪಿ.ವಿ. ಅವರಾದಿ, 2007 ರಿಂದ 2013 ರವರೆಗೆ ಎಂಜಿನಿಯರ್ಗಳಾಗಿ ಕಾರ್ಯ ನಿರ್ವಹಿಸಿದ್ದ ಲಕ್ಷ್ಮೀಶ್, ಶ್ರೀನಿವಾಸ್, ರಾಜಶೇಖರ ಗೌಡ, ಮುರಳೀಧರ್, ಸೋಮಶೇಖರ್, ಪರಶಿವಮೂರ್ತಿ, ಕಲಾವಿದರಾದ ಬಾಂಬೆ ಪಿಂಕ್ ಸಿಟಿಯ ಶಯ್ಜಾದ್ ಖಾನ್ ಮತ್ತು ಗಂಜೀಫಾ ರಘುಪತಿ ಭಟ್ಟ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅರಮನೆ ಸ್ವರ್ಣಲೇಪನ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ನಂಜನಗೂಡಿನ ಜವರಾಜ್ ಎಂಬವರು 2013 ರಲ್ಲಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಲಖನೌದಲ್ಲಿರುವ ರಾಷ್ಟ್ರೀಯ ಸಾಂಸ್ಕೃತಿಕ ಸಂಪತ್ತು ಸಂಶೋಧನೆ ಮತ್ತು ಸಂರಕ್ಷಣಾ ಪ್ರಯೋಗಾಲಯ (ಎನ್ಆರ್ಎಲ್ಸಿಸಿಪಿ) ನಿರ್ದೇಶಕ ಬಿ.ವಿ. ಕರ್ಬಡೆ ಅವರು ಇತ್ತೀಚೆಗೆ ಮೈಸೂರು ಅರಮನೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಈ ಸಂಬಂಧ ಸಮಗ್ರ ತನಿಖೆಯಾಗಲಿ ಎಂದು ಅವರು ಪರಿಶೀಲನಾ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶ್ಪ್ರಸಾದ್ ತಿಳಿಸಿದ್ದಾರೆ.
ಏನಿದು ಕಾಮಗಾರಿ? ಅರಮನೆ ಒಳಭಾಗದಲ್ಲಿ 2011ರಲ್ಲಿ ಚಿನ್ನದ ಲೇಪನ ಕಾಮಗಾರಿಗೆ 55 ಲಕ್ಷ ಪಾವತಿಸಲಾಗಿತ್ತು. 2012ರಲ್ಲಿ ನಡೆದ ಕಾಮಗಾರಿಗೆ 24 ಲಕ್ಷ, 2013ರಲ್ಲಿ ನಡೆದ ಕಾಮಗಾರಿಗೆ 3.65 ಕೋಟಿ ಪಾವತಿಸಲಾಗಿತ್ತು. ಆದರೆ, ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಅರಮನೆ ಮಂಡಳಿಯ ಅಧಿಕಾರಿಗಳು ಕಾಮಗಾರಿ ಸಮರ್ಪಕವಾಗಿ ನಡೆದಿದೆ ಎಂದು ಗುತ್ತಿಗೆದಾರರು ಹಣ ಬಿಡುಗಡೆ ಮಾಡಿದ್ದರು.
ಸಾರ್ವಜನಿಕರ ದೂರು ಹಾಗೂ ತಜ್ಞರ ಅಭಿಪ್ರಾಯ ಸಂಗ್ರಹಿಸಿರುವ ಲೋಕಾಯುಕ್ತ ಪೊಲೀಸರು 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


