ಕಾವೇರಿ ನಿರ್ವಹಣೆ: ಪ್ರಧಾನಿ ಭೇಟಿಗೆ ರಾಜ್ಯ ನಿಯೋಗ ಸಜ್ಜು

ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.9
ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಡ ಎಂದು ರಾಜ್ಯದ ಸರ್ವಪಕ್ಷ ನಾಯಕರು, ಸಂಸದರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಒತ್ತಾಯಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಮವಾರ ನಡೆದ ಉಭಯ ಸದನಗಳ ನಾಯಕರು, ಪ್ರತಿಪಕ್ಷಗಳ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿದ್ದ ನಾಯಕರು, ಕೇಂದ್ರದ ಮಂತ್ರಿಗಳು ಮತ್ತು ರಾಜ್ಯದ ಸಂಸದರು ಕರ್ನಾಟಕ ಭವನದಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಸಭೆ ನಡೆಸಲಿದ್ದಾರೆ. ನಂತರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ.
ಮೋದಿ ಭೇಟಿ ಮಾಡಿರುವ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ, ಕಾವೇರಿ ಮಂಡಳಿ ರಚನೆಗೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ಸಲಹೆ ನೀಡಿದೆ ಅಷ್ಟೆ: ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲೂ ಮಂಡಳಿ ಸ್ಥಾಪನೆ ಬಗ್ಗೆ ಸೂಚನೆ ನೀಡಿಲ್ಲ. ಸಲಹೆ ನೀಡಿದೆ ಅಷ್ಟೆ. ಅಲ್ಲದೆ, ತಮಿಳುನಾಡು ಏಳು ಐಎ ಅರ್ಜಿಗಳನ್ನು ಹಾಕಿದೆ. 2013ರ ನ.11ಕ್ಕೆ ಏಳನೇ ಐಎ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಇತರೆ ಸಿವಿಲ್ ವ್ಯಾಜ್ಯಗಳೊಂದಿಗೆ ಇದನ್ನು ಪರಿಗಣಿಸೋಣ ಎಂದಿದೆ. ಕರ್ನಾಟಕ, ಕೇರಳ, ಪುದುಚೇರಿ ತೀರ್ಪಿನ ಬಗ್ಗೆ ಅಪೀಲು ಹಾಕಿದ್ದೇವೆ. ಈ ವಿಚಾರಣೆ ಕೋರ್ಟ್ ಮುಂದಿರುವಾಗ ಮಂಡಳಿಸ್ಥಾಪನೆ ಸಾಧ್ಯವಿಲ್ಲ. ಇದು ಕಾನೂನು ಪ್ರಕಾರವೂ ಸಾಧು ಅಲ್ಲ. ಇದೆಲ್ಲವನ್ನೂ ನಾವು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ನಮ್ಮ ಆತಂಕ ನಿವಾರಿಸಿಕೊಳ್ಳಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಮುಖಂಡ ಕುಮಾರಸ್ವಾಮಿ, ಎಂ.ಸಿ. ನಾಣಯ್ಯ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ರೈತ ಸಂಘದ ಪುಟ್ಟಣ್ಣಯ್ಯ, ಸಚಿವರಾದ ಅಂಬರೀಷ್, ಎಂ.ಬಿ. ಪಾಟೀಲ್, ಎಸ್.ಆರ್.ಪಾಟೀಲ್, ಎಚ್.ಕೆ ಪಾಟೀಲ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸಭೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ ನೆಲ, ಜಲ ವಿಷಯದಲ್ಲಿ ಈವರೆಗೆ ಯಾರೂ ರಾಜಕೀಯ ಮಾಡಿಲ್ಲ. ಕಾವೇರಿ ಕೃಷ್ಣಾ, ಮಹದಾಯಿ, ಗಡಿ ಸೇರಿದಂತೆ ರಾಜ್ಯದ ವಿಷಯ ಬಂದಾಗ ಎಲ್ಲರೂ ಹಿತಾಸಕ್ತಿ ಕಾಪಾಡಲು ಮುಂದಾಗಿದ್ದಾರೆ. ಈ ವಿಷಯಗಳಲ್ಲಿ ರಾಜಕೀಯ ಬಣ್ಣ ಬಳಿಯಬಾರದು.
- ಸಿದ್ದರಾಮಯ್ಯ, ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


