ಖಡಕ್ ಅಧಿಕಾರಿ ರಶ್ಮಿ ಸರ್ಕಾರಿ ಸೇವೆಯಿಂದಲೇ ದೂರ?

-ರಾಜೀವ ಹೆಗಡೆ
ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ಖಡಕ್ ಅಧಿಕಾರಿ ವಿ.ರಶ್ಮಿ ಮಹೇಶ್ ಸರ್ಕಾರಿ ಸೇವೆಯಿಂದಲೇ ದೂರವಾಗುತ್ತಿದ್ದಾರೆಯೇ?
ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಅವರ ಆಪ್ತ ಮೂಲಗಳ ಪ್ರಕಾರ ಹೌದು. ವೈದ್ಯ ಶಿಕ್ಷಣ ಇಲಾಖೆಯಲ್ಲಿನ ಖಾಸಗಿ ದರ್ಬಾರ್ನಿಂದ ರೋಸಿ ಹೋಗಿರುವ ಕಾರ್ಯದರ್ಶಿ ವಿ.ರಶ್ಮಿ ಮಹೇಶ್ ಬರೋಬ್ಬರಿ ಒಂದು ವರ್ಷ ಕಾಲ ರಜೆ ಮೇಲೆ ತೆರಳಿದ್ದಾರೆ!
ಕಳೆದ ಜೂ.12ರಂದು ಅವರ 4 ತಿಂಗಳ ರಜಾವಧಿ ಅಂತಿಮವಾಗುತ್ತಿದ್ದಂತೆ ಮತ್ತೆ ಒಂದು ವರ್ಷ ಕಾಲ ರಜೆಯ ಮೇಲೆ ತೆರಳಲು ಅವರು ನಿರ್ಧರಿಸಿದ್ದಾರೆ. ಆದರೆ ಯಾವುದೇ ಶೈಕ್ಷಣಿಕ ಅಥವಾ ಸಂಶೋಧನೆಗಾಗಿ ಅವರು ರಜೆಯ ಮೇಲೆ ಹೋಗುತ್ತಿಲ್ಲ. ತಮ್ಮ 12 ವರ್ಷದ ಮಗಳ ಕಾಳಜಿ ಹಾಗೂ ಶಿಕ್ಷಣಕ್ಕಾಗಿ ಈ ರಜೆಯನ್ನು ತೆಗೆದುಕೊಂಡಿದ್ದಾರೆ ಎಂದು ಸರ್ಕಾರಿ ದಾಖಲೆ ಹೇಳುತ್ತದೆ. ಖುದ್ದು ರಶ್ಮಿ ಯಾವುದೇ ವಿಚಾರದ ಬಗ್ಗೆ ಚಕಾರವೆತ್ತುತ್ತಿಲ್ಲ. ಆದರೆ 18 ವರ್ಷಗಳ ಸೇವಾವಧಿಯಲ್ಲಿ ಸಣ್ಣ ಕಪ್ಪು ಚುಕ್ಕೆಯನ್ನೂ ಹೊಂದಿರದ ರಶ್ಮಿ ಅವರ ಈ ನಿರ್ಧಾರಗಳ ಹಿಂದೆ ಸರ್ಕಾರದ ಕಾರ್ಯವೈಖರಿಯೇ ಕಾರಣ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಅವರು ರಜೆ ಮೇಲೆ ತೆರಳಿದ್ದರು. ಇದಕ್ಕೂ ಮೊದಲು ಅವರ ಕರ್ತವ್ಯಕ್ಕೆ ಅಡ್ಡಿಯಾದಾಗ ಒಮ್ಮೆ ದೀರ್ಘ ರಜೆ ಮೇಲೆ ತೆರಳಿದ್ದರು. ಒಮ್ಮೆ ಮೂರು ತಿಂಗಳುಗಳ ಕಾಲ ಹುದ್ದೆ ನೀಡದೇ ಕೂರಿಸಲಾಗಿತ್ತು. ಆದರೆ ಸುಮಾರು 16 ತಿಂಗಳುಗಳ ಕಾಲ ರಜೆಯ ಮೇಲೆ ಯಾವುದೇ ಶೈಕ್ಷಣಿಕ ಕಾರಣವಿಲ್ಲದೇ ಹೋಗುತ್ತಿರುವುದು ಇದೇ ಮೊದಲ ಬಾರಿ. ಇನ್ನೊಂದು ವರ್ಷ ಕಾಲ ರಜೆಯ ಮೇಲೆ ಹೋಗಿ ಪರಿಸ್ಥಿತಿ ಅವಲೋಕಿಸಲು ರಶ್ಮಿ ನಿರ್ಧರಿಸಿದ್ದಾರೆ. ಆದರೆ ಈ ವ್ಯವಸ್ಥೆ ಬದಲಾಗುವುದು ಕಷ್ಟ ಎಂದಾದಲ್ಲಿ ಪರ್ಯಾಯ ವೃತ್ತಿ ಹುಡುಕುವುದರ ಬಗೆಗೂ ಕುಟುಂಬ ಸದಸ್ಯರ ಜತೆ ಚರ್ಚಿಸುತ್ತಿದ್ದಾರೆ ಎಂದು ಅವರ ಆಪ್ತರೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಪ್ರಶ್ನಿಸಿದಾಗ, ನಮಗೂ ಇಂತಹದೊಂದು ಮಾಹಿತಿ ಬಂದಿದೆ. ಆದರೆ ಅಂತಹ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ಅವರ ದೀರ್ಘ ರಜೆಯೂ ಬೇಸರ ತರಿಸಿದೆ. ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಸರ್ಕಾರ ಅಧಿಕಾರಿಗಳ ರಕ್ಷಣೆಗೆ ಮುಂದಾಗದಿದ್ದರೇ ಇಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದಿದ್ದಾರೆ.
ವೈದ್ಯ ಕಾಲೇಜುಗಳ ಲಾಬಿ: ಈಗಾಗಲೇ ತಿಳಿದಂತೆ ಅಲ್ಪಸಂಖ್ಯಾತ ಹಾಗೂ ಡೀಮ್ಡ್ ವೈದ್ಯ ಕಾಲೇಜುಗಳ ವಿಚಾರದಲ್ಲಿ ಖಾಸಗಿ ಆಡಳಿತ ಮಂಡಳಿಗಳ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಮುಖ್ಯ ಕಾರ್ಯದರ್ಶಿಯೇ ರಜೆಯ ಮೇಲೆ ಹೋಗುವಂತೆ ಸೂಚಿಸಿದ್ದರು. ಆದರೆ ಇದನ್ನು ರಾಜ್ಯ ಸರ್ಕಾರ ಹಾಗೂ ವೈದ್ಯ ಶಿಕ್ಷಣ ಸಚಿವರು ನಿರಾಕರಿಸಿದ್ದರು. ಆದರೆ ರಾಜ್ಯ ಸರ್ಕಾರವೇ ಅವರನ್ನು 15 ದಿನಗಳ ಕಾಲ ರಜೆಯ ಮೇಲೆ ಹೋಗುವಂತೆ ಸೂಚಿಸಿತ್ತು. ಸರ್ಕಾರದ ಈ ನಿರ್ಧಾರದಿಂದ ಬೇಸತ್ತಿದ್ದ ರಶ್ಮಿ ಅವರು ಕಳೆದ ಫೆಬ್ರವರಿಯಲ್ಲಿ 4 ತಿಂಗಳುಗಳ ಕಾಲ ರಜೆಯ ಮೇಲೆ ತೆರಳಿದ್ದರು. ಆಗ ವೈಯಕ್ತಿಕ ಕಾರಣ ನೀಡಿದ್ದರು. ಈಗ ಅವರ 12 ವರ್ಷದ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ರಜೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಧಾರಕ್ಕೆ ಕಾರಣಗಳು
ಕಾನೂನು ಬಾಹಿರ ಹಾಗೂ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾಗುವ ನಿರ್ಧಾರ ತೆಗೆದುಕೊಂಡ ಮೇಲೆ ಅದೇ ಹುದ್ದೆಯಲ್ಲಿ ಕುಳಿತು ಹೇಗೆ ಕಾರ್ಯನಿರ್ವಹಿಸುವುದು.
ಪಂಚಾಯತ್ ರಾಜ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ಮಾಡಲು ಮುಂದಾದಾಗ ಅಲ್ಲಿಂದ ವರ್ಗಾವಣೆ ಮಾಡಿದ್ದು.
ಸರ್ಕಾರಗಳ ನಿರಂತರ ಗದಾ ಪ್ರಹಾರಗಳು ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂಬಂತೆ ಮಾಡಿದ್ದು.
ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ
ಮಗಳಿಗೆ ಮೀಸಲು
ಈ ವಿಚಾರದ ಬಗ್ಗೆ ನಾನೇನು ಹೇಳುವುದಿಲ್ಲ. ಭವಿಷ್ಯದಲ್ಲಿ ಎಲ್ಲವೂ ನಿಮಗೆ ತಿಳಿಯಲಿದೆ. ಸದ್ಯದ ಮಟ್ಟಿಗೆ ನನ್ನ ಮಗಳಿಗೆ ನಾನು ಶಿಕ್ಷಕಿಯಾಗಿದ್ದೇನೆ. ಇಷ್ಟು ವರ್ಷಗಳ ಕಾಲ ಮಗಳಿಗೆ ಈ ಸಮಯ ಕೊಟ್ಟಿರಲಿಲ್ಲ.
-ವಿ.ರಶ್ಮಿ ಮಹೇಶ್, ಐಎಎಸ್ ಅಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


