ಪ್ರಧಾನ ಸುದ್ದಿ

ಭಾರತದ ಶೇಖ್‌ಗೆ ಶೇಖ್ ಫಿಯರ್!

ಭಾರತದ ಶೇಖ್‌ಗೆ ಶೇಖ್ ಫಿಯರ್!
Published On :

ಫಿಲಿಪ್ಪೀನ್ಸ್, ಥಾಯ್ಲೆಂಡ್, ಪಾಕಿಸ್ತಾನ, ಭಾರತೀಯ ಪತ್ನಿಯರು!
-ಜಿತೇಂದ್ರ ಕುಂದೇಶ್ವರ

ಮಂಗಳೂರು: ದೇಶ, ವಿದೇಶದಲ್ಲಿ 2,000 ಕೋಟಿ ಸಂಪತ್ತಿನ ಒಡೆಯನ ಆಸ್ತಿಗಾಗಿ ಮಂಗಳೂರಲ್ಲಿ ಫಿಲಿಪ್ಪೀನ್ಸ್, ಥಾಯ್ಲೆಂಡ್ ಮತ್ತು ಭಾರತೀಯ ಪತ್ನಿಯರು ಕಾದಾಟಕ್ಕೆ ಇಳಿದಿದ್ದಾರೆ! ಇದೀಗ ಪಾಕಿಸ್ತಾನದ ಮಹಿಳೆ, ತಾನೇ ಪತ್ನಿ ಎಂದು ದಾಖಲೆ ಹಿಡಿದುಕೊಂಡು ಮುಂದಿನ ವಾರ ಮಂಗಳೂರಿಗೆ ಆಗಮಿಸಲಿದ್ದಾರೆ!

ನಾಲ್ವರು ಪತ್ನಿಯರ ಆಸ್ತಿ ಹೋರಾಟದಲ್ಲಿ ಕೋಟ್ಯಧಿಪತಿ ಇಬ್ರಾಹಿಂ ಶೇಖ್‌ನನ್ನು ನೋಡಿಕೊಳ್ಳುತ್ತಿದ್ದ ಸೋದರಳಿಯ ಅರ್ಷದ್ ಸಿಕ್ಕಿ ಹಾಕಿಕೊಂಡಿದ್ದು, ಕಂಬಿ ಎಣಿಸಿ ಹೊರ ಬಂದಿದ್ದಾರೆ. ಈ ಪ್ರಕರಣದಲ್ಲಿ ವ್ಯಾಪ್ತಿ ಮೀರಿ ಬಂಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಅಮಾನತುಗೊಂಡು ಮನೆಗೆ ಹೋಗಿದ್ದಾರೆ !

ಸಿರಿವಂತ ಶೇಖ್: ಇದು ಬಾಲಿವುಡ್ ಸಿನಿಮಾಗಿಂತಲೂ ಕುತೂಹಲ ಮತ್ತು ಅನೇಕ ತಿರುವುಗಳಿರುವ ನೈಜ ಕಥೆ. ಕೋಟೆಕಾರ್ ಮೂಲದ ಇಬ್ರಾಹಿಂ ಶೇಖ್‌ಗೆ ರಾಜ್ಯದಲ್ಲೇ ಸುಮಾರು ರು. 500 ಕೋಟಿ ಮೌಲ್ಯದ ಆಸ್ತಿ ಇದೆ. ಬಹರೈನ್‌ನಲ್ಲಿ 4 ಫೈವ್ ಸ್ಟಾರ್, 6 ತ್ರಿ ಸ್ಟಾರ್ ಹೋಟೆಲ್‌ಗಳಿವೆ. ದುಬೈನಲ್ಲಿಯೂ ಫೈವ್ ಸ್ಟಾರ್ ಹೊಟೇಲ್‌ಗಳಿದ್ದು ಒಟ್ಟು ರು. 2 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಅಂದಾಜಿಸಲಾಗಿದೆ. 2011ವರೆಗೂ ಇಬ್ರಾಹಿಂ ಶೇಖ್ ಬಹರೈನ್‌ನಲ್ಲಿ ಭಾರತೀಯ ಮೂಲದ ಪತ್ನಿ ನೂರ್ ಜಹಾನ್, ಫಿಲಿಪ್ಪೀನ್ಸ್ ಝೀನ್ ಮೊಗದಿಯ ಜತೆ ಪ್ರತ್ಯೇಕ ಮಹಲ್‌ಗಳಲ್ಲಿ ವಾಸಿಸುತ್ತಿದ್ದರು. ಬಹರೈನ್‌ನ ಉದ್ಯಮಗಳ ಉಸ್ತುವಾರಿಯನ್ನು ಶೇಖ್, ತನ್ನ ಸಹೋದರಿಯರ ಪುತ್ರರಿಗೆ ವಹಿಸಿದ್ದರು.

ಎರಡೂವರೆ ವರ್ಷದ ಹಿಂದೆ ಅನಾರೋಗ್ಯಕ್ಕೆ ಈಡಾದ ಶೇಖ್ ಅವರನ್ನು ನೂರ್‌ಜಹಾನ್ ಚೆನ್ನೈಗೆ ಕರೆತಂದು 3 ತಿಂಗಳು ಚಿಕಿತ್ಸೆ ಕೊಡಿಸಿದರು. ಫಲಕಾರಿಯಾಗದೆ ಇದ್ದಾಗ ಬೆಂಗಳೂರಲ್ಲಿ ಒಂದೂವರೆ ತಿಂಗಳು ಚಿಕಿತ್ಸೆ ನೀಡಲಾಯಿತು. ಶೇಖ್‌ನ ಆರೋಗ್ಯ ನೋಡಿಕೊಳ್ಳಲು ಬೆಹರೈನ್‌ನಿಂದ ಆಗಮಿಸಿದ ಅರ್ಷದ್ ಜತೆಗೂಡಿ  ನೂರ್‌ಜಹಾನ್, ಮಂಗಳೂರಿನ ಇಂಡಿಯಾ ಆಸ್ಪತ್ರೆಗೆ ಶೇಖ್‌ನನ್ನು ದಾಖಲಿಸಿದರು.

ಆಸ್ತಿಗೆ ಕಚ್ಚಾಟ ಶುರು: ನೂರ್‌ಜಹಾನ್‌ಗೆ ಶೇಖ್ ತನ್ನ ಭಾರತದಲ್ಲಿರುವ ಆಸ್ತಿ ಗಿಫ್ಟ್ ಡೀಡ್ ನೀಡಿದರು. ಇದು ಎರಡನೇ ಪತ್ನಿ ಫಿಲಿಪ್ಪೀನ್ಸ್‌ನ ಝೀನ್‌ಗೆ ಗೊತ್ತಾಗಿ ಬೆಹರೈನ್‌ನಲ್ಲಿರುವ ಆಸ್ತಿಯಲ್ಲಿ ಬಹುಪಾಲು ತನಗೇ ನೀಡಬೇಕು ಎಂದು ಕೇಳಿದರು. ಒಪ್ಪದೇ ಇದ್ದಾಗ ಮಂಗಳೂರಿನ ಸಿವಿಲ್ ಕೋರ್ಟ್‌ನಲ್ಲಿ ವಕೀಲರ ಮೂಲಕ ದಾವೆ ಕೂಡಾ ಹೂಡಿದರು. ಇದಕ್ಕೆ ಮುನ್ನ ಕೋಟೆಕಾರ್ ಜಮಾತ್‌ನಲ್ಲಿ ಪತ್ನಿಯರ, ಅಳಿಯಂದಿರ ಮಾತುಕತೆ ಕೂಡ ನಡೆದು, ಇತ್ಯರ್ಥವಾಗದೆ ಕೈ ಬಿಡಲಾಗಿತ್ತು. ಜಮಾತ್‌ನಲ್ಲಿ ಶೇಖ್ ಮಾಡಿದ ವಿನಂತಿ ಪತ್ರವನ್ನು ಪಾಂಡೇಶ್ವರ, ಉಳ್ಳಾಲ ಠಾಣೆಗೆ ನೀಡಲಾಗಿದೆ. ಅದರಲ್ಲಿ ಶೇಖ್ ತನ್ನನ್ನು ನೂರ್ ಜಹಾನ್ ಜತೆ ಕಳುಹಿಸಬೇಡಿ, ನಾನು ಸತ್ತರೂ ಪಳ್ಳಿ(ಮಸೀದಿ)ಯಲ್ಲಿಯೇ ಮಣ್ಣು ಮಾಡಬೇಕು ಎಂದು ಉಲ್ಲೇಖಿಸಿದ್ದರು.
'ಆಸ್ಪತ್ರೆಯಿಂದ ಸ್ವಂತ ಇಚ್ಛೆಯಿಂದಲೇ ಪತ್ನಿ ನೂರ್ ಜಹಾನ್ ಜತೆ ಹೋಗಿದ್ದೇನೆ' ಎಂದು ಶೇಖ್ ಹೇಳಿರುವ ವಿಡಿಯೋ ದಾಖಲೆಯನ್ನು ನೂರ್‌ಜಹಾನ್ ಪೊಲೀಸರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಒಟ್ಟಾರೆ ಇದು ಆಸ್ತಿಗಾಗಿ ಕಚ್ಚಾಟದ ಸಿವಿಲ್ ಕೇಸ್, ಪೊಲೀಸರ ಪ್ರವೇಶದಿಂದ ಕ್ರಿಮಿನಲ್ ಕೇಸ್ ಆಗಿ ಬದಲಾಗಿದೆ. ಇನ್ನು ಮೂವರು ಪತ್ನಿಯರು ಆಸ್ತಿ ಕೇಳಿಕೊಂಡು ಭಾರತಕ್ಕೆ ಬರುತ್ತಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.
ಇನ್ಸ್‌ಪೆಕ್ಟರ್ ಅಮಾನತುಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಹರೀಶ್, ಉಳ್ಳಾಲ ಠಾಣೆ ವ್ಯಾಪ್ತಿಯ ಅಮೃತಮಹಲ್‌ಗೆ ಹೋಗಿ ಅರ್ಷದ್ ಬಳಿ ಇದ್ದ ಕಡತ ತೆಗೆದುಕೊಂಡಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆಸ್ಪತ್ರೆಯಲ್ಲಿಯೂ ಇನ್‌ಸ್ಪೆಕ್ಟರ್ ಗಲಾಟೆ ಮಾಡಿರುವುದು ಸಿಸಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಈ ಆಧಾರದಲ್ಲಿ ಕಮಿಷನರ್ ಆರ್. ಹಿತೇಂದ್ರ ಹರೀಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇಂಡಿಯಾ ಆಸ್ಪತ್ರೆಯಲ್ಲಿ ಶೇಖ್ ಕೊಂಚಮಟ್ಟಿಗೆ ಚೇತರಿಸಿಕೊಂಡಿದ್ದರು. ಆದರೆ, ಜೂ.6 ರಂದು ಆಸ್ಪತ್ರೆಗೆ 50 ಮಂದಿ ಬಂದು ಗಲಾಟೆ ಮಾಡಿ ಮಾವ ಶೇಖ್‌ರನ್ನು ಡಿಸ್‌ಚಾರ್ಜ್ ಮಾಡಿಕೊಂಡು ಹೋದರು. ಈ ಬಗ್ಗೆ  ದೂರು ನೀಡಲು ಗ್ರಾಮಾಂತರ ಠಾಣೆಗೆ ಹೋದಾಗ ನನ್ನನ್ನೇ ಬಂಧಿಸಿ, ಕಾನೂನು ಮೀರಿ ಇನ್ಸ್‌ಪೆಕ್ಟರ್ ಹಿಂಸಿಸಿದರು.  
-ಅರ್ಷದ್‌ಶೇಖ್ ಸೋದರಳಿಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.