ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಗೊತ್ತೇ ಇರಲಿಲ್ಲ

ಮಂಡ್ಯ: ಸತ್ಯ ಹೇಳುತ್ತೇನೆ. ಈ ಘಟನೆ ನಡೆದಿರುವ ಸಂಗತಿ ನಿಜಕ್ಕೂ ಗೊತ್ತಾಗಿದ್ದೇ ನಿನ್ನೆ. ಹಾಗಾಗಿ ಈವತ್ತು ನಾನು ಮಂಡ್ಯಕ್ಕೆ ಭೇಟಿ ನೀಡಿದೆ.
- ಇದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಮಾಶ್ರೀ ಉವಾಚ.
ರಾಮನಗರದ ಮೌಲ್ವಿಯೊಬ್ಬನು ಮಂಡ್ಯದ ಬಾಲಕಿ ಮೇಲೆ ಅಮಾನುಷವಾಗಿ ಲೈಂಗಿಕ ಕಿರುಕುಳ ನೀಡಿದ ಘಟನೆ ನನಗೆ ಗೊತ್ತಾಗಿದ್ದೇ ಸೋಮವಾರ(ಜೂ.16) ಎಂದು ಹೇಳುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಹಿಳೆಯರ ಬಗ್ಗೆ ಇರುವ ಕಾಳಜಿ ತೋರಿಸಿದರು. ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವು ಜೂನ್ 10ರಂದೇ ಎಲ್ಲ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿವೆ. ಆದರೂ ಇದು ನನ್ನ ಗಮನಕ್ಕೆ ಬರಲಿಲ್ಲ. ನಿನ್ನೆ ಅಷ್ಟೇ ನನ್ನ ಗಮನಕ್ಕೆ ಬಂದಿದ್ದು, ಇಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಎಂದು ಸಚಿವ ಉಮಾಶ್ರೀ ಹೇಳಿಕೊಂಡರು.
ಬಾಲಕಿಗೆ ಸಾಂತ್ವನ: ಮಂಗಳವಾರ ರಾತ್ರಿ ಮಂಡ್ಯ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದ ಸಚಿವೆ ಉಮಾಶ್ರೀ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಭೇಟಿ ಮಾಡಿ ಅಂದಿನ ಘಟನೆಯ ಬಗ್ಗೆ ಮಾಹಿತಿ ಪಡೆದರು. ಬಾಲಕಿಗೆ ಚಿಕಿತ್ಸೆ ಮತ್ತು ಆಕೆಯ ಭವಿಷ್ಯಕ್ಕೆ ಪೂರಕವಾಗುವ ಎಲ್ಲಾ ರೀತಿಯ ನೆರವನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.
ಆರ್ಥಿಕ ನೆರವು : ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ತಕ್ಷಣಕ್ಕೆ 15 ಸಾವಿರ ರು. ನೆರವು ನೀಡಲಾಗುವುದು. ನಂತರ ಸರ್ಕಾರದಿಂದ ವಿಶೇಷವಾಗಿ 50 ಸಾವಿರ ರು ಆರ್ಥಿಕ ನೆರವು ಕೊಡಿಸುವುದಾಗಿ ತಿಳಿಸಿದರು. ಒಂದು ವೇಳೆ ಪೋಷಕರು ಬಯಸಿದರೆ ಸರ್ಕಾರಿ ಬಾಲ ಮಂದಿರದಲ್ಲಿ ಬಾಲಕಿಯನ್ನು ಇರಿಸಿಕೊಂಡು, ಸಕಲ ರೀತಿಯ ನೆರವು ನೀಡಲಾಗುವುದು ಎಂದು ಸಚಿವೆ ಉಮಾಶ್ರೀ ಸುದ್ದಿಗಾರರಿಗೆ ತಿಳಿಸಿದರು. ಸಚಿವೆ ಉಮಾಶ್ರೀ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಜಿಲ್ಲಾ ಎಸ್ಪಿ ಭೂಷಣ್ ಬೋರಸೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಸೂಚನೆ
ಮಂಡ್ಯ : ಲೈಂಗಿಕ ಕಿರುಕುಳದ ಮಾಹಿತಿಯನ್ನು ಸಕಾಲಕ್ಕೆ ನನ್ನ ಗಮನಕ್ಕೆ ತಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಸಚಿವೆ ಉಮಾಶ್ರೀ ಮಂಗಳವಾರ ತಿಳಿಸಿದರು.
ತಿಂಗಳಲ್ಲಿ ನೇಮಕ: ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ. ಮಹಿಳೆಯರ ಸಂಕಷ್ಟಗಳನ್ನು ಪರಿಹರಿಸಲು ರಾಜ್ಯ ಮಹಿಳಾ ಆಯೋಗಕ್ಕೆ ಇನ್ನೊಂದು ತಿಂಗಳಲ್ಲಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು.
ಎಚ್1ಎನ್1ಗೆ ಗರ್ಭಿಣಿ ಬಲಿ
ಬ್ಯಾಡಗಿ: ಎಚ್1ಎನ್1ಗೆ ಪಟ್ಟಣದ ವಿದ್ಯಾನಗರ ನಿವಾಸಿ ಸುಮಂಗಲಾ ಹನುಮಂತಪ್ಪ ಬಂಡಿವಡ್ಡರ ಎಂಬ ಗರ್ಭಿಣೆ ಬಲಿಯಾಗಿದ್ದಾರೆ. ಎಂಟು ದಿನಗಳ ಹಿಂದೆ ಅವರಿಗೆ ಎಚ್1ಎನ್1 ಸೋಂಕು ತಗುಲಿದ್ದು, ದಾವಣಗೆರೆಯ ಬಾಪೂಜಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಜೂ.16ರಂದು ರಾತ್ರಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಒಂದು ತಿಂಗಳಿಂದ ಕೆಲಸದ ನಿಮಿತ್ತ ಗದಗ ಜಿಲ್ಲೆ ಲಕ್ಷ್ಮೇಶ್ವರ ಹಾಗೂ ಕೊಪ್ಪಳ ಜಿಲ್ಲೆ ಹುಲಗಿ ಎಂಬಲ್ಲಿಗೆ ತೆರಳಿದ ಸಂದರ್ಭ ತೀವ್ರ ಜ್ವರದಿಂದ ಬಳಲಿದ ಸುಮಂಗಲಾ ಅವರನ್ನು ಎಂಟು ದಿನಗಳ ಹಿಂದೆ ಪಟ್ಟಣದ ನಿವಾಸಕ್ಕೆ ಕರೆತರಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


