ಬಲಿಗೆ ಕಾದಿವೆ 1.50 ಲಕ್ಷ ಕೊಳವೆ ಬಾವಿಗಳು
ಬೆಂಗಳೂರು: ರಾಜ್ಯದಲ್ಲಿ ಮಕ್ಕಳನ್ನು ಬಲಿ ತೆಗೆದುಕೊಳ್ಳಲು ಇನ್ನೂ 1.50 ಲಕ್ಷಕ್ಕೂ ಹೆಚ್ಚು ತೆರೆದ ಕೊಳವೆ ಬಾವಿಗಳು ಬಾಯಿ ತೆರೆದು ನಿಂತಿವೆ!
ವಿಚಿತ್ರವೆಂದರೆ, ತೆರೆದ ಕೊಳವೆ ಬಾವಿಗಳಿಂದಾಗುವ ದುರಂತ ತಪ್ಪಿಸಲು ಸುಪ್ರೀಂಕೋರ್ಟ್ ವರ್ಷದ ಹಿಂದೆಯೇ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ತೆರೆದ ಬೋರ್‌ವೆಲ್‌ಗಳು ಯಾವ ಇಲಾಖೆ ವ್ಯಾಪ್ತಿಗೆ ಬರುತ್ತದೆ? ಇಂಥ ಬಾವಿಗಳನ್ನು ನಿರ್ಲಕ್ಷಿಸಿದವರಿಗೆ ಏನು ಶಿಕ್ಷೆ ಮತ್ತು ತಪ್ಪಿತಸ್ಥರನ್ನು ಯಾವ ಇಲಾಖೆ ನಿರ್ವಹಿಸಬೇಕೆನ್ನುವ ಬಗ್ಗೆ ಸಂಬಂಧಿಸಿದ ಇಲಾಖೆ ಸಚಿವರಿಗೇ ಗೊತ್ತಿಲ್ಲ!
ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್‌ಗಳಿದ್ದು, ಅವುಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಇವುಗಳ ಪೈಕಿ 1.50 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬಲಿ ತೆಗೆದುಕೊಳ್ಳಲು ಬಾಯ್ತೆರೆದು ನಿಂತಿವೆ.
ಸರ್ಕಾರಕ್ಕೆ ಈಗ ಎಚ್ಚರ: ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಎಲ್ಲಾ ರೀತಿಯ ಸ್ಥಳೀಯ ಸಂಸ್ಥೆಗಳು ಬೋರ್‌ಗಳನ್ನು ಕೊರೆಸುತ್ತವೆ. ಅದೇ ರೀತಿ ಕೃಷಿ ಇಲಾಖೆ ಮತ್ತು ಕೆಲವು ನಿಗಮ ಮಂಡಳಿಗಳು ಕೃಷಿ ಉದ್ದೇಶಕ್ಕಾಗಿ ಬೋರ್ ಕೊರೆಯಲು ರೈತರಿಗೆ ನೆರವು ನೀಡುತ್ತವೆ.
ಸುಪ್ರೀಂ ಆದೇಶಕ್ಕೆ ಬೆಲೆಯೇ ಇಲ್ಲ: ಹಾಗೆ ನೋಡಿದರೆ, ಬಿಜಾಪುರ ಮತ್ತು ರಾಯಚೂರಿನಲ್ಲಿ ಕೊಳವೆಬಾವಿ ದುರಂತ ನಡೆದಾಗಲೇ ವಿಷಯ ಗಂಭೀರವಾಗಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ತೆರೆದ ಬಾವಿಗಳನ್ನು ಮುಚ್ಚುವ ಬಗ್ಗೆ ಸರ್ಕಾರಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿತ್ತು. ಅಲ್ಲದೆ ಕೆಲವು ಮಕ್ಕಳ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನೂ ಸಲ್ಲಿಸಿ ನ್ಯಾಯ ಕೇಳಿದ್ದವು. ನಂತರ ಸುಪ್ರೀಂಕೋರ್ಟ್ 2010 ಫೆಬ್ರವರಿ 11ರಂದು ತೆರೆದ ಬಾವಿಗಳನ್ನು ಹೇಗೆಲ್ಲಾ ನಿರ್ವಹಿಸಬೇಕೆನ್ನುವ ಬಗ್ಗೆ ಆದೇಶ ಹೊರಡಿಸಿತ್ತು. ಇದನ್ನಾಧರಿಸಿ 2012ರ ಡಿಸೆಂಬರ್ 31ರಂದು ಸಣ್ಣ ನೀರಾವರಿ ಇಲಾಖೆ ಆದೇಶವನ್ನೂ ಹೊರಡಿಸಿತ್ತು. ಎಲ್ಲಾ ರೀತಿಯ ಬೋರ್‌ವೆಲ್‌ಗಳು, ಅಪಾಯದ ತೆರೆದ ಬಾವಿಗಳು, ಕೊಳವೆಬಾವಿಗಳ ಕುರಿತ ಹೊಣೆಗಾರಿಕೆಯನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಅಧಿಕಾರಿಗಳಿಗೆ ವಹಿಸಿತ್ತು. ಆದರೆ ಈ ವಿಚಾರ ಸಣ್ಣ ನೀರಾವರಿ ಸಚಿವರಿಗೆ ಗೊತ್ತೇ ಆಗಿಲ್ಲ.
ಬಾವಿ ದುರಂತ ಏಕೆ ಹೆಚ್ಚುತ್ತಿವೆ?
ಒಂದು ಬೋರ್‌ವೆಲ್ ಕೊರೆಯಲು ಸುಮಾರು 1ಲಕ್ಷ ವೆಚ್ಚವಾಗುತ್ತದೆ. ಒಂದು ವೇಳೆ ನೀರು ಸಿಗದೆ ವಿಫಲವಾದರೆ ಕೊರೆಯುವ ಸಂಸ್ಥೆ ರಿಗ್ ಇರುವಾಗಲೇ ಪೈಪ್‌ಗಳನ್ನು ವಾಪಸ್ ತೆಗೆದುಕೊಳ್ಳುತ್ತದೆ. ಆಗ ಕೊರೆಸುವ ಭೂ ಮಾಲೀಕರಿಗೆ ಶೇ. 20ರಷ್ಟು ಹಣ ನೀಡುತ್ತಾರೆ. ಹೀಗಾಗಿ ಬೋರ್ ಕೊರೆಸುವವರು ಕೆಲಸ ವಿಫಲವಾದಾಗ ಪೈಪ್‌ಗಳನ್ನು ತೆಗೆಸುತ್ತಾರೆ. ಇದರಿಂದ ಕೊಳವೆ ಬಾವಿ 6 ಅಡಿ ಅಗಲವಾಗಿ ಗುಹೆಗಳಾಗುತ್ತಿವೆ. ಇದರಿಂದ ಮಕ್ಕಳು ಬಿದ್ದು ದುರಂತಗಳಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾರ್ಗಸೂಚಿಗಳೇನೇನು?
- ಬಾವಿ ಕೊರೆಸುವವರು 15 ದಿನಗಳ ಮೊದಲು ಸಂಬಂಧಿಸಿದ ಸರ್ಕಾರಿ ಸಂಸ್ಥೆಗೆ ಲಿಖಿತ ಮಾಹಿತಿ ನೀಡಬೇಕು.
- ಬೋರ್ ಕೊರೆಯುವಾಗ ಅಲ್ಲಿ ಸೂಚನಾ ಫಲಕ ಅಳವಡಿಸಬೇಕು.
- ಕೊರೆಯುವ ಸಂಸ್ಥೆ ಮತ್ತು ಕೊರೆಸುವವರ ಸಂಪೂರ್ಣ ವಿಳಾಸ ಮತ್ತು ಕಾರಣ ಇರಬೇಕು.
- ರಾಜ್ಯ ಅಂತರ್ಜಲ ಕಾಯ್ದೆ 2011ರ ಪ್ರಕಾರ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಬೇಕು
- ಕೊರೆದ ಬಾವಿ ಯಶಸ್ವಿಯಾದರೆ ಅದರಿಂದ ಯಾವುದೇ ಅಪಾಯವಾಗದಂತೆ ಮುಚ್ಚಿದ ರೀತಿಯಲ್ಲಿ ಇರಿಸಬೇಕು.
- ಬೋರ್ ಸಫಲತೆ ಮತ್ತು ವಿಫಲತೆ ಏನೇ ಆದರೂ ಮಾಲೀಕರು ಒಂದೇ ದಿನದಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ, ಎಂಜಿನಿಯರ್‌ಗಳಿಗೆ ವಿವರ ನೀಡಬೇಕು.
ತೆರೆದ ಕೊಳವೆ ಬಾವಿಗಳಿಂದ ಅಪಾಯ ಕಾದಿದೆ ಎಂದಾಗ ದೂರು ನೀಡಬೇಕು. ಅದೇರೀತಿ ಸ್ಥಳೀಯ ಸಂಸ್ಥೆಗಳು ಬೊರ್‌ವೆಲ್‌ಗಳ ಸ್ಥಿತಿಗತಿಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ಕೆಲಸ ಮಾಡಬೇಕಿದೆ.
- ಡಾ.ವಿ.ಎಸ್.ಪ್ರಕಾಶ್,
ಕೇಂದ್ರ ಸರ್ಕಾರದ ಭೂ ಜಲಮಂಡಳಿಯ ನಿವೃತ್ತ ವಿಜ್ಞಾನಿ
ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಬರುತ್ತದೆ. ನಮ್ಮ ವ್ಯಾಪ್ತಿಗೆ ಬರುವುದಿದ್ದರೆ ನಾವು ಕ್ರಮ ಕೈಗೊಳ್ಳುತ್ತಿದ್ದೆವು.
- ಶಿವರಾಜ್ ತಂಗಡಗಿ, ಸಣ್ಣ ನೀರಾವರಿ ಸಚಿವ
ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

